ಅದೊಂದ್ ದೊಡ್ಡ ಕಥೆ‌, ಆತ್ಮಕಥೆ ಸರಣಿ- 8 |ಅಪ್ಪನ ಗೀತಾ ಪಠಣ

Most read

ಅಮ್ಮ ಅಪ್ಪ ಇಬ್ಬರೂ ದೈವಭಕ್ತರಾಗಿದ್ದರು. ಅಮ್ಮ ತನ್ನ ದೈವಭಕ್ತಿಯನ್ನು ಬಹಿರಂಗವಾಗಿ ಪ್ರದರ್ಶಿಸುತ್ತಿದ್ದುದು, ದೇವಸ್ಥಾನ ಸುತ್ತುತ್ತಿದ್ದುದು ತೀರಾ ಕಡಿಮೆ. ಆಕೆಯ ಪಾಲಿಗೆ ನಿಜ ಅರ್ಥದಲ್ಲಿ ಕಾಯಕವೇ ಕೈಲಾಸ. ಆದರೆ ಇಡೀ ದಿನ ದುಡಿದು ದಣಿದು ರಾತ್ರಿ ದಿಂಬಿಗೆ ತಲೆ ಕೊಡುವಾಗ ʼಸ್ವಾಮಿ ದೇವೆರೆʼ ಎಂದು ತಪ್ಪದೆ ಉದ್ಗರಿಸುತ್ತಿದ್ದರು.

ಇಬ್ಬರೂ ದೈವಭಕ್ತರಾಗಿದ್ದರೂ ಅವರು ಎಂದೂ ಮೂಢನಂಬಿಕೆಗಳ ದಾಸರಾಗಿರಲಿಲ್ಲ. ಆರೋಗ್ಯ ಸಮಸ್ಯೆಯೆಂದೋ, ಕಾಡಿಗೆ ಹೋದ ದನ ಬರಲಿಲ್ಲವೆಂದೋ ಅವರು ಬಲ್ಮೆ ಕೇಳಲು ಜೋಯಿಸರ ಬಳಿಗೆ ಹೋದವರಲ್ಲ. ಕಾಯಿಲೆ ಬಂದಾಗ ಖೊಟ್ಟಿ ವೈದ್ಯರ ಬಳಿಗೆ ಹೋದವರೂ ಅಲ್ಲ. ಬಹುಷಃ ಅಪ್ಪ ಅಮ್ಮನ ಈ ತಕ್ಕ ಮಟ್ಟಿನದಾದರೂ ಪ್ರಗತಿಪರ ನಡೆವಳಿಕೆ ಮಕ್ಕಳ ಮೇಲೂ ಪರಿಣಾಮ ಬೀರಿ ಅವರೂ ಮೂಢನಂಬಿಕೆಗಳಿಗೆ ಬಹುಮಟ್ಟಿಗೆ ಬೆನ್ನು ಹಾಕುವಂತಾಯಿತೋ ಏನೋ.

