ಗುತ್ತಿಗೆದಾರರ ಬಾಕಿ ಬಿಲ್;‌ ಹಂತಹಂತವಾಗಿ ಬಿಡುಗಡೆ: ಸಚಿವ ಸತೀಶ್‌ ಜಾರಕಿಹೊಳಿ

Most read

ಬೆಂಗಳೂರು: ರಾಜ್ಯದಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಲೋಕೋಪಯೋಗಿ ಇಲಾಖೆಯಿಂದ ಉತ್ತಮ ಕೆಲಸಗಳಾಗುತ್ತಿವೆ. ಗುತ್ತಿಗೆದಾರರ ಬಾಕಿ ಮೊತ್ತಚವನ್ನು ಹಂತಹಂತವಾಗಿ ಬಿಡುಗಡೆ ಮಾಡುವುದಾಗಿ ಸಚಿವ ಸತೀಶ್‌ ಜಾರಕಿಹೊಳಿ ಭರವಸೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಸಚಿವನಾಗಿ ಕಾನೂನು ಬದ್ಧವಾಗಿ ನಡೆದುಕೊಂಡಿದ್ದೇನೆ. ಗುತ್ತಿಗೆದಾರರ ಬಾಕಿ ಬಿಲ್‌ 9 ಸಾವಿರ ಕೋಟಿ ರೂ. ಬಿಡುಗಡೆ ಮಾಡಲು ಸಮಯಾವಕಾಶದ ಅವಶ್ಯಕತೆ ಇದೆ. ಈ ಮೊತ್ತವನ್ನು ಬಜೆಟ್‌ನಲ್ಲಿ ನಿಗದಿ ಮಾಡದೆ ಕಾಮಗಾರಿ ಮಂಜೂರು ಮಾಡಲಾಗಿದೆ. ಹಾಗಾಗಿ ಹಣ ಹೊಂದಿಸಿ ಬಿಡುಗಡೆ ಮಾಡಲು ವಿಳಂಬವಾಗುತ್ತಿದೆ ಎಂದು ತಿಳಿಸಿದರು.

ಬಜೆಟ್‌ನಲ್ಲಿ ನಿಗದಿ ಮಾಡದೆ 12 ಸಾವಿರ ಕೋಟಿ ರೂ.ಗಳ ಕಾಮಗಾರಿಗಳನ್ನು ಮಂಜೂರು ಮಾಡಲಾಗಿತ್ತು. ಅದರಲ್ಲಿ 3 ಸಾವಿರ ಕೋಟಿ ರೂ.ಗಳನ್ನು ಪಾವತಿಸಿದ್ದೇವೆ. ಬಾಕಿಯಿರುವ 9 ಸಾವಿರ ಕೋಟಿ ರೂ.ಗಳನ್ನು ಹಂತಹಂತವಾಗಿ ಬಿಡುಗಡೆ ಮಾಡುವುದಾಗಿ ಹೇಳಿದರು.

ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ತಾವು ಆಕಾಂಕ್ಷಿ ಅಲ್ಲ. ಯಾರೊಬ್ಬರೂ ಅಧ್ಯಕ್ಷ ಸ್ಥಾನವನ್ನು ಕೇಳುತ್ತಿಲ್ಲ. ಡಿಸೆಂಬರ್‌ನಲ್ಲಿ ಡಿ.ಕೆ.ಶಿವಕುಮಾರ್‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಬಗ್ಗೆ ತಮಗೆ ಮಾಹಿತಿ ಇಲ್ಲ. ಈ ಬಗ್ಗೆ ಹೈಕಮಾಂಡ್‌ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಸ್ವಾಗತಿಸುತ್ತೇವೆ ಎಂದರು.

ಸಚಿವ ಸಂಪುಟದಲ್ಲಿ ನಾನು ಒಬ್ಬ ಸದಸ್ಯನಗಿದ್ದು, ಸಂಪುಟ ಪುನಾರಚನೆ ಕುರಿತು ನಾನು ಹೇಳಿಕೆ ನೀಡುವುದಿಲ್ಲ. ಕೆ.ಎನ್‌.ರಾಜಣ್ಣ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವುದು ವರಿಷ್ಠರಿಗೆ ಬಿಟ್ಟ ವಿಚಾರ. ಸಚಿವರಾದ ಎಚ್‌. ಸಿ. ಮಹದೇವಪ್ಪ, ಕೆ.ವೆಂಕಟೇಶ್‌ ಹಾಗೂ ನಾನು 30 ವರ್ಷಗಳಿಂದ ಪದೇ ಪದೇ ಸಭೆ ಮಾಡುತ್ತಿರುತ್ತೇವೆ. ಕಾಂಗ್ರೆಸ್‌‍ಗೆ ಬಂದ ಮೇಲೆ ಡಾ.ಜಿ.ಪರಮೇಶ್ವರ್‌ ಸೇರಿಕೊಂಡಿದ್ದಾರೆ. ಇದರಲ್ಲಿ ವಿಶೇಷವೇನೂ ಇಲ್ಲ  ಎಂದರು.

ಧರ್ಮಸ್ಥಳ ಎಸ್‌ ಐಟಿ ತನಿಖೆ ಕುರಿತು ನಾನು ಹೇಳಿಕೆ ನೀಡಲು ಬಯಸುವುದಿಲ್ಲ. ಸಂಬಂಧಪಟ್ಟ ಸಚಿವರು ಅಧಿಕಾರಿಗಳು ಪ್ರತಿಕ್ರಿಯೆ ನೀಡುತ್ತಾರೆ. ಸಂಚು ನಡೆಸಿದವರೇ ತನಿಖೆ ರದ್ದು ಪಡಿಸುವಂತೆ ಕೋರ್ಟ್‌ ಮೆಟ್ಟಿಲೇರಿರುವ ಬಗ್ಗೆ ನ್ಯಾಯಾಲಯದ ತೀರ್ಪನ್ನು ಕಾದು ನೋಡಬೇಕಿದೆ ಎಂದರು.

ಕಾಂಗ್ರೆಸ್‌‍ ಕಚೇರಿ ನಿರ್ಮಾಣಕ್ಕೆ ಎಲ್ಲಾ ತಾಲ್ಲೂಕುಗಳಲ್ಲೂ ಜಾಗ ನೀಡುವುದು ಮತ್ತು ಕಟ್ಟಡ ನಿರ್ಮಿಸುವುದು ಪಕ್ಷದ ದೃಷ್ಟಿಯಿಂದ ಉತ್ತಮ ನಿರ್ದಾರವಾಗಿದೆ. 100 ಕಚೇರಿಗಳನ್ನು ನಿರ್ಮಿಸಲು ಅಧ್ಯಕ್ಷರು ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದರು.

More articles

Latest article