ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಇನ್ನಿಲ್ಲ: ಸಚಿವ ಈಶ್ವರ್‌ ಖಂಡ್ರೆ ಸಂತಾಪ

Most read

ಬೆಂಗಳೂರುವೃಕ್ಷಮಾತೆ ಸಾಲುಮರದ ತಿಮ್ಮಕ್ಕ ವಿಧಿವಶರಾಗಿದ್ದಾರೆ. 114 ವರ್ಷದ ಅವರು ಇತ್ತೀಚೆಗೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಮಧ್ಯಾಹ್ನ 12 ಗಂಟೆಗೆ ನಿಧನ ಹೊಂದಿದ್ದಾರೆ ಎಂದು ಅವರು ಚಿಕಿತ್ಸೆ ಪಡೆಉತ್ತಿದ್ದ ಖಾಸಗಿ ಆಸ್ಪತ್ರೆ ತಿಳಿಸಿದೆ.

ಸಾವಿರಾರು ಮರಗಳನ್ನು ಪೋಷಿಸಿದ್ದ ಅವರು ಪದ್ಮಶ್ರೀ ಪುರಸ್ಕೃತರಾಗಿದ್ದರು.

ಸಾಲುಮರದ ತಿಮ್ಮಕ್ಕ ಅವರು ಮೂಲತಃ ತುಮಕೂರು ಜಿಲ್ಲೆಯವರು. ಗುಬ್ಬಿ ತಾಲ್ಲೂಕಿನಲ್ಲಿ 1911ರ ಜೂನ್ 30ರಂದು ಜನಿಸಿದ್ದ ಅವರು ಮಾಗಡಿ ತಾಲೂಕಿನ ಹುಲಿಕಲ್​​ ಗ್ರಾಮದ ಚಿಕ್ಕಯ್ಯ ಅವರನ್ನು ವಿವಾಹವಾಗಿದ್ದರು. ಮಕ್ಕಳಿಲ್ಲ ಎಂದು ಕೊರಗದ ತಿಮ್ಮಕ್ಕ ರಸ್ತೆಯ ಇಕ್ಕೆಲಗಳಲ್ಲಿ ಆಲದ ಗಿಡಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಬೆಳೆಸಿದ್ದರು. ಈ ಕೆಲಸದಿಂದ ಅವರು ಸಾಲುಮರದ ತಿಮ್ಮಕ್ಕ ಎಂದೇ ಖ್ಯಾತಿಪಡೆದಿದ್ದರು.

ಕುದೂರಿನಿಂದ ಹುಲಿಕಲ್ ತನಕವಿರುವ ರಾಜ್ಯ ಹೆದ್ದಾರಿ 94ರಲ್ಲಿ ಇವರು ಬೆಳಸಿದ 385 ಆಲದ ಮರಗಳು ಇಂದಿಗೂ ನೂರಾರು ಪಕ್ಷಿಗಳಿಗೆ ಆಶ್ರಯ ನೀಡಿದೆ. ಬಿಸಲಲ್ಲಿ ಬಳಲಿ ಬಂದವರಿಗೆ ನೆರಳಾಗಿವೆ. ಇವರಿಂದ ಪ್ರೇರಣೆ ಪಡೆದು ನೂರಾರು ಯುವಕರು ವೃಕ್ಷ ಸಂವರ್ಧನೆ ಮಾಡಿದ್ದಾರೆ.