ಹಾಗಂತ, ಅಮ್ಮ ಅಪ್ಪ ಒಮ್ಮೊಮ್ಮೆ ಭೂತ, ಪ್ರೇತ, ಪೀಡೆಗಳ ಕತೆ ಹೇಳುತ್ತಿದ್ದುದು ಇತ್ತು. ಅವರು ತವರಿನಲ್ಲಿದ್ದಾಗ ಅಲ್ಲಿನ ಕಾಡಿನಲ್ಲಿ ಒಂದು ರಾತ್ರಿ ಯಾರೋ ಬಿಳಿ ವಸ್ತ್ರ ತೊಟ್ಟು ಹೋಗುತ್ತಿದ್ದರಂತೆ, ಸರಿಯಾಗಿ ನೋಡುವಾಗ ಅವರ ಕಾಲುಗಳು ಹಿಂದಕ್ಕೆ ತಿರುಚಿಕೊಂಡಿದ್ದುವಂತೆ, ನೆಲಕ್ಕೆ ತಾಗಿಕೊಂಡಿರಲಿಲ್ಲವಂತೆ ಎಂಬ ಅಮ್ಮನ ಪಿಶಾಚಿ ಕತೆ ಕೇಳುವಾಗ ನಮಗೂ ಹೆದರಿಕೆಯಾಗುತ್ತಿತ್ತು. ಸಂಜೆ ಹೊತ್ತು ನಾನು ಪೇಟೆಯಿಂದ ಬರುವಾಗ ನನ್ನ ಹಿಂದೆ ಯಾರೋ ಬಂದಂತೆ ಅನಿಸುತ್ತಿತ್ತು. ಆದರೆ ತಿರುಗಿ ನೋಡಲು ಧೈರ್ಯವಿರಲಿಲ್ಲ. ʼಶ್ರೀಕೃಷ್ಣ ಪರಮಾತ್ಮ, ದುರ್ಗಾ ಪರಮೇಶ್ವರಿʼ ಎಂದು ಮನಸಿನಲ್ಲೇ ದೇವರಿಗೆ ಮೊರೆಯಿಡುತ್ತಾ ವೇಗವಾಗಿ ಹೆಜ್ಜೆ ಹಾಕುತ್ತಿದ್ದೆ. ನನ್ನ ಹೆಜ್ಜೆಯ ವೇಗ ಹೆಚ್ಚಿದಷ್ಟೂ ನನ್ನನ್ನು ಹಿಂಬಾಲಿಸುತ್ತಿದ್ದ ಪೀಡೆಯ ವೇಗವೂ ಹೆಚ್ಚಿದಂತೆ ಭಾಸವಾಗುತ್ತಿತ್ತು. ಭಯ ದುಪ್ಪಟ್ಟಾಗುತ್ತಿತ್ತು.

ಇದು ಅಮ್ಮನ ಪೀಡೆಯ ಕತೆಯಾದರೆ ಅಪ್ಪನ ವಾದ ಇನ್ನೂ ಚೆನ್ನಾಗಿರುತ್ತಿತ್ತು. ಹಿಂದೆ ಕಾಡುಗಳಲ್ಲಿ ಭೂತ ಪ್ರೇತಗಳು ದೊಡ್ಡ ಸಂಖ್ಯೆಯಲ್ಲಿ ಇದ್ದುದು ನಿಜ. ಆದರೆ ಈಗ ಹೈಟೆನ್ಶನ್ ಕರೆಂಟ್‌ ಕಂಬಗಳು ಬಂದು, ಅವೆಲ್ಲ ಅ ವಿದ್ಯುತ್‌ ತಂತಿಯಲ್ಲಿ ನೇತಾಡಲು ಹೋಗಿ ಶಾಕ್‌ ಹೊಡೆದು ಸತ್ತು ಹೋಗಿವೆ, ಹಾಗಾಗಿ ಈಗ ಪಿಶಾಚಿಗಳು ಕಡಿಮೆ ಎಂದು ಅವರು ಹೇಳುತ್ತಿದ್ದರು. ಚಿಕ್ಕವರಾಗಿದ್ದ ನಾವು ಅದನ್ನು ಸತ್ಯ ಎಂದೇ ನಂಬುತ್ತಿದ್ದೆವು.

ಅಪ್ಪ ಕೇವಲ ಆರನೇ ತರಗತಿ ಓದಿರಬಹುದು. ಆದರೆ ಯಕ್ಷಗಾನದ ಕಾರಣ ಅವರ ಅಕ್ಷರ ಜ್ಞಾನ ಒಳ್ಳೆಯದಿತ್ತು. ಪುರಾಣ ಕತೆಗಳು ಆತನಿಗೆ ಬಾಯಿಪಾಠ. ಅಪ್ಪನ ಬಳಿಯಲ್ಲಿ ಉಡುಪಿ ಶ್ರೀಕೃಷ್ಣ ಪಂಚಾಂಗ, ಹಸ್ತ ಸಾಮುದ್ರಿಕ ಮಾತ್ರವಲ್ಲ ಕುಕ್ಕುಟ ಪಂಚಾಂಗ ಕೂಡಾ ಇರುತ್ತಿತ್ತು.

