ಶಂಕ್ರಾಣದ (ಶಂಕರನಾರಾಯಣ) ರಸ್ತೆಯ ಬದಿಯಲ್ಲಿ ಇಳಿಸಲಾಗಿದ್ದ ಬಿಡಾರ ಸಾಮಾನುಗಳನ್ನು ಸಾಗಿಸುವ ಕೆಲಸ ಶುರುವಾಯಿತು. ಬಿಡಾರ ಸಾಮಾನುಗಳು ಅಂದರೆ ಅಂಥದ್ದೇನೂ ವಿಶೇಷ ಇರಲಿಲ್ಲ. ಮುಖ್ಯವಾಗಿ ಅಡುಗೆಗೆ ಬೇಕಾದ ಒಂದಷ್ಟು ಪಾತ್ರೆಗಳು, ಚಾಪೆ, ಬಟ್ಟೆಬರೆ ಇತ್ಯಾದಿ ಅಷ್ಟೇ. ಕಡೆಯುವ ಕಲ್ಲನ್ನು ಒನಕೆಗೆ ಕಟ್ಟಿ ಒಂದಿಬ್ಬರು ಊರವರು ಹೊಸ ಮನೆಗೆ ಸಾಗಿಸಿದ್ದು ನೆನಪಿದೆ.
ಹೊಸ ಮನೆಯೆಂದರೆ ಸುಸಜ್ಜಿತ ಮನೆಯೇನಲ್ಲ. ಬೈ ಹುಲ್ಲು ಹೊದೆಸಿದ ಮನೆಯಂತೆ ಕಾಣುವ ಒಂದು ಮಣ್ಣಿನ ಕಟ್ಟಡ. ಭೂಮಾಲೀಕ ಶಂಭು ಶಾಸ್ತ್ರಿಗಳು ತಮ್ಮ ಗದ್ದೆಯ ಕೃಷಿ ಕೆಲಸಗಳಿಗೆ ಅನುಕೂಲವಾಗುವಂತೆ ನಿರ್ಮಿಸಿದ ಅಂಗಳ, ಕೊಟ್ಟಗೆ ಸಹಿತವಾದ ಒಂದು ರಚನೆ. ಕೊಯ್ಲು ಆದ ಬಳಿಕ ಹಡಿ ಮಂಚಕ್ಕೆ ಬಡಿದು ಭತ್ತ ಮತ್ತು ಹುಲ್ಲು ಬೇರ್ಪಡಿಸುವುದು, ಹುಲ್ಲಿನ ಕುತ್ರಿ ಕಟ್ಟಿಡುವುದು ಎಲ್ಲಾ ಇದೇ ಅಂಗಳದಲ್ಲಿ. ಆ ಕೆಲಸ ನಡೆಯುವಾಗಲಂತೂ ನಮ್ಮದು ನರಕ ಯಾತನೆ.
ಹಾಲಾಡಿ – ಶಂಕ್ರಾಣ ರಸ್ತೆಯ ತಲ್ಲಂಜೆ ಬಳಿ ರಸ್ತೆಯಿಂದ ಪಶ್ಚಿಮಕ್ಕೆ ಕಾಲು ಹಾದಿಯಲ್ಲಿ ಸಾಗಿದರೆ ಪಡ್ಪು ಕಳೆದು, ಗದ್ದೆಯ ಹುಣಿಯಲ್ಲಿ ಕಾಲು ಹಾಕಿ ತೋಟ, ತೋಡು ದಾಟಿದರೆ ನಮ್ಮ ಈ ಹೊಸ ಬಾಡಿಗೆ ಮನೆ. ಬಾಡಿಗೆ ತಿಂಗಳಿಗೆ ಆರು ರುಪಾಯಿ.
