ನವದೆಹಲಿ: ಇಂದಿಗೆ 69 ವರ್ಷಗಳ ಹಿಂದೆ ಡಾ.ಬಿ.ಆರ್. ಅಂಬೇಡ್ಕರ್ ದಂಪತಿಗೆ ಬೌದ್ಧ ಧರ್ಮಕ್ಕೆ ಅಧಿಕೃತವಾಗಿ ಆಹ್ವಾನ ನೀಡಲಾಗಿತ್ತು ಎಂಬ ವಿಷಯವನ್ನು ಹಿರಿಯ ಕಾಂಗ್ರೆಸ್ ಮುಖಂಡ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ನೆನಪು ಮಾಡಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಅವರು 1956ರ ಅ. 14 ರಂದು ನಡೆದ ಘಟನಾವಳಿಯನ್ನು ಮೆಲುಕು ಹಾಕಿದ್ದಾರೆ. ಅಂದು
ಮಹಾರಾಷ್ಟ್ರದ ನಾಗ್ಪುರದಲ್ಲಿ ಬಿ.ಆರ್. ಅಂಬೇಡ್ಕರ್ ಮತ್ತುಅವರ ಪತ್ನಿ ಸವಿತಾ ಅಂಬೇಡ್ಕರ್ ಅವರಿಗೆ ಬೌದ್ಧ ಧರ್ಮಕ್ಕೆ ಅಧಿಕೃತವಾಗಿ ಆಹ್ವಾನ ನೀಡಲಾಗಿತ್ತು. ಈ ಬೆಳವಣಿಗೆ ನಂತರ ಅವರು ದೇಶದ 5 ಲಕ್ಷ ಜನರಿಗೆ ತಾವೇ ಸಿದ್ಧಪಡಿಸಿದ 22 ಕ್ರಾಂತಿಕಾರಕ ಪ್ರಮಾಣಗಳನ್ನು ಬೋಧಿಸಿದರು ಎಂದು ಹೇಳಿದ್ದಾರೆ.
1956ರಲ್ಲಿ ಗೌತಮ ಬುದ್ಧ ಅವರ 2500ನೇ ಜಯಂತಿಯನ್ನು ಇಡೀ ದೇಶ ಆಚರಿಸುತ್ತಿದ್ದ ಸಂದರ್ಭದಲ್ಲಿ ಬರ್ಮಾ ಸನ್ಯಾಸಿ ಭಿಕ್ಕು ಚಂದಿರಮಣಿ ಅವರು ನಾಗ್ಪುರದಲ್ಲಿ ಡಾ. ಅಂಬೇಡ್ಕರ್ ದಂಪತಿಗೆ ಬೌದ್ಧ ಧರ್ಮಕ್ಕೆ ಆಹ್ವಾನ ನೀಡಿದರು. ಆ ಆಹ್ವಾನವನ್ನು ಒಪ್ಪಿಕೊಂಡು ಡಾ. ಅಂಬೇಡ್ಕರ್ ಅವರು ದೀಕ್ಷಭೂಮಿಯಲ್ಲಿ ಸೇರಿದ್ದ ಐದು ಲಕ್ಷ ಜನರಿಗೆ 22 ಕ್ರಾಂತಿಕಾರಕ ಪ್ರಮಾಣಗಳನ್ನು ಬೋಧಿಸಿದರು ಮತ್ತು ಬೌದ್ಧ ಧರ್ಮವನ್ನು ಸ್ವೀಕರಿಸಿದರು ಎಂದು ವಿವರಿಸಿದ್ದಾರೆ.
ಬೌದ್ಧ ಧರ್ಮ ಸ್ವೀಕರಿಸಿದ ಒಂದು ತಿಂಗಳ ನಂತರ ಡಾ. ಅಂಬೇಡ್ಕರ್ ಅವರು ಕಟ್ಮಂಡುವಿನಲ್ಲಿ ಬುದ್ಧ ಅಥವಾ ಕಾರ್ಲ್ ಮಾರ್ಕ್ಸ್ ಎಂಬ ವಿಷಯ ಕುರಿತು ಭಾಷಣ ಮಾಡಿ ಲುಂಬಿನಿ, ಬೋಧ ಗಯಾ ಮತ್ತು ಸಾರಾನಾಥ ಮಾರ್ಗವಾಗಿ ಅವರು ನವದೆಹಲಿಗೆ ಮರಳಿದರು. ಈ ಪ್ರವಾಸದ 6 ದಿನಗಳ ನಂತರ ಅಂದರೆ 1956ರ ಡಿ. 6ರಂದು ಅಂಬೇಡ್ಕರ್ ಅವರು ನಿಧನರಾದರು ಎಂದು ತಿಳಿಸಿದ್ದಾರೆ.
ಅಂಬೇಡ್ಕರ್ ಅವರನ್ನು ಕುರಿತಾದ ಹಲವಾರು ಗ್ರಂಥಗಳಲ್ಲಿ ಈ ಘಟನಾವಳಿ ದಾಖಲಾಗಿದೆ ಎಂದೂ ಹೇಳಿದ್ದಾರೆ.
ಹಲವು ವರ್ಷಗಳ ಹಿಂದಿನಿಂದಲೂ ಅಂಬೇಡ್ಕರ್ ಅವರು ಬೌದ್ಧ ಧರ್ಮ ಕುರಿತು ಒಲವು ಮೂಡಿಸಿಕೊಂಡಿದ್ದರು. ಹಲವಾರು ಸಭೆ ಸಮಾರಮಭಗಳಲ್ಲಿ ಬೌದ್ಧ ಧರ್ಮ ಕುರಿತು ಮಾತನಾಡಿದ್ದರು. 1956ರ ಫೆಬ್ರುವರಿಯಲ್ಲಿ ಅಂಬೇಡ್ಕರ್ ಚಳವಳಿಗೆ ಸಂಬಂಧಿಸಿದ ನಿಯತಕಾಲಿಕೆಯ ಹೆಸರನ್ನು ಜನತಾದಿಂದ ಪ್ರಬುದ್ಧ ಭಾರತ ಎಂದು ಬದಲಿಸಿದರು ಎಂದೂ ಜೈರಾಮ್ ರಮೇಶ್ ಸ್ಮರಿಸಿದ್ದಾರೆ.