ಚೆನ್ನೈ: ತಮಿಳಿಗ ವೆಟ್ರಿ ಕಳಗಂ ( ಟಿವಿಕೆ) ಪಕ್ಷದ ಮುಖಂಡ, ನಟ ವಿಜಯ್ ಶನಿವಾರ ರಾತ್ರಿ ಕರೂರಿನಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ ಇಂದು ಬೆಳಗ್ಗೆ 41 ಕ್ಕೆ ಏರಿದೆ ಎಂದು ತಮಿಳುನಾಡು ಪೊಲೀಸರು ತಿಳಿಸಿದ್ದಾರೆ.
ಈ ಮಧ್ಯೆ ಇಂದು ಮುಂಜಾನೆ ಈಸ್ಟ್ ಕೋಸ್ಟ್ ರೋಡ್ ನಲ್ಲಿರುವ ಟಿವಿಕೆ ಮುಖ್ಯಸ್ಥ ವಿಜಯ್ ಅವರ ನಿವಾಸದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಅನಾಮಧೇಯ ವ್ಯಕ್ತಿಯೊಬ್ಬ ಬೆದರಿಕೆ ಒಡ್ಡಿದ್ದಾನೆ.
ಇಂದು ಮುಂಜಾನೆ ಕರೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 65 ವರ್ಷದ ಮಹಿಳೆ ಸುಗುಣಾ ಎಂಬುವರು ಅಸುನೀಗಿದ್ದಾರೆ ಎಂದು ಅಲ್ಲಿನ ವೈದ್ಯರು ಖಚಿತಪಡಿಸಿದ್ದಾರೆ. ಮೃತಪಟ್ಟ 41 ಮಂದಿಯಲ್ಲಿ 18 ಮಹಿಳೆಯರು ಮತ್ತು 10 ಮಕ್ಕಳು ಸೇರಿದ್ದಾರೆ. ಇವರಲ್ಲಿ ಕರೂರಿನ ವೇಲುಸಾಮಿಪುರಂನ ಎರಡು ವರ್ಷದ ಮಗು ವಿ. ಗುರುವಿಷ್ಣು ಮತ್ತು 60 ವರ್ಷದ ಹಿರಿಯ ನಾಗರೀಕರೊಬ್ಬರು ಸೇರಿದ್ದಾರೆ. ಮೃತ ಪಟ್ಟವರೆಲ್ಲರೂ ಬಹುತೇಕ 20 ರಿಂದ 30 ವರ್ಷ ವಯಸ್ಸಿನವರು ಎಂದು ಗೊತ್ತಾಗಿದೆ. ಮೃತ ದೇಹಗಳನ್ನು ಅವರ ಸಂಬಂಧಿಕರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.
ಶನಿವಾರ ಕರೂರ್ ಜಿಲ್ಲೆಯಲ್ಲಿ ವಿಜಯ್ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದರು. ಸಾರ್ವಜನಿಕರು ಭಾರಿ ಸಂಖ್ಯೆಯಲ್ಲಿ ಸೇರಿದ್ದರು. ಆದರೆ ವಿಜಯ್ ಏಳು ಗಂಟೆ ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಅವಧಿಯಲ್ಲಿ ಬಿಸಿಲು ಹೆಚ್ಚಾಗಿ ಊಟ ಮತ್ತು ನೀರು ಇಲ್ಲದೆ ಜನರು ಪರದಾಡುವಂತಾಗಿತ್ತು.
ವಿಜಯ್ ನಿವಾಸಕ್ಕೆ ಬಾಂಬ್ ಇರಿಸಿರುವ ಬೆದರಿಕೆ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರದೇಶದಲಿ ಶೋಧ ನಡೆಸಿದ್ದು ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.