ನಮ್ಮ ಮನೆಯ ಹಿಂದೆ ಹೆಚ್ಚು ಅಂತರವಿಲ್ಲದೆ ಒಂದು ಪುಟ್ಟ ಮನೆಯಲ್ಲಿ ತಮ್ಮು (ತಮ್ಮಣ್ಣ) ದೇವಾಡಿಗ ಮತ್ತು ಆತನ ಕುಟುಂಬದ ವಾಸ. ಆತ ಮದುವೆ, ಕೋಲಗಳಿಗೆ ವಾದ್ಯ ಊದುವ ಕೆಲಸ ಮಾಡುತ್ತಿದ್ದ. ದಶಕ ಕಾಲ ನಮ್ಮ ನೆರೆಮನೆಯವರಾಗಿದ್ದವರು ಅವರು.
ನಮ್ಮದು ಬೈಹುಲ್ಲು ಹೊದೆಸಿದ ಮನೆ ಎಂದೆನಲ್ಲ, ಆಗ ಅಲ್ಲೆಲ್ಲ ಹೆಂಚಿನ ಮನೆಗಳು ಇದ್ದುದು ಬಲು ವಿರಳ; ಸಾಕಷ್ಟು ಉಳ್ಳವರಲ್ಲಿ ಮಾತ್ರ. ಹಾಂ, ನಮ್ಮ ಮನೆ ಮಾಲೀಕ ಶಾಸ್ತ್ರಿಗಳದ್ದು ಆಗಲೇ ಹೆಂಚಿನ ಮನೆ. ಅಲ್ಲಿ ಮುಳಿ ಹುಲ್ಲು ಸಿಗುತ್ತಿಲ್ಲದ ಕಾರಣವೋ ಏನೋ, ಹೆಚ್ಚಿನ ಮನೆಗಳು ಬೈಹುಲ್ಲು ಹೊದೆಸಿದ ಮನೆಗಳೇ. ಅಲ್ಲದೆ ಸ್ವಂತ ಮನೆ ಹೊಂದುವುದೇ ಬಲು ಕಷ್ಟದ ಕಾಲದಲ್ಲಿ ಬಾಡಿಗೆಗೆ ಎಂದು ಮನೆ ಕಟ್ಟುವ ಕ್ರಮವೇ ಇರಲಿಲ್ಲ.
ಅಪ್ಪ ಸರಕಾರಿ ನೌಕರನಾದರೂ ಅಲ್ಲಿ ಆಗ ಸಿಬ್ಬಂದಿಗಳಿಗೆ ವಸತಿ ಗೃಹವೆಂಬುದು ಇರಲಿಲ್ಲ. ಇದ್ದುದು ಇಲಾಖೆಯ ಅತ್ಯುನ್ನತ ಅಧಿಕಾರಿಗಳಿಗೆ ಮಾತ್ರ. ಕೆಳಗಿನ ಹಂತದವರು ಎಲ್ಲಾದರೂ ಹೀಗೇ ಗುಡಿಸಲುಗಳಲ್ಲಿ ಹೊಂದಿಕೊಳ್ಳಬೇಕು. ನಮ್ಮ ಮನೆಯಿಂದ ಮುಖ್ಯ ರಸ್ತೆಗೆ ತಿರುಗಿ, ಶಂಕ್ರಾಣದ ಪೇಟೆಯ ದಿಕ್ಕಿನಲ್ಲಿ ಒಂದು ಫರ್ಲಾಂಗ್ ನಡೆದರೆ ಅಲ್ಲಿ ಬ್ರಿಟಿಷ್ ಕಾಲದ (?) ಸುಸಜ್ಜಿತವಾದ ಅರಣ್ಯ ಇಲಾಖೆಯ ಕಟ್ಟಡ ಮತ್ತು ರೇಂಜ್ ಫಾರೆಸ್ಟ್ ಆಫೀಸರ್ ನ ವಸತಿಗೃಹ ಇತ್ತು. ನಮ್ಮ ತಂದೆ ಆ ಕಚೇರಿಗೆ ಸೇರಿದವರಾದರೂ ಅವರ ಕೆಲಸ ಅರಣ್ಯ ಕಾವಲಿಗೆ ಸಂಬಂಧಿಸಿದ್ದು. ಆದ್ದರಿಂದ ಅಲ್ಲಿನ ಕಚೇರಿಗೆ ಅವರು ಹೋಗುತ್ತಿದ್ದುದು ವಿರಳ.