ನಮ್ಮೆಲ್ಲರಿಗೂ ಜಾತಕ ಪ್ರಕಾರವೇ ಹೆಸರು ಇಡಲಾಗಿತ್ತು. ʼಶ್ರೀʼಯಿಂದ ಆರಂಭವಾಗಬೇಕಿದ್ದುದರಿಂದ ನನ್ನ ಹೆಸರು ಮೊದಲು ಶ್ರೀಧರ ಎಂದು ಇತ್ತಂತೆ. ಶಾಲೆಗೆ ಸೇರಿಸುವಾಗ ಶ್ರೀನಿವಾಸನಾದೆ. ಅಪ್ಪ ನಮ್ಮ ಹೆಸರು ಮಾತ್ರ ಜಾತಕ ಪ್ರಕಾರ ಇರಿಸಿದ್ದಲ್ಲ, ಹಳ್ಳಿಗರು ಬಂದರೆ ಅವರಿಗೂ ಯಾವ ಹೆಸರು ಇಡಬೇಕು, ಯಾವ ದಿನ ಚೆನ್ನಾಗಿದೆ, ಯಾವ ದಿನ ಕೆಟ್ಟದು ಎಂದೂ ಹೇಳುತ್ತಿದ್ದರು. ಇನ್ನು ಅವರ ಕುಕ್ಕುಟ ಪಂಚಾಂಗದ ಕತೆಯನ್ನು ನಾನು ನಿಮಗೆ ಈಗಾಗಲೇ ಹೇಳಿದ್ದೇನೆ.

ಅಪ್ಪ ಕೃಷ್ಣ ದೇವರ ಭಕ್ತನಾಗಿದ್ದ. ಭಗವದ್ಗೀತೆಯ ಪುಸ್ತಕ ಸದಾ ನಮ್ಮ ಮನೆಯಲ್ಲಿರುತ್ತಿತ್ತು. ಬೆಳಿಗ್ಗೆ ʼಎತ್ತು ಗಾಣವನು ಸುತ್ತಿದಂತೆ ಸರ್ವಜ್ಞʼ ಎಂಬಂತೆ ಆತನೂ ಭಗವದ್ಗೀತೆಯ ಕೆಲವು ಶ್ಲೋಕಗಳನ್ನು ಪಠಣ ಮಾಡುತ್ತಿದ್ದ. ಪೂರ್ತಿ ಭಗವದ್ಗೀತೆ ಪಠಣ ಮಾಡಿದ್ದು ಕಡಿಮೆ. ಯಾವಾಗಲೂ ಮೊದಲ ಅಧ್ಯಾಯದಿಂದ ಶುರುವಾಗಿ ಕೆಲವು ಶ್ಲೋಕಗಳ ಆನಂತರ ಅದು ನಿಂತುಬಿಡುತ್ತಿತ್ತು. ನಾವು ಗೀತೆ ಓದುತ್ತಿರಲಿಲ್ಲವಾದರೂ ಅಪ್ಪ ನಿತ್ಯವೂ ಪಠಣ ಮಾಡುತ್ತಿದ್ದ ಗೀತೆಯ ಶ್ಲೋಕಗಳು ಕಿವಿಗೆ ಬಿದ್ದು ನಮಗೂ ಅವು ಬಾಯಿಪಾಠವಾಗಿಬಿಟ್ಟಿದ್ದವು. ʼಪಾರ್ಥಾಯ ಪ್ರತಿಬೋಧಿತಾಂ ಭಗವತಾ ನಾರಾಯಣೇನಸ್ವಯಂ, ವ್ಯಾಸೇನ ಗ್ರಥಿತಾಂ ಪುರಾಣ ಮುನಿನಾ ಮಧ್ಯೇ ಮಹಾಭಾರತಮ್‌ʼ ಎಂಬ ಗೀತೆಯ ಆರಂಭದ ಶ್ಲೋಕ ನನಗೆ ಈಗಲೂ ಕಂಠಪಾಠವಾಗಿರಲು ಕಾರಣ ಅಪ್ಪನ ನಿತ್ಯದ ಗೀತಾ ಪಠಣ.

