ನವದೆಹಲಿ: ದೆಹಲಿಯ ಕೆಂಪುಕೋಟೆ ಸಮೀಪ ಸಂಭವಿಸಿದ ಭೀಕರ ಬಾಂಬ್ ಸ್ಫೋಟಕ್ಕೆ ಕಾರಣಕರ್ತ, ವೃತ್ತಿಯಿಂದ ವೈದ್ಯನಾಗಿರುವ ಕಾಶ್ಮೀರದ ಪುಲ್ವಾಮಾ ನಿವಾಸಿ ಉಮರ್ ಮೊಹಮ್ಮದ್. ಈತನೇ ಹ್ಯುಂಡೇ ಐ20 ಕಾರನ್ನು (HR26CE7674)ಕಾಶ್ಮೀರದ ಪುಲ್ವಾಮಾ ಚಾಲನೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಕೆಂಪುಕೋಟೆ ಸುತ್ತಮುತ್ತಲಿನ ಸುಮಾರು ನೂರಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿರುವ ದೃಶ್ಯಗಳನ್ನು ಪರಿಶೀಲಿಸಲಾಗಿದ್ದು, ಬಾಂಬ್ ಸ್ಪೋಟ ಸಂಭವಿಸುವುದಕ್ಕೂ ಮೂರು ಗಂಟೆ ಮೊದಲಿನಿಂದಲೂ ಡ್ರೈವ್ ಮಾಡುತ್ತಿದ್ದ ವ್ಯಕ್ತಿಯ ಚಲನವಲನಗಳು ಪತ್ತೆಯಾಗಿವೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಉಮರ್ ಮೊಹಮ್ಮದ್ ಕಂಡುಬಂದಿದ್ದಾನೆ.
ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್ ಬಳಕೆ
ಈ ಸ್ಫೋಟಕೆ ಅಮೋನಿಯಂ ನೈಟ್ರೇಟ್ ಬಳಕೆ ಮಾಡಲಾಗಿದೆ. ಜತೆಗೆ ಇಂಧನ ತೈಲ ಮತ್ತು ಡಿಟೋನೇಟರ್ ಗಳನ್ನು ಬಳಸಲಾಗಿದೆ ಎಂದೂ ಊಹಿಸಲಾಗಿದೆ. ಕಳೆದ ವಾರ ಫರಿದಾಬಾದ್‌ನಲ್ಲಿ 360 ಕೆ.ಜಿ.ಯಷ್ಟು ಅಮೋನಿಯಂ ನೈಟ್ರೇಟ್ ಸೇರಿದಂತೆ 2,900 ಕೆ.ಜಿ. ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದಕ್ಕೂ ದೆಹಲಿ ಸ್ಫೋಟಕ್ಕೂ ಸಂಬಂಧವಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ದೆಹಲಿ ಸ್ಫೋಟ ಸಂಭವಿಸುವ ಕೆಲವೇ ಗಂಟೆಗಳ ಮೊದಲು ತಾರೀಕ್ ಅಹ್ಮದ್, ಅಮೀರ್ ರಶೀದ್ ಮತ್ತು ಉಮರ್ ರಶೀದ್ ಸೇರಿದಂತೆ ಎಂಟು ಮಂದಿ ಶಂಕಿತರನ್ನು ಪೊಲೀಸರು ಬಂಧಿಸಿದ್ದರು. ಇವರು ನಡೆಸುತ್ತಿದ್ದ ಭಯೋತ್ಪಾದಕ ಕೃತ್ಯಗಳನ್ನು ವೈಟ್ ಕಾಲರ್ ಭಯೋತ್ಪಾದಕ ಮಾದರಿ ಎಂದು ಕರೆಯಲಾಗಿತ್ತು.
ಉಮರ್ ಫೆಬ್ರವರಿ 24, 1989ರಲ್ಲಿ ಜನಿಸಿದ್ದ. ಈತನ ತಂದೆ ಶಿಕ್ಷಕರು. ವೈದ್ಯ ಶಿಕ್ಷಣ ಪಡೆದ ಉಮರ್ ಫರಿದಾಬಾದ್ ಎಐ ಫಲಾಹ್ ಮೆಡಿಕಲ್ ಕಾಲೇಜಿನಲ್ಲಿ ಉದ್ಯೋಗಿಯಾಗಿದ್ದ. ಇಲ್ಲಿಯೇ ಉಗ್ರ ಸಂಘಟನೆಯ ಜತೆ ಸಂಪರ್ಕ ಹೊಂದಿದ್ದ. ಅಲ್ಲಿ ಅದೀಲ್ ಅಹಮದ್ ರಾಥರ್ ಮತ್ತು ಮುಝಮಿಲ್ ಶಕೀಲ್ ಅವರೂ ವೈದ್ಯರಾಗಿದ್ದರು. ಇವರಿಬ್ಬರನ್ನೂ ಕಳೆದ ವಾರ ಜಮ್ಮು ಕಾಶ್ಮೀರ ಪೊಲೀಸರು ಬಂಧಿಸಿದ್ದರು. ಇವರು 2,900 ಕಜಿಯಷ್ಟು ಅಪಾರ ಪ್ರಮಾಣದ ಅಮೋನಿಯಂ ನೈಟ್ರೇಟ್ ಸಂಗ್ರಹಿಸಿದ್ದರು.
ಇವರನ್ನು ಬಂಧಿಸಿದ ನಂತರ ಉಮರ್ ಫರಿದಾಬಾದ್ ನಿಂದ ಪರಾರಿಯಾಗಿ ದೆಹಲಿಗೆ ಬಂದಿದ್ದ. ಉಮರ್ ಮೊಹಮ್ಮದ್, ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯೊಂದಿಗೆ ನಿಕಟ ಸಂಬಂಧ ಹೊಂದಿದ್ದ ಎಂದು ತಿಳಿದು ಬಂದಿದೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ತಾರಿಕ್, ಹ್ಯುಂಡೇ ಐ20 ಕಾರನ್ನು ಉಮರ್‌ಗೆ ನೀಡಿದ್ದ ಎನ್ನಲಾಗಿದೆ. ಭಯೋತ್ಪಾದಕ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ ವೈದ್ಯರನ್ನು ಬಂಧಿಸಿದ ನಂತರ, ಬಂಧನ ಭೀತಿಯಿಂದ ಉಮರ್ ಮೊಹಮ್ಮದ್ ಈ ಆತ್ಮಾಹುತಿ ದಾಳಿ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಕಾರಿನ ಮೂಲ ಮಾಲೀಕ ಮಹಮ್ಮದ್ ಸಲ್ಮಾನ್. ಈತ ಕಾರನ್ನು ಬೇರೊಬ್ಬರಿಗೆ ಮಾರಾಟ ಮಾಡಿದ್ದ. ನಂತರ ಹಲವರಿಗೆ ಮಾರಾಟವಾಗಿತ್ತು. ಕೊನೆಗೆ ಉಮರ್ ಗೆ ಮಾರಾಟವಾಗಿತ್ತು. ಈ ಹಿಂದಿನ ಮಾಲೀಕರಾದ ತಾರಿಖ್ ಮತ್ತು ಅಮೀರ್ ಅವರನ್ನು ಪೊಲೀಸರು ಪ್ರಶ್ನಿಸಿದ್ದಾರೆ.

