ತಿರುವನಂತಪುರಂ: ಬಾಲ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ ಎಸ್ ಎಸ್ ) ಸದಸ್ಯರಿಂದ ಲೈಂಗಿಕ ಕಿರುಕುಳ ದೌರ್ಜನ್ಯಕ್ಕೊಳಗಾಗಿದ್ದೇನೆ ಎಂದು ಆರೋಪಿಸಿ 26 ವರ್ಷದ ಸಾಫ್ಟ್ ವೇರ್ ಎಂಜಿನಿಯರ್ ಆನಂದು ಅಜಿ ಎಂಬುವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೇರಳದ ನಿವಾಸಿ ಆನಂದು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಇವರ ಶವ ತಿರುವನಂತಪುರದ ತಂಪನೂರಿನಲ್ಲಿರುವ ಹೋಟೆಲ್ ವೊಂದರಲ್ಲಿ ಪತ್ತೆಯಾಗಿದೆ. ಪೊಲೀಸರು ಇದನ್ನು ಆತ್ಮಹತ್ಯೆ ಎಂದು ಶಂಕಿಸಿದ್ದಾರೆ. ಕೇರಳದ ನಿವಾಸಿ ಆನಂದು ಬಾಲ್ಯದಲ್ಲಿ ಪದೇ ಪದೇ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದರಿಂದ ತೀವ್ರ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು ಎಂದು ಪೊಲೀಸರು ಹೇಳುತ್ತಿದ್ದಾರೆ.
ಆನಂದು ಇನ್ಸ್ಟಾ ಗ್ರಾಮ್ ನಲ್ಲಿ ಮಾಡಿರುವ ಕೊನೆಯ ಪೋಸ್ಟ್ ನಲ್ಲಿ ತಮ್ಮ ಮೇಲಾದ ದೌರ್ಜನ್ಯ, ಖಿನ್ನತೆ ಮತ್ತು ಆಘಾತವನ್ನು ವಿವರಿಸಿದ್ದಾರೆ. ನಾನು ಯಾವುದೇ ಆರ್ಥಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ. ಆತಂಕ ಮತ್ತು ಖಿನ್ನತೆಯಿಂದಾಗಿ ಮರಣ ಹೊಂದುತ್ತಿದ್ದೇನೆ ಎಂದು ಬರೆದು ಕೊಂಡಿದ್ದಾರೆ.
ಬಾಲ್ಯದಲ್ಲಿ ಆರ್‌ಎಸ್‌ಎಸ್ ಜತೆ ನಾನು ಸಂಬಂಧ ಇರಿಸಿಕೊಂಡಿದ್ದೆ. ಆಗ ಪದೇ ಪದೇ ಲೈಂಗಿಕ ಮತ್ತು ದೈಹಿಕ ಕಿರುಕುಳದಿಂದ ಉಂಟಾದ ಮಾನಸಿಕ ಅಸ್ವಸ್ಥತೆಯೇ ನನ್ನ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.
ಒಬ್ಬ ವ್ಯಕ್ತಿ ಮತ್ತು ಒಂದು ಸಂಘಟನೆಯನ್ನು ಹೊರತುಪಡಿಸಿ ನನಗೆ ಯಾರ ಮೇಲೂ ಕೋಪವಿಲ್ಲ. ನನ್ನ ತಂದೆಯ ಮೂಲಕ ಸಂಘ ಪರಿವಾರ ಪರಿಚಯವಾಯಿತು. ಆಗ ವ್ಯಕ್ತಿಯೊಬ್ಬನಿಂದ ನಾನು ಪದೇ ಪದೇ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೆ. ಹಲವಾರು ಆರ್‌ಎಸ್‌ಎಸ್ ಸದಸ್ಯರು ಸಹ ನನ್ನನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿದರು. ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಸಕ್ರಿಯ ಸದಸ್ಯ ಎನ್ಎಂ ಎಂಬ ವ್ಯಕ್ತಿ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾನೆ. ಆತ ನನ್ನ ನೆರೆ ಮನೆಯವನೂ ಹೌದು ಎಂದು ವಿವರಿಸಿದ್ದಾರೆ.