ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಭೀಕರ ಮಳೆ ಸುರಿಯುತ್ತಿದ್ದು, ಲಕ್ಷಾಂತರ ಜನತೆ ತೊಂದರೆಗೀಡಾಗಿದ್ದಾರೆ. ಆದರೆ ಆ ದೇಶದ ರಕ್ಷಣಾ ಸಚಿವ ಖಾವಾಜ್ ಆಸಿಫ್, ಮಳೆಯನ್ನು ಆಶೀರ್ವಾದ ಎಂದು ಪರಿಗಣಿಸಬೇಕು. ಮಳೆಯ ನೀರನ್ನು ಚರಂಡಿಗಳಲ್ಲಿ ಹರಿದು ಬಿಡುವುದಕ್ಕೆ ಬದಲಾಗಿ ಮಳೆಯ ನೀರನ್ನು ಜನರು ಟಬ್ ಮತ್ತು ಬಕೆಟ್ ಗಳಲ್ಲಿ ಸಂಗ್ರಹಿಸಿಡಬೇಕು ಎಂದು ಸಲಹೆ ನೀಡಿದ್ದಾರೆ.
ಪಾಕಿಸ್ತಾನದ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿರುವ ಅವರು ಪ್ರವಾಹ ಬರುತ್ತಿದೆ ಎಂದು ಪ್ರತಿಭಟಸಲು ಮುಂದಾಗಬಾರದು. ಬದಲಾಗಿ ಪ್ರವಾಹದ ನೀರನ್ನು ಮನೆಗಳಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಇದರಿಂದ ನೀರಿನ ಸಮಸ್ಯೆ ಕಡಿಮೆಯಾಗುತ್ತದೆ ಎಂದು ಸಲಹೆ ನೀಡಿದ್ದಾರೆ.
ಬೃಹತ್ ಅಣೆಕಟ್ಟುಗಳನ್ನು ನಿರ್ಮಿಸಲು ಹತ್ತಾರು ವರ್ಷ ಕಾಯಬೇಕಾಗುತ್ತದೆ. ಆದ್ದರಿಂದ ಸಣ್ಣ ಸಣ್ಣ ಯೋಜನೆಗಳನ್ನು ನಿರ್ಮಿಸಿದರೆ ಸಹಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅತಿಯಾದ ಮಳೆಯಿಂದ ಉಂಟಾದ ಪ್ರವಾಹಕ್ಕೆ 2 ಲಕ್ಷಕ್ಕೂ ಅಧಿಕ ಜನರು ಸಿಲುಕಿದ್ದು ಸಂಕಷ್ಟ ಅನುಭವಿಸುತ್ತಿದ್ದಾರೆ. ಸಾವಿರಾರು ಮಂದಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ರಕ್ಷಣಾ ಸಚಿವರ ಈ ಉಚಿತ ಸಲಹೆಯಿಂದ ನಾಗರೀಕರು ಮತ್ತಷ್ಟು ವ್ಯಗ್ರರಾಗಿದ್ದಾರೆ. ಈ ವರ್ಷದ ಮಳೆಗಾಲದಲ್ಲಿ ಆಗಸ್ಟ್ .31ರವರೆಗೆ ಸಂಭವಿಸಿದ ಮಳೆಗೆ 854 ಮಂದಿ ಮೃತಪಟ್ಟಿದ್ದಾರೆ.