ಕಾಶ್ಮೀರ: ಉಗ್ರನ ಮನೆಯಿಂದ ವಶಪಡಿಸಿಕೊಂಡ ಸ್ಫೋಟಕಗಳ ಸ್ಫೋಟ: 12 ಪೊಲೀಸರ ಸಾವು, 30 ಮಂದಿಗೆ ಗಂಭೀರ ಗಾಯ

Most read

ಶ್ರೀನಗರ:  ವೈಟ್ ಕಾಲರ್ ಭಯೋತ್ಪಾದನೆಗೆ ಸಂಬಂಧಿಸಿದಂತೆ ಫರೀದಾಬಾದ್‌ ನಲ್ಲಿ ವಶಪಡಿಸಿಕೊಳ್ಳಲಾಗಿದ್ದ ಸ್ಫೋಟಕಗಳ ಮಾದರಿಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಸ್ಫೋಟ ಸಂಭವಿಸಿ 12 ಮಂದಿ ಪೊಲೀಸರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಮೃತಪಟ್ಟಿದ್ದು, 30 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ನೌಗಮ್ ಪೊಲೀಸ್ ಠಾಣೆಯಲ್ಲಿ ಈ ದುರಂತ ಸಂಭವಿಸಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಶಂಕಿತ ಉಗ್ರ ಡಾ. ಮುಜಮ್ಮಿಲ್ ಗನಿ ವಾಸಿಸುತ್ತಿದ್ದ ಬಾಡಿಗೆ ಮನೆಯಿಂದ ಶುಕ್ರವಾರ ರಾತ್ರಿ ಈ ಸ್ಪೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅಮೋನಿಯಂ ನೈಟ್ರೇಟ್ ಸೇರಿದಂತೆ ಸುಮಾರು 360 ಕಿ.ಲೋಗಳಷ್ಟಿದ್ದ  ಸ್ಪೋಟಕಗಳ ಮಾದರಿಗಳನ್ನು ಹೊರತೆಗೆಯುತ್ತಿದ್ದಾಗ ಈ ಅವಘಡ ಸಂಭವಿಸಿದೆ. ವಿಧಿವಿಜ್ಞಾನ ಪ್ರಯೋಗಾಲಯ ತಂಡ, ಸ್ಥಳೀಯ ಪೊಲೀಸ್ ಸಿಬ್ಬಂದಿ ಮತ್ತು ಕಂದಾಯ ಅಧಿಕಾರಿಗಳ ತಂಡ ಈ ತಪಾಸಣೆ ನಡೆಸುತ್ತಿತ್ತು.

ಸ್ಥಳದಲ್ಲೇ 12 ಪೊಲೀಸರು ಮೃತಪಟ್ಟಿದ್ದು ಅವು ಗುರುತಿಸಲಾಗದಷ್ಟು ಛಿದ್ರ ಛಿದ್ರವಾಗಿವೆ. ಮೃತದೇಹಗಳನ್ನು ಶ್ರೀನಗರದಲ್ಲಿರುವ ಪೊಲೀಸ್ ಕಂಟ್ರಲ್ ರೂಮ್‌ ಗೆ ಸಾಗಿಸಲಾಗಿದೆ. ಪೊಲೀಸ್‌  ಠಾಣೆಯಲ್ಲಿದ್ದ 24 ಪೊಲೀಸರು ಹಾಗೂ 3 ನಾಗರಿಕರು ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಅವರನ್ನು  ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮೃತಪಟ್ಟವರಲ್ಲಿ  ವಿಧಿವಿಜ್ಞಾನ ಪ್ರಯೋಗಾಲಯದ ಮೂವರು ಸಿಬ್ಬಂದಿ, ತಹಶೀಲ್ದಾರ್, ಕಂದಾಯ ಇಲಾಖೆಯ ಇಬ್ಬರು ಅಧಿಕಾರಿಗಳು, ಇಬ್ಬರು ಪೊಲೀಸ್ ಛಾಯಾಗ್ರಾಹಕರು, ರಾಜ್ಯ ತನಿಖಾ ಸಂಸ್ಥೆಯ ನೌಕರರೊಬ್ಬರು ಸೇರಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ಫೋಟದ ತೀವ್ರತೆಯಿಂದಾಗಿ ಕೆಲವು ವಾಹನಗಳು ಸುಟ್ಟುಹೋಗಿವೆ ಮತ್ತು ಪೊಲೀಸ್ ಠಾಣೆ ಮತ್ತು ಅಕ್ಕಪಕ್ಕದ ಕಟ್ಟಡಗಳಿಗೆ ಹಾನಿ ಸಂಭವಿಸಿದೆ.  ಆದರೂ ಈ ದುರಂತ ಆಕಸ್ಮಿಕವೋ ಅಥವಾ ವಿಧ್ವಂಸಕ ಕೃತ್ಯವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

More articles

Latest article