ಬೆಂಗಳೂರಿನ ಗಾಂಧಿನಗರ ಕ್ಷೇತ್ರದಲ್ಲಿ ಇಂದು ಸನ್ ರೈಸ್ ಸರ್ಕಲ್ ನಲ್ಲಿ ಮತಗಳ್ಳತನ “ವೋಟ್ ಚೋರಿ” ವಿರುದ್ಧ ನಡೆಯುತ್ತಿರುವ “ಮತದಾರರ ಹಕ್ಕುಗಳಿಗಾಗಿ ಸಹಿ ಸಂಗ್ರಹ ಅಭಿಯಾನ” ಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಕಲಿ ಮತದಾರರ ಲಿಸ್ಟ್ ಅನ್ನು ದಾಖಲೆ ಸಮೇತ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದರೂ, ಇನ್ನು ಕ್ರಮ ಆಗಿಲ್ಲ. ನಕಲಿ ಮತಗಳ ಡಿಲೀಟ್ ಮಾಡುವ ಪ್ರಕ್ರಿಯೆಗೆ ಚುನಾವಣಾ ಆಯೋಗ ಮೀನ ಮೇಷ ಎಣಿಸುತ್ತಿರುವುದು ಏಕೆ ಎಂದು ಸಚಿವ ದಿನೇಶ್ ಗುಂಡೂರಾವ್ ಪ್ತಶ್ನಿಸಿದರು.
ದೇಶದಲ್ಲಿ ಈಗಾಗಲೇ ಮತಗಳ್ಳತನ ವಿರುದ್ಧ ನಮ್ಮ ನಾಯಕರಾದ ರಾಹುಲ್ ಗಾಂಧಿರವರು ಸವಿಸ್ತಾರವಾಗಿ ದೇಶದ ಜನತೆಗೆ ದಾಖಲೆಯ ಸಮೇತವಾಗಿ ನಿರೂಪಿಸಿದ್ದಾರೆ. ಇದು ಇಡೀ ದೇಶವೇ ಆಂತಕಪಡುವ ಸ್ಥಿತಿಯಲ್ಲಿದೆ. ಸಂವಿಧಾನಿಕ ಪೀಠಗಳನ್ನು ಬಿಜೆಪಿ ತಮ್ಮ ವೋಟ್ ಬ್ಯಾಂಕ್ ಮಾಡಿಕೊಂಡಿರುವುದು ಅತ್ಯಂತ ಖಂಡನೀಯ ಎಂದು ಟೀಕಿಸಿದರು.
ಮಹದೇವಪುರ ಕ್ಷೇತ್ರದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ನಕಲಿ ಮತದಾರರನ್ನು ಸೃಷ್ಟಿಸಿ, ಅವರಿಂದ ಮತದಾನ ಪಡೆದುಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರಕ್ಕೆ ಜನರು ಪ್ರಶ್ನೆ ಮಾಡಬೇಕಾಗಿದೆ. ಇದು ಸಂಪೂರ್ಣ ಪ್ರಜಾಪ್ರಭುತ್ವದ ಕಗ್ಗೊಲೆ. ಚುನಾವಣಾ ಆಯೋಗವನ್ನು ತಮ್ಮ ಕೈಗೊಂಬೆಯಾಗಿಸಿಕೊಂಡು ಇಲ್ಲದೆ ಇರುವ ಮತದಾರರನ್ನು ಸೃಷ್ಟಿಸಿ, ಸಂವಿಧಾನಿಕ ಮೌಲ್ಯಗಳನ್ನು ಮೂಲೆಗುಂಪು ಮಾಡಿ “ವೋಟ್ ಚೋರಿ” ನಡೆಸಿ ಅಧಿಕಾರಕ್ಕೆ ಬಂದಿರುವುದು ಶೋಚನೀಯ. ಚಿಕ್ಕಪೇಟೆಯ ವಾರ್ಡ್ ನಲ್ಲಿಯೇ ಸಾವಿರಾರು ನಕಲಿ ಮತದಾರರು ಇರುವುದನ್ನು ನಮ್ಮ ಕಾರ್ಯಕರ್ತರು ಗುರುತಿಸಿದ್ದಾರೆ ಎಂದರು.
ಅದ್ದರಿಂದ ಇಂದು ನಾವು ನಡೆಸುತ್ತಿರುವ ಮತಗಳ್ಳತನ “ವೋಟ್ ಚೋರಿ” ವಿರುದ್ಧ ನಡೆಯುತ್ತಿರುವ ಮತದಾರರ ಹಕ್ಕುಗಳಿಗಾಗಿ ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮವನ್ನು ಯಶ್ವಸಿಯಾಗಿ ನಡೆಸಿ ಚುನಾವಣಾ ಆಯೋಗಕ್ಕೆ ಕಳುಹಿಸಿ ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ನಿದ್ರೆ ಮಾಡುತ್ತಿರುವ ಅಧಿಕಾರಿಗಳನ್ನು ಎಚ್ಚರಿಸಬೇಕಾಗಿದೆ. ಇಡೀ ದೇಶಾದ್ಯಂತ ಈ ಸಹಿ ಸಂಗ್ರಹ ನಡೆಯುತ್ತಿದೆ. ಗಾಂಧಿನಗರ ಕ್ಷೇತ್ರದಿಂದ ಸುಮಾರು ಒಂದು ಲಕ್ಷಕ್ಕೂ ಅಧಿಕ ಸಹಿ ಸಂಗ್ರಹ ಮಾಡುವ ಗುರಿಯನ್ನು ಹೊಂದಿದ್ದು, ಎಲ್ಲಾ ಮತಬಾಂಧವರು ಇದರಲ್ಲಿ ಪಾಲ್ಗೊಂಡು ತಮ್ಮ ತಮ್ಮ ಸಹಿಯನ್ನು ಹಾಕುವ ಮುಖೇನ ಪ್ರಜಾಪ್ರಭುತ್ವವನ್ನು ಉಳಿಸಿಕೊಂಡು ದೇಶವನ್ನು ಮತಗಳ್ಳತನದಿಂದ ರಕ್ಷಿಸೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಎಐಸಿಸಿ ಕಾರ್ಯದರ್ಶಿಗಳಾದ ಅಭಿಷೇಕ್ ದತ್ತ, ಸೇರಿದಂತೆ ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

