ಧರ್ಮಸ್ಥಳ ಪ್ರಕರಣ: ಆರ್‌ ಟಿಐ ಅಡಿಯಲ್ಲಿ ವಿಧಿವಿಜ್ಞಾನ ಸಂಶೋಧನೆಯ ಮಾಹಿತಿ ನೀಡಲು ಕೆ ಎಸ್‌ ಹೆಗ್ಡೆ ಆಸ್ಪತ್ರೆ ನಿರಾಕರಣೆ; ಚರ್ಚೆಗೆ ಗ್ರಾಸವೊದಗಿಸಿದ ಖಾಸಗಿ ಆಸ್ಪತ್ರೆಯ ನಡೆ

Most read

ಮಂಗಳೂರು: ಜಸ್ಟೀಸ್‌ ಕೆ ಎಸ್‌ ಹೆಗ್ಡೆ ಚಾರಿಟಬಲ್‌ ಆಸ್ಪತ್ರೆಯ ವಿಧಿವಿಜ್ಞಾನ ತಜ್ಞ ಡಾ. ಮಹಾಬಲ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಸಲಾದ ವಿಧಿ ವಿಜ್ಞಾನ ಸಂಶೋಧನೆಯ ವಿವರಗಳನ್ನು ನೀಡಲು ಜಸ್ಟೀಸ್‌ ಕೆ ಎಸ್‌ ಹೆಗ್ಡೆ ಚಾರಿಟಬಲ್‌ ಆಸ್ಪತ್ರೆ ನಿರಾಕರಿಸಿದೆ. ಇದೊಂದು ಖಾಸಗಿ ವಿಷಯ ಮತ್ತು ಸ್ವಾಯತ್ತ ವಿಶ್ವವಿದ್ಯಾಲಯ ಎಂಬ ನೆಪ ಹೇಳಿ ಮಾಹಿತಿ ನೀಡಲು ನಿರಾಕರಿಸಿದೆ ಎಂದು ಬಿಎಲ್‌ ಆರ್‌ ಪೋಸ್ಟ್‌ ವರದಿ ಮಾಡಿದೆ. ಈ ಆಸ್ಪತ್ರೆಯು ಮಂಗಳೂರಿನ ದೇರಳಕಟ್ಟೆಯಲ್ಲಿದೆ.

ಧರ್ಮಸ್ಥಳದಲ್ಲಿ ನಡೆದ ಸಾಮೂಹಿಕ ಶವ ಹೂಳುವಿಕೆ ಮತ್ತು ಅಲ್ಲಿ ಅನುಸರಿಸುತ್ತಿರುವ ಶವ ಪರೀಕ್ಷೆಯ ವಿಧಾನಗಳನ್ನು ಕುರಿತು ವಿವಾದಗಳು ಉಂಟಾಗಿರುವು ಬೆನ್ನಲ್ಲೇ ಈ ಆಸ್ಪತ್ರೆ ಮಾಹಿತಿ ಹಂಚಿಕೊಳ್ಳಲು ನಿರಾಕರಿಸಿರುವುದು ಸಾರ್ವಜನಿಕ ವಲಯದ ಅನುಮಾನಗಳನ್ನು ಹೆಚ್ಚಿಸಿದೆ.

ಬಳ್ಳಾರಿ ಜಿಲ್ಲೆಯ ಟಿ ಎಚ್‌ ಎಂ ರಾಜಕುಮಾರ ಎಂಬುವರು  2025ರ ಅಕ್ಟೋಬರ್‌ 14 ರಂದು ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿ 2018 ರಿಂದ 2025 ರವರೆಗೆ ವಿಧಿವಿಜ್ಞಾನ ವಿಭಾಗದಲ್ಲಿ ಡಾ. ಶೆಟ್ಟಿ ಅವರ ಅಡಿಯಲ್ಲಿ ನಡೆಸಲಾದ ರೀಸರ್ಚ್ ಪ್ರಾಜೆಕ್ಟ್‌ ಗಳ ದಾಖಲೆಗಳನ್ನು ಒದಗಿಸುವಂತೆ ಮಾಹಿತಿ ಕೋರಿದ್ದರು. ಅದರಲ್ಲೂ ವಿಶೇಷವಾಗಿ ರೀಸರ್ಚ್ ಪ್ರಾಜೆಕ್ಟ್‌ ಗಳು, ಕೈಗೊಳ್ಳಲಾದ ವರ್ಷ ಮತ್ತು ಪ್ರಾಯೋಜಕತ್ವ ವಹಿಸಿದ ಸಂಸ್ಥೆಯ ಹೆಸರುಗಳನ್ನು ನೀಡುವಂತೆ ಕೋರಿದ್ದರು. ಜತೆಗೆ ಪ್ರತೀ ಪ್ರಾಜೆಕ್ಟ್‌ ಗೆ ಸಂಸ್ಥೆಯ ನೈತಿಕ ಸಮಿತಿ ಅಥವಾ ಸಂಶೋಧನಾ ಪುನರ್‌ ಪರಿಶೀಲನಾ ಮಂಡಳಿ ನೀಡಿರುವ ಅನುಮತಿ ಪತ್ರ ಮತ್ತು ಈ ಅವಧಿಯಲ್ಲಿ ಸಂಗ್ರಹಿಸಲಾದ ಶವ ಪರೀಕ್ಷೆಯ ಮಾದರಿಗಳು ಮೂಳೆಯ ಅಂಗಾಂಶಗಳ ಸ್ಯಾಂಪಲ್‌ ಗಳು ಸೇರಿದಂತೆ ಒಟ್ಟು ಸ್ಯಾಂಪಲ್ ಗಳು ಮತ್ತಿತರ ಮಾಹಿತಿ ನೀಡವಂತೆಯೂ ಅರ್ಜಿದಾರರು ಕೋರಿದ್ದರು.

