ಬೆಂಗಳೂರು: ‘ಓಂ’, ‘ನಲ್ಲ’ ‘ಕೆಜಿಎಫ್’, ‘ಕೆಜಿಎಫ್ 2’ ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ಖಳನಟ ಹರೀಶ್ ರಾಯ್ ಕೊನೆಯುಸಿರೆಳೆದಿದ್ದಾರೆ.
ಕೆಲವು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಅಸು ನೀಗಿದ್ದಾರೆ. ಇವರು ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.
‘ಓಂ’, ‘ನಲ್ಲ’ ಸೇರಿದಂತೆ ‘ಕೆಜಿಎಫ್’, ‘ಕೆಜಿಎಫ್ 2’ ಹಾಗೂ ಕನ್ನಡದ ಹಲವಾರು ಸಿನಿಮಾಗಳಲ್ಲಿ ಖಳನಟನಾಗಿ ಬಣ್ಣ ಹಚ್ಚಿ ಗಮನ ಸೆಳೆದಿದ್ದ ಹರೀಶ್ ರಾಯ್ ಅವರು ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದರು. ನಟ ಯಶ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಸೇರಿದಂತೆ ಅನೇಕ ಕಲಾವಿರು ಹರೀಶ್ ರಾಯ್ ಅವರಿಗೆ ಆರ್ಥಿಕ ನೆರವು ನೀಡಿದ್ದರು. ಆದರೆ ಅವರು ಕ್ಯಾನ್ಸರ್ ಅನ್ನು ಗೆಲ್ಲಲಾಗಲಿಲ್ಲ. ಥೈರಾಯ್ಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರ ಹೊಟ್ಟೆ ಉಬ್ಬರಗೊಂಡು, ದೇಹವೆಲ್ಲ ನಿತ್ರಾಣವಾಗಿತ್ತು. ಗುರುತು ಸಿಗದಷ್ಟು ಬದಲಾಗಿದ್ದರು.
ಚಿಕಿತ್ಸೆಗೆ ನೆರವು ನೀಡುವಂತೆ ಮನವಿ ಮಾಡಿಕೊಂಡಿದ್ದರು. ಕರಾವಳಿ ಮೂಲದ ಹರೀಶ್ ರಾಯ್ ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದರು. ನಿಜ ಜೀವನದಲ್ಲಿಯೂ ಪ್ರಕರಣವೊಂದರಲ್ಲಿ ಅವರು ಜೈಲು ಶಿಕ್ಷೆ ಅನುಭವಿಸಿದ್ದರು.
ಅಂಡರ್ ವರ್ಲ್ಡ್, ಮೀಂದುಮ್ ಒರು ಕಾದಲ್ ಕಧೈ, ರಾಜ್ ಬಹದ್ದೂರ್, ಸಂಜು ವೆಡ್ಸ್ ಗೀತಾ, ಸ್ವಯಂವರ, ಭೂಗತ, ನನ್ನ ಕನಸಿನ ಹೂವೆ, ನಲ್ಲ, ಜಾಫರ್ ಅಲಿಯಾಸ್ ಮುರ್ಗಿ ಜಾಫರ್, ಜೋಡಿ ಹಕ್ಕಿ, ತಾಯವ್ವ, ಓಂ ಹಾಗೂ ಸ್ಯಾಂಡಲ್ವುಡ್ನ ಟಾಪ್ ಸಿನಿಮಾ ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಇವರು ನಟಿಸಿದ ಕೆಲವು ಪ್ರಮುಖ ಚಿತ್ರಗಳು.

