ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗ ಅಲ್ಲ; ಸ್ವತಂತ್ರ ಧರ್ಮ: ಭಾಲ್ಕಿ ಬಸವಲಿಂಗ ಪಟ್ಟದ್ದೇವರು

Most read

ಉಡುಪಿ: ಲಿಂಗಾಯತ ಧರ್ಮವು ಹಿಂದೂ ಧರ್ಮ ಅಥವಾ ಸನಾತನ ಧರ್ಮದ ಒಂದು ಭಾಗವಲ್ಲ. ಅದು ಸ್ವತಂತ್ರ ಧರ್ಮ. ಬಸವಣ್ಣನೇ ಲಿಂಗಾಯತ ಧರ್ಮಕ್ಕೆ ಧರ್ಮಗುರು, ವಚನಗಳೇ ಧರ್ಮಗ್ರಂಥ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದ್ದೇವರು ತಿಳಿಸಿಕೊಟ್ಟಿದ್ದಾರೆ.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಆಯೋಜಿಸಿರುವ ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ವಚನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಯಾವುದೇ ಧರ್ಮವು ಧರ್ಮ ಎಂದು ಅನ್ನಿಸಿಕೊಳ್ಳಬೇಕಾದರೆ ಆ ಧರ್ಮಕ್ಕೆ ತನ್ನದೇ ಆದ ಸಿದ್ಧಾಂತ, ಸಾಧನೆ, ಧರ್ಮಗುರು, ಧರ್ಮಗ್ರಂಥ ಇರಬೇಕು. ಬುದ್ಧ ಬೌದ್ಧ ಧರ್ಮ ಕೊಟ್ಟ ಹಾಗೆ, ಮಹಾವೀರ ಜೈನ ಧರ್ಮ ಕೊಟ್ಟ ಹಾಗೆಯೇ ಬಸವಣ್ಣ ಕೊಟ್ಟಿದ್ದು ಲಿಂಗಾಯತ ಧರ್ಮ ಎಂದು ಅವರು ಪ್ರತಿಪಾದಿಸಿದರು.

ಬಸವಣ್ಣನವರ ಕಾಲದಲ್ಲಿ ಅನೇಕ ಮಂದಿ ಅವರ ಬಳಿ ಬಂದು ಇಷ್ಟಲಿಂಗ ದೀಕ್ಷೆ ಪಡೆದುಕೊಂಡು ಲಿಂಗಾಯತ ಧರ್ಮಕ್ಕೆ ಸೇರ್ಪಡೆಯಾದರು. ವೀರಶೈವರೂ ಅದೇ ರೀತಿಯಲ್ಲಿ ಲಿಂಗಾಯತ ಧರ್ಮಕ್ಕೆ ಬಂದರು. ಆದರೆ, ಅವರು ಬಸವಣ್ಣನವರನ್ನು ಗುರು ಎಂದು ಒಪ್ಪಿಕೊಳ್ಳುವುದಿಲ್ಲ. ವಚನ ಸಾಹಿತ್ಯವನ್ನು ಧರ್ಮ ಗ್ರಂಥ ಎಂದೂ ಒಪ್ಪಿಕೊಳ್ಳುವುದಿಲ್ಲ. ಅದನ್ನು ಒಪ್ಪಿಕೊಂಡರೆ ಅವರೂ ನಮ್ಮವರೇ ಆಗುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಹೋರಾಟ ಏಕೆ ಎಂಬ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಶ್ರೀಗಳು ಸಂವಿಧಾನಬದ್ದವಾಗಿ ನಮ್ಮ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗಬೇಕು.  ಅದಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಅದು ನಮ್ಮ ಹಕ್ಕು. ನಮ್ಮ ಹಕ್ಕನ್ನು ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಉತ್ತರಿಸಿದರು.

ಬಸವಣ್ಣ ಅವರು ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಪ್ರಯತ್ನಿಸಿದ್ದು ಸತ್ಯ. ಎಲ್ಲಿ ವಚನದ ಬೆಳಕು ಇರುತ್ತದೆಯೋ ಅಲ್ಲಿ ಜಾತೀಯತೆಯ ಅಂದಕಾರ ಇರುವುದಿಲ್ಲ. ದೇಶ ರಾಜ್ಯದಲ್ಲಿ ಜಾತೀಯತೆ ಉಳಿದಿದೆ ಎಂದರೆ ವಚನದ ಆಶಯಗಳನ್ನು ನಾವು ಅಳವಡಿಸಿಕೊಂಡಿಲ್ಲ ಎಂದು ಅರ್ಥ. ನಾವೆಲ್ಲರೂ ವಚನಗಳನ್ನು ಪಾಲಿಸಿದರೆ ಜಾತೀಯತೆ ಅಳಿದು ಹೋಗುತ್ತದೆ ಎಂದು ಹೇಳಿದರು.

ಸಂವಾದ ಕಾರ್ಯಕ್ರಮದಲ್ಲಿ ಬೆಳಗಾವಿ ಶೇಗುಣಿಸಿ ಮಹಾಂತ ಪ್ರಭು ಸ್ವಾಮಿ, ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಶಾಂತವೀರ ಮಹಾಸ್ವಾಮಿ, ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ, ಷಣ್ಮುಖ ಶಿವಯೋಗಿಗಳ ಮಠದ ವೀರಸಿದ್ಧ ದೇವರು, ಶಿವಬಸವ ದೇವರು, ಗುರುಬಸವ ಪಟ್ಟದ್ದೇವರು ಭಾಗವಹಿಸಿದ್ದರು.

More articles

Latest article