ಶವ ಪರೀಕ್ಷ ನಡೆಸಲು ಆಸ್ಪತ್ರೆ ರೂಪಿಸಿಕೊಂಡಿರುವ ಮಾರ್ಗಸೂಚಿಗಳು ಅಥವಾ ನಿಯಮಗಳು, ಸಂಗ್ರಹ, ಶವಪರೀಕ್ಷೆಯ ಮಾದರಿಗಳ ನಿರ್ವಹಣೆಯ ಮಾಹಿತಿ; ಡಾ.ಶೆಟ್ಟಿ ಅಥವಾ ವಿಧಿ ವಿಜ್ಞಾನ ವಿಭಾಗ ಪ್ರಕಟಿಸಿರುವ ಅಧ್ಯಯನ ವರದಿಗಳು ಮತ್ತು ಪಬ್ಲಿಕೇಶನ್ಸ್‌ ಗಳ ಮಾಹಿತಿಯನ್ನೂ ಕೇಳಿದ್ದರು. ಗುರುತಿಸಲಾಗದ ಶವಗಳ ಶವ ಪರೀಕ್ಷೆಗಳನ್ನು ಕುರಿತು ಆಸ್ಪತ್ರೆಯ ವಿಧಿವಿಜ್ಞಾನ ವಿಭಾಗವು ಸರ್ಕಾರ. ಪೊಲೀಸ್‌, ಅಥವಾ ಸ್ಥಳೀಯ ಸಂಸ್ಥೆಗೆ  ನೀಡಿರುವ ಮಾಹಿತಿಗಳ ವಿವರಗಳನ್ನೂ ಒದಗಿಸುವಂತೆ ಕೋರಿದ್ದರು.

2025ರ ಅಕ್ಟೋಬರ್‌ 30ರಂದು ನೀಡಿರುವ ಪ್ರತಿಕ್ರಿಯೆಯಲ್ಲಿ ಕೆ ಎಸ್‌ ಹೆಗ್ಡೆ ಆಸ್ಪತ್ರೆಯು, ಇದೊಂದು ಖಾಸಗಿ ಆಸ್ಪತ್ರೆಯಾಗಿದ್ದು, ನಿಟ್ಟೆ ಸಂಸ್ಥೆ ನಿರ್ವಹಿಸುತ್ತಿರುವ ಸ್ವಾಯತ್ತ ವಿಶ್ವವಿದ್ಯಾಲಯವಾಗಿದೆ. 2015ರ ಹೈಕೋರ್ಟ್‌ ಪ್ರಕರಣ  (W.P.(C) 25114/2009, Manipal University vs. S.K. Dogra and others) ಉಲ್ಲೇಖಿಸಿ ಸ್ವಾಯತ್ತ ವಿಶ್ವವಿದ್ಯಾಲಯಗಳು ಸಾರ್ವಜನಿಕ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವುದಿಲ್ಲ, ಬದಲಾಗಿ ಖಾಸಗಿ ಸಂಸ್ಥೆಗಳಾಗಿರುತ್ತವೆ ಎಂದು ಸ್ಪಷ್ಟನೆ ನೀಡಿದೆ. 2014ರ ಕೇಂದ್ರ ಮಾಹಿತಿ ಹಕ್ಕು ಆಯೋಗದ (Savinaya, Dakshina Kannada vs. Nitte University) ಪ್ರಕರಣವನ್ನು ಉಲ್ಲೇಖಿಸಿ ನಿಟ್ಟೆ ವಿಶ್ವವಿದ್ಯಾಲಯವು ಸ್ವಯಂ ಆರ್ಥಿಕ ವ್ಯವಸ್ಥೆ ಹೊಂದಿರುವ ಖಾಸಗಿ ಸಂಸ್ಥೆಯಾಗಿದ್ದು, ಆರ್‌ ಟಿ ಐ ಕಾಯಿದೆ ಅಡಿಯಲ್ಲಿ ಮಾಹಿತಿ ನೀಡಲು ಬರುವುದಿಲ್ಲ ಎಂಬ ಕಾರಣಗಳನ್ನು ನೀಡಿ ಆರ್ ಟಿಐ ಅಡಿಯಲ್ಲಿ ಕೇಳಲಾದ ಮಾಹಿತಿಯನ್ನು ನಿರಾಕರಿಸಿ ಪೋಸ್ಟಲ್‌ ಆರ್ಡರ್‌ ಅನ್ನು ಅರ್ಜಿದಾರರಿಗೆ ಹಿಂತಿರುಗಿಸಿದೆ.

