ಮತಯಂತ್ರಕ್ಕೆ ಬದಲಾಗಿ ಬ್ಯಾಲೆಟ್‌ ಪೇಪರ್;‌ ಸರ್ಕಾರ ಕೊಟ್ಟ ಕಾರಣಗಳೇನು?

Most read

ಬೆಂಗಳೂರು: ಇತೀಚೆಗೆ ಕರ್ನಾಟಕದಲ್ಲಿ ಮತದಾರರ ಪಟ್ಟಿ ತಯಾರಿಕೆಯಲ್ಲಿಯೇ ಬಹು ದೊಡ್ಡ  ವ್ಯತ್ಯಾಸಗಳಾಗಿದ್ದು, ಭಾರಿ ಪ್ರಮಾಣದಲ್ಲಿ ದೂರುಗಳು ಕೇಳಿಬಂದಿವೆ. ಇಲ್ಲದ ಮತದಾರರನ್ನು ಸೇರಿಸಿದ್ದಾರೆ ಎಂಬ ಬಗ್ಗೆ ಕಳೆ ಎಂದು ತಿಂಗಳಿನಿಂದ ಚರ್ಚೆಯಾಗುತ್ತಿದೆ. ಈ ನಿಟ್ಟಿನಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ) ಬಗ್ಗೆ ವಿಶ್ವಾಸಾರ್ಹತೆ ಕಡಿಮೆಯಾಗುತ್ತಿದೆ.  ಈ ಹಿನ್ನೆಲೆಯಲ್ಲಿ ಜನರ ಮನಸ್ಥಿತಿ ಹಾಗೂ ಅಭಿಪ್ರಾಯದ ಹಿನ್ನೆಲೆಯಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಮೂಲಕ ಚುನಾವಣೆ ನಡಡಸಬೇಕು ಎಂದು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್‌ ಕೆ ಪಾಟೀಲ್‌ ವಿವರ ನೀಡಿದರು.

ಚುನಾವಣಾ ಆಯೋಗ ಹೇಗಿರಬೇಕು , ಏನು ಮಾಡಬೇಕು ಎಂಬ ಬಗ್ಗೆ ಕಾನೂನು ಇದ್ದು, ರಾಜ್ಯ ರಚಿಸಿರುವ ಕಾನೂನಿನ ಅನ್ವಯ ಅದು ಕಾರ್ಯನಿರ್ವಹಿಸುತ್ತದೆ. ಮುಂದಿನ 15 ದಿನಗಳಲ್ಲಿ ಅಗತ್ಯವಿರುವ ಕಾನೂನು ಬದಲಾವಣೆಗಳನ್ನು ಮಾಡಲಾಗುವುದು.  ಯಾವುದೇ ಬದಲಾವಣೆಯಾದರೂ ಅದು ಸಚಿವ ಸಂಪುಟಕ್ಕೆ ಬಂದು ರಾಜ್ಯಪಾಲರಿಗೆ ಹೋಗಬೇಕು ಎಂದು ಅವರು ಕಾನೂನು ತಿಳಿಸಿದರು.

ಚುನಾವಣೆಗಳಿಗೆ ಹೊಸ ನಿಯಮಗಳು:

ರಾಜ್ಯ ಚುನಾವಣಾ ಆಯೋಗ ಸ್ವಾತಂತ್ರ ಸಂಸ್ಥೆಯಾಗಿದ್ದು, ಚುನಾವಣಾ ಪಟ್ಟಿ ತಯಾರು ಮಾಡುವ ಜವಾಬ್ದಾರಿ ಅದರದ್ದೇ ಆಗಿದೆ.  ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ 165 ನೇ ಪರಿಚ್ಛೇಧ ಹಾಗೂ ಮುನಿಸಿಪಾಲಿಟಿ ಕಾಯ್ದೆಯ 14 ನೇ ಪರಿಚ್ಛೇಧದಡಿ ಮತ್ತು ಜಿಬಿಎ ಕಾಯ್ದೆಯ  35 ಪರಿಚ್ಛೇಧದಡಿ ಚುನಾವಣೆಗಳು ಹೇಗೆ ನಡೆಯಬೇಕೆಂದು ವಿವರಿಸುತ್ತವೆ. ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಈ ಹೊಸ ನಿಯಮಗಳನ್ನು

