ಧರ್ಮಸ್ಥಳ ಹತ್ಯೆಗಳು: ಸಮಗ್ರ ತನಿಖೆಗೆ ಆಗ್ರಹಿಸಿರುವ ರಾಜ್ಯ ಮಹಿಳಾ ಆಯೋಗಕ್ಕೆ “ಕೊಂದವರು ಯಾರು” ಸಂಘಟನೆ ಬೆಂಬಲ; ಸಂವಿಧಾನಿಕ ಕರ್ತವ್ಯ ಪಾಲಿಸಲು ಎಸ್‌ ಐಟಿಗೆ ʼ…ನಾವುʼ ಆಗ್ರಹ

Most read

ಬೆಂಗಳೂರು: ಧರ್ಮಸ್ಥಳ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಧರ್ಮಸ್ಥಳದಲ್ಲಿ ಸಂಭವಿಸಿರುವ ಮಹಿಳೆಯರು ಮತ್ತು ಯುವತಿಯರ ನಾಪತ್ತೆ ಅವರ ಅತ್ಯಾಚಾರ, ಕೊಲೆ ಪ್ರಕರಣಗಳನ್ನೂ ಸೇರಿದಂತೆ ಅಸಹಜ ಮತ್ತು ಅನುಮಾನಾಸ್ಪದ ಸಾವುಗಳು ಮತ್ತಿತರ ಪ್ರಕರಣಗಳ ಸಮಗ್ರ ತನಿಖೆಯನ್ನು ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಎಸ್ಐಟಿ ಮುಖ್ಯಸ್ಥರಿಗೆ ಪತ್ರ ಬರೆದಿರುವುದನ್ನು “ಕೊಂದವರು ಯಾರು-Who killed women in Dharmasthala?” ಆಂದೋಲನ ಸ್ವಾಗತಿಸಿದೆ.

ಮೂರು ದಿನಗಳ ಹಿಂದೆಯಷ್ಟೇ  ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು, ಎಸ್‌ ಐಟಿಗೆ  ಬರೆದ ಪತ್ರದಲ್ಲಿ ಉತ್ಪನನದ ಸಂದರ್ಭದಲ್ಲಿ ದೊರತ ಅಸ್ಥಿಪಂಜರಗಳ ಅವಶೇಷಗಳ ಬಗ್ಗೆ ಸಾವು ಸಂಭವಿಸಿದ ಕಾರಣದ ಬಗ್ಗೆ ಅವುಗಳಲ್ಲಿ ಮಹಿಳೆಯರ ಅಸ್ಥಿಪಂಜರಗಳನ್ನು ಗುರುತಿಸುವ ಬಗ್ಗೆ, ಕಾಡಿನ ಪ್ರದೇಶದಲ್ಲಿ ಅಸ್ಥಿಪಂಜರ ದೊರಕಿರುವ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಆಗ್ರಹಪಡಿಸಿದ್ದರು.

ಇದೀಗ ಆಯೋಗದ ಆಗ್ರಹವನ್ನು ಬೆಂಬಲಿಸಿರುವ ಕೊಂದವರು ಯಾರು ಸಂಘಟನೆ ಬರೆದಿರುವ ಪತ್ರಕ್ಕೆ  ರೂಪಾ‌ ಹಾಸನ, ಮಲ್ಲಿಗೆ ಸಿರಿಮನೆ, ಜ್ಯೋತಿ ಎ., ಮಧು ಭೂಷಣ್, ಆಶಾ ರಮೇಶ್, ದು. ಸರಸ್ವತಿ, ವಿಮಲ ಕೆ. ಎಸ್., ನಾ.ದಿವಾಕರ, ಪ್ರತಿಭಾ ಆರ್., ಗೀತಾ ಸುರತ್ಕಲ್, ಮಮತಾ ಯಜಮಾನ್, ಹರ್ಷಕುಮಾರ್ ಕುಗ್ವೆ, ಭುವನ್ ಕುಮಾರ್, ಗೀತಾ ಮೆನನ್, ಗೌರಮ್ಮ, ರುತ್ ಮನೋರಮ, ವಿದ್ಯಾ ದಿನಕರ್ ಮೊದಲಾದವರು ಸಹಿ ಹಾಕಿದ್ದಾರೆ.

