ಬೆಂಗಳೂರು: ನಗರದ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ ಲಭ್ಯವಾಗುತ್ತಿರುವ ಪ್ರಕರಣ ಕುರಿತು ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿ ರಚನೆ ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್. ಹಿತೇಂದ್ರ, ಸಂದೀಪ್ ಪಾಟೀಲ್, ಅಮರನಾಥ್ ರೆಡ್ಡಿ, ರಿಷ್ಯಂತ್ ನೇತೃತ್ವದಲ್ಲಿ ಸಮಿತಿ ರಚನೆಯಾಗಿದ್ದು, ಒಂದು ತಿಂಗಳಲ್ಲಿ ಸಮಗ್ರ ವರದಿ ನೀಡುವಂತೆ ಸಮಿತಿಗೆ ಸೂಚಿಸಲಾಗಿದೆ.
ಈ ಪ್ರಕರಣ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ಬೆಂಗಳೂರಿನಲ್ಲಿ ಇಂದು ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿತಿಯ ವಿವರ ಒದಗಿಸಿದರು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೆಲವು ಕಾನೂನು ಬಾಹಿರ ಚಟುವಟಿಕೆಗಳು ನಡೆದಿವೆ ಎಂದು ಮಾಧ್ಯಮಗಳಲ್ಲಿ ವರದಿಗಳು ಪ್ರಸಾರವಾಗಿವೆ. ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ವಿಡಿಯೋಗಳನ್ನು ಕುರಿತು ಪರಿಶೀಲಿಸಿದ್ದೇವೆ. ಮುಖ್ಯವಾದ ಕೆಲವು ವಿಡಿಯೋಗಳು 2023ರಲ್ಲಿ ನಡೆದಿರುವಂತಹವು. ಒಂದೆರಡು ವಿಡಿಯೋಗಳು ಮಾತ್ರ 3-4 ತಿಂಗಳ ಹಿಂದೆ ಜರುಗಿ ಪ್ರಕರಣಗಳಿಗೆ ಸಂಬಂಧಪಟ್ಟಿವೆ. ಈ ಎಲ್ಲಾ ವಿಡಿಯೋಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ ಎಂದು ಸಚಿವರು ತಿಳಿಸಿದರು.
ಇನ್ನು ಮುಂದೆ ಜೈಲು ಉಸ್ತುವಾರಿಗೆ ಐಪಿಎಸ್ ಅಧಿಕಾರಿ ನೇಮಕ ಮಾಡುತ್ತೇವೆ ಎಂದ ಅವರು, ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧೀಕ್ಷಕ ಸುರೇಶ್ ಅವರನ್ನು ವರ್ಗಾವಣೆ ಮಾಡಿರುವುದಾಗಿ ಹೇಳಿದರ
5 ವರ್ಷಗಳ ನಂತರ ಜೈಲಿನ ಅಧಿಕಾರಿಗಳನ್ನು ಕಡ್ಡಾಯವಾಗಿ ವರ್ಗಾವಣೆ ಮಾಡಲಾಗುತ್ತದೆ. ಹಲವು ವರ್ಷ ಒಂದೇ ಕಡೆ ಕೆಲಸ ಮಾಡಿದರೆ ಬೇರು ಬಿಡುತ್ತಾರೆ. ಒಂದೇ ಕಡೆ ಕೆಲಸ ಮಾಡುವುದರಿಂದ ಪ್ರಭಾವ ಬೀರುತ್ತಾರೆ. ಹಾಗಾಗಿ ವರ್ಗಾವಣೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಕಾರಾಗೃಹ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ನಿರ್ದೇಶನ ನೀಡಲಾಗಿದೆ. ಕೆಪಿಎಸ್ ಸಿ ಮೂಲಕ ಅಧಿಕಾರಿಗಳ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸಹಾಯಕ ಅಧೀಕ್ಷಕರು ಸೇರಿದಂತೆ 1,000 ಸಿಬ್ಬಂದಿ ನೇಮಕ ಮಾಡಲಾಗುವುದು. ಸಿಬ್ಬಂದಿ ಕೊರತೆ ನೀಗಿಸಿದರೆ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಬಹುದು ಎಂದೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