ಅಪ್ಪನ ಗೀತಾ ಪಠಣವು ಎತ್ತು ಗಾಣವ ಸುತ್ತಿದಂತೆ ಯಾಂತ್ರಿಕ ಎಂದೆನಲ್ಲ, ಅಪ್ಪ ಈ ಪಠಣದ ಸಮಯದಲ್ಲಿ ದ್ವಾಪರ ಯುಗದಿಂದ ಕಲಿಯುಗಗಳ ನಡುವೆ ಪದೇ ಪದೇ ತುಯ್ದಾಡುತ್ತಿದ್ದ. ತನ್ಮಯತೆಯಿಂದ ಗೀತೆಯ ಶ್ಲೋಕ ಓದುತ್ತಿದ್ದಾಗಲೇ ಏನೋ ಕಿಡಿಗೇಡಿ ಕೆಲಸ ಮಾಡುತ್ತಿರುವ ನಮ್ಮತ್ತಲೂ ಆತನ ಗಮನ ಹರಿಯುತ್ತಿತ್ತು. ಪರಮ ಪವಿತ್ರ ಗೀತೆಯ ಪಠಣದ ನಡುವೆಯೇ ಹ*ಬೆ ಎಂಬ ಭಯಾನಕ ಲೌಕಿಕ ಬಯ್ಗುಳೂ ಆತನ ಬಾಯಿಯಿಂದ ಉದುರುತ್ತಿದ್ದವು. ಒಂದಿಷ್ಟು ಬಯ್ಗುಳದ ಆನಂತರ ಮತ್ತೆ ಆತ ದ್ವಾಪರ ಯುಗದ ಕುರುಕ್ಷೇತ್ರ ಯುದ್ಧ ಕಾಲಕ್ಕೆ ಮರಳುತ್ತಿದ್ದ, ಗೀತಾ ಪಠಣದಲ್ಲಿ ಮುಳುಗಿಹೋಗುತ್ತಿದ್ದ. ಇದು ನಮಗೆ ನಿಜಕ್ಕೂ ತಮಾಷೆಯಾಗಿ ಕಾಣುತ್ತಿತ್ತು.

ನಮ್ಮ ಭಜನಾ ಕಾರ್ಯಕ್ರಮ
ರಾತ್ರಿಯಾಗುತ್ತಿದ್ದಂತೆ ನಾವು ಮಕ್ಕಳು ಭಜನಾ ಕಾರ್ಯಕ್ರಮವನ್ನು ನಿತ್ಯವೂ ಮಾಡುತ್ತಿದ್ದೆವು. ʼಯಾ ಕುಂದೇಂದು ತುಷಾರ ಹಾರ ಧವಳಾ..ʼ ದಿಂದ ಆರಂಭವಾಗಿ ʼಹೂವ ತರುವರ ಮನೆಗೆ ಹುಲ್ಲ ತರುವ..ʼ ಹೀಗೆ ಮುಂದುವರಿದು ʼಮಂಗಳಂ ಜಯ ಶುಭ ಮಂಗಳಂ..ʼ ನೊಂದಿಗೆ ಯಾಂತ್ರಿಕವಾಗಿ ಭಜನಾ ಕಾರ್ಯಕ್ರಮ ಕೊನೆಯಾಗುತ್ತಿತ್ತು. ಭಜನೆ ಎಂದು ನಾವು ಆಡಿದ ಸಾಲುಗಳ ಒಂದೇ ಒಂದು ಅರ್ಥವೂ ನಮಗೆ ಗೊತ್ತಿರಲಿಲ್ಲ. ಒಟ್ಟಿನಲ್ಲಿ ಅಪ್ಪ ಹೇಳಿಕೊಟ್ಟದ್ದು ಕಂಠಪಾಠವಾಗಿ ನಿತ್ಯವೂ ಮುಂದುವರಿಯುತ್ತಿತ್ತು. ಭಜನೆ ಮಾಡಲೇ ಬೇಕು ಎಂಬ ಅಪ್ಪನ ಆದೇಶವೇನೂ ಇರಲಿಲ್ಲ. ಆದರೆ ಅದು ಹೇಗೋ ನಮಗೆ ಒಂದು ಅಭ್ಯಾಸವೇ ಆಗಿಬಿಟ್ಟಿತ್ತು.