ಬೈಹುಲ್ಲಿನ ಮನೆಯ ಕಷ್ಟ ಅನುಭವಿಸಿದವರಿಗಷ್ಟೇ ಗೊತ್ತು. ನಮ್ಮ ಮನೆಗಂತೂ ವರ್ಷವೂ ಹುಲ್ಲು ಹೊದೆಸುವ ಕ್ರಮವಿರಲಿಲ್ಲ. ಎರಡೋ ಮೂರೋ ವರ್ಷಕ್ಕೊಮ್ಮೆ ದುರಸ್ತಿ ಮಾಡಿದರೆ ಹೆಚ್ಚು; ಅದೂ ಶಾಸ್ತ್ರಿಗಳಿಗೆ ಮನಸಾದಾಗ. ಹಾಗಾಗಿ ಬೇಸಗೆಗೆ ಹುಲ್ಲು ಕರಟಿಹೋಗಿ ಮಸಿಯಾಗಿ ಉದುರುವುದು (ಈ ಸ್ಥಿತಿ ಬೆಂಕಿಗೆ ಸದಾ ಅಹ್ವಾನ ನೀಡುವಂತಿರುತ್ತದೆ. ಮುಂದೊಮ್ಮೆ ನಮ್ಮ ಮನೆಗೂ ಬೆಂಕಿ ಹಿಡಿಯಿತು), ಮಳೆಗಾಲದಲ್ಲಿ ಅಲ್ಲಲ್ಲಿ ಸೋರುವುದು ಇವೆಲ್ಲ ಸಾಮಾನ್ಯ. ಎದುರುಗಡೆ ಗೋಡೆಯ ರಕ್ಷಣೆ ಇರಲಿಲ್ಲ. ಮಡಲಿನ ತಡಿಕೆಯನ್ನು ನಾವೇ ಮಾಡಿಕೊಂಡು ಬಿಸಿಲು, ಮಳೆ, ಧೂಳಿನಿಂದ ರಕ್ಷಣೆ ಪಡೆದುಕೊಳ್ಳಬೇಕು.
ಒಂದು ಜಗಲಿ, ಅದನ್ನು ದಾಟಿದರೆ ಒಂದು ಹಜಾರ, ಹಜಾರದ ನಂತರ ಒಂದು ನಡುಮನೆ, ಎಡಕ್ಕೆ ಅಡುಗೆ ಮನೆ, ಬಲಕ್ಕೆ ಕತ್ತಲೆ ಕೋಣೆ ಇವಿಷ್ಟು ನಮ್ಮ ʼಅರಮನೆʼಯ ಸ್ವರೂಪ. ಸ್ನಾನಕ್ಕೆ ಕೊಟ್ಟಗೆಯ ಒಂದು ಮೂಲೆಯಲ್ಲಿ ಗೋಡೆಗಳಿಲ್ಲದ ಕೋಣೆ, ಅದಕ್ಕೆ ತಾಗಿಕೊಂಡಂತೆ ದನದ ಕೊಟ್ಟಗೆ. ಬಹಿರ್ದೆಶೆಗೆ ಆ ಕಾಲಕ್ಕೆ ನೂರಕ್ಕೆ ನೂರು ಮಂದಿಗೆ ಬೈಲು, ತೋಡು, ಕಾಡು ಗುಡ್ಡವೇ ಗತಿ.
ಇಂತಹ ಮನೆಯಲ್ಲಿ ನಾವು ದಶಕ ಕಾಲ ವಾಸಿಸುತ್ತೇವೆ ಎಂಬ ಕಲ್ಪನೆಯೂ ನಮಗಿರಲಿಲ್ಲ. ಮನೆ ಜೋಪಡಿಯಂತಿದ್ದಿರಬಹುದು. ಆದರೆ ಸುತ್ತಲಿನ, ಇನ್ನೂ ಮಲಿನಗೊಂಡಿರದ ಮತ್ತು ಸಮೃದ್ಧ ಹಸಿರಿನ ಕಾರಣ ಅದು ಸ್ವರ್ಗಸದೃಶವೇ ಆಗಿತ್ತು. ಅಲ್ಲಿ ಸುಖ ಇರಲಿಲ್ಲ, ಆದರೆ ಧಾರಾಳ ನೆಮ್ಮದಿ ಇತ್ತು.
