ಧರ್ಮಸ್ಥಳ: ಎಸ್‌ ಐಟಿ ತನಿಖೆಗೆ ತಡೆ; ಸುಪ್ರೀಂಕೋರ್ಟ್‌ ಮೊರೆ ಹೋಗುವ ಬಗ್ಗೆ ಶೀಘ್ರ ತೀರ್ಮಾನ: ಗೃಹ ಸಚಿವ ಡಾ. ಜಿ.ಪರಮೇಶ್ವರ್

Most read

ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯಗಳನ್ನು ಎಸಗಿ ಮೃತ ದೇಹಗಳನ್ನು ಕಾನೂನುಬಾಹಿರವಾಗಿ ಹೂತುಹಾಕಲಾಗಿದೆ ಎಂಬ ಆರೋಪಗಳನ್ನು ಕುರಿತು ಎಸ್‌ಐಟಿ ನಡೆಸುತ್ತಿರುವ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿರುವ ಸಂಬಂಧ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಈ ಬೆಳವಣಿಗೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್‌ ಗೆ ಮರುಪರಿಶೀಲನಾ ಅರ್ಜಿ ಹಾಕಬೇಕೇ ಅಥವಾ ಸುಪ್ರೀಂಕೋರ್ಟ್‌ ಮೊರೆ ಹೋಗಬೇಕೇ ಎಂದು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

ಇದುವರೆಗೂ ಹೈಕೋರ್ಟ್ ಆದೇಶವನ್ನು ಅಧ್ಯಯನ ಮಾಡಿಲ್ಲ. ಕಾನೂನು ಇಲಾಖೆ, ಅಡ್ವೋಕೇಟ್‌ ಜನರಲ್‌ ಅವರ ಜತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಈ ತಿಂಗಳ ಅಂತ್ಯದೊಳಗೆ ವರದಿ ಸಲ್ಲಿಸುವುದಾಗಿ ಹೇಳಿದೆ. ಈ ವರದಿಯ ಅಂಶಗಳನ್ನು ಆಧರಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದರು.

ನಮ್ಮ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಮತ್ತು ಬೆಳ್ತಂಗಡಿ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ಗಿರೀಶ್ ಮಟ್ಟೆಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ.ಜಯಂತ್ ಮತ್ತು ವಿಠಲ ಗೌಡ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ಏಕಸದಸ್ಯ ಪೀಠ ತಡೆ ನೀಡಿ ಆದೇಶಿಸಿದೆ.

More articles

Latest article