ಜಾತಿಗಣತಿ: ‘ಲಿಂಗಾಯತ ಧರ್ಮ’ ಎಂದೇ ಬರೆಸಲು ಜಾಗತಿಕ ಲಿಂಗಾಯತ ಮಹಾಸಭಾ ಕರೆ

Most read

ಬೆಂಗಳೂರು: ಲಿಂಗಾಯತರು ಹಿಂದೂಗಳೂ ಅಲ್ಲ, ವೀರಶೈವರೂ ಅಲ್ಲ. ಹಿಂದೂಗಳೂ ಅಲ್ಲದ ವೀರಶೈವರೂ ಅಲ್ಲದ ಲಿಂಗಾಯತರು ಜಾತಿವಾರು ಸಮೀಕ್ಷೆ ನಡೆಯುವಾಗ ತಮ್ಮ ಧರ್ಮವನ್ನು ‘ಲಿಂಗಾಯತ ಧರ್ಮ’ ಎಂದು ಬರೆಯಿಸುವಂತೆ ಜಾಗತಿಕ ಲಿಂಗಾಯತ ಮಹಾಸಭಾ ಮನವಿ ಮಾಡಿಕೊಂಡಿದೆ.

ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಜಾಮದಾರ ಅವರು  ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡುತ್ತಾ ವೀರಶೈವ-ಲಿಂಗಾಯತರು ಹಿಂದೂಗಳಲ್ಲ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಇತ್ತೀಚೆಗೆ ಕರೆ ನೀಡಿದೆ. ಲಿಂಗಾಯತರು ಹಿಂದೂಗಳಲ್ಲ ಎಂದು ಹೇಳಿರುವುನ್ನು ಸ್ವಾಗತಿಸುತ್ತೇವೆಯಾದರೂ ವೀರಶೈವ ಲಿಂಗಾಯತ ಧರ್ಮ ಎಂದು ಹೇಳಿರುವುದನ್ನು ಒಪ್ಪುವುದಿಲ್ಲ ಎಂದರು.

ಲಿಂಗಾಯತ ಮತ್ತು ವೀರಶೈವ ಎರಡೂ ವಿಭಿನ್ನ ಮತ್ತು ಬೇರೆ ಬೇರೆ. 1952ರಲ್ಲಿ ಹಿಂದೂ ಸಂಹಿತೆ ಕುರಿತು ಚರ್ಚೆ ನಡೆಯುವಾಗ  ಮಸೂದೆಯಲ್ಲಿದ್ದ ಲಿಂಗಾಯತ ಪದವನ್ನು ತೆಗೆದುಹಾಕಬೇಕು ಎಂಬ ವಿಷಯ ಮುನ್ನೆಲೆಗೆ ಬಂದಿತ್ತು. ಆದರೆ ಅದು ಸಾಧ್ಯವಾಗದೆ ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಎಂದೇ ಕಾನೂನಿನಲ್ಲಿ ಉಳಿದುಕೊಂಡಿತು ಎಂದು ಹೇಳಿದರು.

ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಎಂದು ಹೇಳುವ ಮೂಲಕ ತಮ್ಮ ಜನಸಂಖ್ಯೆಯನ್ನು ಹೆಚ್ಚಳ ಮಾಡಿಕೊಳ್ಳಲು ಕೆಲವರು ವಿಫಲ ಸಂಚು ರೂ‍ಪಿಸುತ್ತಿದ್ದಾರೆ. ಅವರ ಹುನ್ನಾರಕ್ಕೆ ಲಿಂಗಾಯತರು ಬಲಿ ಪಶುಗಳಾಗಬಾರದು. ಸಮೀಕ್ಷೆ ನಡೆಯುವಾಗ ಧರ್ಮದ ಕಾಲಂನಲ್ಲಿ ‘ಇತರೆ’ ಕಾಲಂ ಆಯ್ಕೆಮಾಡಿಕೊಂಡು ಅದರ ಮುಂದೆ ‘ಲಿಂಗಾಯತ ಧರ್ಮ’ ಎಂದು ಬರೆಯಿಸಬೇಕು. ಜತೆಗೆ, ಜಾತಿಯ ಕಾಲಂನಲ್ಲಿ ನಿಮ್ಮ ನಿಮ್ಮ ಜಾತಿಗಳ ಹೆಸರನ್ನು ಬರೆಯಿಸಬೇಕು ಎಂದು ವಿವರಿಸಿದರು.

ರಂಭಾಪುರಿ ಶ್ರೀಗಳ ಶಾಲಾ ದಾಖಲೆಗಳಲ್ಲಿ ಲಿಂಗಾಯತ ಎಂದು ಬರೆಯಿಸಲಾಗಿದೆ. ನಂತರ ಅವರು ಬೇಡ ಜಂಗಮ ಎಂದು ಬದಲಿಸಿಕೊಂಡರು. ಇದೀಗ ವೀರಶೈವ ಲಿಂಗಾಯತ ಎಂದು ಹೇಳಿಕೊಳ್ಳುತ್ತಿದ್ದಾರೆ. ಬಸವಣ್ಣನ ತತ್ವವನ್ನು ಒಪ್ಪದ ಪಂಚಾಚಾರ್ಯರನ್ನು ಲಿಂಗಾಯತರೂ ಒಪ್ಪುವುದಿಲ್ಲ ಎಂದು ಪ್ರತಿಪಾದಿಸಿದರು.

More articles

Latest article