ಪಂಚಕಜ್ಜಾಯ

ಎತ್ತು ಗಾಣವನು ಸುತ್ತಿದಂತೆ ಇದೂ ನಡೆಯುತ್ತಿದ್ದುದರಿಂದ ಭಜನೆ ನಡೆಯುವಾಗಲೇ ನಮ್ಮಲ್ಲಿ ಯಾರಾದರೊಬ್ಬರು, ಸಾಮಾನ್ಯವಾಗಿ ಇದ್ದವರಲ್ಲಿ ಚಿಕ್ಕವರು, ನಿದ್ದೆಯಿಂದ ತೂಕಡಿಸುತ್ತಿದ್ದರು. ಹೀಗೆ ತೂಕಡಿಸುವಾಗ ಭಜನೆಯ ನಡುವೆಯೇ ಅವರ ತಲೆಗೆ ಬೊಟ್ಟುವುದು ದೊಡ್ಡವರ ಕೆಲಸವಾಗಿರುತ್ತಿತ್ತು. ಅದರಲ್ಲೂ ಒಂದು ಸ್ಯಾಡಿಸ್ಟ್‌ ಖುಷಿ. ಹೀಗೆ ಅಂತೂ ಇಂತೂ ಭಜನಾ ಕಾರ್ಯಕ್ರಮ ಮುಗಿಯುತ್ತಿತ್ತು.

ನಿತ್ಯದ ಭಜನೆಯಲ್ಲಿ ಪಂಚಕಜ್ಜಾಯವೆಲ್ಲ ಇರುತ್ತಿರಲಿಲ್ಲ. ಅದು ಇರುತ್ತಿದ್ದುದು ವಾರ್ಷಿಕ ಭಜನೆಯಲ್ಲಿ. ಅಂದು ಹೂಗಳಿಂದ ಅಲಂಕೃತವಾದ ದೇವರ ಫೋಟೋದ ಮುಂದೆ ಬಾಳೆಲೆಯಲ್ಲಿ ಬಡಿಸಿದ ಅವಲಕ್ಕಿ ಪಂಚಕಜ್ಜಾಯ ಇರುತ್ತಿದ್ದುದರಿಂದ ನಿದ್ದೆ ತೂಗುವ ಪ್ರಶ್ನೆಯೇ ಇರಲಿಲ್ಲ. ನಮ್ಮ ಗಮನ ತಪ್ಪಿಯೂ ದೇವರ ಫೋಟೋದತ್ತ ಹೋಗುತ್ತಿರಲಿಲ್ಲ. ಹೋಗುತ್ತಿದ್ದುದು ಎಲೆಯ ಮೇಲಣ ಪಂಚಕಜ್ಜಾಯದ ಮೇಲೆ. ಭಜನೆ ಮುಗಿದ ತಕ್ಷಣ ಪಂಚಕಜ್ಜಾಯ ತಿನ್ನುತ್ತಿದ್ದೆವು ಎನ್ನುವುದಕ್ಕಿಂತಲೂ ಮುಕ್ಕುತ್ತಿದ್ದೆವು ಎನ್ನುವುದೇ ಸೂಕ್ತ.

