ಬೆಳಗಾವಿ: ಒಂದು ರಾಜಕೀಯ ಸಂಘಟನೆಯಾಗಿರುವ ಆರ್‌ಎಸ್ಎಸ್ ಕಾರ್ಯಕ್ರಮಗಳಲ್ಲಿ ಸರ್ಕಾರಿ ನೌಕರರು ಭಾಗಿಯಾಗಬಾರದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಅವರು ಇಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಆರ್‌ಎಸ್ಎಸ್ ನಿಷೇಧಿಸಬೇಕು. ಅದೇನೂ ಸಾಮಾಜಿಕ ಸಂಘಟನೆ ಅಲ್ಲ. ಆದ್ದರಿಂದ ಅದರ ಚಟುವಟಿಕೆಗಳಿಗೆ ಸರ್ಕಾರಿ ಆವರಣ ಬಳಕೆ ಮಾಡಲು ಅವಕಾಶ ಕಲ್ಪಿಸಬಾರದು ಎಂದರು.
ಆರ್‌ಎಸ್‌ಎಸ್ ನಾಯಕರು ವಿವಿಧ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳನ್ನು ರಚಿಸುವಲ್ಲಿ ಮತ್ತು ಪ್ರತಿಪಕ್ಷಗಳ ಸರ್ಕಾರಗಳನ್ನು ಉರುಳಿಸುವಲ್ಲಿ ಭಾಗಿಯಾಗಿದ್ದಾರೆ. ಚುನಾವಣೆಯಲ್ಲೂ ಸಂಘಪರಿವಾರದ ನಾಯಕರು ಸ್ಪರ್ಧಿಸುತ್ತಾರೆ. ವಸ್ತುಸ್ಥಿತಿ ಹೀಗಿರುವಾಗ ಅದು ಸಾಮಾಜಿಕ ಸಂಘಟನೆ ಹೇಗಾಗುತ್ತದೆ? ಎಂದು ಪ್ರಶ್ನಿಸಿದರು. ಆದ್ದರಿಂದ ಸರ್ಕಾರಿ ನೌಕರರು ಆರ್‌ಎಸ್‌ಎಸ್‌ನ ಯಾವುದೇ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಬೇಕು ಎಂದು ಅವರು ಒತ್ತಿ ಹೇಳಿದರು.
ನಿನ್ನೆ ಸಿಎಂ ಸಿದ್ದರಾಮಯ್ಯ ಅವರು ಆಯೋಜಿಸಿದ್ದ ಔತಣಕೂಟದಲ್ಲಿ ಸಂಪುಟ ಪುನಾರಚನೆ ಕುರಿತು ಚರ್ಚೆಯಾಗಿಲ್ಲ. ಯಾವೊಬ್ಬ ಸಚಿವರೂ ಈ ವಿಷಯವನ್ನು ಪ್ರಸ್ತಾಪಿಸಿಲ್ಲ. ವಿವಿಧ ಇಲಾಖೆಗಳ ಕಾರ್ಯವೈಖರಿ ಕುರಿತು ಮಾತ್ರ ಚರ್ಚೆ ನಡೆಯಿತು ಎಂದು ಹೇಳಿದರು.
ರಾಜ್ಯದಾದ್ಯಂತ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಕಡ್ಡಾಯ ಕೆಲಸ ನಿಯಮ ಮತ್ತು ಕೌನ್ಸೆಲಿಂಗ್ ಮೂಲಕ ವೈದ್ಯರನ್ನು ನೇಮಕ ಮಾಡಲಗುತ್ತದೆ. ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ 230 ವೈದ್ಯರು ಮತ್ತು ಕಡ್ಡಾಯ ಕೆಲಸದ ನಿಯಮದ ಮೂಲಕ 1,800 ಹೆಚ್ಚುವರಿ ಎಂಬಿಬಿಎಸ್ ವೈದ್ಯರನ್ನು ನೇಮಕ ಮಾಡಿಕೊಳ್ಳುತ್ತೇವೆ ಎ೦ದು ಹೇಳಿದರು.
ಬೆಂಗಳೂರಿನಲ್ಲಿ ಕಳೆದ ಹಲವು ತಿಂಗಳಿನಿಂದ ಮಳೆಯಾಗುತ್ತಿದೆ. ಮಳೆ ಸಂಪೂರ್ಣವಾಗಿ ನಿಂತ ನಂತರ ರಸ್ತೆಗಳ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.