ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಹೆದರಿರುವುದರ ಜತೆಗೆ ಉದ್ಯಮಿಗಳಾದ ಅಂಬಾನಿ, ಅದಾನಿ ಅವರ ಹಿಡಿತದಲ್ಲಿದ್ದಾರೆ ಎಂದು ಕಾಂಗ್ರೆಸ್ ವರಿಷ್ಠ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಪಾದಿಸಿದ್ದಾರೆ.
ಅವರು ಬಿಹಾರದ ಬೇಗುಸರಾಯ್ ಮತ್ತು ಖಗಾರಿಯಾ ಜಿಲ್ಲೆಗಳಲ್ಲಿ ಚುನಾವಣಾ ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಪಿಎಂ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
56 ಇಂಚಿನ ಎದೆ ಇದ್ದ ಮಾತ್ರಕ್ಕೆ ನೀವು ಬಲಿಷ್ಠರಾಗುವುದಿಲ್ಲ. ದುರ್ಬಲವಾದ ಮೈಕಟ್ಟು ಹೊಂದಿದ್ದರೂ ರಾಷ್ಟ್ರಪಿತ ಮಹಾತ್ಮ ಮಹಾತ್ಮಾ ಗಾಂಧಿ ಅವರನ್ನು ನೆನಪಿಸಿದ್ದಾರೆ. ಆಪರೇಷನ್ ಸಿಂಧೂರ್ ನಡೆಯುತ್ತಿದ್ದಾಗ ಟ್ರಂಪ್ ಫೋನ್ ಬರುತ್ತಿದ್ದಂತೆ 56 ಇಂಚಿನ ಎದೆಯ ನರೇಂದ್ರ ಮೋದಿ ಆತಂಕಕ್ಕೀಡಾಗಿದ್ದರು ಎಂದು ವ್ಯಂಗ್ಯವಾಡಿದ ರಾಹುಲ್, ಪ್ರಧಾನಿ ಮೋದಿ ಅವರು ಟ್ರಂಪ್‌ಗೆ ಹೆದರುವುದಷ್ಟೇ ಅಲ್ಲ, ಅಂಬಾನಿ ಮತ್ತು ಅದಾನಿಯ ರಿಮೋಟ್ ಕಂಟ್ರೋಲ್‌ನಲ್ಲಿ ಸಿಲುಕಿಕೊಂಡಿದ್ದಾರೆ. 1971ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಅಮೆರಿಕ ಬೆದರಿಕೆ ಹಾಕಿದ್ದರೂ ಅವರು ಹೆದರಲಿಲ್ಲ. ಮಾಡಬೇಕಾದ್ದನ್ನು ಮಾಡಿಯೇ ತೀರಿದರು. ಆದರೆ ಟ್ರಂಪ್ ಮೋದಿ ಅವರಿಗೆ ಆಪರೇಷನ್ ಸಿಂಧೂರ್ ನಿಲ್ಲಿಸುವಂತೆ ಹೇಳಿದಾಗ ಅವರು ನಿಲ್ಲಿಸಿಯೇ ಬಿಟ್ಟರು ಎಂದರು.
ಮೋದಿ ಜಾರಿಗಗೆ ತಂದ ಜಿಎಸ್‌ಟಿ, ನೋಟು ರದ್ದತಿಯಂತಹ ಎಲ್ಲಾ ನಿರ್ಧಾರಗಳು ಸಣ್ಣ ಸಣ್ಣ ಉದ್ದಿಮೆದಾರರನ್ನು ನಾಶಮಾಡಿ ದೊಡ್ಡ ಉದ್ಯಮಿಗಳಿಗೆ ಲಾಭ ತರುವ ಗುರಿಯನ್ನು ಹೊಂದಿವೆ ಎಂದೂ ಆಪಾದಿಸಿದರು.
ಪ್ರಧಾನಿಗಳು ಮತಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಯೋಗ ಮಾಡುತ್ತಾರೆ. ವೇದಿಕೆಯಲ್ಲಿ ನರ್ತಿಸಲು ಹೇಳಿದರೂ ಮಾಡುತ್ತಾರೆ. ಚುನಾವಣೆ ದಿನಾಂಕದವರೆಗೆ ನೀವು ಏನು ಹೇಳಿದರೂ ಅವರು ಮಾಡುತ್ತಲೇ ಇರುತ್ತಾರೆ. ಚುನಾವಣೆ ನಂತರ ಎಂದಿನಂತೆ ಕಾರ್ಪೋರೇಟ್ ಕಂಪನಿಗಳ ಪರವಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತಾರೆ ಎಂದು ವ್ಯಂಗ್ಯವಾಡಿದರು.
ಇಂಡಿಯಾ ಒಕ್ಕೂಟ ಬಿಹಾರದಲ್ಲಿ ಅಧಿಕಾರಕ್ಕೆ ಬಂದರೆ ಎಲ್ಲಾ ಜಾತಿ, ಧರ್ಮಗಳನ್ನು ಒಳಗೊಂಡ ಸರ್ಕಾರ ರಚಿಸುತ್ತೇವೆ ಎಂದು ಭರವಸೆ ನೀಡಿದರು.
ಬಗ್ಗೆ ಯುವಕರು ಪ್ರಶ್ನೆಗಳನ್ನು ಎತ್ತದಂತೆ ಮಾಡಲು ಪ್ರಧಾನಿಯವರು ಅಗ್ಗದ ಇಂಟರ್ ನೆಟ್ ನೀಡಿ ರೀಲ್ ಗಳನ್ನು ನೋಡಲು ಹೇಳುತ್ತಿದ್ದಾರೆ. ಏಕೆಂದರೆ ನಿರುದ್ಯೋಗದಂತಹ ಸಮಸ್ಯೆಗಳಿಂದ ಯುವಜನರ ಗಮನವನ್ನು ಬೇರೆಡೆಗೆ ತಿರುಗಿಸುವುದು ಅವರ ಉದ್ದೇಶ. ಆದರೆ ನೀವು ಇನ್ ಸ್ಟಾಗ್ರಾಮ್ ಮತ್ತು ಫೇಸ್ ಬುಕ್ ನಲ್ಲಿ ರೀಲ್‌ಗಳನ್ನು ನೋಡಿದರೆ ಹಣ ಅಂಬಾನಿಗೆ ಹೋಗುತ್ತದೆ ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದರು.
ವೋಟ್ ಚೋರಿ ಮೂಲಕ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕರ್ನಾಟಕ, ಮಹಾರಾಷ್ಟ್ರ, ಹರಿಯಾಣ ಮತ್ತು ಮಧ್ಯಪ್ರದೇಶ ಚುನಾವಣೆಗಳನ್ನು ಗೆದ್ದಿದೆ. ಚುನಾವಣಾ ಆಯೋಗವು ಬಿಹಾರದ ಮತದಾರರ ಪಟ್ಟಿಯಿಂದ ನಮ್ಮ ಬೆಂಬಲಿಗರ ಹೆಸರುಗಳನ್ನು ತೆಗೆದುಹಾಕಿದೆ. ನಾವು ಇದಕ್ಕೆ ಪುರಾವೆಗಳನ್ನು ಒದಗಿಸಿದ್ದೇವೆ ಎಂದು ಹೇಳಿದರು.

