ಬೆಂಗಳೂರು: ನವಂಬರ್ 6 ಹಾಗೂ 7 ರಂದು ಬೆಂಗಳೂರಿನಲ್ಲಿ ಶುದ್ಧೀಕರಿಸಿದ ನೀರಿನ ಮರುಬಳಕೆಯ ಬಗ್ಗೆ ನೀತಿ ಆಯೋಗದ ರಾಷ್ಟ್ರೀಯ ಕಾರ್ಯಗಾರ ನಡೆಯಲಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮಪ್ರಸಾದ್ ಮನೋಹರ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ದೇಶದ ಪ್ರಮುಖ ನೀತಿ ನಿರೂಪಣಾ ಸಂಸ್ಥೆಯಾದ ನೀತಿ ಆಯೋಗವು, ಕರ್ನಾಟಕ ಸರ್ಕಾರ ಹಾಗೂ ಬೆಂಗಳೂರು ಜಲಮಂಡಳಿ ಸಹಯೋಗದಲ್ಲಿ ‘ಶುದ್ಧೀಕರಿಸಿದ ತ್ಯಾಜ್ಯ ನೀರಿನ ಮರುಬಳಕೆ’ ಕುರಿತು ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಿದೆ. ನವೆಂಬರ್ 6 ಮತ್ತು 7 ರಂದು ಈ ಎರಡು ದಿನಗಳ ಕಾರ್ಯಕ್ರಮ ನಡೆಯಲಿದ್ದು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಈ ಕಾರ್ಯಾಗಾರಕ್ಕೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಈ ಮಹತ್ವದ ಕಾರ್ಯಾಗಾರದಲ್ಲಿ ದೇಶದ ವಿವಿಧ ರಾಜ್ಯಗಳ ಉನ್ನತ ಅಧಿಕಾರಿಗಳು, ಜಲ ತಜ್ಞರು ಮತ್ತು ಕೈಗಾರಿಕಾ ಮುಖಂಡರು ಭಾಗವಹಿಸಲಿದ್ದು, ಶುದ್ಧೀಕರಿಸಿದ ನೀರನ್ನು ಗರಿಷ್ಠ ಪ್ರಮಾಣದಲ್ಲಿ ಮರುಬಳಕೆ ಮಾಡಲು ರಾಷ್ಟ್ರೀಯ ಯೋಜನೆಯನ್ನು ರೂಪಿಸುವ ನಿಟ್ಟಿನಲ್ಲಿ ಚರ್ಚೆ ನಡೆಯಲಿದೆ.
ಡಿಕೆ ಶಿವಕುಮಾರ್ ಅವರ ನೇತೃತ್ವದ ಬ್ರಾಂಡ್ ಬೆಂಗಳೂರು ಅಭಿಯಾನದ ಅಡಿಯಲ್ಲಿ ತ್ಯಾಜ್ಯ ನೀರಿನ ಸಮರ್ಪಕ ಬಳಕೆಗೆ ಒತ್ತು ನೀಡಲಾಗಿದೆ. ಈ ಮೂಲಕ ತ್ಯಾಜ್ಯ ನೀರಿನ ಬಳಕೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಏಷ್ಯಾ ಖಂಡಕ್ಕೆ ಬೆಂಗಳೂರು ಜಲಮಂಡಳಿ ಮಾದರಿಯಾಗಿದೆ. ಸರ್ಕ್ಯೂಲರ್ ವಾಟರ್ ಎಕಾಮನಿಯನ್ನು ಅಳವಡಿಸಿಕೊಂಡಿರುವ ಮಹಾನಗರಗಳ ಪೈಕಿ ಬೆಂಗಳೂರು ನಗರ ಮುಂಚೂಣಿಯಲ್ಲಿದೆ. ಬೆಂಗಳೂರು ನಗರದಲ್ಲಿ ಶೇಕಡಾ 90 ರಷ್ಟು ಒಳಚರಂಡಿ ಶುದ್ದೀಕರಣ ಸಾಮರ್ಥ್ಯವನ್ನು ಹೊಂದಿದ್ದು, 1,348 ಎಂ.ಎಲ್.ಡಿ ಯಷ್ಟು ನೀರನ್ನು ಶುದ್ದೀಕರಿಸಲಾಗುತ್ತಿದೆ. ಈ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಕೆರೆಗಳನ್ನು ತುಂಬಿಸಲಾಗುತ್ತಿದೆ. ಅಲ್ಲದೇ, ಪಾರ್ಕ್ ಮತ್ತು ಉದ್ಯಾನವಗಳ ನಿರ್ವಹಣೆ ಜೊತೆಯಲ್ಲಿಯೇ ಕೈಗಾರಿಕೆಗಳಿಗೂ ಪೂರೈಸಲಾಗುತ್ತಿದೆ.
“ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಶಿವಕುಮಾರ್ ಅವರ ದೂರದೃಷ್ಟಿಯ ಕಾರಣದಿಂದ ಬೆಂಗಳೂರು ತ್ಯಾಜ್ಯ ನೀರನ್ನು ಆಸ್ತಿಯನ್ನಾಗಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಶುದ್ಧೀಕರಿಸಿದ ನೀರು ತ್ಯಾಜ್ಯವಲ್ಲ, ಇದು ನಗರದ ಸುಸ್ಥಿರತೆಯನ್ನು ಬಲಪಡಿಸುವ ಸಂಪನ್ಮೂಲ ಎಂದು ನಮ್ಮ ನಗರದ ಯಶಸ್ಸು ಸಾಬೀತುಪಡಿಸಿದೆ” ಎಂದು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್‌ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಶುದ್ಧೀಕರಿಸಿದ ತ್ಯಾಜ್ಯ ನೀರಿನ ಮರುಬಳಕೆಯನ್ನು ಭಾರತದಾದ್ಯಂತ ಕಡ್ಡಾಯಗೊಳಿಸಲು ಒಂದು ಸಮಗ್ರ ರಾಷ್ಟ್ರೀಯ ಯೋಜನೆಯನ್ನು ರೂಪಿಸುವುದು ಈ ಕಾರ್ಯಾಗಾರದ ಮುಖ್ಯ ಗುರಿಯಾಗಿದೆ. ನವಂಬರ್ 7ರಂದು ಈ ರಾಷ್ಟ್ರೀಯ ಕಾರ್ಯಗಾರದಲ್ಲಿ ಭಾಗವಹಿಸುವ ಸದಸ್ಯರಿಗಾಗಿ ತ್ಯಾಜ್ಯ ನೀರನ್ನ ತೃತೀಯ ಹಂತದ ಶುದ್ಧೀಕರಣ ಮಾಡಿ ವಿಧಾನಸೌಧ ಹಾಗೂ ಇತರೆ ಸರ್ಕಾರಿ ಕಟ್ಟಡಗಳಿಗೆ ಸರಬರಾಜು ಮಾಡುತ್ತಿರುವ ಕಬ್ಬನ್ ಪಾರ್ಕ್ ತ್ಯಾಜ್ಯ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ಆಯೋಜಿಸಲಾಗಿದೆ. ಬಯಲು ಸೀಮೆಯ ಜಿಲ್ಲೆಗಳಿಗೆ ತ್ಯಾಜ್ಯ ನೀರನ್ನ ಶುದ್ಧೀಕರಿಸಿ ಹರಿಸುವಂತಹ ಯೋಜನೆಯಾದ ಕೆ ಸಿ ವ್ಯಾಲಿ ಎಸ್ ಟಿ ಪಿ ಗೂ ಸದಸ್ಯರು ಭೇಟಿ ನೀಡಲಿದ್ದಾರೆ ಎಂದು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್‌ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

