ಕದನ ವಿರಾಮಕ್ಕೆ ಒಲವು ತೋರಿ ಪ್ರಕಟಣೆ ಬಿಡುಗಡೆ ಮಾಡಿದ ಸಿಪಿಐಎಂ; ಸತ್ಯಾಸತ್ಯತೆ ಪರಿಶೀಲನೆಗೆ ಮುಂದಾದ ಛತ್ತೀಸ್‌ಗಢ ಸರ್ಕಾರ

Most read

ರಾಯಪುರ: ಶಾಂತಿ ಮಾತುಕತೆಗಾಗಿ ಶಸ್ತ್ರಾಸ್ತ್ರ ಹೋರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸುವುದಾಗಿ ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆ ಹೊರಡಿಸಿರುವ ಪ್ರಕಟಣೆ ಕುರಿತು ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿರುವುದಾಗಿ ಛತ್ತೀಸ್‌ ಗಢ ಸರ್ಕಾರ ತಿಳಿಸಿದೆ.

ಶಾಂತಿ ಮಾತುಕತೆ ನಡೆಸಲು ಸರ್ಕಾರ ಒಂದು ತಿಂಗಳು ಭದ್ರತಾ ಪಡೆಗಳ ಕಾರ್ಯಾಚರಣೆಯನ್ನು ನಿಲ್ಲಿಸಿ ಕದನ ವಿರಾಮ ಘೋಷಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿರುವ ಪ್ರಕಟಣೆಯು ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಪ್ರಕಟಣೆಯ  ಸತ್ಯಾಸತ್ಯತೆಯನ್ನು ಪರಿಶೀಲಿಸುವುದಾಗಿ ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಹೇಳಿದ್ದಾರೆ.

ಸಿಪಿಐಎಂನ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುತ್ತಿದೆ ಮತ್ತು ಮಾವೋವಾದಿಗಳಿಗೆ ಶರಣಾಗುವುದು ಮತ್ತು ಪುನರ್ವಸತಿ ಪ್ರಯೋಜನಗಳನ್ನು ಪಡೆಯುವುದು ಉತ್ತಮ ಮಾರ್ಗವಾಗಿದೆ. ಯುದ್ಧದಂತಹ ಪರಿಸ್ಥಿತಿ ಇಲ್ಲದಿರುವುದರಿಂದ ‘ಕದನ ವಿರಾಮ’ ಎಂಬ ಪದವು ಹೆಚ್ಚು ಆಕ್ಷೇಪಾರ್ಹವಾಗಿದೆ. ಪ್ರಜಾಪ್ರಭುತ್ವದಲ್ಲಿ, ಮಾತುಕತೆಗಳು ಷರತ್ತುಬದ್ಧವಾಗಿರಲು ಸಾಧ್ಯವಿಲ್ಲ, ಆದರೆ ಮತ್ತೊಮ್ಮೆ, ಅವರು ಪೂರ್ವಭಾವಿ ಷರತ್ತುಗಳನ್ನು ಹಾಕಿದ್ದಾರೆ. ಆದಾಗ್ಯೂ, ಹೇಳಿಕೆಯನ್ನು ಪರಿಶೀಲಿಸಿದ ನಂತರ, ಸರ್ಕಾರದೊಳಗೆ ಚರ್ಚೆಗಳು ನಡೆಯಲಿವೆ ಎಂದು ಅವರು ಹೇಳಿದ್ದಾರೆ.

ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಪೊಲೀಸ್ ಮಹಾನಿರ್ದೇಶಕ ಬಸ್ತಾರ್ ರೇಂಜ್ ಸುಂದರರಾಜ್ ಪಿ ಪಿಟಿಐಗೆ, ಶಸ್ತ್ರಾಸ್ತ್ರಗಳನ್ನು ತ್ಯಜಿಸುವುದು ಮತ್ತು ಶಾಂತಿ ಮಾತುಕತೆಯ ನಿರೀಕ್ಷೆಯ ಕುರಿತು ಸಿಪಿಐ (ಮಾವೋವಾದಿ) ಕೇಂದ್ರ ಸಮಿತಿಯ ಹೆಸರಿನಲ್ಲಿ ಬಿಡುಗಡೆ ಮಾಡಲಾದ ಪತ್ರಿಕಾ ಪ್ರಕಟಣೆ ಪೊಲೀಸರ ಗಮನಕ್ಕೆ ಬಂದಿದೆ. ಈ ಪತ್ರದ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುತ್ತಿದೆ ಮತ್ತು ಅದರ ವಿಷಯಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಸಿಪಿಐಎಂ ಜತೆಗಿನ ಒಪ್ಪಂದ ಅಥವಾ ಮಾತುಕತೆ ಕುರಿತು ನಿರ್ಧಾರ ತೆಗೆದುಕೊಳ್ಳುವ ಹಕ್ಕು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದೂ ಅವರು ಹೇಳಿದ್ದಾರೆ.