ಆಗ ತರಕಾರಿಯನ್ನು ಅಂಗಡಿಯಿಂದ ತರುವ ಕ್ರಮವೇ ಇರಲಿಲ್ಲ. ಬಸಳೆ, ತೊಂಡೆ, ಕೆಸು, ಹೀರೆ ಕಾಯಿ, ಬೂದು ಕುಂಬಳ ಕಾಯಿ, ಸಿಹಿ ಕುಂಬಳ ಕಾಯಿ ಹೀಗೆ ಎಲ್ಲವನ್ನೂ ಮನೆಯ ಆಸುಪಾಸಿನಲ್ಲಿ ನಾವೇ ಬೆಳೆದುಕೊಳ್ಳುವುದು. ಭತ್ತದ ಋತು ಮುಗಿದ ಬಳಿಕದ ಅಂತರ ಕಾಲದಲ್ಲಿ ಶಾಸ್ತ್ರಿಗಳು ತರಕಾರಿ ಬೆಳೆಯಲೆಂದು ಗದ್ದೆಯನ್ನು ಒಕ್ಕಲುಗಳಿಗೆ ಪಾಲು ಮಾಡಿಕೊಡುತ್ತಿದ್ದರು. ಅದರಲ್ಲಿ ಸುಡುಮಣ್ಣು, ಹಟ್ಟಿಗೊಬ್ಬರ ಬಳಸಿ (ನಾವು ದನ ಸಾಕಿದ್ದೆವು ಕೂಡಾ) ನಾವು ಮೆಣಸು, ಬದನೆ, ಬೆಂಡೆ, ಟೊಮೆಟೋ, ಜೋಳ, ಸೌತೆ, ಅಲಸಂಡೆ, ಕುಂಬಳ ಎಲ್ಲ ಬೆಳೆಯುತ್ತಿದ್ದೆವು. ಪಕ್ಕದ ಕೆರೆಯಿಂದ ಆ ಗಿಡಗಳಿಗೆ ಏತದ ಮೂಲಕ ನೀರು ಹರಿಸುತ್ತಿದ್ದೆವು. ಸೌತೆಕಾಯಿ ಮತ್ತು ಕುಂಬಳ ಕಾಯಿ ಅನೇಕ ತಿಂಗಳುಗಳ ಕಾಲ ಕೆಡದೆ ಉಳಿಯುತ್ತಿದ್ದವು. ಆಗ ಯೂರಿಯಾ ಬಳಕೆ ಇನ್ನೇನು ಶುರುವಾಗಿತ್ತು ಅಷ್ಟೇ. ಆದರೆ ಕೀಟನಾಶಕಗಳು ಇನ್ನೂ ಬಂದಿರಲಿಲ್ಲ. ಹಾಗಾಗಿ ನಾವು ತಿನ್ನುತ್ತಿದ್ದುದು ವಿಷರಹಿತ ತರಕಾರಿಗಳನ್ನೇ. ಅಲ್ಲದೆ ಪರಿಸರಕ್ಕೆ ವಿಷ ಉಣಿಸುವ ಪರಂಪರೆ ಇನ್ನೂ ಆರಂಭವಾಗದ ಕಾರಣ ಗದ್ದೆಯ ತುಂಬಾ ಕೀಟಗಳು, ಮಿಡಿತೆಗಳು, ಕಪ್ಪೆ, ಹಾವು ಹೀಗೆ ಬಗೆ ಬಗೆಯ ಜೀವಿಗಳೊಂದಿಗೆ ನಮ್ಮದು ಹೊಂದಾಣಿಕೆಯ ಬದುಕು.
ಮನೆಯ ಉತ್ತರಕ್ಕೆ ಅಂಗಳ ದಾಟಿದರೆ ಬಿಲ್ವ ಪತ್ರೆಯ ಮರ, ಅದರ ಪಕ್ಕದಲ್ಲಿ ಮಾವಿನ ಮರ, ಕೊಂಚ ಬಲಕ್ಕೆ ಸರಿದರೆ ನಾಗಬನ, ಅದಕ್ಕೆ ಹೊಂದಿಕೊಂಡಂತೆ ಒಂದು ಕೆರೆ, ಮತ್ತು ತೋಡು, ತೋಡಿನ ಅಂಚಿನಲ್ಲಿ ಅಡಿಕೆ, ಬಾಳೆ, ತೆಂಗಿನತೋಟ, ಅದರೊಳಗೆ ಪನ್ನೇರಳೆ ಹಣ್ಣಿನ ಮರ, ತೋಟದಾಚೆ ಭತ್ತದ ಗದ್ದೆ. ಮನೆಯ ಹಿಂದಿನ ಭಾಗದಲ್ಲಿ ರಾಟೆಯಿಲ್ಲದ ಒಂದು ಭಾವಿ. ಈ ಸರ್ವ ಋತು ಬಾವಿಯ ನೀರೇ ನಮಗೆ ಅಡುಗೆ, ಸ್ನಾನ, ಇತ್ಯಾದಿಗಳಿಗೆ. ರಾಟೆಯಿಲ್ಲದ ಕಾರಣ ಬಾವಿಯ ದಡಕ್ಕೆ ಅಡ್ಡಲಾಗಿ ಒಂದು ಮರದ ತೊಲೆ ಇರಿಸುತ್ತಿದ್ದರು. ಕೊಡಪಾನದ ಕತ್ತಿಗೆ ಹಗ್ಗ ಕಟ್ಟಿ ಅದು ಮರದ ತೊಲೆಯನ್ನು ಬಳಸಿಕೊಂಡು ಇಳಿಯುವಂತೆ ಮಾಡಬೇಕು. ನೀರು ತುಂಬಿದ ಬಳಿಕ ಹಗ್ಗವನ್ನು ಎಳೆಯುತ್ತಾ ಮರದ ತೊಲೆಗೆ ತಾಗುವಂತೆ ಬಂದಾಗ ಅದನ್ನೊಮ್ಮೆ ಕೊಂಚ ಹಾರಿಸಿ ದಾಟಿಸಿಕೊಳ್ಳಬೇಕು. ಇದು ಅತ್ಯಂತ ಅಪಾಯಕಾರಿ ಕೆಲಸ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಬಾವಿಗೆ ಕೊಡದೊಂದಿಗೆ ಬೀಳುವುದು ಗ್ಯಾರಂಟಿ. ಅದಕ್ಕೆ ನಾನೇ ಸಾಕ್ಷಿ. ಒಂದು ಸಂಜೆ ಕೊಡಪಾನ ಸಹಿತ ನಾನು ಬಾವಿಗೆ ಬಿದ್ದೆ. ಪಕ್ಕದವರೆಲ್ಲ ಸೇರಿ ಎತ್ತಿ ಮತ್ತೆ ಭಯ ಓಡಿಸುವುದಕ್ಕೆ ಕೆಂಪನೆಯ ನೀರು, ದೀಪ ಎಲ್ಲ ಬಳಸಿ ಅದೇನೋ ಕ್ರಮ ಮಾಡುತ್ತಾರಲ್ಲಾ ಅದನ್ನು ನನಗೂ ಮಾಡಿದ್ದರು.
