ಆಳಂದದಲ್ಲಿ ಮತಕಳ್ಳತನಕ್ಕೆ ಸಂಚು; ಸಿಐಡಿ ಕೇಳಿದ ಮಾಹಿತಿ ನೀಡಲು ಅಡ್ಡಿ ಏನು?; ಚುನಾವಣಾ ಆಯೋಗಕ್ಕೆ ಪ್ರಿಯಾಂಕ್‌ ಖರ್ಗೆ ಪ್ರಶ್ನೆ

Most read

ಬೆಂಗಳೂರು:ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಮತ ಕಳ್ಳತನ ಕುರಿತು ಕೇಳಲಾದ ಮಾಹಿತಿಯನ್ನು ಎರಡು ವರ್ಷ ಕಳೆದರೂ ಚುನಾವಣಾ ಆಯೋಗ ನೀಡಿಲ್ಲ. ಅಂದರೆ ಮತಕಳ್ಳತನಕ್ಕೆ ಸಂಚು ರೂಪಿಸಲಾಗಿತ್ತು ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಆರೋಪಿಸಿದ್ದಾರೆ.

ಆಳಂದ ಕ್ಷೇತ್ರದಲ್ಲಿ 6018 ಮತದಾರರ ಹೆಸರನ್ನು ಡಿಲೀಟ್‌ ಮಾಡಲು ಉದ್ದೇಶಿಸಲಾಗಿತ್ತು ಎಂಬ ಸ್ಪೋಟಕ ಮಾಹಿತಿಯನ್ನು ರಾಹುಲ್‌ ಗಾಂಧಿ ಹೊರಗಡವಿದ ನಂತರ ಪ್ರಿಯಾಂಕ್ ಪ್ರತಿಕ್ರಿಯೆ ನೀಡಿದ್ದಾರೆ.

ಆಳಂದದಲ್ಲಿ 2023ರ ಚುನಾವಣೆಗೂ ಮುಂಚಿತವಾಗಿ 7,250 ಮತದಾರರ ಹೆಸರನ್ನು ಕೈಬಿಟ್ಟಿರುವ ಬಗ್ಗೆ ಶಾಸಕ ಬಿ ಆರ್ ಪಾಟೀಲ್ ಮತ್ತು ನಾನು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೆವು. ನಮ್ಮ ದೂರನ್ನು ಆಧರಿಸಿ ಕಲಬುರಗಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಮತಕಳವು ಕುರಿತು ಪರಿಶೀಲನೆ ಮಾಡಿದಾಗ 6018 ಮತದಾರರಲ್ಲಿ ಯಾರು ಯಾರು ಅರ್ಜಿ ಹಾಕಿರಬಹುದು ಎಂದು ಪರಿಶೀಳಿಸಿದಾಗ ಕೇವಲ 28 ಮಂದಿಗೆ ಮಾತ್ರ ಈ ಮಾಹಿತಿ ಇತ್ತು. ಉಳಿದ ಸಾವಿರಾರು ಮತದಾರರಿಗೆ ಯಾವುದೇ ಮಾಹಿತಿ ಇರಲಿಲ್ಲ ಎಂದರು.

ಮತದಾರರ ಪಟ್ಟಿಯಿಂದ ಹೆಸರನ್ನು ಕೈ ಬಿಡುವಂತೆ ಹತ್ತಾರು ಮೊಬೈಲ್‌ನಿಂದ ಅರ್ಜಿಗಳನ್ನುಸಲ್ಲಿಸಲಾಗಿತ್ತು. ಅರ್ಜಿ ಸಲ್ಲಿಸಿದ ಮೊಬೈಲ್ ನಂಬರ್‌ಗಳು ಮಧ್ಯ ಪ್ರದೇಶ ಬಿಹಾರ ಗುಜರಾತ್ ನಲ್ಲಿ ಪತ್ತೆಯಾಗಿದ್ದವು. ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ರಾಜ್ಯ ಮುಖ್ಯ ಚುನಾವಣಾಧಿಗಳೂ ಪತ್ರ ಬರೆದು ಮೊಬೈಲ್ ನಂಬರ್ ಐಪಿ ಅಡ್ರೆಸ್ ಎಲ್ಲೆಲ್ಲಿ ಇದೆ ಮತ್ತು ಚುನಾವಣಾ ಆಯೋಗದ ಲಾಗಿನ್ ಐಡಿ ಕೊಟ್ಟಿದ್ದು ಯಾರು ಎಂಬ ಮಾಹಿತಿಯನ್ನು ಕೇಳಿತ್ತು. ಆದರೆ ಆಯೋಗ ಎರಡು ವರ್ಷಕಳೆದರೂ ಇದುವರೆಗೂ ಮಾಹಿತಿಯನ್ನೇ ನೀಡಿಲ್ಲ ಎಂದರು.

ಎರಡು ವರ್ಷ ಕಳೆದು 18 ಪತ್ರ ಬರೆದರೂ ಚುನಾವಣಾ ಆಯೋಗ ಮುಚ್ಚಿಡುವ ಕೆಲಸ ಮಾಡುತ್ತಿದೆ. ಇದರ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಸ್ಪಷ್ಟವಾಗಿ ಹೇಳಬಹುದು. ಅಧಿಕೃತ ಮಾಹಿತಿ ಎಲೆಕ್ಷನ್ ಕಮಿಷನ್ ನೀಡಬೇಕು. ಆದರೆ ಎಲೆಕ್ಷನ್ ಕಮಿಷನ್ ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ. ತನಿಖೆ ಸ್ಥಗಿತಗೊಂಡಿದೆ. ಅದು ಮುಂದುವರೆಯಬೇಕು ಎಂದರೆ  ಚುನಾವಣಾ ಆಯೋಗ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

More articles

Latest article