ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ-1 ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿಯನ್ನು 57ನೇ ಸೆಷನ್ಸ್ ಕೋರ್ಟ್ ಇಂದು ವಜಾಗೊಳಿಸಿದೆ. ನ್ಯಾಯಾಧೀಶ ಐಪಿ ನಾಯಕ್ ಅವರು ಜಾಮೀನು ಅರ್ಜಿಯ ವಿಚಾರಣೆ ನಡೆಸಿದರು.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್ ವಜಾ ಮಾಡಿದ ಕಾರಣ ಏಳು ಮಂದಿ ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇತ್ತೀಚೆಗಷ್ಟೇ ಪ್ರಕರಣದ ನಂಬರ್ 1 ಆರೋಪಿ ಪವಿತ್ರಾ ಗೌಡ ಜಾಮೀನು ಕೋರಿ ಅರ್ಜಿ ಹಾಕಿದ್ದರು ಆದರೆ ಅರ್ಜಿ ವಜಾ ಆಗಿದೆ.
ತಮ್ಮಿಂದ ರೇಣುಕಾ ಸ್ವಾಮಿ ನಿಧನ ಹೊಂದಿಲ್ಲ.ತಾನೊಬ್ಬ ಮಹಿಳೆ ಹಾಗೂ ಸಿಂಗಲ್ ಮದರ್ ಆಗಿರುತ್ತೇನೆ. ಮಗಳು ಮತ್ತು ತಾಯಿಯ ಆರೈಕೆ ಮಾಡಬೇಕು ಎಂಬ ಕಾರಣಗಳನ್ನು ಉಲ್ಲೇಖಿಸಿ ಸೆಷನ್ಸ್ ಕೋರ್ಟ್ ನಲ್ಲಿ ಪವಿತ್ರಾ ಗೌಡ, ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಇವರ ಯಾವುದೇ ಕಾರಣಗಳನ್ನು ಪರಿಗಣಿಸದ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಪವಿತ್ರಾ ಗೌಡ ಅವರಿಗೆ ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಸುವ ಅವಕಾಶ ಇದ್ದು ಜಾಮೀನಿಗೆ ಅರ್ಜಿ ಸಲ್ಲಿಸುತ್ತಾರೆಯೇ ಎಂದು ಕಾದು ನೋಡಬೇಕಿದೆ.