ಬೆಂಗಳೂರು: ಈ ತಿಂಗಳ 7 ರಂದು ರಾತ್ರಿ ಸಂಭವಿಸುವ ಸಂಪೂರ್ಣ ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ನೋಡಿ ಆನಂದಿಸುವಂತೆ ಖಗೋಳ ವಿಜ್ಞಾನಗಳು ಕರೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ಖಗೋಲ ಭೌತವಿಜ್ಞಾನ ಸಂಸ್ಥೆಯ ನಿರುಜ್ ಮೋಹನ್ ರಾಮಾನುಜಂ, ಜವಾಹರಲಾಲ್ ನೆಹರು ತಾರಾಲಯ ನಿರ್ದೇಶ ಬಿ.ಆರ್.ಗುರುಪ್ರಸಾದ್, ಚಂದ್ರಗ್ರಹಣವು ಕರ್ನಾಟಕ ಸೇರಿದಂತೆ ದೇಶಾದ್ಯಂತ ಗೋಚರವಾಗಲಿದೆ. ಈ ಅಪರೂಪದ ಕ್ಷಣವನ್ನು ಬರಿಗಣ್ಣಿನಿಂದ ಸುಲಭವಾಗಿ ನೋಡಬಹುದಾಗಿದೆ. ಈ ನೆರಳಿನ ಆಟವನ್ನು ಕಣ್ಣುಂಬಿಕೊಳ್ಳುವ ಅಪೂರ್ವ ಕ್ಷಣವನ್ನು ಯಾರೂ ಕಳೆದುಕೊಳ್ಳಬಾರದು. ಮನೆಯಿಂದ ಹೊರಬಂದು ಈ ಗ್ರಹಣವನ್ನು ಆನಂದಿಸಬೇಕು ಎಂದರು.
ನಿರುಜ್ ಮೋಹನ್ ರಾಮಾನುಜಂ ಮಾತನಾಡಿ, ಸೂರ್ಯ ಮತ್ತು ಚಂದ್ರರ ನಡುವೆ ಭೂಮಿ ನಿಖರವಾಗಿ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಈ ಸಮಯದಲ್ಲಿ ಭೂಮಿಯ ನೆರಳು ಚಂದ್ರನ ಮೇಲೆ ಬೀಳುವುದರಿಂದ ಕೆಲಕಾಲ ಅದು ಮರೆಮಾಡಲ್ಪಡುತ್ತದೆ. ಭೂಮಿಯ ನೆರಳಿನಲ್ಲಿ ಎರಡು ಭಾಗಗಳಿರುತ್ತವೆ – ಒಳಗಿನ ಗಾಢ ಕತ್ತಲೆಯ ಭಾಗವನ್ನು ಅಂಬ್ರಾ ಎಂದು ಕರೆಯಲಾಗುತ್ತದೆ. ಹೊರಗಿನ ಮಬ್ಬಾದ ಭಾಗವನ್ನು ಪೆನಂಬ್ರಾ ಎಂದು ಕರೆಯಲಾಗುತ್ತದೆ. ಚಂದ್ರನು ಅಂಬ್ರಾ ನೆರಳಿನೊಳಗೆ ಪ್ರವೇಶಿಸುವಾಗ ಅಥವಾ ಅದನ್ನು ತೊರೆಯುವಾಗ, ನಾವು ಪಾರ್ಶ್ವ ಚಂದ್ರಗ್ರಹಣವನ್ನು ಬರಿಗಣ್ಣಿನ ಮೂಲಕ ಸುಲಭವಾಗಿ ಗಮನಿಸಬಹುದು. ಚಂದ್ರನು ಸಂಪೂರ್ಣವಾಗಿ ಅಂಬ್ರಾ ನೆರಳಿನೊಳಗೆ ಪ್ರವೇಶಿಸಿದಾಗ, ಸಂಪೂರ್ಣ ಗ್ರಹಣವಾಗಿ ಚಂದ್ರ ತಾಮ್ರವರ್ಣದ ಅಥವಾ ಗಾಢ ಕೆಂಪು ಬಣ್ಣದಲ್ಲಿ ಕಾಣಿಸುಕೊಳ್ಳುತ್ತದೆ. ಪೆನಂಬ್ರಾ ನೆರಳಿನೊಳಗೆ ಚಂದ್ರ ಇರುವಾಗ, ಅದರ ಪ್ರಕಾಶದಲ್ಲಿ ಸ್ವಲ್ಪ ಕಡಿಮೆಯಾದರೂ ಅದನ್ನು ಬರಿಗಣ್ಣಿನಿಂದ ಗುರುತಿಸುವುದು ಕಷ್ಟ ಎಂದರು.
