ಮಹಾರಾಷ್ಟ್ರಕ್ಕೆ ರೂ.1.30 ಲಕ್ಷ ಕೋಟಿ; ಕರ್ನಾಟಕಕ್ಕೆ ರೂ.40 ಸಾವಿರ ಕೋಟಿ ಪರಿಹಾರ;  ಕೇಂದ್ರ ವಿರುದ್ಧ ಸಚಿವ ಪ್ರಿಯಾಂಕ್‌ ಖರ್ಗೆ ಆರೋಪ

Most read

ಕಲಬುರಗಿ : ಕಲಬುರಗಿ ಜಿಲ್ಲೆಯ 4 ಲಕ್ಷಕ್ಕೂ ಅಧಿಕ ರೈತರಿಗೆ ರೂ. 650 ಕೋಟಿ ಬೆಳೆ ವಿಮೆ ಪರಿಹಾರ ಸಿಕ್ಕಿದೆ. ಬಹುಶಃ ಇದು ರಾಜ್ಯದಲ್ಲೇ ಅತ್ಯಧಿಕ ಬೆಳೆವಿಮೆ ಪರಿಹಾರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಆಳಂದ ಪಟ್ಟಣದ ವೀರಶೈವ ಲಿಂಗಾಯತ ಕಲ್ಯಾಣ ಮಂಟಪದಲ್ಲಿ ರೈತರಿಗೆ ರಾಜ್ಯ ಸರ್ಕಾರದಿಂದ ರೂ. 225 ಕೋಟಿ ಬೆಳೆ ವಿಮೆ ಬಿಡುಗಡೆ ಮಾಡಿದ ಅಂಗವಾಗಿ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದೆ.

2025-26 ಸಾಲಿನಲ್ಲಿ ಸುಮಾರು 3,00,952 ಜನ ರೈತರು ಬೆಳೆ ವಿಮೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದ ವೇಳೆ ನೆಟೆರೋಗದಿಂದ ತೊಗರಿ ಹಾನಿಯಾಗಿದ್ದರೂ ನಯಾಪೈಸೆ ಪರಿಹಾರ ದೊರಕಿಸಿಕೊಟ್ಟಿರಲಿಲ್ಲ. ಆಗಲೂ ತೀವ್ರ ಮಳೆಯಿಂದ ವ್ಯಾಪಕ ಬೆಳೆ ಹಾನಿಯಾಗಿತ್ತು. ಆಗಿನ ಸಿಎಂ ಆಗಿದ್ದ ಯಡಿಯೂರಪ್ಪ ಅವರು ವಿಮಾನ ನಿಲ್ದಾಣದಿಂದ ಹಾಗೆಯೇ ವಾಪಸ್ ಹೋಗಿದ್ದರು.

ಈ ಸಲ ಕೂಡ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಬೆಳೆ ಹಾನಿಯಾಗಿದೆ. ‌ಸಿಎಂ ಸಿದ್ದರಾಮಯ್ಯ ಅವರು ಇಡೀ ದಿನ ಜಿಲ್ಲೆಯ ವೈಮಾನಿಕ ಸಮೀಕ್ಷೆ ನಡೆಸಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ ಕೇಂದ್ರ ಕೊಡುವ ಪರಿಹಾರದೊಂದಿಗೆ ಪ್ರತಿ ಹೆಕ್ಟೇರ್‌ಗೆ  ರೂ.8500 ಹೆಚ್ಚುವರಿ ಮೊತ್ತ ಸೇರಿಸಿ ಕೊಡುವ ವಾಗ್ದಾನ ನೀಡಿದ್ದರು.

ಕೇಂದ್ರ ಸರ್ಕಾರವು ಪಕ್ಕದ ಮಹಾರಾಷ್ಟ್ರಕ್ಕೆ ರೂ.1.30 ಲಕ್ಷ ಕೋಟಿ ಪರಿಹಾರ ನೀಡಿದೆ. ಆದರೆ ಕರ್ನಾಟಕಕ್ಕೆ ಕೇವಲ ರೂ.40,000 ಕೋಟಿ ಪರಿಹಾರ ನೀಡಲಾಗಿದೆ. ಈ ಮಲತಾಯಿ ಧೋರಣೆಯನ್ನು ಖಂಡಿಸಿ ನಾವು ತೀವ್ರ ಹೋರಾಟ ಮಾಡಬೇಕಾಗಿದೆ.

ಕಲ್ಯಾಣ ಪಥ ಹಾಗೂ ಪ್ರಗತಿ ಪಥ ಯೋಜನೆಯಡಿಯಲ್ಲಿ ರಸ್ತೆಗಳ ಸುಧಾರಣೆಗೆ ಕ್ರಮವಹಿಸಲಾಗಿದೆ. ಪ್ರಗತಿಪಥ ಯೋಜನೆಯಡಿಯಲ್ಲಿ ಸುಮಾರು 8,257 ಕಿ.ಮಿ ದೂರದ ಗ್ರಾಮೀಣ ರಸ್ತೆಗಳ ಸುಧಾರಣೆಗೆ ಕ್ರಮವಹಿಸಲಾಗಿದೆ.

ಆಳಂದ ಕ್ಷೇತ್ರದ ಗ್ರಾಮೀಣ ಭಾಗದ ರಸ್ತೆಗಳ ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ರೈತರಿಗೆ ಇನ್ನೂ ಹೆಚ್ಚಿನ‌ ಪರಿಹಾರ ನೀಡುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಜನರ ಯೋಗಕ್ಷೇಮ ಕಾಪಾಡುವುದು ನಮ್ಮ ಗ್ಯಾರಂಟಿ ಸರ್ಕಾರದ ಆದ್ಯತೆಯಾಗಿದೆ ಎಂದು ವಿವರಿಸಿದರು.

More articles

Latest article