ಪಟ್ನಾ : ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ಪ್ರಜಾಪ್ರಭುತ್ವಕ್ಕೆ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ನಿರ್ಣಯವನ್ನು ಅಂಗೀಕರಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನಡೆದ (ಸಿಡಬ್ಲ್ಯುಸಿ) ಸಭೆಯಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಗಿದೆ.
ಎಸ್‌ಐಆರ್ ಮೂಲಕ ಹಿಂದುಳಿದ ವರ್ಗಗಳು, ಬಡವರು, ಕಾರ್ಮಿಕರು ಮತ್ತು ಅಲ್ಪಸಂಖ್ಯಾತರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಬಿಜೆಪಿ ಸಂಚು ರೂಪಿಸಿದೆ. ಈ ಕಾರಣಕ್ಕಾಗಿ ಬಿಹಾರದಿಂದ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವನ್ನು ಹೊರಹಾಕಲು ರಾಜ್ಯದ ಜನತೆ ಸಂಕಲ್ಪ ಮಾಡಬೇಕು. ಚುನಾವಣೆಯಲ್ಲಿ ಜನರು ತಮ್ಮ ಮತದಾನದ ಶಕ್ತಿ ಏನು ಎನ್ನುವುದನ್ನು ತೋರಿಸಬೇಕು ಎಂದು ಹೇಳಿದೆ.
ಎಸ್ ಐರ್ ಮತ್ತು ಬಿಜೆಪಿ ಹುನ್ನಾರ ಕುರಿತು ಕಾಂಗ್ರೆಸ್ ಪಕ್ಷವು, ಸಂಸತ್ತಿನ ಒಳಗೆ ಮತ್ತು ಹೊರಗೆ ಹೋರಾಟವನ್ನು ಮುಂದುವರಿಸಲಿದೆ. ಕಳವು ಮಾಡಿದ ಮತಗಳಿಂದ ರಚನೆಯಾದ ಸರ್ಕಾರ ಯಾವುದೇ ನೈತಿಕತೆ ಹೊಂದಿರುವುದಿಲ್ಲ ಎಂದೂ ಆಪಾದಿಸಿದೆ.
ರಾಹುಲ್ ಗಾಂಧಿ ಅವರಿಂದ ಶೀಘ್ರ ಹೈಡೋಜನ್ ಬಾಂಬ್ ಸ್ಫೋಟ:
ಸುದ್ದಿಗೋಷ್ಠಿಯಲ್ಲಿಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಪಕ್ಷದ ವರಿಷ್ಠ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮತಕಳವಿಗೆ ಸಂಬಂಧಿಸಿದಂತೆ ಮುಂದಿನ ಒಂದು ತಿಂಗಳಲ್ಲಿ ಮತ್ತಷ್ಟು ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಲಿದ್ದಾರೆ. ಅದು ‘ಹೈಡೋಜನ್ ಬಾಂಬ್’ ‘ಮಿನಿ ಹೈಡೋಜನ್ ಬಾಂಬ್’ ಮತ್ತು ‘ಪ್ಲುಟೋನಿಯಂ ಬಾಂಬ್’ಗಳ ಸ್ಫೋಟದಂತಿರುತ್ತದೆ. ಕಾದು ನೋಡಿ ಎಂದರು.
ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಪತನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮಹಾಘಟಬಂಧನ್ ಸರ್ಕಾರ ರಚಿಸುವುದು ಶತಸಿದ್ದ. ಮತಕಳ್ಳತನ ಮತ್ತು ಮತದಾರರ ಪಟ್ಟಿಯಲ್ಲಿನ ಅಕ್ರಮಗಳನ್ನು ಕುರಿತು ಬಿಜೆಪಿ ಸರ್ಕಾರದ ದುಷ್ಕೃತ್ಯಗಳನ್ನು ಎದೆಗುಂದದೆ ಬಹಿರಂಗಪಡಿಸಿ ಹೋರಾಟ ನಡೆಸಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಶ್ಲಾಘಿಸಿ ಸಿಡಬ್ಲ್ಯುಸಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು ಎಂದು ಅವರು ತಿಳಿಸಿದರು.