ಈಶ್ವರ ಖಂಡ್ರೆ ಶೋಕ:
ವೃಕ್ಷಮಾತೆ ಎಂದೇ ಖ್ಯಾತರಾಗಿದ್ದ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದ ಸಾಲು ಮರದ ತಿಮ್ಮಕ್ಕ ಅವರ ನಿಧನಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಾಲುಮರದ ತಿಮ್ಮಕ್ಕ ಕರ್ನಾಟಕದ ಹೆಮ್ಮೆಯ ಪರಿಸರ ಪ್ರಚಾರಕರಾಗಿದ್ದರು. ಮಕ್ಕಳಿಲ್ಲದ ಈ ಮಹಾತಾಯಿ ಮರಗಳನ್ನೇ ಮಕ್ಕಳಂತೆ ಬೆಳೆಸುವ ಮೂಲಕ ಹಸಿರಿನ ಮಹತ್ವವನ್ನು ಜಗತ್ತಿಗೆ ಸಾರಿದ್ದರು ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಅನಕ್ಷರಸ್ಥರಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿ ಗೌರವ ಡಾಕ್ಟರೇಟ್ ಗೆ ಪಾತ್ರರಾಗಿದ್ದ ಅವರಿಗೆ ಪದ್ಮಶ್ರೀ ಸೇರಿದಂತೆ ಅತ್ಯುನ್ನತ ಪ್ರಶಸ್ತಿಗಳು ಲಭಿಸಿದ್ದವು. ತಿಮ್ಮಕ್ಕನವರು ಎಷ್ಟು ಮುಗ್ಧರಾಗಿದ್ದರೆಂದರೆ, ತಮಗೆ ಪ್ರಶಸ್ತಿ ನೀಡಿದ ರಾಷ್ಟ್ರಪತಿಗಳ ತಲೆಯ ಮೇಲೆ ಕೈಯಿಟ್ಟು ಆಶೀರ್ವಾದ ಮಾಡಿದ್ದರು. ಅಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಕೂಡ ಅಷ್ಟೇ ಮುಗ್ದತೆಯಿಂದ ಅವರ ಆಶೀರ್ವಾದ ಸ್ವೀಕರಿಸಿದ್ದರು ಎಂದು ಸ್ಮರಿಸಿದರು.
ಇವರಿಂದ ಪ್ರೇರಣೆ ಪಡೆದು ನೂರಾರು ಯುವಕರು ವೃಕ್ಷ ಸಂವರ್ಧನೆ ಮಾಡಿದ್ದಾರೆ. ನಮ್ಮ ಇಲಾಖೆ ಸಾಲು ಮರದ ತಿಮ್ಮಕ್ಕ ಅವರ ಹೆಸರಲ್ಲಿ ವೃಕ್ಷೋದ್ಯಾನಗಳನ್ನು ನಿರ್ಮಿಸಿದೆ ಎಂದೂ ತಿಳಿಸಿದರು.
ವೃಕ್ಷೋ ರಕ್ಷತಿ ರಕ್ಷಿತಃ ಎಂದು ಹೇಳುತ್ತಾರೆ. ಮರಗಳನ್ನು ರಕ್ಷಿಸಿದ ತಿಮ್ಮಕ್ಕನವರು ಇಂದು ವಿಶ್ವ ಮಾನ್ಯರಾಗಿದ್ದಾರೆ. ಬಿಬಿಸಿ ಸುದ್ದಿವಾಹಿನಿ ನಡೆಸಿದ ಜಗತ್ತಿನ 100 ಪ್ರಭಾವಿ ಮಹಿಳೆಯರ ಸಮೀಕ್ಷೆಯಲ್ಲಿ ಸಾಲು ಮರದ ತಿಮ್ಮಕ್ಕ ಸ್ಥಾನ ಪಡೆದಿದ್ದರು. ತಿಮ್ಮಕ್ಕ ಅವರ ಜೀವನ, ಸೇವೆಯ ಮೇಲೆ ಅಧ್ಯಯನ ನಡೆಸಿ ಪ್ರೌಢ ಪ್ರಬಂಧ ಮಂಡಿಸಿ ಡಾಕ್ಟರೇಟ್ ಸಹ ಪಡೆದಿದ್ದಾರೆ. ಅಗಲಿದ ಹಿರಿಯ ಜೀವಕ್ಕೆ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಓಂ. ಶಾಂತಿ ಎಂದು ಈಶ್ವರ ಖಂಡ್ರೆ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ

More articles

Latest article