ಮುಂದಿನ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ನ್ಯಾ. ಸೂರ್ಯಕಾಂತ್; ಸಿಜೆಐ ಬಿ.ಆರ್.ಗವಾಯಿ ಶಿಫಾರಸು

Most read

ನವದೆಹಲಿ: ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ ಆರ್‌ ಗವಾಯಿ ಅವರು ನವೆಂಬರ್​ನಲ್ಲಿ ನಿವೃತ್ತಿ ಹೊಂದಲಿದ್ದು, ನ್ಯಾ. ಸೂರ್ಯಕಾಂತ್ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ನಾಮನಿರ್ದೇಶನ ಮಾಡಿದ್ದಾರೆ. ಗವಾಯಿ ಅವರು ನವೆಂಬರ್ 23 ರಂದು ನಿವೃತ್ತರಾಗಲಿದ್ದಾರೆ.

ಸಿಜೆಐ ಗವಾಯಿ ಅವರು ನ್ಯಾಯಮೂರ್ತಿ ಕಾಂತ್ ಅವರ ಹೆಸರನ್ನು ಹಿರಿತನದ ಆಧಾರದ ಮೇಲೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಸರ್ಕಾರ ಇವರ ಹೆಸರನ್ನು ಒಪ್ಪಿಕೊಂಡರೆ ನ್ಯಾಯಮೂರ್ತಿ ಸೂರ್ಯಕಾಂತ್ ಅವರು 53 ನೇ ಮುಖ್ಯ ನ್ಯಾಯಮೂರ್ತಿಗಳಾಗಲಿದ್ದಾರೆ. ನ್ಯಾಯಮೂರ್ತಿ ಸೂರ್ಯಕಾಂತ್ ಅವರು 14 ತಿಂಗಳುಗಳ ಕಾಲ ಈ ಹುದ್ದೆಯಲ್ಲಿ ಸೇವೆ ಸಲ್ಲಿಸಲಿದ್ದು, ಫೆಬ್ರವರಿ 9, 2027 ರಂದು ನಿವೃತ್ತರಾಗಲಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಸೂರ್ಕಾಕಾಂತ್ ಅವರು ಅರ್ಹ ವ್ಯಕ್ತಿ ಎಂದು ಗವಾಯಿ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಫೆಬ್ರವರಿ 10, 1962 ರಂದು ಹರಿಯಾಣದಲ್ಲಿ ಜನಿಸಿದರು. ನಂತರ 1981 ರಲ್ಲಿ ಹರಿಯಾಣದ ಹಿಸಾರ್‌ನಲ್ಲಿರುವ ಸರ್ಕಾರಿ ಸ್ನಾತಕೋತ್ತರ ಕಾಲೇಜಿನಿಂದ ಪದವಿ ಮತ್ತು 1984 ರಲ್ಲಿ ರೋಹ್ಟಕ್‌ನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ. 2000 ದಲ್ಲಿ ಹರಿಯಾಣದ ಅಡ್ವೊಕೇಟ್ ಜನರಲ್ ಮತ್ತು 2001 ರಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡರು. ಅದೇ ವರ್ಷ, ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಾಧೀಶರಾದರು. ನಂತರ ಅವರನ್ನು 2018 ರಲ್ಲಿ ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಯಿತು. 2019 ರಲ್ಲಿ ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು.

ಅವರು ತಮ್ಮ ಅಧಿಕಾರಾವಧಿಯಲ್ಲಿ, 370 ನೇ ವಿಧಿಯನ್ನು ರದ್ದುಗೊಳಿಸುವುದರ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿಯುವ ಸಂವಿಧಾನ ಪೀಠದ ನಿರ್ಧಾರ ಸೇರಿದಂತೆ ಹಲವಾರು ಪ್ರಮುಖ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

More articles

Latest article