ಮುಖ್ಯ ನ್ಯಾಯಮೂರ್ತಿಗಳತ್ತ ಶೂ ಎಸೆತ: ಮತೀಯ ಹಿಂಸೆಯ ಉನ್ಮತ್ತ ಸ್ಥಿತಿ

Most read

ನೆನ್ನೆ ಸುಪ್ರಿಂಕೋರ್ಟಿನಲ್ಲಿ ನಡೆದಿರುವ ಅಸಹ್ಯಕರವಾದ ಘಟನೆ ನಾವು ಬದುಕುತ್ತಿರುವ ಸಾಮಾಜಿಕ ಪರಿಸರ ತಲುಪಿರುವ ದಿವಾಳಿತನವನ್ನು ಎತ್ತಿ ತೋರುತ್ತಿದೆ. ಸಂದೇಹಗಳನ್ನು ಚರ್ಚೆ, ಮಂಥನ, ಸಂವಾದ ಮತ್ತು ವಾಗ್ವಾದಗಳ ಮೂಲಕ ಬಗೆಹರಿಸಿಕೊಳ್ಳಬೇಕಾದದ್ದು ಪ್ರಜಾತಂತ್ರದ ಒಂದು ಪ್ರಧಾನವಾದ ಮೌಲ್ಯ. ಆದರಿಂದು ನಮ್ಮ ದೇಶದ ಸರ್ವೋಚ್ಛ ನ್ಯಾಯಮೂರ್ತಿಯವರು ಪ್ರಾಸಂಗಿಕವಾಗಿ ಮಾಡಿದ ಟೀಕೆ-ಟಿಪ್ಪಣಿಯನ್ನು ಸಹಿಸಲಸಾಧ್ಯವಾದಷ್ಟು ಅಸಹಿಷ್ಣುತೆ ಪ್ರಕಟವಾಗಿದೆ. ಇನ್ನೆಲ್ಲಿ ಹೊಸಹುಟ್ಟು ಅಥವಾ ಮರುಹುಟ್ಟು ಸಾಧ್ಯ? – ಡಾ.ಜಿ.ಎನ್.ಧನಂಜಯ ಮೂರ್ತಿ, ಪ್ರಾಧ್ಯಾಪಕರು.

ನಮ್ಮ ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿ ವಿಕೃತ ಘಟನೆಯೊಂದು ಜರುಗಿದೆ. ಮುಖ್ಯನ್ಯಾಯಮೂರ್ತಿಗಳಾದ ಶ್ರೀಮಾನ್ ಬಿ.ಆರ್.ಗವಾಯಿ ಅವರಿಗೆ ರಾಕೇಶ್ ಕಿಶೋರ್ ಎಂಬ ಮತಾಂಧ ವಕೀಲನೊಬ್ಬ ತನ್ನ ಕಾಲಿನಿಂದ ಶೂ ಕಳಚಿ ನ್ಯಾಯಮೂರ್ತಿಗಳತ್ತ ತೂರಲು ಹವಣಿಸಿದ್ದಾನೆ. ಕಳೆದ ಒಂದು ತಿಂಗಳಿನಿಂದ ಬಿ.ಆರ್.ಗವಾಯಿಯವರ ಸುತ್ತ ನಡೆದ ಕೆಲವು ಸಂಗತಿಗಳನ್ನು ಗಮನಿಸಿದರೆ ಇದೊಂದು ಸಂಘಟಿತ ಹಿಂಸೆಯ ಅನುಷ್ಠಾನ ಎಂಬುದು ಮನದಟ್ಟಾಗುತ್ತದೆ. ಮಹಾರಾಷ್ಟ್ರಕ್ಕೆ ಗವಾಯಿಯವರು ಭೇಟಿ ಕೊಟ್ಟಾಗ ಅಲ್ಲಿ ಅವರಿಗೆ ಸಲ್ಲಬೇಕಾದ ಗೌರವ ಸಂದಿರಲಿಲ್ಲ. ಶಿಷ್ಟಾಚಾರ ಉಲ್ಲಂಘನೆಯಾಗಿದ್ದರಿಂದ ಸ್ವತಃ ಅವರೆ ಬೇಸರ ತಳೆದಿದ್ದರು. ನ್ಯಾಯಮೂರ್ತಿಗಳ ತಾಯಿ ಕಮಲಾತಾಯಿಯವರಿಗೆ ಸಂಘಟನೆಯೊಂದರ ಕಾರ್ಯಕ್ರಮಕ್ಕೆ ಆಹ್ವಾನ ಬಂದದ್ದು, ಕಮಲಾತಾಯಿಯವರು ಅದನ್ನು ನಿರಾಕರಿಸಿದ್ದು ಚರ್ಚೆಯಾಗಿತ್ತು. ಖುಜುರಾಹೋ ದೇವಾಲಯದ ಮೂರ್ತಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಬಗ್ಗೆ ನ್ಯಾಯಮೂರ್ತಿಗಳು ಮಾಡಿದ ವಿಶ್ಲೇಷಣೆ ಮತೀಯವಾದಿ ಸಂಘಟನೆಗಳಿಗೆ ಅಪಥ್ಯವಾಗಿತ್ತು. ನೆನ್ನೆ ಶೂ ಎಸೆದ ಕಿಶೋರ್ ಎಂಬ ವಕೀಲ ‘ಸನಾತನ ಸಂಸ್ಥೆಗೆ ಅವಮಾನ ಎಸಗುವುದನ್ನು ಸಹಿಸುವುದಿಲ್ಲ’ ಎಂದು ಕೂಗಾಡಿರುವುದು ವರದಿಯಾಗಿದೆ.