ಮನೆಯಲ್ಲಿ ಮಕ್ಕಳ ಸಂಖ್ಯೆ ನಿಧಾನಕ್ಕೆ ಹೆಚ್ಚುತ್ತಿತ್ತು. ನಾಲ್ವರಿದ್ದವರು ಐವರಾದೆವು. ಐವರು ಮುಂದೆ ಆರಾದೆವು. ಜೊತೆಗೆ ಬಡತನವೂ ಹೆಚ್ಚುತ್ತಲೇ ಇತ್ತು. ಅಪ್ಪನ ಸಂಬಳ ಬಹಳ ಸಣ್ಣದು. ಆದರೂ ಮನೆಯಲ್ಲಿ ಹಬ್ಬ ಹರಿದಿನಗಳನ್ನು ಸಂಭ್ರಮದಿಂದಲೇ ಆಚರಿಸುತ್ತಿದ್ದೆವು. ನಾಗರ ಪಂಚಮಿ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ಪುದ್ವಾರ್‌ (ಹೊಸ ಅಕ್ಕಿ ಊಟ), ದೀಪಾವಳಿ ಇವು ನಾವು ಆಚರಿಸುತ್ತಿದ್ದ ಹಬ್ಬಗಳು. ಪಂಚಮಿಯ ದಿನ ವಿಶೇಷವೇನೂ ಇರುತ್ತಿರಲಿಲ್ಲ. ಜಮೀನು ಮಾಲೀಕ ಶಂಭು ಶಾಸ್ತ್ರಿಗಳು ಮನೆಯ ಎದುರಿನ ನಾಗಬನದಲ್ಲಿ ಪೂಜೆಗೆ ಹೋಗುತ್ತಿದ್ದರು. ಆಗ ನಾವೂ ಒಂದು ತಂಬಿಗೆಯಲ್ಲಿ ಒಂದಿಷ್ಟು ಹಾಲು ಒಯ್ದು ಅವರಿಗೆ ಕೊಡುತ್ತಿದ್ದೆವು. ಅವರು ಅದನ್ನು ಹುತ್ತಕ್ಕೆ ಹೊಯ್ಯುತ್ತಿದ್ದರು. ನಾಗಬನ ಎಂದರೆ ನಮಗೆ ಸದಾ ಭಯದ ಒಂದು ಜಾಗವಾಗಿತ್ತು.

ಅಷ್ಟಮಿಯ ದಿನ ಕೃಷ್ಣ ಹುಟ್ಟುವವರೆಗೂ ಜಾಗರಣೆ ಮಾಡುತ್ತಿದ್ದೆವು. ಚೌತಿಯ ಹಿಂದಿನ ರಾತ್ರಿ ಅಮ್ಮ ಗಣೇಶನಿಗಾಗಿ ವಡೆ, ಉಂಡೆ ಇತ್ಯಾದಿ ತಯಾರಿಸುತ್ತಿದ್ದರು. ನೋಡುವಾಗ ಬಾಯಲ್ಲಿ ನೀರೂರುತ್ತಿತ್ತು. ಆದರೆ ದೇವರಿಗೆ ಇಡದೆ ನಾವು ತಿನ್ನುವಂತಿಲ್ಲವಲ್ಲ, ಹಾಗಾಗಿ ಬಹಳ ನಿರಾಶೆ. ದೀಪಾವಳಿಯ ದಿನಗಳಲ್ಲಿ ಉದ್ದಿನ ದೋಸೆಯ ಸಂಭ್ರಮ. ಗೋಪೂಜೆಯಂದು ನಮ್ಮ ಕಪಿಲೆ ದನಕ್ಕೂ ಇದೇ ಉದ್ದಿನ ದೋಸೆ.

ದೀಪಾವಳಿ- ಸಾಂಧರ್ಬಿಕ ಚಿತ್ರ

ದೀಪಾವಳಿಗೆ ಪಟಾಕಿ ಹೊಡೆಯುವ ಅಸೆ ನಮ್ಮಲ್ಲೂ ಇತ್ತು. ಆದರೆ ಹಣದ್ದೇ ಸಮಸ್ಯೆ. ಹಾಗಾಗಿ ಲಕ್ಷ್ಮಿ ಪಟಾಕಿ, ದುರ್ಸು (ಫ್ಲವರ್‌ ಪಾಟ್) ಮತ್ತು ನೆಲಗುಮ್ಮ ಇತ್ಯಾದಿಗಳಷ್ಟೇ ನಮಗೆ ಕೈಗೆ ಎಟಕುತ್ತಿದ್ದುದು. ಅಂಗಳದಲ್ಲಿ ನಮ್ಮ ಪಟಾಕಿ ಸಂಭ್ರಮ ನಡೆಯುತ್ತಿತ್ತು. ಮನೆ ಹುಲ್ಲಿನದ್ದು. ಬೆಂಕಿ ಬಿದ್ದರೆ ದೇವರೆ ಗತಿ. ಆದರೆ ಹಬ್ಬದ ಸಂಭ್ರಮದಲ್ಲಿ ಇವೆಲ್ಲ ಎಚ್ಚರ ಇರುತ್ತಲೇ ಇರಲಿಲ್ಲ.