ಸೆ. 7ರಂದು ರಾತ್ರಿ 9:57 ಕ್ಕೆ ಚಂದ್ರ, ಭೂಮಿಯ ಗಾಢ ನೆರಳಾದ ಅಂಬ್ರಾದೊಳಗೆ ಪ್ರವೇಶಿಸಲು ಆರಂಭಿಸುತ್ತದೆ, ಇದು ಪಾರ್ಶ್ವ ಚಂದ್ರಗ್ರಹಣದ ಆರಂಭ. ನಂತರ ಚಂದ್ರನ ಹೆಚ್ಚಿನ ಭಾಗ ಭೂಮಿಯ ನೆರಳಿನಿಂದ ಆವರಿಸಲ್ಪಡುತ್ತಾ, 11:01ಕ್ಕೆ ಅದು ಸಂಪೂರ್ಣವಾಗಿ ಅಂಬ್ರಾದೊಳಗೆ ಸೇರುತ್ತದೆ. ಸಂಪೂರ್ಣ ಚಂದ್ರಗ್ರಹಣವು 82 ನಿಮಿಷಗಳವರೆಗೆ, ಅಂದರೆ 12:23ರವರೆಗೆ, ಮುಂದುವರಿಯುತ್ತದೆ ಎಂದು ವಿವರಿಸಿದರು.
ಬಳಿಕ ಚಂದ್ರನು ನಿಧಾನವಾಗಿ ಅಂಬ್ರಾದಿಂದ ಹೊರಬರಲಾರಂಭಿಸಿ, ಈ ಪಾರ್ಶ್ವ ಹಂತವು 1:26ರವರೆಗೆ ಮುಂದುವರಿಯುತ್ತದೆ. ಪಾರ್ಶ್ವಛಾಯಾ ಹಂತವು ರಾತ್ರಿ 8:58ಕ್ಕೆ ಆರಂಭವಾಗಿ, ಬೆಳಗಿನ ಜಾವ 2:25ಕ್ಕೆ ಅಂತ್ಯಗೊಳ್ಳುತ್ತದೆ. ಸಂಪೂರ್ಣ ಚಂದ್ರಗ್ರಹಣದ ಹಂತದಲ್ಲಿ, ಚಂದ್ರನು ಭೂಮಿಯ ನೆರಳಿನೊಳಗೆ ಪ್ರವೇಶಿಸಿದಾಗ ಅದು ಆಕಾಶದಲ್ಲಿ ಕಾಣಿಸದೆ ಹೋಗುತ್ತದೆ ಎಂದು ನಾವು ಭಾವಿಸಬಹುದು. ಆದರೆ ಹಾಗಾಗದೆ, ಅದು ಗಾಢ ಕೆಂಪು ಅಥವಾ ತಾಮ್ರವರ್ಣದಲ್ಲಿ ಗೋಚರಿಸುತ್ತದೆ ಎಂದು ಹೇಳಿದರು.
ಚಂದ್ರಗ್ರಹಣವನ್ನು ವೀಕ್ಷಿಸಲು ಯಾವುದೇ ವಿಶೇಷ ಸಾಧನಗಳ ಅಗತ್ಯವಿಲ್ಲ. ಬರಿಗಣ್ಣಿನಿಂದ ನೋಡಲು ಇದು ಸಂಪೂರ್ಣ ಸುರಕ್ಷಿತ. ಆದರೆ ದೂರದರ್ಶಕ ಅಥವಾ ದುರ್ಬೀನನ್ನು ಬಳಸಿದರೆ ವೀಕ್ಷಣೆಯ ಅನುಭವ ಇನ್ನಷ್ಟು ಸುಂದರವಾಗುತ್ತದೆ. ಗ್ರಹಣವೆಂಬುದು ನೆರಳಿನ ಆಟ ಮಾತ್ರ. ಇದನ್ನು ಭಾರತದಲ್ಲಿ ಆರ್ಯಭಟನ ಕಾಲದಲ್ಲೇ ತಿಳಿಯಲಾಗಿತ್ತು. ಇದರಿಂದ ಮನುಷ್ಯ, ಪ್ರಾಣಿ, ಸಸ್ಯ ಅಥವಾ ಆಹಾರಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ. ಆದ್ದರಿಂದ ಜನರು ಹೊರಗೆ ಬಂದು ಗ್ರಹಣವನ್ನು ವೀಕ್ಷಿಸುವಾಗ ಆಹಾರ ಸೇವಿಸುವುದೂ ಸಂಪೂರ್ಣ ಸುರಕ್ಷಿತ ಎಂದು ಅವರು ವಿವರಣೆ ನೀಡಿದರು.