ರಾಜ್ಯ ಚುನಾವಣಾ ಆಯೋಗಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಮತದಾರರ ಪಟ್ಟಿಯನ್ನು ಸಿದ್ದಪಡಿಸಲು ಅಗತ್ಯ ಪರಿಷ್ಕರಣೆ ಮಾಡಲು ಅಗತ್ಯ ಕಾನೂನು ತಿದ್ದುಪಡಿ ಮತ್ತು ನಿಯಮಾವಳಿ ರಚನೆ ಮಾಡಲು ಹಾಗೂ ಮುಂಬರುವ ಎಲ್ಲ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಇವಿಎಂ ವ್ಯವಸ್ಥೆ ಬದಲಿಗೆ ಮತಪತ್ರ(ಬ್ಯಾಲೆಟ್ ಪೇಪರ್)ದ ಮೂಲಕ ಚುನಾವಣೆಯನ್ನು ನಡೆಸಲು ಶಿಫಾರಸ್ಸು ಮಾಡಲು ರಾಜ್ಯ ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ.

 ಈ ಹಿಂದೆ ವಿಧಾನಸಭೆ ಚುನಾವಣೆಯ ಡಾಟಾವನ್ನು ಬಳಸಿಕೊಳ್ಳಲಾಗುತ್ತಿತ್ತು.  ಈಗ ಮತದಾರ ಪಟ್ಟಿಯನ್ನು ಪರಿಷ್ಕರಣೆ, ತಿದ್ದುಪಡಿ, ಪುನರ್ರಚನೆ ಮಾಡಿ, ಉತ್ತಮ ಗುಣಮಟ್ಟದ ಮತದಾರರ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ತಯಾರು ಮಾಡಿಕೊಳ್ಳಲು ಅನುಕೂಲವಾಗುವಂತೆ ಸೂಕ್ತ ಶಿಫಾರಸ್ಸನ್ನು ಮಾಡಲು ಹಾಗೂ ಚುನಾವಣಾ ಪದ್ಧತಿಯನ್ನೂ ರಾಜ್ಯ ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. ಈ ಪ್ರಕ್ರಿಯೆಯಲ್ಲಿ ಅಗತ್ಯವಾದ ಕೆಲವು ಕಾನೂನು ಹಾಗೂ ನಿಯಮಾವಳಿಗಳನ್ನು ತಿದ್ದುಪಡಿಗಳನ್ನು ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಸಚಿವ ಸಂಪುಟದ ಇತರ ನಿರ್ಣಯಗಳು:

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ  ಮೇಲೆ ಮಾಡಿರುವ ಆರೋಪಗಳನ್ನು ಕುರಿತು ವರದಿ ನೀಡಲು ಸರ್ಕಾರ ನ್ಯಾ. ಪಿ.ಎನ್ ದೇಸಾಯಿ ಅವರ ಏಕವ್ಯಕ್ತಿ ಆಯೋಗವನ್ನು ನೇಮಕ ಮಾಡಿತ್ತು.  ಆಯೋಗವು ಎರಡು ಸಂಪುಟಗಳಲ್ಲಿ ತನ್ನ ವರದಿಯನ್ನು ಸಲ್ಲಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಅವರ ಕುಟುಂಬದ  ಮೇಲೆ ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದೆ. ಕೆಲವು ಅಧಿಕಾರಿಗಳ ಮೇಲೆ  ಹಲವಾರು ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ. ಈ ವರದಿಯನ್ನು ಸರ್ಕಾರ ಒಪ್ಪಿದೆ.

ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ ದಾಸ್  ಅವರು ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 2019 ರಿಂದ 2023 ರವರೆಗೆ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತಾಗಿ  ತನಿಖೆ ಮಾಡಿ ವರದಿಯನ್ನು  ಸಲ್ಲಿಸಿದ್ದಾರೆ.  ಈ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸಲು ನಿರ್ಧರಿಸಲಾಗಿದೆ.

ರೈತರು, ವಿದ್ಯಾರ್ಥಿಗಳು, ಕನ್ನಡ ಹೋರಾಟಗಾರರ ಮೇಲಿದ್ದ ಅರವತ್ತು ಪ್ರಕರಣಗಳನ್ನು ಸರ್ಕಾರ ಹಿಂಪಡೆದಿದೆ ಎಂದು ಕಾನೂನು ಸಚಿವರು ತಿಳಿಸಿದರು.

More articles

Latest article