ಸರ್ಕಾರ ತನ್ನ ನಿರ್ಧಾರವನ್ನು ಸಾಮಾಜಿಕ ಜಾಲತಾಣ, ರೆಡಿಯೊ ಸೇರಿ ಸರ್ಕಾರ ಸುದ್ದಿ ವಾಹಿನಿಗಳಲ್ಲಿ ಪ್ರಸಾರ ಮಾಡಬೇಕು ಎಂದೂ ಸಿಪಿಐಎಂ ಮನವಿ ಮಾಡಿಕೊಂಡಿದೆ.

ಎರಡು ಪುಟಗಳ ಈ ಪತ್ರವು ಆಗಸ್ಟ್ 15ರ ದಿನಾಂಕ ಹೊಂದಿದ್ದು, ಮಾವೋವಾದಿಗಳ ಕೇಂದ್ರ ಸಮಿತಿಯ ವಕ್ತಾರ ಅಭಯ್ ಅವರ ಹೆಸರಿನಲ್ಲಿ ಬಿಡುಗಡೆಯಾಗಿದೆ. ಸಿಪಿಐಎಂನ ಪ್ರಧಾನ ಕಾರ್ಯದರ್ಶಿ ನಂಬಲ ಕೇಶವ ರಾವ್ ಎಂಬವರು ಛತ್ತೀಸಗಢದ ಬಸ್ತಾರ್ ವಲಯದಲ್ಲಿ ನಡೆದ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ ಕೌಂಟರ್‌ ನಲ್ಲಿ ಹತ್ಯೆಗೀಡಾದ  ನಾಲ್ಕು ತಿಂಗಳ ನಂತರ ಈ ಪ್ರಕಟಣೆ ಹೊರಬಿದ್ದಿದೆ.

ಕೇಂದ್ರ ಗೃಹ ಸಚಿವರು ಅಥವಾ ಅವರು ಗೊತ್ತು ಮಾಡಿದ ವ್ಯಕ್ತಿ ಅಥವಾ ತಂಡದ ಜತೆ ಮಾತುಕತೆ ನಡೆಸಲು ನಾವು ಸಿದ್ದರಿದ್ದೇವೆ. ಆದರೆ ನಮ್ಮ ಬದಲಾದ ಅಭಿಪ್ರಾಯಗಳನ್ನು ಪಕ್ಷದ ನಾಯಕತ್ವಕ್ಕೆ ನಾವು ತಿಳಿಸಬೇಕಿದೆ. ಹೀಗಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವ ಹಾಗೂ ಜೈಲಿನಲ್ಲಿರುವ ನಮ್ಮ ಕಾಮ್ರೇಡ್‌ ಗಳನ್ನು ಭೇಟಿಯಾಗಲು ಒಂದು ತಿಂಗಳ ಕಾಲಾವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಕೋರುವುದಾಗಿ ಹೇಳಲಾಗಿದೆ.

ವಿಡಿಯೊ ಕರೆಯ ಮೂಲಕ ನಮ್ಮ ಅಭಿಪ್ರಾಯಗಳನ್ನು ಸರ್ಕಾರದ ಮುಂದಿಡಲು ಬಯಸುತ್ತೇವೆ. ಹೀಗಾಗಿ ಒಂದು ತಿಂಗಳ ಮಟ್ಟಿಗೆ ಕದನ ವಿರಾಮ ಘೋಷಿಸಿ ಶೋಧ ಕಾರ್ಯಾಚರಣೆಯನ್ನು ನಿಲ್ಲಿಸಿ, ಶಾಂತಿ ಮಾತುಕತೆ ಪ್ರಕ್ರಿಯೆಯನ್ನು ಮುಂದುವರಿಸಲು ಸರ್ಕಾರಕ್ಕೆ ಮನವಿ ಮಾಡಿಕೊಳ್ಲೂವುದಾಗಿ ಪತ್ರದಲ್ಲಿ ಹೇಳಲಾಗಿದೆ.

ವಿವಿಧ ಕಾರಣಗಳಿಂದ ಈ ಪ್ರಕಟಣೆ ನೀಡುವುದು ತಡವಾಯಿತು ಎಂದೂ ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.

