ಬಿಹಾರ ಚುನಾವಣೆ: ಆರ್‌ ಜೆಡಿ ಮುಖಂಡ ತೇಜಸ್ವಿ ಯಾದವ್‌ ಇಂಡಿಯಾ ಬಣದ ಮುಖ್ಯಮಂತ್ರಿ ಅಭ್ಯರ್ಥಿ

Most read

ಪಾಟ್ನಾ:  ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖಂಡ, ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನು ಬಿಹಾರ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ವಿರೋಧ ಪಕ್ಷಗಳ ಇಂಡಿಯಾ ಬಣ ಇಂದು ಘೋಷಿಸಿದೆ.

ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಅವರು, ಇಂಡಿಯಾ ಬಣದ ಎಲ್ಲ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದರು.

ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮತಿ ಪಡೆಯಲಾಗಿದೆ ಎಂದೂ ಅವರು ತಿಳಿಸಿದರು.

ಬಿಹಾರದಲ್ಲಿ ಇಂಡಿಯಾ ಬಣವು ಅಧಿಕಾರಕ್ಕೆ ಬಂದಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳಿರಲಿದ್ದು ವಿಕಾಸಶೀಲ್ ಇನ್ಸಾನ್ ಪಕ್ಷದ (ವಿಐಪಿ) ಮುಖ್ಯಸ್ಥ ಮುಖೇಶ್ ಸಾಹರ್ ಒಬ್ಬರಾಗುತ್ತಾರೆ ಮತ್ತು ಡಿಸಿಎಂ ಹುದ್ದೆಗೆ ಹಿಂದುಳಿದ ವರ್ಗಗಳ ಮತ್ತೊಬ್ಬ ನಾಯಕನನ್ನು ಅಯ್ಕೆ ಮಾಡಲಾಗುತ್ತದೆ  ಎಂದು ಗೆಹ್ಲೋಟ್ ಹೇಳಿದರು.

ತೇಜಸ್ವಿ ಓರ್ವ ಯುವ ಮುಖಂಡರಾಗಿದ್ದು ಬಿಹಾರದ ಜನತೆ ಅವರನ್ನು ಒಪ್ಪಿಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಹಾರದಲ್ಲಿ ನಿರುದ್ಯೋಗ ಸಮಸ್ಯೆ ಕಾಡುತ್ತಿದ್ದು ಪ್ರಮುಖ ಚುನಾವಣಾ ವಿಷಯವಾಗಿದೆ. ರಾಜ್ಯದ ಜನತೆ ಬದಲಾವಣೆ ಬಯಸಿದ್ದಾರೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ ಡಿಎ ಸರಕಾರ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಅವರನ್ನು ಟೀಕಿಸಿದರೆ ಜೈಲಿಗೆ ಕಳುಹಿಸುವ ಬೆದರಿಕೆ ಹಾಕಲಾಗುತ್ತದೆ ಎಂದರು. ತೇಜಸ್ವಿ ಯಾದವ್‌ ಅವರು ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್‌ ಯಾದ್ವ ಅವರ ಪುತ್ರ. ಡಿಸಿಎಂ ಆಗಿ ಅನುಭವ ಪಡೆದಿದ್ದು, ಪ್ರಸ್ತುತ ಆರ್ ಜೆಡಿಯನ್ನು ಮುನ್ನಡೆಸುತ್ತಿದ್ದಾರೆ.

ಬಿಹಾರ ವಿಧಾನಸಭೆಗೆ ಎರಡು ಹಂತದಲ್ಲಿ ನವಂಬರ್‌ 6 ಮತ್ತು11ರಂದು ಚುನಾವಣೆ ನಡೆಯಲಿದೆ. ನವಂಬರ್‌ 14 ರಂದು ಮತಗಳ ಎಣಿಕೆ ನಡೆಯಲಿದೆ.

More articles

Latest article