ಶ್ರೀಮಾನ್ ಗವಾಯಿಯವರು ದಲಿತ ಹಿನ್ನೆಲೆಯಿಂದ ಬಂದು ನಮ್ಮ ದೇಶದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ ಎರಡನೆ ದಲಿತರು ಮತ್ತು ಮೊದಲನೆ ಬೌದ್ಧರು. ಇವರ ತಂದೆ ಆರ್. ಎಸ್. ಗವಾಯಿಯವರು ಅಂಬೇಡ್ಕರ್ ಅವರ ಜೊತೆ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದರು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಪುಷ್ಯಮಿತ್ರ ಶುಂಗ ಬೌದ್ಧರ ತಲೆಕಡಿದವರಿಗೆ ಇನಾಮು ಕೊಡುತ್ತಿದ್ದನೆಂದು ಚರಿತ್ರೆ ಹೇಳುತ್ತದೆ. ಇಷ್ಟು ಸಂಕ್ಷಿಪ್ತ ಇತಿವೃತ್ತವನ್ನು ಗಮನಿಸಿದರೆ ನಮಗೆ ನ್ಯಾಯಾಲಯದಲ್ಲಿ ನಡೆದ ಅನಾಗರಿಕ ದುಷ್ಕೃತ್ಯದ ಹಿಂದೆ ಸಂಘಟಿತ ಹಿಂಸೆಗೆ ಉನ್ಮತ್ತ ಮತೀಯತೆಯ ಕಾರಣವಿದೆ ಎಂಬುದು ಗೊತ್ತಾಗುತ್ತದೆ.

