ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ತಮ್ಮ ಪ್ರಭಾವ ಬಳಸಿ ಪ್ರಧಾನಿ ಮೋದಿ ಅವರಿಗೆ ಹೇಳಿ ಬೆಂಗಳೂರು ಅಭಿವೃದ್ಧಿಗೆ 10 ರೂಪಾಯಿ ಕೊಡಿಸಲು ಆಗಿಲ್ಲ. ಆತ ಒಂದು ಖಾಲಿ ಟ್ರಂಕ್. ಟೀಕೆಗಳು ಸಾಯುತ್ತವೆ ಕೆಲಸಗಳು ಮಾತ್ರ ಉಳಿಯುತ್ತವೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಟೀಕಿಸಿದ್ದಾರೆ.
ಇಂದು ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಅವರು ಮಾತನಾಡಿದರು.
ಬಿಜೆಪಿ ಸರ್ಕಾರವಿದ್ದಾಗ ಬೆಂಗಳೂರಿಗೆ ಪ್ಲಾನ್ ಆಫ್ ಆಕ್ಷನ್ ಏನು ಮಾಡಿದ್ದರು? ಅವರ ಅವಧಿಯಲ್ಲಿಏಕೆ ಬೆಂಗಳೂರಿನ ಸಮಸ್ಯೆಗಳನ್ನು ಬಗೆಹರಿಸಲಿಲ್ಲ, ಕಸ ವಿಲೇವಾರಿ ಸಮಸ್ಯೆಗೆ ಟೆಂಡರ್ ಕರೆಯಲು ಏಕೆ ಸಾಧ್ಯವಾಗಿಲ್ಲ, ರಸ್ತೆ ಅಗಲೀಕರಣ, ಮೇಲ್ಸೇತುವೆ ಮಾಡಲು ಸಾಧ್ಯವಾಗಿಲ್ಲ. ಒಟ್ಟಾರೆ ಅವರಿಂದ ಏನನ್ನೂ ಸಾಧಿಸಲು ಸಾಧ್ಯವಾಗಿಲ್ಲ. ನಮ್ಮ ಕೆಲಸಗಳನ್ನು ಸಹಿಸಿಕೊಳ್ಳಲಾಗದೆ ಈಗ ನಮ್ಮನ್ನು ಟೀಕೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲಾಲ್ ಬಾಗ್ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಾಣ ಕುರಿತು ಪ್ರತಿಕ್ರಿಯೆ ನೀಡಿದ ಡಿ ಕೆ ಶಿವಕುಮಾರ್, ಲಾಲ್ ಬಾಗ್ ಗೆ ಸುರಂಗ ಮಾರ್ಗ ನಿರ್ಮಾಣ ಮಾಡುವುದರಿಂದ ಯಾವುದೇ ರೀತಿಯ ಸಮಸ್ಯೆ ಆಗಲ್ಲ. ತೇಜಸ್ವಿ ಸೂರ್ಯಗೆ ಏನೂ ತಿಳಿದಿಲ್ಲ ಎಂದು ತಿರುಗೇಟು ನೀಡಿದರು.
ಹಿಂದಿನ ಬಿಜೆಪಿ ಸರ್ಕಾರ ಮಾಫಿಯಾದವರ ಜೊತೆ ಕೈಜೋಡಿಸಿ ಬೆಂಗಳೂರನ್ನು ಹದಗೆಡಿಸಿದ್ದರಿಂದಲೇ 2023ರಲ್ಲಿ ಆ ಪಕ್ಷವನ್ನು ಸೋಲಿಸಿ ನಮ್ಮನ್ನು 140ಕ್ಕೂ ಹೆಚ್ಚು ಸೀಟುಗಳಿಂದ ಗೆಲ್ಲಿಸಿ ಅಧಿಕಾರದಲ್ಲಿ ಕೂರಿಸಿದ್ದಾರೆ ಎಂದರು. ಅದಕ್ಕೆ ಪ್ರತಿಯಾಗಿ ಗ್ಲೋಬಲ್ ಸಿಟಿ ಬೆಂಗಳೂರನ್ನು ಕಾಪಾಡಲು ಮಾಡಬೇಕಾದ ಕೆಲಸ ಮಾಡುತ್ತೇವೆ ಎಂದರು.

