ಕ್ರೀಡೆಯಲ್ಲಿ ಗೆಲುವು, ಸೋಲಿಗಿಂತ ಭಾಗವಹಿಸುವಿಕೆ ಮುಖ್ಯ: ಸಿ.ಎಂ ಸಿದ್ದರಾಮಯ್ಯ

Most read

ಬೆಂಗಳೂರು: ನಮ್ಮ ಸರ್ಕಾರ ಕ್ರೀಡೆಗೆ ನಿರಂತರವಾಗಿ ಸಹಕಾರ ನೀಡುತ್ತಿದೆ. ನಿಮ್ಮ ಉತ್ಸಾಹಕ್ಕೆ ತಕ್ಕಂತೆ ನಮ್ಮ ಪ್ರೋತ್ಸಾಹ ಸದಾ ಸಿದ್ಧವಿದೆ ಎಂದು ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ಘೋಷಿಸಿದರು.

ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆ ಮತ್ತು ರಾಜ್ಯ ಒಲಂಪಿಕ್ ಅಸೋಸಿಯೇಷನ್ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 14 ವರ್ಷದೊಳಗಿನ ಮಕ್ಕಳ ಮಿನಿ ಕರ್ನಾಟಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಸರ್ಕಾರ ಕ್ರೀಡೆಗೆ ನಿರಂತರವಾಗಿ ಪ್ರೋತ್ಸಾಹ ಕೊಟ್ಟುಕೊಂಡೇ ಬರುತ್ತಿದೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಲು ಇಂಥಾ ಕ್ರೀಡಾಕೂಟ ಸಹಕಾರಿ ಆಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಉತ್ಸಾಹದಿಂದ ಭಾಗವಹಿಸಿ. ಕ್ರೀಡೆಯಲ್ಲಿ ಗೆಲುವು ಸೋಲಿಗಿಂತ ಭಾಗವಹಿಸುವಿಕೆ ಅತೀ ಮುಖ್ಯ ಎಂದರು.

ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತ ಪಟುಗಳಿಗೆ ಪೊಲೀಸ್ ಇಲಾಖೆಯಲ್ಲಿ ನೇರ ನೇಮಕಾತಿ ಮಾಡಿಕೊಳ್ಳಲು ನಮ್ಮ ಸರ್ಕಾರ ನಿರ್ಧರಿಸಿದೆ. ಪೊಲೀಸ್ ಇಲಾಖೆಯಲ್ಲಿ ಶೇ3 ರಷ್ಟು ಹುದ್ದೆಗಳು ಮತ್ತು ಇತರೆ ಇಲಾಖೆಗಳಲ್ಲಿ ಶೇ2 ರಷ್ಟು ಹುದ್ದೆಗಳನ್ನು ಒದಗಿಸಲಾಗುತ್ತದೆ ಎಂದರು.

ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ವಿಜೇತರಾಗಿ ಪದಕ ತಂದ ಕ್ರೀಡಾ ಪಟುಗಳಿಗೆ ಉತ್ತಮ ನಗದು ಬಹುಮಾನವನ್ನೂ ನೀಡುತ್ತಿದೆ ಎಂದು ವಿವರಿಸಿದರು. ಸಚಿವರಾದ ರಾಮಲಿಂಗಾರೆಡ್ಡಿ, ರಾಜ್ಯ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಕೆ.ಗೋವಿಂದರಾಜು, ಶಾಸಕರಾದ ರಿಜ್ವಾನ್ ಅರ್ಷದ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

More articles

Latest article