ನ್ಯಾಯಮೂರ್ತಿ ಬಿ.ಆರ್.ಗವಾಯಿ

ಸುಪ್ರಿಂ ಕೋರ್ಟಿನ ನಿಕಟಪೂರ್ವ ನ್ಯಾಯಮೂರ್ತಿ ಶ್ರೀಮಾನ್ ಧನಂಜಯ್ ಚಂದ್ರಚೂಡ್ (ಅವರ ಸದ್ಯದ ನಿಲುವುಗಳನ್ನು ಸದ್ಯಕ್ಕೆ ಬದಿಗಿರಿಸಿ) ಅವರು ಎಂ.ಸಿ.ಛಾಗ್ಲಾ ಅವರ ಮೇಲಿನ ಉಪನ್ಯಾಸವೊಂದರಲ್ಲಿ ಆಧುನಿಕ ಕಾಲವನ್ನು ‘ಸತ್ಯೋತ್ತರ ಕಾಲ’ ಎಂದೇ ವ್ಯಾಖ್ಯಾನಿಸಿದ್ದರು. ಆಧುನಿಕ ಪ್ರಭುತ್ವಗಳು ಜನರ ದೈನಂದಿನ ಬಿಕ್ಕಟ್ಟುಗಳನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಆಲೋಚನೆ ಮಾಡುವ ಬದಲು ಸುಳ್ಳಿನ ಸಂಕಥನಗಳ ಮೂಲಕ ಮನುಷ್ಯರ ನಡುವೆ ವಿಭಜನೆಯ ದೊಡ್ಡ ದೊಡ್ಡ ಕಂದಕಗಳನ್ನು ನಿರ್ಮಿಸಲು ಹಾತೊರೆಯುತ್ತಿವೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಸಂಘಟಿತವಾದ ಹಿಂಸೆಯನ್ನು ನಡೆಸಲು ತಮ್ಮ ಬೇರೆ ಬೇರೆ ಸಂಘಟನೆಗಳಿಗೆ ರಣವೀಳ್ಯ ಕೊಡುತ್ತಿವೆ. ನ್ಯಾಯದ ಪರವಾಗಿ ಬಂದ ತೀರ್ಪುಗಳು ಅವು ಯಾರ ಪರವಾಗಿವೆ ಎನ್ನುವುದರ ಆಧಾರದ ಮೇಲೆ ತೀರ್ಪುಗಳಿಗೆ ನಾಗರಿಕರ ಮನ್ನಣೆ ಲಭಿಸುವಂತೆ ನೋಡಿಕೊಳ್ಳಲಾಗುತ್ತಿದೆ. ಒಟ್ಟಿನಲ್ಲಿ ನ್ಯಾಯಾಲಯದ ತೀರ್ಪುಗಳಿಗೆ ಸಾಂವಿಧಾನಿಕ ಮನ್ನಣೆಗಿಂತ ಸಾಮಾಜಿಕ ಮನ್ನಣೆಯೆ ಮುನ್ನೆಲೆಗೆ ಬರುವಂತೆ ನೋಡಿಕೊಳ್ಳಲಾಗುತ್ತಿದೆ. ಇದು ಒಂದು ಕಡೆಯಾದರೆ ಇನ್ನೊಂದು ಕಡೆ ಕೋಮುಪ್ರಚೋದನೆಯ ಭಾಷಣಕಾರರನ್ನು ಒತ್ತಾಯಪೂರ್ವಕವಾಗಿ ಬಂಧಿಸಬಾರದೆಂಬ ತೀರ್ಪುಗಳು ಹೊರಬೀಳುತ್ತಿವೆ.

