ಬೆಂಗಳೂರು: ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಸುವುದು ಪ್ರಜಾಪ್ರಭುತ್ವದ ಅತ್ಯುತ್ತಮ ಪದ್ಧತಿಗಳಲ್ಲಿ ಒಂದಾಗಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ ಅಭಿಪ್ರಾಯಪಟ್ಟಿದ್ದಾರೆ.
ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ವಿದ್ಯುನ್ಮಾನ ಮತಯಂತ್ರಗಳಿಂದ (EVM) ಬ್ಯಾಲೆಟ್ ಮತಪತ್ರಗಳಿಗೆ ಹಿಂತಿರುಗುವುದು ಹಿಮ್ಮುಖ ಕ್ರಮವಲ್ಲ ಏಕೆಂದರೆ ಅದು ಪ್ರಜಾಪ್ರಭುತ್ವದ ಅತ್ಯುತ್ತಮ ಪದ್ಧತಿಗಳಲ್ಲಿ ಒಂದಾಗಿದೆ ಎಂದಿದ್ದಾರೆ.
ಮತಪತ್ರಗಳ ಮೂಲಕ ಮತದಾನ ನಡೆಸಲು ಮತ್ತು ಎಣಿಕೆ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎನ್ನುವುದು ಸವಾಲಿನ ಕೆಲಸ ಅಲ್ಲ. ಮತಗಳ ಎಣಿಕೆಗೆ ಹೆಚ್ಚೆಂದರೆ 2-3 ಗಂಟೆ ಹೆಚ್ಚಾಗಬಹುದು. ವಾಸ್ತವವಾಗಿ, ಇದು ಪ್ರಜಾಪ್ರಭುತ್ವದ ಅತ್ಯುತ್ತಮ ಪದ್ಧತಿಗಳಲ್ಲಿ ಒಂದಾಗಿದೆ. ಹಾಗೆಯೇ ಮತಪತ್ರಗಳನ್ನು ಇವಿಎಂಗಳ ಮೂಲಕ ನಡೆಸಬೇಕೆ ಅಥವಾ ಮತಪತ್ರಗಳ ಮೂಲಕ ನಡೆಸಬೇಕೆ ಎಂದು ಸಂವಿಧಾನ ಎಲ್ಲಿಯೂ ಹೇಳಿಲ್ಲ. ಆಯ್ಕೆಯನ್ನು ಚುನಾವಣಾ ಆಯೋಗಗಳಿಗೆ ಬಿಡುತ್ತದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಚುನಾವಣಾ ಆಯೋಗ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಅದು ಕಾಯ್ದೆಗಳ ಪ್ರಕಾರ ನಡೆಯುತ್ತದೆ. ತನ್ನದೇ ಆದ ಚುನಾವಣಾ ಪಟ್ಟಿಯನ್ನು ಸಿದ್ಧಪಡಿಸಲು ಮತ್ತು ಬ್ಯಾಲೆಟ್ ಪೇಪರ್‌ಗೆ ಬದಲಾಯಿಸಲು ಅದು ಭಾರತದ ಚುನಾವಣಾ ಆಯೋಗದಿಂದ ಅನುಮತಿ ಪಡೆಯಬೇಕಾಗಿಲ್ಲ ಎಂದೂ ತಿಳಿಸಿದ್ದಾರೆ.
ಮತಯಂತ್ರಗಳು ಬರುವುದಕ್ಕೂ ಮುನ್ನ ಮತಪತ್ರಗಳನ್ನೇ ಬಳಸಲಾಗುತ್ತಿತ್ತು. ಇಂದಿಗೂ ಅಮೆರಿಕ ಸೇರಿದಂತೆ ಅನೇಕ ಅಭಿವೃದ್ಧಿ ಹೊಂದಿದ ದೇಶಗಳು ಮತಪತ್ರಗಳನ್ನೇ ಬಳಸುತ್ತಿವೆ ಎಂದೂ ತಿಳಿಸಿದ್ದಾರೆ.
ಮೊನ್ನೆ ನಡೆದ ರಾಜ್ಯ ಸರ್ಕಾರವು ಸಂಪುಟದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಡಿಯಲ್ಲಿರುವ ಐದು ಪಾಲಿಕೆಗಳು, ಪಂಚಾಯತ್ ಚುನಾವಣೆಗಳಲ್ಲಿ ಮತಯಂತ್ರಗಳ ಬದಲಾಗಿ ಮತಪತ್ರಗಳನ್ನು ಬಳಸಿ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಿದೆ.