ನೇಪಾಳ: ಒತ್ತಡಕ್ಕೆ ಮಣಿದು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಕೆಪಿ ಓಲಿ; ಮುಂದುವರೆದ ಪ್ರತಿಭಟನೆ; ವ್ಯಾಪಕ ಹಿಂಸಾಚಾರ

Most read

ಕಠ್ಮಂಡು: ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ ಕೊನೆಗೂ ರಾಜೀನಾಮೆ ನೀಡಿದ್ದಾರೆ. ನೇಪಾಳದಲ್ಲಿ ನಡೆಯುತ್ತಿರುವ ಹಿಂಸಾಚಾರ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಸೇನಾ ಮುಖ್ಯಸ್ಥರು ಪ್ರಧಾನಿ ಓಲಿ ಅವರನ್ನು ಭೇಟಿ ಮಾಡಿ ಚರಿಸಿದ ನಂತರ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ ರಾಜೀನಾಮೆ ಮತ್ತು ಭ್ರಷ್ಟಾಚಾರ ನಿಯಂತ್ರಣಕ್ಕೆ ಆಗ್ರಹಿಸಿ ದೇಶಾದ್ಯಂತ ಪ್ರತಿಭಟನೆ ತೀವ್ರಗೊಂಡಿತ್ತು. ವಿಶೇಷವಾಗಿ ಯುವ ಸಮುದಾಯ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದ್ದು, ಹಿಂಸಾಚಾರಕ್ಕೆ ತಿರುಗಿದೆ. ರಾಜಧಾನಿ ಕಠ್ಮಂಡು ಮಾತ್ರವಲ್ಲದೆ ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆಯ ಕಾವು ಹೆಚ್ಚಾಗಿತ್ತು.

ಸರ್ಕಾರದ ಸಚಿವರು ಮತ್ತು ರಾಜಕೀಯ ಪಕ್ಷಗಳ ಮುಖಂಡರ ನಿವಾಸಗಳ ಮೇಲೆ ಕಲ್ಲು ತೂರಾಟ ನಡೆದಿದ್ದು ಬೆಂಕಿ ಹಚ್ಚಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸಿಪಿಎನ್ ಎಂಸಿ ಅಧ್ಯಕ್ಷೆ ಪುಷ್ಪಾ ಕಮಲ್ ದಹಾಲ್, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪೃಥ್ವಿ ಸುಬ್ಬಾ ಗುರುಂಗ್, ಮಾಜಿ ಗೃಹ ಸಚಿವ ರಮೇಶ್ ಲೇಖಕ್ ಸೇರಿದಂತೆ ಅನೇಜ  ರಾಜಕೀಯ ಮುಖಂಡರ ಮನೆಗಳ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿದ್ದಾರೆ.

ಪ್ರತಿಭಟನೆಯನ್ನು ನಿಯಂತ್ರಿಸಲು ಸರ್ಕಾರ ಕಠ್ಮಂಡು ಸೇರಿದಂತೆ ನೇಪಾಳದ ಹಲವು ನಗರಗಳಲ್ಲಿ ನಿಷೇಧಾಜ್ಞೆ ಹೇರಿದೆ.  ಆದರೂ ಪ್ರತಿಭಟನಾಕಾರರು ದಾಳಿಯನ್ನು ಮುಂದುವರೆಸಿದ್ದಾರೆ.

ಸಾಮಾಜಿಕ ಜಾಲತಾಣ ನಿಷೇಧ ವಾಪಸ್:

ಸಾಮಾಜಿಕ ಜಾಲತಾಣ ವೇದಿಕೆಗಳನ್ನು ನಿಷೇಧಿಸುವ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಿರುವುದಾಗಿ ನೇಪಾಳ ಸರ್ಕಾರ ಘೋಷಿಸಿದೆ. ನಿಷೇಧ ತೆರವುಗೊಳಿಸುವಂತೆ ಆಗ್ರಹಿಸಿ ಭಾರಿ ಪ್ರತಿಭಟನೆ ನಡೆದ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಂಡಿದೆ.

ಸರ್ಕಾರ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿತ್ತು. ಇದರಿಂದ ಕೆರಳಿದ ಯುವಕರು ಸೋಮವಾರದಿಂದಲೇ ಪ್ರತಿಭಟನೆ ಆರಂಭಿಸಿದ್ದು, ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನೆಗೆ ಹೆದರಿದ ಸರ್ಕಾರ ಸಾಮಾಜಿಕ ಜಾಲತಾಣ ವೇದಿಕೆಗಳನ್ನು ನಿಷೇಧಿಸುವ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಿರುವುದಾಗಿ ನೇಪಾಳ ಸರ್ಕಾರ ಸೋಮವಾರ ತಡರಾತ್ರಿ ಘೋಷಿಸಿದೆ.

 ಮೇಲಿನ ನಿಷೇಧವನ್ನು ವಾಪಸ್ ಪಡೆಯಬೇಕು ಮತ್ತು ಭ್ರಷ್ಟಾಚಾರ ನಿಯಂತ್ರಿಸುವಂತೆ ಆಗ್ರಹಿಸಿ ಕಠ್ಮಂಡು ಸೇರಿದಂತೆ ನೇಪಾಳದ ವಿವಿಧೆಡೆ ಯುವಕರು ನಡೆಸಿದ ಬೃಹತ್‌ ಪ್ರತಿಭಟನೆ ಸೋಮವಾರ ಹಿಂಸಾಚಾರಕ್ಕೆ ತಿರುಗಿತ್ತು. ಈ

ನಿನ್ನೆ ನಡೆದ ಹಿಂಸಾಚಾರದಲ್ಲಿ 19 ಮಂದಿ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು ಮತ್ತು ಗಾಯಾಳುಗಳಿಗೆ ಉಚಿತ ಚಿಕಿತ್ಸೆ ಒದಗಿಸಲಾಗುವುದು ಎಂದೂ ಸರ್ಕಾರ ಭರವಸೆ ನೀಡಿದೆ.

ನೇಪಾಳ ಸರ್ಕಾರವು ಸೆ.5ರಂದು ಫೇಸ್‌ಬುಕ್‌, ವ್ಯಾಟ್ಸ್‌ ಆಪ್‌, ಯೂಟ್ಯೂಬ್‌, ಎಕ್ಸ್‌ ಸೇರಿದಂತೆ 26 ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿತ್ತು. ನಕಲಿ ಖಾತೆಗಳ ಮೂಲಕ ದ್ವೇಷ ಭಾಷಣ, ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು

 

More articles

Latest article