ಮನೆಯ ದಕ್ಷಿಣಕ್ಕೆ ಮತ್ತು ಪಶ್ಚಿಮಕ್ಕೆ ಬೆಟ್ಟು ಗದ್ದೆಗಳು, ಮಾವಿನ ಮರ, ಹಲಸಿನ ಮರ ಇತ್ಯಾದಿ. ಅದರಾಚೆ ಪಶ್ಚಿಮಕ್ಕೆ ಕಾಡು ಆರಂಭ, ಅದರಲ್ಲಿ ಧೂಪದ ಮರ, ನೆಲ್ಲಿಕಾಯಿ, ಚಾಂಪೆ ಹಣ್ಣು, ಮುಳ್ಳ ಹಣ್ಣು, ಗೇರು ಹಣ್ಣು, ಹೆಬ್ಬಲಸು, ನೇರಳೆಹಣ್ಣು ಇತ್ಯಾದಿ ತರಹ ತರಹದ ಮರಗಳು. ಇನ್ನೂ ಪಶ್ಚಿಮಕ್ಕೆ ಸರಿದರೆ ಹಂದಿ ಕೋಡ್ಲು. ಹಂದಿಕೋಡ್ಲು ಪೊದೆಗಳೇ ಹೆಚ್ಚಾಗಿರುವ ಬೆಟ್ಟ.
ಹಂದಿಯ ಬ್ಯಾಟೆ
ಹಂದಿಕೋಡ್ಲು ಅಂದಾಗ ನೆನಪಾಯಿತು ನೋಡಿ. ಅಪ್ಪ ಅರಣ್ಯ ಪಾಲಕ, ಅರಣ್ಯ ಎಂದರೆ ಅದರೊಳಗಿನ ಪ್ರಾಣಿ ಪಕ್ಷಿಗಳೂ ಬಂದುವು ತಾನೇ? ʼಕಾಡುಪ್ರಾಣಿಗಳನ್ನು ರಕ್ಷಿಸಿʼ ಎಂಬ ಚಿತ್ರ ಸಹಿತ ಪೋಸ್ಟರ್ ಆ ಕಾಲದಲ್ಲಿಯೇ ನಮ್ಮ ಮನೆಯ ಗೋಡೆಯನ್ನು ಅಲಂಕರಿಸಿತ್ತು. ಆದರೆ ಅವೆಲ್ಲ ಕೇವಲ ಪೋಸ್ಟರ್ ನಲ್ಲಿ. ಅದರ ಸಂದೇಶಕ್ಕೆ ವಿರುದ್ಧವಾಗಿ ಅಪ್ಪ ಸ್ವತಃ ಬೇಟೆಯಾಡುವ ಹವ್ಯಾಸ ಇರಿಸಿಕೊಂಡಿದ್ದ.
ನಮ್ಮ ಮನೆಯಲ್ಲಿ ಒಂದು ಕೋವಿ ಇತ್ತು. ಹಳೆಯ ತಂತ್ರಜ್ಞಾನದ ಕೋವಿ. ಸಿಡಿಮದ್ದು, ತೆಂಗಿನ ಚೆಪ್ಪು, ಚರೆಗುಂಡು, ಗುಂಡು ಎಲ್ಲಾ ಜಡಿದು ಕೇಪು ಬಳಸಿ ಸಿಡಿಸುವಂಥದ್ದು. ಅದು ಎಷ್ಟೊಂದು ಅಧ್ವಾನದ್ದು ಎಂದರೆ, ಟ್ರಿಗರ್ ಒತ್ತಿದಾಗ ಒಮ್ಮೊಮ್ಮೆ ʼಚಟಕ್ʼ ಎಂಬ ಶಬ್ದ ಮೊದಲು ಬಂದು ಆನಂತರ ʼಡುಂ ಎಂಬ ಸದ್ದಿನೊಂದಿಗೆ ಚರೆ ಮತ್ತು ಗುಂಡು ಹಾರುತ್ತಿತ್ತು. ಮರದ ಎತ್ತರದಲ್ಲಿನ ಹಕ್ಕಿಗೆ ಗುರಿ ಹಿಡಿದು ಟ್ರಿಗರ್ ಅದುಮಿದಾಗ ಮೊದಲು ಚಟಕ್ ಎಂಬ ಸದ್ದು ಬರುತ್ತಲೇ ಹಕ್ಕಿ ಹಾರಿಹೋಗುತ್ತಿತ್ತು. ಡುಂ ಎಂಬ ಸದ್ದಿನೊಂದಿಗೆ ಗುಂಡು ಹಾರುವಾಗ ಬೀಳುತ್ತಿದ್ದುದು ನಾಲ್ಕು ಹಸಿರು ಎಲೆಗಳು ಮಾತ್ರ.
ಅಪ್ಪ ಹೆಚ್ಚಾಗಿ ಬೇಟೆಯಾಡುತ್ತಿದ್ದುದು ತುಳುವಿನಲ್ಲಿ ಪುದ ಎನ್ನುವ ಹಕ್ಕಿ, ಕಾಡುಕೋಳಿ, ಮೊಲ ಇತ್ಯಾದಿ. ಅಪ್ಪನ ಕೋವಿ ಆಧುನಿಕದ್ದಲ್ಲವಾಗಿರಬಹುದು, ಆದರೆ ಆತ ಒಳ್ಳೆಯ ಈಡುಗಾರ. ಆ ಸಾಧಾರಣ ಕೋವಿಯಲ್ಲಿಯೇ ಅನೇಕ ಕಾಡು ಪ್ರಾಣಿಗಳು, ಪಕ್ಷಿಗಳನ್ನು ಆತ ಬೇಟೆಯಾಡಿದ್ದಿದೆ.
ನಾವು ವಾಸಿಸುತ್ತಿದ್ದ ಪ್ರದೇಶದಲ್ಲಿ ಮರಾಟಿ ನಾಯ್ಕರು ದೊಡ್ಡ ಸಂಖ್ಯೆಯಲ್ಲಿದ್ದರು. ಅವರೆಲ್ಲ ಸೇರಿ ಆಗೊಮ್ಮೆ ಈಗೊಮ್ಮೆ ಹಂದಿ ಬೇಟೆಗೆ ಹೋಗುವುದಿತ್ತು. ಹಂದಿ ಬೇಟೆಗೆ ಸಾಮಾನ್ಯವಾಗಿ ನಮ್ಮ ಅಪ್ಪ ಹೋಗದಿದ್ದರೂ ನಮ್ಮ ಕೋವಿಯಂತೂ ಹೋಗುತ್ತಿತ್ತು. ಬೇಟೆಯ ಅಲಿಖಿತ ನಿಯಮ ಪ್ರಕಾರ ಬೇಟೆಯಾಡಿದ ಪ್ರಾಣಿಯ ಮಾಂಸದಲ್ಲಿ ಕೋವಿಗೂ ಒಂದು ಪಾಲು ಇರುತ್ತಿತ್ತು. ಹಾಗಾಗಿ ಬೇಟೆ ಯಶಸ್ವಿಯಾದರೆ ನಮಗೆ ಒಂದು ಪಾಲು ಮಾಂಸ ಗ್ಯಾರಂಟಿ.
ಹಂದಿಕೋಡ್ಲುವಿನಲ್ಲಿ ಹಂದಿಗಳು ಕಾಣಿಸಿಕೊಂಡಿವೆ ಎಂಬ ಸುದ್ದಿ ಒಂದು ದಿನ ಬಂತು. ಸುತ್ತಲಿನ ಹಳ್ಳಿಗರ ತಂಡ ಬೇಟೆಗೆ ಸಿದ್ಧವಾಯಿತು. ನಮ್ಮ ಕೋವಿ ಒಬ್ಬ ಬೇಟೆಗಾರನ ಕೈ ಸೇರಿತು. ಬೇಟೆಯಾಡುವವರಿಗೆ ಹಂದಿಗಳು ಓಡಿ ತಪ್ಪಿಸುವ ಜಾಗ ಸರಿಯಾಗಿ ಗೊತ್ತಿರುತ್ತದೆ (ಕಡು ಬಾಕಿಲು). ಅವರು ಕೋವಿ ಹಿಡಿದು ಅಲ್ಲಿ ನಿಂತಿರುತ್ತಾರೆ. ಉಳಿದವರ ಕೆಲಸ ಸದ್ದುಗದ್ದಲ ಎಬ್ಬಿಸುತ್ತಾ ಹಳುಗಳಿಂದ ಹಂದಿಗಳನ್ನು ಎಬ್ಬಿಸಿ ಓಡಿಸುವುದು.
