ಕಲಬುರಗಿ: ಕಲಬುರಗಿ ನಗರದಲ್ಲಿ ಅಘೋಷಿತ ಸ್ವಂಗಳಾದ ರಾಮ ನಗರ ಭಾಗ-2, ಸಂಜು ನಗರ ಭಾಗ-2 ಮತ್ತು ಯಾದಗಿರಿ ಅಘೋಷಿತ ಸ್ವಂಗಳಾದ ಮೌನೇಶ್ವರ ನಗರ, ಮದನಪೂರ ಭಾಗ-2, ತಪ್ಪಡಗೇರಾ, ಗಂಗಾನಗರ ಸ್ತರಗಳನ್ನು ಕೊಳಚೆ ಪ್ರದೇಶ ಎಂದು ಕೂಡಲೇ ಘೋಷಣೆ ಮಾಡಬೇಕು ಎಂದು ಸ್ಲಂ ಜನಾಂದೋಲನ ಸಂಘಟನೆಯ ಜಿಲ್ಲಾ ಘಟಕ ಆಗ್ರಹಪಡಿಸಿದೆ.
ಈ ಪ್ರದೇಶಗಳನ್ನು ಸ್ಲಂ ಎಂದು ಘೋಷಣೆ ಮಾಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರುಗಳಾದ ಶ್ರೀಧರ ಸಾರವಾಡ ಮತ್ತು ದೇವಿಂದ್ರ ಇವರನ್ನು ಅಮಾನತ್ತುಗೊಳಿಸಬೇಕು ಎಂದೂ ಒತ್ತಾಯಿಸಿದೆ.
ಈ ಪ್ರದೇಶಗಳ ನಿವಾಸಿಗಳು ಕಲಬುರಗಿ ಜಿಲ್ಲಾ ಅಧ್ಯಕ್ಷೆ ಗೌರಮ್ಮ ಮಾಣ, ಯಾದಗಿರಿ ಜಿಲ್ಲೆ ಅಧ್ಯಕ್ಷ ಹಣಮಂತ ಶಹಾಪೂರಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ನಂತರ ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷ ಶಾಸಕ ಪ್ರಸಾದ್ ಅಬ್ಬಯ್ಯ ಅವರಿಗೆ ಪತ್ರ ಬರೆದು ಆಗ್ರಹಪಡಿಸಿದ್ದಾರೆ.
ನಮ್ಮ ಮನವಿ ಕುರಿತು ಪ್ರಶ್ನಿಸಿದರೆ ಶ್ರೀಧರ ಸಾರವಾಡ ಮತ್ತು ದೇವಿಂದ್ರಕುಮಾರ ಬೇಜವಬ್ದಾರಿತನದ ಉತ್ತರ ನೀಡುತ್ತಾರೆ. ಅನ್ಯ ಇಲಾಖೆಯಿಂದ ನಿಯೋಜನೆ ಮೇಲೆ ಈ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರಿಗೆ ಕೊಳಚೆ ಪ್ರದೇಶಗಳ ನಿವಾಸಿಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ದಲಿತರು ಎಂದು ನಮ್ಮನ್ನು ಕೀಳಾಗಿ ಕಾಣುತ್ತಿದ್ದಾರೆ. ಇದುವರೆಗೂ ಇವರು ಒಂದೇ ಒಂದು ಸ್ಲಂಗೆ ಬೇಟಿ ನೀಡಿ ಅಲ್ಲಿನ ನಿವಾಸಿಗಳ ಬೇಡಿಕೆ ಮತ್ತು ಸಮಸ್ಯೆಗಳನ್ನು ಆಲಿಸಿರುವುದಿಲ್ಲ. ಸದಾ ಹಾರಿಕೆಯ ಉತ್ತರ ನೀಡುತ್ತಾರೆ. ಆದ್ದರಿಂದ ಇವರನ್ನು ಕೂಡಲೇ ಆಮಾನತು ಮಾಡಬೇಕು ಎಂದೂ ಒತ್ತಾಯಿಸಿದ್ದಾರೆ.
ಈ ಸ್ಲಂ ನಿವಾಸಿಗಳಿಗೆ ನ್ಯಾಯ ಒದಗಿಸದಿದ್ದರೆ ಮುಂದಿನ ದಿನಗಳಲ್ಲಿ ಬೆಂಗಳೂರಿನ ಕೊಳಚೆ ನಿರ್ಮೂಲನಾ ಮಂಡಳಿ ಎದುರು ಬೃಹತ್ ಪ್ರತಿಭಟನೆ ಮಾಡುವುದಾಗಿಯೂ ಸ್ಲಂ ಜನಾಂದೋಲನ ಸಂಘಟನೆ ಎಚ್ಚರಿಕೆ ನೀಡಿದೆ.