ಕೇಂದ್ರ ನಿಯಮಾವಳಿಯಂತೆ ಶೇ. 15ರಷ್ಟು ಬಿಪಿಎಲ್ ಕಾರ್ಡ್ ರದ್ದು; ಅರ್ಹರು ಆತಂಕಪಡಬೇಕಿಲ್ಲ: ಸಚಿವ ಮುನಿಯಪ್ಪ

Most read

ಶಿವಮೊಗ್ಗ: ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ರಾಜ್ಯದಲ್ಲಿ ಶೇ. 15ರಷ್ಟು ಬಿಪಿಎಲ್ ಕಾರ್ಡ್ ರದ್ದಾಗಬೇಕಿದ್ದು, ಅರ್ಹ ಪಡಿತರದಾರರು ಆತಂಕ ಪಡಬೇಕಿಲ್ಲ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಾಯ ತೆರಿಗೆ ಪಾವತಿದಾರರು, ಸ್ವಂತ ಕಾರು ಇರುವವರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿ, ಅವರಿಗೆ ಎಪಿಎಲ್ ಕಾರ್ಡ್ ನೀಡಲಾಗುತ್ತದೆ ಎಂದರು.

ಬಿಪಿಎಲ್ ಕಾರ್ಡ್‌ಗಳ ವಾರ್ಷಿಕ ಆದಾಯ ಮಿತಿಯನ್ನು ಪ್ರಸ್ತುತ 1.2 ಲಕ್ಷ ರೂ.ಗೆ ನಿಗದಿಪಡಿಸಲಾಗಿದ್ದು, ಕೇಂದ್ರವು ಪಡಿತರ ಚೀಟಿಗಳ ವಿತರಣೆಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅರ್ಹತಾ ಮಾನದಂಡಗಳನ್ನು ಪರಿಷ್ಕರಿಸುವುದು ಸರ್ಕಾರದ ಪರಿಶೀಲನೆಯಲ್ಲಿದೆ. ಕೇಂದ್ರ ಸರ್ಕಾರದ ನಿಯಮಾವಳಿ ಪ್ರಕಾರ ರಾಜ್ಯದಲ್ಲಿ ಶೇ 15ರಷ್ಟು ಬಿಪಿಎಲ್ ಕಾರ್ಡ್ ರದ್ದಾಗಲಿದ್ದು, ಅರ್ಹರು ಭಯಪಡಬೇಕಿಲ್ಲ ಎಂದು ಹೇಳಿದರು.

ಇನ್ನು ಮುಂದೆ ಎಲ್ಲಾ ಪಡಿತರ ಅಂಗಡಿಗಳಲ್ಲೂ ಆಯಾ ತಿಂಗಳ 10ನೇ ತಾರೀಕು ಪಡಿತರ ನೀಡುವಂತೆ ಕ್ರಮವಹಿಸಲಾಗುವುದು. ‘ಒನ್ ನೇಷನ್ ಒನ್ ಕಾರ್ಡ್’ ಯೋಜನೆ ಅಡಿಯಲ್ಲಿ ವಲಸಿಗ ಕಾರ್ಮಿಕರಿಗೂ ರೇಷನ್ ಕಾರ್ಡ್‌ ನೀಡಲಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಸ್ತುತ ನೀಡಲಾಗುತ್ತಿರುವ 5 ಕೆಜಿ ಅಕ್ಕಿಯ ಜೊತೆಗೆ ಪಿಡಿಎಸ್ ಅಡಿಯಲ್ಲಿ ದ್ವಿದಳ ಧಾನ್ಯಗಳು, ಅಡುಗೆ ಎಣ್ಣೆ, ಸಕ್ಕರೆ ಮತ್ತು ಉಪ್ಪನ್ನು ವಿತರಿಸಲು ಎರಡು ತಿಂಗಳಲ್ಲಿಗೆ ಟೆಂಡರ್ ಕರೆಯಲಾಗುತ್ತದೆ. ಪಡಿತರದ ದುರುಪಯೋಗವನ್ನು ನಿಯಂತ್ರಿಸಲು ಅಕ್ಕಿ ಜತೆ ದ್ವಿದಳ ಧಾನ್ಯ ಮತ್ತು ಅಡುಗೆ ಎಣ್ಣೆಯನ್ನು ವಿತರಿಸಲು ನಿರ್ಧರಿಸಿದೆ. ಸಮೀಕ್ಷೆಯಲ್ಲಿ ಸುಮಾರು ಶೇ.90ರಷ್ಟು ಪಡಿತರದಾರರು  ದ್ವಿದಳ ಧಾನ್ಯ ಮತ್ತು ಖಾದ್ಯ ಎಣ್ಣೆಯನ್ನು ನೀಡಬೇಕೆಂದು ತಿಳಿಸಿದ್ದಾರೆ ಎಂದು ಹೇಳಿದರು.

More articles

Latest article