ಸಂಘಟನೆಯು ಸರ್ಕಾರ ನೀಡಿದ ಆದೇಶದ ಪ್ರಕಾರವೇ ಎಸ್ಐಟಿ ನಡೆದುಕೊಳ್ಳಬೇಕು. ತನಿಖೆಯು ಆ ಭಾಗದಲ್ಲಿ ನಡೆದಿರುವ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ಕೊಲೆ, ದೌರ್ಜನ್ಯಗಳೂ ಸೇರಿದಂತೆ ಎಲ್ಲ ಅಪರಾಧ ಪ್ರಕರಣಗಳ ಸಮಗ್ರ ತನಿಖೆಯನ್ನು ನಡೆಸಬೇಕು ಎಂದು ನಾವು ಮತ್ತೊಮ್ಮೆ ಆಗ್ರಹಿಸುತ್ತೇವೆ. ಒಂದು ವೇಳೆ ಎಸ್ಐಟಿ ಸಮಗ್ರ ತನಿಖೆ ನಡೆಸದಿದ್ದಲ್ಲಿ ಅದು ಕರ್ತವ್ಯಲೋಪ ಎಸಗಿದಂತಾಗುತ್ತದೆ. ಅಲ್ಲದೆ ನ್ಯಾಯಕ್ಕಾಗಿ ಹಂಬಲಿಸುತ್ತಿರುವ ಹೆಣ್ಣುಮಕ್ಕಳಿಗೆ ಅನ್ಯಾಯವೆಸಗಿದ ಹಾಗಾಗುತ್ತದೆ. ಈ ಹಿನ್ನೆಲೆಯಲ್ಲಿ ಮಹಿಳಾ ಆಯೋಗದ ಅಧ್ಯಕ್ಷರ ಪತ್ರವನ್ನು ಎಸ್ಐಟಿ ಗಂಭೀರವಾಗಿ ಪರಿಗಣಿಸಿ ತನ್ನ ಸಾಂವಿಧಾನಿಕ ಕರ್ತವ್ಯವನ್ನು ಪಾಲಿಸಬೇಕು ಎಂಬುದು ನಮ್ಮ ಒಕ್ಕೊರಲ ಹಕ್ಕೊತ್ತಾಯವಾಗಿದೆ ಎಂದು ಹೇಳಿದೆ.

ಹಲವು ದಶಕಗಳಿಂದ ಮಹಿಳಾ ಚಳುವಳಿಯಲ್ಲಿ ನಿರತರಾದ ನಾವುಗಳು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಸುತ್ತಮುತ್ತ ಆಗಾಗ ನಡೆಯುತ್ತಿರುವ ಮಹಿಳೆಯರು ಮತ್ತು ಯುವತಿಯರ ವಿರುದ್ಧದ ಭೀಕರ ಹಿಂಸಾಚಾರದ ಸಂದರ್ಭದಲ್ಲೆಲ್ಲ ಪ್ರತಿಭಟಿಸುತ್ತಾ, ಸಮಗ್ರ ತನಿಖೆ ಮತ್ತು ನ್ಯಾಯಕ್ಕಾಗಿ ಹೋರಾಡುತ್ತಾ ಬಂದಿದ್ದೇವೆ.‌ ಅಂದಿನಿಂದಲೂ ನೆಲದ ಕಾನೂನನ್ನೂ, ಸಾಂವಿಧಾನಿಕ ಚೌಕಟ್ಟನ್ನೂ ಗಾಳಿಗೆ ತೂರುತ್ತ, ಇಂತಹ ಪ್ರಕರಣಗಳಲ್ಲಿ ನೈಜ ತನಿಖೆಯನ್ನೇ ನಡೆಸದೆ ಯಾವ ಪ್ರಕರಣವೂ ತಾರ್ಕಿಕ ಅಂತ್ಯ ಮುಟ್ಟದಂತೆ ಲೋಪವೆಸಗಿರುವ ವ್ಯವಸ್ಥೆಯನ್ನು ಸರಿಪಡಿಸಲು ನಾವು ತೀವ್ರವಾಗಿ ಒತ್ತಾಯಿಸಿದ್ದೇವೆ.