ಪಟಾಕಿಗೆ ಹಣ ಎಲ್ಲಿಂದ? ಅದಕ್ಕೆ ನಾವು ಮಕ್ಕಳು ಒಂದು ದಾರಿ ಕಂಡುಕೊಂಡಿದ್ದೆವು. ಆಗ ಊರಲ್ಲಿ ರೆವಿನ್ಯೂ ಜಾಗಗಳು ಅಪಾರ ಪ್ರಮಾಣದಲ್ಲಿರುತ್ತಿದ್ದವು. ಅಲ್ಲಿ ಗೇರು ಮರಗಳು ಇರುತ್ತಿದ್ದವು. ಆ ಗೇರು ಮರಗಳು ಸರಕಾರದ್ದಾದ್ದರಿಂದ ಅವು ಎಲ್ಲರಿಗೂ ಸೇರಿದ್ದಲ್ಲವೇ? ನಾವು ಮರ ಏರಿ ಗೇರು ಹಣ್ಣು ಉದುರಿಸಿ, ಗೇರು ಬೀಜ ತೆಗೆದುಕೊಂಡು ಹೋಗಿ ಅಂಗಡಿಯಲ್ಲಿ ಮಾರಿ ದೀಪಾವಳಿ ಪಟಾಕಿಗೆಂದೇ ಅವನ್ನು ಕೂಡಿಟ್ಟುಕೊಂಡಿರುತ್ತಿದ್ದೆವು.‌ ಈ ಹಣದಲ್ಲಿ ತಂದ ಪಟಾಕಿಗಳೂ ಬೇಗನೇ ಮುಗಿದುಬಿಡುತ್ತಿದ್ದವು. ಆಮೇಲೆ ಮಕ್ಕಳ ಕತೆ ಗೊತ್ತಲ್ಲ ಅಳಿದುಳಿದ ಪಟಾಕಿಗಳನ್ನು ಅಂಗಳದಲ್ಲಿ ಅರಸಿ ತೆಗೆದು ಅವನ್ನು ಸುಡುವ ಯತ್ನ.

ಒಮ್ಮೆ ಏನಾಯಿತು ಗೊತ್ತೇ? ಪಟಾಕಿಗಳೆಲ್ಲ ಖಾಲಿಯಾದ ಬಳಿಕ ದುರ್ಸುವಿನ ಖಾಲಿ ಪೊಟ್ಟಣ ಇತ್ತು. ಅಣ್ಣಂದಿರಿಗೆ ಒಂದು ಐಡಿಯಾ ಹೊಳೆಯಿತು. ಮನೆಯಲ್ಲಿ ಕೋವಿ ಇದ್ದು ಅದರ ಗನ್‌ ಪೌಡರ್‌ ಇತ್ತಲ್ಲ. ಅದನ್ನೇ ದುರ್ಸುವಿನ ಪೊಟ್ಟಣಕ್ಕೆ ತುಂಬಿ ಬೆಂಕಿ ಕೊಟ್ಟರು. ಅದು ಉರಿಯಲಿಲ್ಲ. ಯಾಕೆ ಉರಿಯಲಿಲ್ಲ ಎಂದು ಅಣ್ಣ ಬಾಗಿ ಅದನ್ನು ನೋಡಿದ. ತಕ್ಷಣ ಬೆಂಕಿ ಮಳೆ ಆಕಾಶಕ್ಕೆ ಚಿಮ್ಮಿತು. ಅಣ್ಣನ ಹಣೆಯ ಮೇಲ್ಭಾಗದ ಒಂದಷ್ಟು ತಲೆಕೂದಲು ತಕ್ಷಣ ಮಾಯವಾಯಿತು. ಪುಣ್ಯಕ್ಕೆ ಪ್ರಾಣಾಪಾಯವಾಗಲಿಲ್ಲ.

