ವಿಶಾಖಪಟ್ಟಣ: ಆಂಧ್ರಪ್ರದೇಶದ ಪ್ರಮುಖ ನಕ್ಸಲ್ ಕಾರ್ಯಕರ್ತ ಮದ್ವಿ ಹಿದ್ಮಾ ಎಂಬಾತನನ್ನು ಎನ್ ಕೌಂಟರ್ ನಲ್ಲಿ ಪೊಲೀಸರು ಹತ್ಯೆ ಮಾಡಿದ್ದಾರೆ. ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಮಾರೆಡುಮಿಲ್ಲಿ ಅರಣ್ಯ ಪ್ರದೇಶದಲ್ಲಿ ಇಂದು ಬೆಳಿಗ್ಗೆ 6 ಗಂಟೆಯಿಂದ 7 ಗಂಟೆ ನಡುವೆ ಪೊಲೀಸರು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ. ಆಗ 51 ವರ್ಷದ ಮದ್ವಿ ಹಿದ್ಮಾ ಆಲಿಯಾಸ್ ಸಂತೋಷ್, ಅತನ ಪತ್ನಿ ಮತ್ತು ಇತರ ನಾಲ್ವರನ್ನು ಪೊಲೀಸರು ಹತ್ಯೆ ಮಾಡಿದ್ದಾರೆ. ಇವರೆಲ್ಲರೂ ಛತ್ತೀಸ್ ಗಡದಿಂದ ಆಂಧ್ರಪ್ರದೇಶವನ್ನು ಪ್ರವೇಶಿಸಿದ್ದರು.
ಕಳೆದ ಕೆಲವು ವಾರಗಳಿಂದ ನಕ್ಸಲರು ಆಂಧ್ರಪ್ರದೇಶ, ಛತ್ತೀಸ ಗಡ ಮತ್ತು ಒಡಿಶಾ ಗಡಿ ಭಾಗಗಳಲ್ಲಿ ಸಂಚರಿಸುತ್ತಿದ್ದಾರೆ ಎಂಬ ಮಾಹಿತಿ ಆಂಧ್ರಪ್ರದೇಶ ಗುಪ್ತಚರ ಇಲಾಖೆಗೆ ಲಭ್ಯವಾಗಿತ್ತು. ಈ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಎಸ್ ಪಿ ಅಮಿತ್ ಬರ್ದಾರ್ ತಿಳಿಸಿದ್ದಾರೆ.
ಗುಂಡಿನ ಚಕಮಕಿಯಲ್ಲಿ ಯಾವುದೇ ಪೊಲೀಸ್ ಸಿಬ್ಬಂದಿ ಗಾಯಗೊಂಡಿಲ್ಲ. ಹತ್ಯೆಯಾದ ನಕ್ಸಲರ ಗುರುತು ಮತ್ತು ಗಾಯಗೊಂಡವರ ವಿವರಗಳನ್ನು ಕಲೆಹಾಕಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.
ಹಿದ್ಮಾ ಕೇಂದ್ರ ಸಮಿತಿ ಸದಸ್ಯ ಮತ್ತು ದಂಡಕಾರಣ್ಯ ವಿಶೇಷ ವಲಯದ ಪ್ರಮುಖ ನಾಯಕನೂ ಆಗಿದ್ದಾನೆ. ಈತ ಕನಿಷ್ಠ 26 ಶಸ್ತ್ರಾಸ್ತ್ರಗಳ ದಾಳಿಯಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾನೆ.
ಇದೇ ಜಿಲ್ಲೆಯಲ್ಲಿ ಆರು ತಿಂಗಳ ಹಿಂದೆ ಮೇ 7ರಂದು ವೈ. ರಾಮಾವರಂ ಮಂಡಲ ಅರಣ್ಯ ಪ್ರದೇಶದಲ್ಲಿ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಮಾವೋವಾದಿಗಳು ಮೃತಪಟ್ಟಿದ್ದರು.