ಹೀಗೆ ಹಂದಿ ಓಡಿಸುವವರೊಂದಿಗೆ ಆ ದಿನ ನಾನೂ ಸೇರಿಕೊಂಡೆ. ಹಂದಿಕೋಡ್ಲುವಿನಲ್ಲಿ ಹಳುಗಳಿಂದ ಹಂದಿ ಎಬ್ಬಿಸುವ ಕೆಲಸ ಶುರುವಾಯಿತು. ಸದ್ದು ಗದ್ದಲ ಹೆಚ್ಚುತ್ತಿದಂತೆ ಒಂದು ಪೊದೆಯಿಂದ ಹಂದಿಗಳು ಎದ್ದು ಓಡಿದವು. ಹೀಗೆ ಓಡುವಾಗ ಗಾಬರಿಯಾಗಿ ಒಂದು ಪುಟ್ಟ ಹಂದಿ ಮರಿ ವಿರುದ್ಧ ದಿಕ್ಕು ಹಿಡಿದು ನನ್ನ ಕಾಲುಗಳ ಎಡೆಗೇ ಬರಬೇಕೇ? ಕೈ ಚಾಚಿ ಹಿಡಿದುಕೊಳ್ಳಬಹುದು ಅಷ್ಟು ಸನಿಹ. ಮುದ್ದಾದ ಹಂದಿಮರಿ. ಅನಿರೀಕ್ಷಿತವಾಗಿ ನಡೆದ ಘಟನೆಯಾದುದರಿಂದ ನಾನೆಷ್ಟು ಬೆಚ್ಚಿಬಿದ್ದಿದ್ದೆ ಎಂದರೆ ನನಗೆ ಒಂದು ಕ್ಷಣ ಏನು ಮಾಡುವುದೆಂದೇ ತಿಳಿಯಲಿಲ್ಲ. ಅದನ್ನು ಹಿಡಿದುಕೊಳ್ಳಬಹುದಿತ್ತೋ ಏನೋ, ಅಷ್ಟು ಪುಟ್ಟದು. ಆದರೆ ನಾನು ದಿಙ್ಮೂಢನಾಗಿದ್ದೆ. ಇದು ತಿಳಿದು ಹತ್ತಿರ ಬಂದ ಕೆಲವರು, ʼಎಂಥ ಮಾರಾಯ ಅದ್ನ ಹಿಡ್ಕಂಬುದಲ್ದಾ?..ʼ ಎಂದು ಹೇಳುತ್ತಾ ಜೋರಾಗಿ ನಕ್ಕರು. ಅಲ್ಲಿಂದ ಹಂದಿ ಬೇಟೆ ಮುಂದುವರಿದು, ಹಾಲಾಡಿ ಹೊಳೆಯ ಅಂಚಿನ ಕೆರೆಕಾಡಿನಲ್ಲಿ ಹಂದಿ ಕೊಂದು, ಅದಕ್ಕೆ ಮೊದಲು ಗುಂಡು ಹೊಡೆದವರು ಯಾರು, ಸತ್ತುದು ಅಂತಿಮವಾಗಿ ಯಾರ ಗುಂಡಿನಿಂದ ಎಂಬ ತಕರಾರು ಉಂಟಾಗಿ ಗಲಾಟೆಯಾದ ಪ್ರಕರಣ ಈಗಲೂ ಹೌದೋ ಅಲ್ಲವೋ ಎಂಬಂತೆ ನೆನಪಿದೆ.
ಶ್ರೀನಿವಾಸ ಕಾರ್ಕಳ
ಇದನ್ನೂ ಓದಿ–ಅದೊಂದ್ ದೊಡ್ಡ ಕಥೆ- ಆತ್ಮಕಥನ ಸರಣಿ ಭಾಗ-4 | ಕರಿಕಲ್ಲಿನ ಊರಿನಲ್ಲಿ