ಧರ್ಮಸ್ಥಳ ಲಾಡ್ಜ್‌ ಗಳ ಲೆಡ್ಜರ್‌ ಸಂಗ್ರಹಿಸಿದ ಎಸ್‌ ಐಟಿ; 2 ದಶಕಗಳ ರೂಂ ಬುಕ್ಕಿಂಗ್‌ ಪರಿಶೀಲನೆ; ಅನುಮಾನ ಮೂಡಿಸಿದ ಈ ಬೆಳವಣಿಗೆಗಳು

Most read

ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯಗಳನ್ನು ಎಸಗಿ ಶವಗಳನ್ನು ಹೂತುಹಾಕಲಾಗಿದೆ ಎಂಬ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ ಐಟಿ) ಧರ್ಮಸ್ಥಳ ದೇವಾಲಯ ಆಡಳಿತ ಮಂಡಲಿ ನಡೆಸುತ್ತಿರುವ ವಸತಿಗೃಹಗಳ ಬುಕ್ಕಿಂಗ್‌ ಲೆಡ್ಜರ್‌ ಸೇರಿದಂತೆ ಹಲವು ದಾಖಲೆಗಳನ್ನು ಸಂಗ್ರಹಿಸಿದೆ. ಜತೆಗೆ ವಸತಿಗೃಹ ಮತ್ತು ಧರ್ಮಸ್ಥಳ ಮಾಹಿತಿ ಕೇಂದ್ರದ ನೌಕರರನ್ನು ಕನಿಷ್ಠ ಐದು ಬಾರಿ ವಿಚಾರಣೆಗೊಳಪಡಿಸಲಾಗಿದೆ. ನಿರ್ದಿಷ್ಠ ಕಾರಣಗಳಿಗಾಗಿಯೇ ಇವರನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಎಸ್‌ ಐಟಿ ಮೂಲಗಳು ತಿಳಿಸಿವೆಯಾದರೂ ಏನೆಲ್ಲಾ ಮಾಹಿತಿ ಸಂಗ್ರಹಿಸಲಾಗಿದೆ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ.

ಧರ್ಮಸ್ಥಳ ಗ್ರಾಮದಲ್ಲಿ ನಡೆದ ಸಾಮೂಹಿಕ ಹತ್ಯೆಗಳಿಗೆ ಸಂಬಂಧಿಸಿದಂತೆ ವಸತಿಗೃಹಗಳ ಅನೇಕ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಜತೆಗೆ ವಸತಿಗೃಹ ಮತ್ತು ಧರ್ಮಸ್ಥಳ ಮಾಹಿತಿ ಕೇಂದ್ರದ ನೌಕರರನ್ನು ಕನಿಷ್ಠ ಐದು ಬಾರಿ ವಿಚಾರಣೆಗೊಳಪಡಿಸಲಾಗಿದೆ. ತನಿಖೆಯ ಭಾಗವಾಗಿ ಮಹತ್ವದ ಎಸ್‌ ಐಟಿ ಹಂತ ಹಂತವಾಗಿ ಹೆಜ್ಜೆ ಇಡುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಬಿಎಲ್‌ ಆರ್‌ ಪೋಸ್ಟ್‌ ವರದಿ ಮಾಡಿದೆ.

ವಸತಿಗೃಹ ಮತ್ತು ಧರ್ಮಸ್ಥಳ ಮಾಹಿತಿ ಕೇಂದ್ರದ ನೌಕರರನ್ನು ವಿನಾಕಾರಣ ವಿಚಾರಣೆ ನಡೆಸಿಲ್ಲ. ನಿರ್ದಿಷ್ಠ ಉದ್ದೇಶ ಮತ್ತು ಕಾರಣಗಳಿಗಾಗಿ ವಿಚಾರಣೆ ನಡೆಸಲಾಗಿದೆ. ಸಂಗ್ರಹಿಸಲಾದ ಈ ದಾಖಲೆಗಳನ್ನು ಎಸ್‌ ಐಟಿ ತಂಡವು ಕಣ್ಣಲ್ಲಿ ಕಣ್ಣಿಟ್ಟು ಪರಿಶೀಲಿಸುತ್ತಿದೆ. ವಸತಿಗೃಹಗಳಿಗೆ ಯಾರೆಲ್ಲಾ ಬಂದುಹೋಗಿದ್ದಾರೆ ಎಂಬ ಕನಿಷ್ಠ ಎರಡು ದಶಕಗಳ ಮಾಹಿತಿಯನ್ನು ಪರಿಶೀಲಿಸಬೇಕಿದ್ದು, ಇದೊಂದು ಸುಧೀರ್ಘ ಪ್ರಕ್ರಿಯೆಯಾಗಿದೆ ಎಂದೂ ಎಸ್‌ ಐಟಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ವಸತಿಗೃಗಳ ಒಳಗೆ ಕಂಡು ಬಂದ ಶವಗಳ ಪ್ರಕರಣಗಳಲ್ಲೂ ಅಸ್ವಾಭಾವಿಕ ಸಾವು ಪ್ರಕರಣ (ಯುಡಿಆರ್‌)ಗಳು ದಾಖಲಾಗಿವೆ. ಕೊಠಡಿಗಳನ್ನು ದಾಖಲೆಗಳ ಸಹಿತ ಕಾಯ್ದಿರಿಸಿದ್ದ ಪ್ರಕರಣಗಳಲ್ಲೂ ಯುಡಿಆರ್‌ ಪ್ರಕರಣ ದಾಖಲಾಗಿರುವುದು ಸಹಜವಾಗಿಯೇ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.  ಈ ಯುಡಿಆರ್‌ ಪ್ರಕರಣಗಳನ್ನು ಎಸ್‌ ಐಟಿ ಪರಿಶೀಲಿಸುತ್ತಿದೆ.

ಎಸ್‌ ಐಟಿ ಮುಖ್ಯಸ್ಥರಾದ ಹಿರಿಯ ಐಪಿಎಸ್‌ ಅಧಿಕಾರಿ ಪ್ರಣಬ್‌ ಮೊಹಂತಿ ಅವರು ಒಂದೆರಡು ದಿನಗಳಲ್ಲಿ ಬೆಳ್ತಂಗಡಿ ಎಸ್‌ ಐಟಿ ಕಚೇರಿಗೆ ಬೇಟಿ ನೀಡಲಿದ್ದು, ಜಿಲ್ಲೆಯಲ್ಲೇ ಕೆಲವು ದಿನ ಉಳಿದುಕೊಂಡು ತನಿಖೆಯ ಪ್ರಗತಿಯನ್ನು ಪರಾಮರ್ಶಿಸಲಿದ್ದಾರೆ ಎಂದೂ ಮೂಲಗಳು ಖಚಿತಪಡಿಸಿವೆ. ಒಟ್ಟಾರೆ ತನಿಕೆಗೆ ಸಹಕಾರಿಯಾಗುವ ಸಣ್ಣ ಅಂಶವನ್ನೂ ಪರಿಗಣಿಸಲು ಎಸ್‌ ಐಟಿ ಮುಂದಾಗಿದೆ.

More articles

Latest article