ನೆನ್ನೆ ಸುಪ್ರಿಂಕೋರ್ಟಿನಲ್ಲಿ ನಡೆದಿರುವ ಅಸಹ್ಯಕರವಾದ ಘಟನೆ ನಾವು ಬದುಕುತ್ತಿರುವ ಸಾಮಾಜಿಕ ಪರಿಸರ ತಲುಪಿರುವ ದಿವಾಳಿತನವನ್ನು ಎತ್ತಿ ತೋರುತ್ತಿದೆ. ಸಂದೇಹಗಳನ್ನು ಚರ್ಚೆ, ಮಂಥನ, ಸಂವಾದ ಮತ್ತು ವಾಗ್ವಾದಗಳ ಮೂಲಕ ಬಗೆಹರಿಸಿಕೊಳ್ಳಬೇಕಾದದ್ದು ಪ್ರಜಾತಂತ್ರದ ಒಂದು ಪ್ರಧಾನವಾದ ಮೌಲ್ಯ. ಇಂತಹ ಸಂವಾದಗಳ ರೂಪದಲ್ಲಿ  ಬೌದ್ಧ, ಚಾರ್ವಾಕ, ಸಾಂಖ್ಯ, ಲೋಕಾಯತ ಮುಂತಾದ ಸ್ಕೂಲ್ ಆಫ್ ಫಿಲಾಸಫಿಗಳು ಹುಟ್ಟಿದ್ದೇ ಜೀವನದ ಅರ್ಥವನ್ನು ಶೋಧಿಸಲು. ಆದರಿಂದು ನಮ್ಮ ದೇಶದ ಸರ್ವೋಚ್ಛ ನ್ಯಾಯಮೂರ್ತಿಯವರು ಪ್ರಾಸಂಗಿಕವಾಗಿ ಮಾಡಿದ ಟೀಕೆ-ಟಿಪ್ಪಣಿಯನ್ನು ಸಹಿಸಲಸಾಧ್ಯವಾದಷ್ಟು ಅಸಹಿಷ್ಣುತೆ ಪ್ರಕಟವಾಗಿದೆ. ಇನ್ನೆಲ್ಲಿ ಹೊಸಹುಟ್ಟು ಅಥವಾ ಮರುಹುಟ್ಟು ಸಾಧ್ಯ? ನಮ್ಮ ಮನಸುಗಳು ಇಷ್ಟೊಂದು ಅಕರಾಳವಿಕರಾಳಗೊಳ್ಳಲು ಕಾರಣಗಳನ್ನು ಹುಡುಕಿಕೊಂಡು ಅವುಗಳನ್ನು ಉಪಶಮನ ಮಾಡುವ ದಾರಿಗಳನ್ನು ಇನ್ನಾದರೂ ಕಂಡುಕೊಳ್ಳದಿದ್ದರೆ ಇಲ್ಲಿ ಯಾರಿಗೂ ಸುಖವಿಲ್ಲ.

ಚಪ್ಪಲಿ ಎಸೆದ ರಾಕೇಶ್ ಕಿಶೋರ್

ಮೊದಮೊದಲು ಲೇಖಕರು, ಕಲಾವಿದರು, ಬುದ್ಧಿಜೀವಿಗಳು, ಆಕ್ಟಿವಿಸ್ಟ್‌ಗಳನ್ನು ಭೇಟೆಯಾಡುತ್ತಿದ್ದ ಫ್ಯಾಸಿಸಂ ಈಗ ನ್ಯಾಯವ್ಯವಸ್ಥೆಯ ಮೇಲೂ ತನ್ನ ವಕ್ರದೃಷ್ಟಿ ಬೀರಿದೆ. ಆ ಮೂಲಕ ತಮ್ಮ ಇಚ್ಛೆಗೆ ವಿರುದ್ಧವಾದ ನ್ಯಾಯ ಪ್ರಕಟವಾದರೆ ಅದನ್ನು ಅನ್ಯಾಯವೆಂದು ಬಿಂಬಿಸಲು ವ್ಯವಸ್ಥಿತವಾದ ಮಿಥ್ಯಸಂಕಥನವನ್ನು ಸೃಜಿಸಲಾಗುತ್ತಿದೆ. ಆ ಮೂಲಕ ನ್ಯಾಯಾಧೀಶರನ್ನೆ ಅಪರಾಧಿಗಳೆಂದು ನಿರ್ಧರಿಸಿ ಹಲ್ಲೆ ನಡೆಸಲು ಪ್ರಯತ್ನಿಸುತ್ತಿರುವುದು ಖಂಡಿತವಾಗಿಯೂ ಅಪಾಯಕಾರಿಯಾದ ಆಟಾಟೋಪಗಳು. ವಾಗ್ವಾದ, ಚರ್ಚೆ, ಸಂವಾದಗಳಿಲ್ಲದ ಸಮಾಜ ನಿಂತ ನೀರಾಗಿ ರಾಡಿಯಾಗುತ್ತದೆಯೆ ಹೊರತು, ಪುಟಿದೇಳುವ ಚೈತನ್ಯವನ್ನು ಪಡೆದುಕೊಳ್ಳಲು ಅದರಿಂದ ಸಾಧ್ಯವಾಗುವುದಿಲ್ಲ. ಪ್ರಸಕ್ತ ಪ್ರಕರಣದಲ್ಲಿ ಭಾರತದಲ್ಲಿ ಮತೀಯವಾದ ಮುಸ್ಲಿಮರು, ಕ್ರಿಶ್ಚಿಯನ್ನರನ್ನು ಮಾತ್ರ ಗುರಿಯಾಗಿಸಿದೆ ಎಂದು ಭಾವಿಸದೆ ಆಳದಲ್ಲಿ ಅದು ದಲಿತರನ್ನೂ ಟಾರ್ಗೆಟ್ ಮಾಡಿಕೊಂಡಿದೆ ಎಂಬ ಕಣ್ಣಮುಂದಿರುವ ಸತ್ಯವನ್ನು ಕಾಣಬೇಕು.