ಸಾಂದರ್ಭಿಕ ಚಿತ್ರ

ಇಷ್ಟು ಹಬ್ಬಗಳ ನಡುವೆಯೂ ಹೆಚ್ಚು ನೆನಪಿನಲ್ಲಿ ಉಳಿದಿರುವುದು ಪುದ್ವಾರ್‌ ಅಥವಾ ಹೊಸ ಅಕ್ಕಿ ಊಟ. ಸುತ್ತ ಎಲ್ಲೆಲ್ಲೂ ಭತ್ತದ ಗದ್ದೆಗಳೇ ಇದ್ದುದರಿಂದ ಕದಿರಿಗೆ ದೂರ ಹೋಗುವ ಅಗತ್ಯವಿರಲಿಲ್ಲ. ಬೆಳ್ಳಂಬೆಳಗ್ಗೆ ದಡ್ಡಾಲ್‌ ಮರದ ತೊಗಟೆಯ ಹಗ್ಗ, ಮಾವಿನ ಎಲೆ, ಕದಿರು ಎಲ್ಲವನ್ನೂ ಸೇರಿಸಿಕೊಂಡು ಅಪ್ಪ ಗದ್ದೆಯ ಕಡೆಯಿಂದ ಮನೆಗೆ ಬರುತ್ತಿದ್ದ. ಹೊಸ್ತಿಲಲ್ಲಿ ಅಮ್ಮ ಸಂಪ್ರದಾಯ ಪ್ರಕಾರ ಕಾಲಿಗೆ ನೀರೆರೆದು ಅವರನ್ನು ಬರಮಾಡಿಕೊಂಡ ಬಳಿಕ ಆ ಕದಿರನ್ನು ಮಾಡಿನ ಮೂಲೆಗಳಿಗೆ, ಬಾಗಿಲಿಗೆ ಎಲ್ಲ ಕಟ್ಟುತ್ತಿದ್ದೆವು. ಆ ದಿನ ಹಳೆಯ ಅಕ್ಕಿಯ ಗಂಜಿಗೆ ಕೆಲವು ಹೊಸ ಅಕ್ಕಿ ಹಾಕಿದ ʼಹೊಸ ಅಕ್ಕಿ ಊಟʼ. ಜತೆಗೆ ಕೆಸುವಿನ ಕೊದ್ದೆಲ್, ಬಗೆ ಬಗೆಯ ಪಲ್ಯ, ಪಾಯಸ ಎಲ್ಲವೂ ಇರುತ್ತಿತ್ತು. ಇತರ ಹಬ್ಬಗಳಿಗಿಂತ ಈ ಹಬ್ಬ ಯಾಕೆ ಭಿನ್ನ ಎಂದರೆ, ಈ ಹಬ್ಬವನ್ನು ಎಲ್ಲರೂ ಒಂದೇ ದಿನ ಆಚರಿಸುತ್ತಿರಲಿಲ್ಲ. ಒಬ್ಬೊಬ್ಬರು ಒಂದೊಂದು ದಿನ. ಅಲ್ಲದೆ ಈ ಹಬ್ಬದಂದು ಅಕ್ಕ ಪಕ್ಕದ ಮನೆಯವರನ್ನೆಲ್ಲ ಊಟಕ್ಕೆ ಕರೆಯುವ ಕ್ರಮವಿತ್ತು. ಅವರೂ ನಮ್ಮನ್ನು ಊಟಕ್ಕೆ ಕರೆಯುತ್ತಿದ್ದರು. ಹೀಗೆ ಅದೊಂದು ವಿಶಿಷ್ಟವಾದ ಸಾಮೂಹಿಕ ಹಬ್ಬ.

ಶ್ರೀನಿವಾಸ ಕಾರ್ಕಳ

ಇದನ್ನು ಓದಿದ್ದೀರಾ? ಅದೊಂದ್ ದೊಡ್ಡ ಕಥೆ- ಆತ್ಮಕಥನ ಸರಣಿ ಭಾಗ-7 |ಶಂಕ್ರಾಣದ ಮಳೆಗಾಲ

More articles

Latest article