ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆ ಆರಂಭದಿಂದಲೂ ನ್ಯಾಯಸಮ್ಮತವಾಗಿರಲಿಲ್ಲ. ಹಾಗಾಗಿ ನಾವು ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಮಹಾಘಟಬಂಧನ ಮೈತ್ರಿಕೂಟದಲ್ಲಿ ನಂಬಿಕೆ ಇಟ್ಟ ಬಿಹಾರದ ಲಕ್ಷಾಂತರ ಮತದಾರರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಬಿಹಾರದಲ್ಲಿನ ಈ ಫಲಿತಾಂಶ ನಿಜಕ್ಕೂ ಆಘಾತ ಉಂಟು ಮಾಡಿದೆ. ಆರಂಭದಿಂದಲೂ ನ್ಯಾಯಯುತವಲ್ಲದ ಚುನಾವಣೆಯಲ್ಲಿ ನಾವು ಗೆಲ್ಲಲು ವಿಫಲರಾಗಿದ್ದೇವೆ ಎಂದಿದ್ದಾರೆ.
ಆದರೂ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವ ಹೋರಾಟವನ್ನು ನಾನು ಮುಂದುವರೆಸುತ್ತೇನೆ. ಫಲಿತಾಂಶವನ್ನು ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟ ಆಮೂಲಾಗ್ರವಾಗಿ ಪರಿಶೀಲಿಸುತ್ತಿವೆ ಎಂದು ಹೇಳಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯ ಎನ್ ಡಿಎ ಮೈತ್ರಿಕೂಟ ಅಭೂತಪೂರ್ವ ಗೆಲವು ದಾಖಲಿಸಿದೆ. ಮೈತ್ರಿಕೂಟದ ಬಿಜೆಪಿ 89 ಮತ್ತು ನಿತೀಶ್ ಕುಮಾರ್ ನೇತೃತ್ವದ ಜೆಡಿ (ಯು) 85 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದೆ. ಚಿರಾಗ್ ಪಾಸ್ವಾನ್ ನೇತೃತ್ವದ ಎಲ್ ಜೆಪಿ 19 ಸ್ಥಾನಗಳಲ್ಲಿ ಗೆದ್ದು ಬೀಗಿದೆ.
ಇಂಡಿಯಾ ಒಕ್ಕೂಟದ ಪ್ರಮುಖ ಪಕ್ಷ ಕಾಂಗ್ರೆಸ್ ಕೇವಲ 6 ಸ್ಥಾನಗಳಲ್ಲಿ ಮಾತ್ರ ಗೆದ್ದಿದೆ. ತೇಜಸ್ವಿ ಯಾದವ್ ನೇತೃತ್ವದ ಆರ್ಜೆಡಿ 24, ಸಿಪಿಐ (ಎಂಎಲ್) (ಎಲ್) 2 ಸ್ಥಾನ ಗೆದ್ದುಕೊಂಡಿದೆ. 2020ರ ಚುನಾವಣೆಯಲ್ಲಿ 19 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರಸ್ ಈ ಬಾರಿ 6 ಸ್ಥಾನ ಗಳಿಸಲುವಲ್ಲಿ ಮಾತ್ರ ಯಶಸ್ವಿಯಾಗಿದೆ.