ಮನೆಯೊಳಗಣ ಕಿಚ್ಚು ಮೊದಲು ನಮ್ಮ ಮನೆಯನ್ನು ಸುಡುತ್ತದೆ ಎನ್ನುವ ಅನುಭವದ ಮಾತಿನಲ್ಲಿ ನಂಬಿಕೆಯುಳ್ಳ ಪ್ರಜ್ಞಾವಂತರೆಲ್ಲರೂ ಈ ಬಗ್ಗೆ ಇಂದು ತಲೆಕೆಡಿಸಿಕೊಳ್ಳದಿದ್ದರೆ ಧರೆ ಹತ್ತಿ ಉರಿಯಬಹುದು. ತಮ್ಮ ಸುತ್ತಲೂ ಎಡೆಯಾಡುತ್ತಿರುವ ಹಿಂಸೆಯಲ್ಲಿ ನಾಗರಿಕರು, ಪ್ರಜ್ಞಾವಂತರು ಮೌನವಾಗಿರುವುದೂ ಹಿಂಸೆಗೆ ಸಮ್ಮತಿಸಿದಂತೆ. ಈಗ ನಾವೆಲ್ಲರೂ ನಮ್ಮೊಳಗಡಗಿರುವ ಹಿಂಸೆಯ ಬೇರುಗಳನ್ನಿಡಿದು ಅಲ್ಲಾಡಿಸಿ ಕಿತ್ತೊಗೆಯಬೇಕು. ಏಕೆಂದರೆ ಗೋಡ್ಸೆ ಎಂಬ ಸೈತಾನ ತನಗೆ ತಾನೆ ಉದಿಸಿದವನಲ್ಲ. ಕನ್ನಡದ ಲೇಖಕ ವಿ.ಸೀತಾರಾಮಯ್ಯ ಅವರು ‘ಗಾಂಧಿಯನ್ನು ಕೊಂದ ಸರ್ಪದ ವಿಷಪೂರಿತವಾದ ದೇಹ ನಾವು. ಗೋಡ್ಸೆ ಅದರ ಹಲ್ಲು ಮಾತ್ರ’ ಎಂದು ಹೇಳಿದ್ದರು. ಸಾರ್ತ್ರೆ ‘ಹಿಟ್ಲರ್‌ ಗೆ ನಾನೂ ಜವಬ್ದಾರ’ ಎಂದು ಹೇಳಿದ್ದ. ಈ ಮಾತುಗಳು ನಮ್ಮ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಶೂ ಎಸೆದಿರುವ ಇಂದಿನ  ಪ್ರಕರಣದಲ್ಲಿ ನಮಗೆಲ್ಲರಿಗೂ ಯಥಾವತ್ತಾಗಿ ಅನ್ವಯವಾಗುತ್ತವೆ.

ಪ್ರಾಧ್ಯಾಪಕರು

ಇದನ್ನೂ ಓದಿ- http://ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ – 2025‌ | ನಮ್ಮ ನಿಲುವು ಏನಾಗಿರಬೇಕು? https://kannadaplanet.com/socio-educational-survey-2025/

More articles

Latest article