ನವದೆಹಲಿ: ಜಲಸಂಪನ್ಮೂಲ ಇಲಾಖೆ ನಿರ್ವಹಿಸುತ್ತಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮೇಕೆದಾಟು ಸೇರಿದಂತೆ ಸುಪ್ರೀಂಕೋರ್ಟ್ ನಲ್ಲಿ ಬಾಕಿ ಇರುವ ರಾಜ್ಯದ ಜಲ ವಿವಾದಗಳನ್ನು ಕುರಿತು ಕರ್ನಾಟಕದ ಪರ ವಾದಿಸುತ್ತಿರುವ ಹಿರಿಯ ವಕೀಲರಾದ ಮೋಹನ್ ವಿ ಕಾತರಾಕಿ, ನಿಶಾಂತ್ ಪಾಟೀಲ್, ರಾಜ್ಯದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಹಾಗೂ ತಾಂತ್ರಿಕ ಸಲಹೆಗಾರ ಜೈಪ್ರಕಾಶ್ ಅವರ ಜತೆಯಲ್ಲಿ ದೆಹಲಿಯ ಕರ್ನಾಟಕ ಭವನದಲ್ಲಿ ಚರ್ಚೆ ನಡೆಸಿದರು.
ನಂತರ ಎಕ್ಸ್ ನಲ್ಲಿ ಈ ಸಂಬಂಧ ಮಾಹಿತಿ ಹಂಚಿಕೊಂಡಿರುವ ಅವರು ಬಿಜೆಪಿ ಸಂಸದರ ನಿಷ್ಕ್ರಿಯತೆ ಕುರಿತು ಟೀಕಿಸಿದ್ದಾರೆ.
ಇದೊಂದು ಮಹತ್ವದ ಸಭೆ. ಈ ಸಭೆಯಲ್ಲಿ ಮೇಕೆದಾಟು, ಕೃಷ್ಣಾ ಮೇಲ್ದಂಡೆ, ಮಹದಾಯಿ ಯೋಜನೆ ಬಗ್ಗೆ ಚರ್ಚೆ ಮಾಡಿದ್ದೇವೆ. ಮೇಕೆದಾಟು ಯೋಜನೆ ಸಂಬಂಧ ವಿನಾ ಕಾರಣ ಸಮಯಾವಕಾಶದ ನೆಪದಲ್ಲಿ ವಿಚಾರಣೆ ಮುಂದೂಡಿಕೊಂಡೇ ಹೋಗಲಾಗುತ್ತಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಹೇಳಿದ್ದೇನೆ. ನ್ಯಾಯಾಲಯದಲ್ಲಿ ವಿಶೇಷ ಪೀಠ ರಚನೆಗೆ ಮುಂದಾಗಿದ್ದು, ಈಗ ಸಮಯ ವ್ಯರ್ಥ ಮಾಡಬಾರದು ಎಂದು ಹೇಳಿದ್ದೇನೆ. ನಮ್ಮ ಸರ್ಕಾರದ ನಿರ್ಧಾರವನ್ನು ತಿಳಿಸಿದ್ದೇನೆ ಎಂದಿದ್ದಾರೆ.
ಕೃಷ್ಣಾ ಮೇಲ್ದಂಡೆ ಯೋಜನೆ ಸಂಬಂಧ ಈಗಾಗಲೇ ರೈತರಿಗೆ ಭೂ ಪರಿಹಾರ ನೀಡಲು ತೀರ್ಮಾನ ಮಾಡಲಾಗಿದೆ. ಹೊಸ ಕಾಯ್ದೆ ಪ್ರಕಾರ ಇದಕ್ಕೆ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕಿದೆ. ಬೇರೆ ರಾಜ್ಯಗಳಲ್ಲಿ ಈ ಪ್ರಾಧಿಕಾರ ರಚನೆ ಆಗಿವೆ. ಬಿಹಾರದಲ್ಲಿ ಪ್ರಾಧಿಕಾರದ ಮೂಲಕ ಸಾವಿರಾರು ಪ್ರಕರಣ ಬಗೆಹರಿಸಲಾಗಿದೆ. ಕಾನೂನು ಉಪಯೋಗಿಸಿಕೊಳ್ಳಬೇಕು. ಮಹದಾಯಿ ಯೋಜನೆ ಸಂಬಂಧ ಕೆಲವು ದಾಖಲೆ ಸಿದ್ಧಪಡಿಸಲು ಸೂಚಿಸಿದ್ದೇನೆ.
ಮೇಕೆದಾಟು ಯೋಜನೆ ಸಂಬಂಧ ಕೇಂದ್ರ ಸಚಿವರ ಪತ್ರ ನಮ್ಮ ಬಳಿ ಇದೆ. ಈ ಯೋಜನೆ ಅಂದಾಜು ವೆಚ್ಚ 9 ಸಾವಿರ ಕೋಟಿ ಇತ್ತು. ಈಗ 13-14 ಸಾವಿರ ಕೋಟಿಗೆ ಏರಿಕೆಯಾಗಿದೆ. ಹೀಗಾಗಿ ನಾವು ವಿಳಂಬ ಮಾಡುವಂತಿಲ್ಲ. ನಾವು ತಮಿಳುನಾಡಿಗೆ ನಿಗದಿಯಾಗಿರುವ 177 ಟಿಎಂಸಿ ನೀರನ್ನು ನೀಡುತ್ತೇವೆ. ಅದರಲ್ಲಿ ಅನುಮಾನವಿಲ್ಲ. ಈ ಯೋಜನೆಯಲ್ಲಿ ವಿದ್ಯುತ್ ಉತ್ಪಾದನೆ ಕೂಡ ಇದೆ. ಹೀಗಾಗಿ ಕಾಲಹಾರಣ ಮಾಡಬಾರದು ಎಂದು ತೀರ್ಮಾನಿಸಿದ್ದೇವೆ.
ಬಿಜೆಪಿ ಸಂಸದರು ಬಾಯಿ ಬಿಡುತ್ತಿಲ್ಲ!:
ನಮ್ಮ ರಾಜ್ಯದ ಬಿಜೆಪಿ ಸಂಸದರು ರಾಜ್ಯದ ಹಿತಕ್ಕಾಗಿ ಧೈರ್ಯವಾಗಿ ಹೋರಾಟ ಮಾಡದಿದ್ದರೆ, ಅವರು ನಮಗೆ ನ್ಯಾಯ ಒದಗಿಸಿಕೊಡಲು ಸಾಧ್ಯವಿಲ್ಲ. ನಾವು ರಾಜ್ಯ ಸರ್ಕಾರವಾಗಿ ನಮ್ಮ ಕರ್ತವ್ಯ ಮಾಡುತ್ತೇವೆ. ಸಂಸದರು ಒಂದೂ ದಿನ ಬಾಯಿ ಬಿಟ್ಟು ಮಾತನಾಡುತ್ತಿಲ್ಲ. ಈ ವಿಚಾರಣೆ ಮುಗಿಯಲಿ, ಚಳಿಗಾಲದ ಅಧಿವೇಶನದ ವೇಳೆ ಮತ್ತೆ ಸಭೆ ನಡೆಸುತ್ತೇನೆ ಎಂದು ಮಾಹಿತಿ ನೀಡಿದ್ದಾರೆ.