ಧರ್ಮಸ್ಥಳ ಆಡಳಿತಕ್ಕೂ ಮಂಗಳೂರಿನಲ್ಲಿರುವ ಕೆ ಎಸ್‌ ಹೆಗ್ಡೆ ಆಸ್ಪತ್ರೆಗೂ ಸಂಬಂಧವೇ ಇಲ್ಲ. ಅರ್ಜಿದಾರರ ಉದ್ದೇಶವೇನೆಂದರೆ ಈ ಭಾಗದಲ್ಲಿ ಶವಪರೀಕ್ಷೆಗಳನ್ನು ಹೇಗೆ ನಡೆಸಲಾಗುತ್ತದೆ ಎಂದು ತಿಳಿಯುವುದೇ ಆಗಿತ್ತು. ಅದರಲ್ಲೂ ಧರ್ಮಸ್ಥಳದಲ್ಲಿ ಸಾಮೂಹಿಕವಾಗಿ ಹೂತುಹಾಕಲಾದ ಗುರುತಿಸಲಾಗದ ಶವಗಳ ಪರೀಕ್ಷೆಯ ಮಾಹಿತಿ ತಿಳಿಯುವುದು ಈ ಹಂತದಲ್ಲಿ ಮುಖ್ಯವಾಗಿತ್ತು. ಖಾಸಗಿ ಸಂಸ್ಥೆಗಳಲ್ಲಿ ಗುರುತಿಸಲಾಗದ ಶವಗಳ ನಿರ್ವಹಣೆ, ವಿಧಿವಿಜ್ಞಾನ ಸಂಶೋಧನೆ ನಡೆಸುವಾಗ ಪಾರದರ್ಶಕತೆ ಮತ್ತು ಬದ್ಧತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ ಎನ್ನುವುದು ಹೋರಾಟಗಾರರು ಮತ್ತು ಸ್ಥಳೀಯ ನಿವಾಸಿಗಳ ಆಗ್ರಹವಾಗಿದೆ.

ಖಾಸಗಿ ಸಂಸ್ಥೆಗಳಲ್ಲಿ ವಿಧಿವಿಜ್ಞಾನ ಪ್ರಯೋಗ ಮತ್ತು ವೈದ್ಯಕೀಯ ಸಂಶೋಧನೆಗಳನ್ನು ನಡೆಸುವ ಬಗ್ಗೆ ಆರ್‌ ಟಿಐ ಅಡಿಯಲ್ಲಿ ಮಾಹಿತಿ ನಿರಾಕರಿಸಿರುವುದು ಚರ್ಚೆಗೆ ಗ್ರಾಸವೊದಗಿಸಿದೆ. ಖಾಸಗಿ ಆಸ್ಪತ್ರೆಗಳು ಮತ್ತು ಸ್ವಾಯತ್ತ ಸಂಸ್ಥೆಗಳನ್ನು ಆರ್‌ ಟಿಐ ವ್ಯಾಪ್ತಿಯಿಂದ ಹೊರಗಿಟ್ಟಿರುವುದು ಗಮನಾರ್ಹವಾಗಿದೆ. ಈ ಈತಿ ಮಾಹಿತಿ ನಿರಾಕರಿಸುವುದು ಸಾರ್ವಜನಿಕರ ಅಪನಂಬಿಕೆ ಹೆಚ್ಚಿಸುತ್ತದೆ. ಅದರಲ್ಲೂ ಗುರುತಿಸಲಾಗದ ಶವಗಳ ಶವಪರೀಕ್ಷೆಗಳನ್ನೊಳಗೊಂಡ ಸೂಕ್ಷ್ಮ ಪ್ರಕರಣಗಳಲ್ಲಿ ಸಂಶಯವನ್ನು ಹುಟ್ಟುಹಾಕುತ್ತದೆ. ಕೆ ಎಸ್‌ ಹೆಗ್ಡೆ ಆಸ್ಪತ್ರೆಯು ಮಾಹಿತಿ ನೀಡಲು ನಿರಾಕರಿಸಿರುವುದು ಖಾಸಗಿ ಸಂಸ್ಥೆಗಳಲ್ಲಿ ವಿಧಿವಿಜ್ಞಾನ ಸಂಶೋಧನೆಗಳ ಮಾಹಿತಿ ಪಡೆಯುವುದು ಎಷ್ಟು ಕಷ್ಟ ಎನ್ನುವುದನ್ನು ತೋರಿಸುತ್ತದೆ.  ಖಾಸಗಿ ಸಂಸ್ಥೆಗಳಲ್ಲಿ ಸೂಕ್ಷ್ಮ ಸಂಶೋಧನೆಗಳನ್ನು ನಡೆಸುವಾಗ ಹೆಚ್ಚು ಹೆಚ್ಚು ಪಾರದರ್ಶಕವಾಗಿ ಇರಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

More articles

Latest article