ಬೆಂಗಳೂರು: ಭಾರತ ಹಿಂದೂ ರಾಷ್ಟ್ರವೋ, ಜಾತ್ಯಾತೀತ ರಾಷ್ಟ್ರವೋ ಎನ್ನುವುದು ದೇಶದ ಸಂವಿಧಾನದಲ್ಲಿ ಸ್ಪಷ್ಟವಾಗಿದೆ. ನೋಂದಣಿ ಇಲ್ಲದ ಸಂಘಟನೆಯ ನಾಯಕರು ಹೇಳಿದ ತಕ್ಷಣ ದೇಶ ಹಿಂದೂ ರಾಷ್ಟ್ರವಾಗಲು ಸಾಧ್ಯವಿಲ್ಲ. ದೇಶ ನಡೆಯುತ್ತಿರುವುದು ಸಂವಿಧಾನದ ತಳಹದಿಯ ಮೇಲೆಯೇ ಹೊರತು ಮನುಸ್ಮೃತಿಯ ಪ್ರತಿಪಾದನೆಯ ಮೇಲಲ್ಲ ಎಂದು ಕಾಂಗ್ರೆಸ್ ಮುಖಂಡ ಮೇಲ್ಮನೆ ಸದಸ್ಯ ಬಿಕೆ ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.
ಅವರು, ಸಾಮಾಜಿ ಜಾಲತಾಣಗಳಲ್ಲಿ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗೆ ಅವರು ತಿರುಗೇಟು ನೀಡಿದ್ದಾರೆ.
ಭಾರತದಲ್ಲಿರುವವರೆಲ್ಲರೂ ಹಿಂದುಗಳಾದರೇ ಇದೇ ನೆಲದಲ್ಲಿ ವಾಸಿಸುತ್ತಿರುವ ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಪಾರ್ಸಿ ಧರ್ಮಗಳನ್ನ ಹಿಂದೂಗಳೆಂದು ಪರಿಗಣಿಸುತ್ತಾರಾ ಎಂದು ಸ್ಪಷ್ಟಪಡಿಸಬೇಕು. ಹಿಂದೂ ರಾಷ್ಟ್ರದ ಕಲ್ಪನೆಯೇ ಸ್ವತಃ ಆರ್.ಎಸ್.ಎಸ್ ಗೆ ಗೊಂದಲ ಇರುವಾಗ ದೇಶವನ್ನು ಹಿಂದೂ ರಾಷ್ಟ್ರವೆಂದು ದಾರಿ ತಪ್ಪಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ಬ್ರಿಟಿಷರ ಪರವಾಗಿದ್ದವರು ಬ್ರಿಟಿಷರ ಕಾಲದಲ್ಲಿ ನೋಂದಣಿಯಾಗದೆ ಇರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ ಆದರೆ ಸಂವಿಧಾನದಡಿಯಲ್ಲಿ ಕಾನೂನಿಗೆ ಗೌರವ ಕೊಟ್ಟು ನೊಂದಣಿ ಮಾಡಿಕೊಳ್ಳದೆ ಕಾನೂನನ್ನೇ ಧಿಕ್ಕರಿಸುತ್ತಿರುವುದು ಯಾಕೆ ಎನ್ನುವುದನ್ನು ದೇಶದ ಜನರಿಗೆ ಉತ್ತರಿಸಲಿ ಎಂದು ಸವಾಲು ಹಾಕಿದ್ದಾರೆ.
“ರಾಜಕೀಯವನ್ನು ನಿಯಂತ್ರಿಸುವುದಿಲ್ಲ” ಎನ್ನುವುದು ಮೋಹನ್ ಭಾಗವತ್ ರ ಹಸಿ ಹಸಿ ಸುಳ್ಳಿಗೆ ನಿದರ್ಶನ. ರಾಜಕೀಯ ನಿಯಂತ್ರಣ ಇಲ್ಲ ಎಂದಾದರೆ ಬಿಜೆಪಿಯನ್ನು ನಿಯಂತ್ರಿಸುತ್ತಿರುವುದು ಯಾರು? ಯಾರ ಬಾಲಗೋಂಚಿಯಂತೆ ಬಿಜೆಪಿ ವರ್ತಿಸುತ್ತಿರುವುದು ಜಗತ್ತಿಗೇ ಗೊತ್ತಿರುವ ಸತ್ಯವಲ್ಲವೇ? ಸಂಘಟನೆಯ ಮುಖ್ಯಸ್ಥರೇ ಸುಳ್ಳುಗಳನ್ನು ಹೆಣಿಯುವಾಗ, ಸಂಘ ಪರಿವಾರ ಸುಳ್ಳನ್ನು ಹೇಳದೆ ಇರಲು ಸಾಧ್ಯವೇ? ಎಂದೂ ಪ್ರಶ್ನಿಸಿದ್ದಾರೆ.