ಮಹಿಳಾ ಆಯೋಗದ ಅಧ್ಯಕ್ಷರು 4/7/2025ರಂದು, ಕಳೆದೆರಡು ದಶಕಗಳಲ್ಲಿ ದಕ್ಷಿಣ ಕನ್ನಡದ ಧರ್ಮಸ್ಥಳದ ಸುತ್ತಮುತ್ತ ಮಹಿಳೆಯರ ನಾಪತ್ತೆ, ಅಸಹಜ‌ ಸಾವು, ಅತ್ಯಾಚಾರ ಮತ್ತು ಕೊಲೆಗಳೂ ಸೇರಿದಂತೆ ಎಲ್ಲ ಪ್ರಕರಣಗಳ ಸಮಗ್ರ ತನಿಖೆಗೆ ಎಸ್ಐಟಿ ರಚಿಸಬೇಕೆಂದು ಸರ್ಕಾರವನ್ನು ಪತ್ರದ ಮೂಲಕ ಕೋರಿದ್ದ ಹಿನ್ನೆಲೆಯಲ್ಲಿ, ಸರ್ಕಾರ ಸಮಗ್ರ ತನಿಖೆಗೆ ಅದೇಶಿಸಿ ಈ ಎಸ್‌ಐಟಿ ರಚಿಸಿತ್ತು. ಸರ್ಕಾರದ ಈ ನಡೆಯನ್ನು ನಾವು ಸ್ವಾಗತಿಸಿ, ಇದಕ್ಕೆ ಕಾರಣವಾದ ಮಹಿಳಾ ಆಯೋಗವನ್ನೂ ಶ್ಲಾಘಿಸಿದ್ದೆವು.

ಎಸ್ಐಟಿ ಕೇವಲ‌ ‘ಸಾಮೂಹಿಕ ಹೆಣ ಹೂಳುವಿಕೆ’ ಬಗ್ಗೆ ಬಂದ ದೂರಿನ ತನಿಖೆಗಷ್ಟೇ ಸೀಮಿತವಾಗದಿರಲಿ ಎಂಬ ನಮ್ಮ ಆಗ್ರಹವನ್ನು ಮಹಿಳಾ ಆಯೋಗದ ಅಧ್ಯಕ್ಷರಿಗೂ, ಸರ್ಕಾರಕ್ಕೂ ತಲುಪಿಸಿದ್ದೆವು. ಆದರೆ ಕೆಲವೇ ದಿನಗಳಲ್ಲಿ ಎಸ್ಐಟಿಯು ಚಿನ್ನಯ್ಯ ದಾಖಲಿಸಿದ ದೂರಿನ ಕುರಿತು ಮಾತ್ರ ತನಿಖೆ ನಡೆಸಿದಂತೆ ಭಾಸವಾಗುತ್ತಿದ್ದ ಹಿನ್ನೆಲೆಯಲ್ಲಿ, ನಮ್ಮ ಆಂದೋಲನವನ್ನು ಮುಂದುವರೆಸಿ ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿಯವರಿಗೆ ಪತ್ರ ಬರೆಯುವುದರಿಂದ ಹಿಡಿದು ರಾಜ್ಯವ್ಯಾಪಿ ಸಹಿ ಸಂಗ್ರಹ ಅಭಿಯಾನ ನಡೆಸುವ ವರೆಗೆ, ವಿವಿಧ ಸ್ವರೂಪಗಳ ಹೋರಾಟಗಳ ಮೂಲಕ ಸರ್ಕಾರ ಮತ್ತು ಎಸ್ಐಟಿಗಳಿಗೆ ನಾವು ಒತ್ತಾಯಿಸುತ್ತಲೇ ಬಂದಿದ್ದೇವೆ. ಇದೇ ವೇಳೆ, ಮಹಿಳಾ ಆಯೋಗದ ಅಧ್ಯಕ್ಷರು ಮಧ್ಯಪ್ರವೇಶಿಸಿ ಎಸ್ಐಟಿ ಮುಖ್ಯಸ್ಥರಿಗೆ ಬರೆದ ಪತ್ರವು ಸಮಪರ್ಕ, ಸಕಾಲಿಕ, ನ್ಯಾಯೋಚಿತ ಮತ್ತು ಸಂವಿಧಾನಬದ್ಧವಾಗಿದೆ.

ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗ್ಗೆ ಸಮಗ್ರ ಮತ್ತು ನ್ಯಾಯಯುತ ತನಿಖೆ ನಡೆಸಲು, ಯಾವುದೇ ರಾಜಕೀಯ ಲೆಕ್ಕಾಚಾರಗಳಿಲ್ಲದೆ, ಕರ್ತವ್ಯನಿಷ್ಟೆಯಿಂದ ದೃಢವಾದ ಮತ್ತು ತಾತ್ವಿಕವಾದ ನಿಲುವನ್ನು ತಳೆದಿರುವ ಮಹಿಳಾ ಆಯೋಗದ ಅಧ್ಯಕ್ಷರ ನಡೆಗೆ ನಮ್ಮೆಲ್ಲರ ಬೆಂಬಲವಿದೆ. ಆದರೆ, ಅವರು ನ್ಯಾಯಕ್ಕಾಗಿ ಆಗ್ರಹಿಸಿದ ಕೂಡಲೇ ಅವರ ವಿರುದ್ಧ ಕೆಲವು ಟಿವಿ ವಾಹಿನಿಗಳು ವಿನಾಕಾರಣ  ಟೀಕಾಪ್ರಹಾರ ನಡೆಸುತ್ತಿರುವುದು ಮಾಧ್ಯಮಗಳ ನೈತಿಕ ಅಧಃಪತನವನ್ನು ಬಿಂಬಿಸುತ್ತದೆ. ತನ್ನ ಸಾಂವಿಧಾನಿಕ ಹೊಣೆಗಾರಿಕೆಯನ್ನು ಅತ್ಯಂತ ನಿಷ್ಠೆ ಮತ್ತು ಬದ್ಧತೆಯಿಂದ ನಿಭಾಯಿಸುತ್ತಿರುವ ಆಯೋಗದ ಬಗ್ಗೆ ಮೆಚ್ಚುಗೆ ಮತ್ತು ಬೆಂಬಲ ವ್ಯಕ್ತಪಡಿಸುವ ಬದಲಿಗೆ ಈ ಮಾಧ್ಯಮಗಳು, ಮಹಿಳೆ-ಮನುಷ್ಯರ ವಿರುದ್ಧದ ಧೋರಣೆ ತಳೆದಿರುವುದು ಖಂಡನಾರ್ಹ. ಹೆಣ್ಣಿನ ವಿರುದ್ಧದ ದೌರ್ಜನ್ಯಗಳಿಗೆ ಯಾರೂ ನ್ಯಾಯವನ್ನು ಕೇಳಬಾರದೆಂಬ ನಿಲುವು ಈ ಇವುಗಳದ್ದಾದರೆ, ಅದು ಮಾನವೀಯ ಮತ್ತು ನಮ್ಮ ದೇಶದ ಸಾಂವಿಧಾನಿಕ ಮೌಲ್ಯಗಳ ವಿರುದ್ಧವೇ ಆಗಿರುವುದರಿಂದ ಇಂಥ ಮಾಧ್ಯಮಗಳನ್ನು ಮಾನವತೆ ಉಳ್ಳವರು ತಿರಸ್ಕರಿಸಬೇಕಾಗುತ್ತದೆ.

ಸರ್ಕಾರ ನೀಡಿದ ಆದೇಶದ ಪ್ರಕಾರವೇ ಎಸ್ಐಟಿ ನಡೆದುಕೊಳ್ಳಬೇಕು; ತನಿಖೆಯು ಆ ಭಾಗದಲ್ಲಿ ನಡೆದಿರುವ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ಕೊಲೆ, ದೌರ್ಜನ್ಯಗಳೂ ಸೇರಿದಂತೆ ಎಲ್ಲ ಅಪರಾಧ ಪ್ರಕರಣಗಳ ಸಮಗ್ರ ತನಿಖೆಯನ್ನು ನಡೆಸಬೇಕು ಎಂದು ನಾವು ಮತ್ತೊಮ್ಮೆ ಆಗ್ರಹಿಸುತ್ತೇವೆ. ಒಂದು ವೇಳೆ ಎಸ್ಐಟಿ ಸಮಗ್ರ ತನಿಖೆ ನಡೆಸದಿದ್ದಲ್ಲಿ ಅದು ಕರ್ತವ್ಯಲೋಪ ಎಸಗಿದಂತಾಗುತ್ತದೆ. ಅಲ್ಲದೆ ನ್ಯಾಯಕ್ಕಾಗಿ ಹಂಬಲಿಸುತ್ತಿರುವ ಹೆಣ್ಣುಮಕ್ಕಳಿಗೆ ಅನ್ಯಾಯವೆಸಗಿದ ಹಾಗಾಗುತ್ತದೆ. ಈ ಹಿನ್ನೆಲೆಯಲ್ಲಿ ಮಹಿಳಾ ಆಯೋಗದ ಅಧ್ಯಕ್ಷರ ಪತ್ರವನ್ನು ಎಸ್ಐಟಿ ಗಂಭೀರವಾಗಿ ಪರಿಗಣಿಸಿ ತನ್ನ ಸಾಂವಿಧಾನಿಕ ಕರ್ತವ್ಯವನ್ನು ಪಾಲಿಸಬೇಕು ಎಂದು ನ್ಯಾಯಕ್ಕಾಗಿ ನಾವು ಸಂಘಟನೆ ಆಗ್ರಹಪಡಿಸಿದೆ.

More articles

Latest article