ಶಾಂತಿ ಮಾತುಕತೆಗೆ ಸ್ಪಂದಿಸದ ಕೇಂದ್ರ ಸರ್ಕಾರ:

2025ರ ಮಾರ್ಚ್‌ ನಿಂದಲೂ ಸರ್ಕಾರದ ಜತೆ ಶಾಂತಿ ಮಾತುಕತೆಗಾಗಿ ಮಾವೋವಾದಿ ಪಕ್ಷ ಪ್ರಯತ್ನ ನಡೆಸುತ್ತಿದೆ. ಮೇ 10ರಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಬಸವರಾಜು ಅವರು ಕೇಂದ್ರ ಸಮಿತಿಯ ವಕ್ತಾರ ಕಾಮ್ರೇಡ್ ಅಭಯ್ ಹೆಸರಿನಲ್ಲಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿ ಶಸ್ತ್ರಾಸ್ತ್ರ ತ್ಯಜಿಸುವ ವಿಷಯ ಕುರಿತು  ಪಕ್ಷದ ನಾಯಕತ್ವದೊಂದಿಗೆ ಸಮಾಲೋಚಿಸಲು ಒಂದು ತಿಂಗಳ ಕಾಲಾವಕಾಶ ನೀಡಬೇಕು ಮತ್ತು ಇದಕಾಗಿ ಕದನ ವಿರಾಮ ಘೋಷಣೆ ಕುರಿತು ಪ್ರಸ್ತಾಪಿಸಲಾಗಿತ್ತು.

ಆದರೆ, ಕೇಂದ್ರ ಸರ್ಕಾರವು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸದೆ ತನ್ನ ದಾಳಿ ಮತ್ತು ನಿರ್ಮೂಲನಾ ಕಾರ್ಯಾಚರಣೆಗಳನ್ನು ಮತ್ತಷ್ಟು ತೀವ್ರಗೊಳಿಸಿತು ಎಂದು ಮಾವೋವಾದಿಗಳು ಆರೋಪಿಸಿದ್ದಾರೆ. ಇದರ ಪರಿಣಾಮವಾಗಿ, ಮೇ 21ರಂದು ಮ್ಯಾಡ್‌ನ ಗುಂಡೆಕೋಟ್ ಬಳಿ ನಡೆದ ಭೀಕರ ದಾಳಿಯಲ್ಲಿ, ಮಾವೋವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಬಸವರಾಜು ಮತ್ತು ಕೇಂದ್ರ ಸಮಿತಿಯ ರಕ್ಷಣೆಗೆ ಸಂಬಂಧಿಸಿದ 28 ಸದಸ್ಯರು ಹುತಾತ್ಮರಾದರು ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ಆದರೂ ಪಕ್ಷದ ಪ್ರಧಾನ ಕಾರ್ಯದರ್ಶಿಗಳ ಬಯಕೆಯಂತೆ ಶಾಂತಿ ಮಾತುಕತೆಯನ್ನು ಮುಂದುವರಿಸಲು ಬಯಸಿದ್ದೇವೆ. ಬದಲಾದ ಜಾಗತಿಕ ಮತ್ತು ದೇಶದ ಪರಿಸ್ಥಿತಿಗಳು ಹಾಗೂ ಪ್ರಧಾನಮಂತ್ರಿ ಮತ್ತು ಗೃಹ ಸಚಿವರು ನಿರಂತರವಾಗಿ ಮಾಡುತ್ತಿರುವ ಮನವಿಗಳನ್ನು ಗಮನಿಸಿ, ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿರುವ ನಕ್ಸಲರು ಸಶಸ್ತ್ರ ಹೋರಾಟಕ್ಕೆ ತಾತ್ಕಾಲಿಕ ವಿರಾಮ ಘೋಷಿಸಲಾಗಿದೆ ಎಂದಿದ್ದಾರೆ.

ಒಂದು ತಿಂಗಳ ಕಾಲ ಔಪಚಾರಿಕ ಕದನ ವಿರಾಮ ಘೋಷಣೆಯಿಂದ ಯಾವುದೇ ವ್ಯತ್ಯಾಸಗಳಾಗುವುದಿಲ್ಲ. ರಕ್ತಸಿಕ್ತ ಕಾಡುಗಳನ್ನು ಶಾಂತಿಯುತ ಕಾಡುಗಳಾಗಿ ಪರಿವರ್ತಿಸುವುದು ಸರ್ಕಾರದ ಕೈಯಲ್ಲಿದೆ ಎಂದು ಅವರು ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.

More articles

Latest article