ರಾಯ್ಪುರ(ಛತ್ತೀಸಗಢ): ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದೇನೆ ಎಂದು ತಮ್ಮ ವಿರುದ್ಧ ದಾಖಲಾಗಿರುವ ಎಫ್ ಐ ಆರ್ ಗೆ ಪ್ರತಿಕ್ರಿಯೆ ನೀಡಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ‘ಮೂರ್ಖರಿಗೆ ಭಾಷಾ ವೈಶಿಷ್ಟ್ಯಗಳು ಅರ್ಥವಾಗುವುದಿಲ್ಲ’ ಎಂದು ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದ್ದಾರೆ.
ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಮೊಯಿತ್ರಾ ವಿರುದ್ಧ ಛತ್ತೀಸಗಢದ ರಾಯ್‌ಪುರದಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.
ಮೂರ್ಖರಿಗೆ ಭಾಷಾವೈಶಿಷ್ಟ್ಯಗಳು ಅರ್ಥವಾಗದಿರುವುದು ದುರಂತವೇ ಸರಿ. ಆದ್ದರಿಂದಲೇ ನಾವು ಹೀಗಿದ್ದೇವೆ. ತಲೆಗಳು ಉರುಳುತ್ತವೆ ಎಂದು ಹೇಳಿದರೆ ನೀವು ನಿಜವಾಗಿಯೂ ಯಾರೊಬ್ಬರ ತಲೆಯನ್ನು ಕತ್ತರಿಸುವುದಿಲ್ಲ. ಆಕ್ರೋಶದಲ್ಲಿ ರೂಪಕವಾಗಿ ಹೀಗೆ ಬಳಸು
ತ್ತೇವೆ. ಒಬ್ಬರ ಹೊಣೆಗಾರಿಕೆಯನ್ನು ಬಯಸುವುದಕ್ಕಾಗಿ ಭಾಷಾವೈಶಿಷ್ಟ್ಯ ರೂಪದಲ್ಲಿ ನಾನು ಬಳಸಿದ್ಧೇನೆ. ಗೂಗಲ್ ಅನುವಾದವನ್ನು ಬಳಸಿದಾಗ ತಪ್ಪು ಅರ್ಥಗಳು ಸಂಭವಿಸುತ್ತವೆ. ರಾಯ್ ಪುರ ಪೊಲೀಸರು ಗೂಗಲ್ ಮೊರೆ ಹೋಗಿದ್ದಕ್ಕಾಗಿ ಹೀಗಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ವಿರುದ್ಧ ನ್ಯಾಯಾಲಯಕ್ಕೆ ಹೋಗುವುವುದಾಗಿ ಹೇಳಿದ ಅವರು ಆಗ ಪೊಲೀಸರ ಮುಖಕ್ಕೆ ಮತ್ತೊಂದು ಕಪಾಳಮೋಕ್ಷವಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ಸ್ಥಳೀಯ ನಿವಾಸಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಮಾನಾ ಪೊಲೀಸ್ ಠಾಣೆಯಲ್ಲಿ ಮೊಯಿತ್ರಾ ಅವರ ವಿರುದ್ಧ ಬಿಎನ್‌ಎಸ್ ಸೆಕ್ಷನ್ 196 (ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವುದು) ಮತ್ತು 197 (ರಾಷ್ಟ್ರೀಯ ಏಕೀಕರಣಕ್ಕೆ ಪೂರ್ವಾಗ್ರಹ ಪೀಡಿತವಾದ ಆರೋಪಗಳು, ಪ್ರತಿಪಾದನೆಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.