‘ನೊಂದವರೊಂದಿಗೆ ನಾವು ನೀವು’ – ಸಾರ್ವಜನಿಕ ಸಂವಾದ ಮತ್ತು ಆಂದೋಲನಕ್ಕೆ ಚಾಲನೆ

Most read

ಬೆಂಗಳೂರು :  ಲಿಂಗಸಮಾನತೆ ಮತ್ತು ಸಾಮಾಜಿಕ ಸಮಾನತೆಯ  ಆಶಯವನ್ನಿಟ್ಟುಕೊಂಡು ಶ್ರಮಿಸುತ್ತಿರುವ ಕರ್ನಾಟಕದ ವಿವಿಧ ಮಹಿಳಾ ಸಂಘಟನೆಗಳು, ಸಂಸ್ಥೆಗಳು, ಮತ್ತು ಮಹಿಳೆಯರ ಹಕ್ಕುಗಳನ್ನೂ ಒಳಗೊಂಡಂತೆ ಮಾನವ ಹಕ್ಕುಗಳ ಬಗ್ಗೆ ಕಾಳಜಿಯುಳ್ಳ ಅನೇಕ ಸಂಘಟನೆಗಳು ಮತ್ತು ಇನ್ನಿತರ ಚಳುವಳಿಗಳ ಒಡನಾಡಿಗಳ ಸಹಭಾಗಿತ್ವದಲ್ಲಿ ‘ಕೊಂದವರು ಯಾರು?- Who killed women in Dharmasthala?’ ವೇದಿಕೆಯು ಅಭಿಯಾನವೊಂದನ್ನು ಆಯೋಜಿಸಿದ್ದು ‘ನೊಂದವರೊಂದಿಗೆ ನಾವು ನೀವು’ ಸಾರ್ವಜನಿಕ ಸಂವಾದ ಮತ್ತು ಅಭಿಯಾನಕ್ಕೆ ಚಾಲನೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.  ಕಾರ್ಯಕ್ರಮವು ಸೆ.16, ಮಂಗಳವಾರದಂದು, ಬೆಂಗಳೂರಿನ‌ ಶಿವಾನಂದ ಸರ್ಕಲ್‌ನಲ್ಲಿರುವ ಗಾಂಧಿ ಭವನದಲ್ಲಿ ನಡೆಯಲಿದೆ. ಅಭಿಯಾನವು ರಾಜ್ಯದ ಎಲ್ಲ ಮಹಿಳೆಯರು ಯುವತಿಯರು, ಮತ್ತು ಹೆಣ್ಣು ಮಕ್ಕಳಿಗೆ ನ್ಯಾಯ ಘನತೆ ಮತ್ತು ಸುರಕ್ಷತೆಯನ್ನು ಖಾತರಿಪಡಿಸಲು  ಬದ್ಧವಾಗಿದೆಯೆಂದು  ಆಯೋಜಕರು ತಿಳಿಸಿದ್ದಾರೆ.‌

ಕಾರ್ಯಕ್ರಮದ ಉದ್ದೇಶ:

ಕಳೆದ ನಾಲ್ಕು ದಶಕಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಮಹಿಳೆಯರ ಅಪಾರ ಸಂಖ್ಯೆಯ ಸಾವು, ಆತ್ಮಹತ್ಯೆ, ಅಸ್ವಾಭಾವಿಕ ಸಾವಿನ ಪ್ರಕರಣಗಳು ನಡೆದಿವೆ. ಅವುಗಳನ್ನು  ತಡೆಗಟ್ಟುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗಿದೆ. ತಮ್ಮ ಮನೆಯ ಹೆಣ್ಣುಮಕ್ಕಳನ್ನು ಕಳೆದುಕೊಂಡ ಕುಟುಂಬಗಳ ಸದಸ್ಯರು ಹಲವು ವರ್ಷಗಳಿಂದ ನ್ಯಾಯಕ್ಕಾಗಿ ಆಗ್ರಹಿಸುತ್ತಲೇ ಬಂದಿದ್ದಾರೆ. ಇಂದು ಕರ್ನಾಟಕದ ಉದ್ದಗಲಕ್ಕೂ ಮಹಿಳೆಯರು ಮತ್ತು ಸಂವೇದನಾಶೀಲ ನಾಗರೀಕರು ಅವರೊಂದಿಗೆ ದನಿಗೂಡಿಸಿದ್ದೇವೆ ಎಂಬ ಸಂದೇಶವನ್ನು ಸರ್ಕಾರಕ್ಕೂ ಮತ್ತು ನ್ಯಾಯದ ವಿರುದ್ಧವಿರುವ ಶಕ್ತಿಗಳಿಗೂ ಮುಟ್ಟಿಸಬೇಕಿದೆ.

ಇಷ್ಟೆಲ್ಲ ಹೆಣ್ಣುಮಕ್ಕಳು ಮತ್ತು ನಾಗರೀಕರು ಸಾವಿಗೀಡಾಗಿರುವಾಗ ‘ಕೊಂದವರು ಯಾರು?’ ಎಂಬ ಪ್ರಶ್ನೆಯನ್ನು ಗಟ್ಟಿಯಾಗಿ ಕೇಳಬೇಕಿದೆ. ಎಂದೇ ಹಿಂದಿನ ಎಲ್ಲ ಹೆಣ್ಣುಮಕ್ಕಳ ಬಗೆಹರಿಯದ ಸಾವಿನ ಪ್ರಕರಣಗಳನ್ನೂ ಮತ್ತು ಅಸಹಜ ಸಾವಿನ ಪ್ರಕರಣಗಳನ್ನೂ ಸಮಗ್ರವಾಗಿ ತನಿಖೆ ನಡೆಸಲು ಎಸ್.ಐ.ಟಿ ಗೆ ಸಂಪೂರ್ಣ ಅಧಿಕಾರ ನೀಡುವಂತೆ, ಅದು ಯಾವುದೇ ಬಗೆಯ ಒತ್ತಡದಿಂದ ದಿಕ್ಕುತಪ್ಪದ ಹಾಗೆ ಖಾತ್ರಿ ಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಬೇಕಿದೆ. ಶಿಕ್ಷೆಯ ಭಯವಿಲ್ಲದ ಕ್ರೌರ್ಯ ಮತ್ತು ಅಸಹಾಯಕ ಮೌನವನ್ನು ತೊಡೆದುಹಾಕಿ ಪ್ರತಿಯೊಬ್ಬ ಮಹಿಳೆಗೆ ಸತ್ಯ, ನ್ಯಾಯ ಮತ್ತು ಘನತೆಯ ಬದುಕನ್ನು ಖಾತ್ರಿಪಡಿಸಲು ನಾವು ಒಟ್ಟಾಗಿ ನಿಂತಿದ್ದೇವೆ ಎಂಬ ಸಂದೇಶವನ್ನು ಸಾರಲು  ಈ ಸಾರ್ವಜನಿಕ ಸಂವಾದ ಮತ್ತು ಆಂದೋಲನದ ಚಾಲನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದೂ ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.

More articles

Latest article