ಮೆಟ್ರೋಪಾಲಿಟನ್ ನಗರಗಳಲ್ಲಿರುವ ಉದ್ಯೋಗಿಗಳು ಸಾಲದ ಕೂಪದಲ್ಲಿ ಸಿಕ್ಕಿಕೊಂಡು ನಗರವನ್ನು ಬಿಡಲಾಗದೆ, ಮರಳಿ ತಮ್ಮೂರಿಗೆ ಹೋಗಲಾಗದೆ, ಒಟ್ಟಿನಲ್ಲಿ ಎಲ್ಲೂ ಸಲ್ಲದವರಂತೆ ಬದಲಾಗಿರುವುದು ಇಂದಿನ ಬಹುದೊಡ್ಡ ಸತ್ಯಗಳಲ್ಲೊಂದು. ಈ ನಿಟ್ಟಿನಲ್ಲಿ ಮೆಟ್ರೋಕಥನಗಳು ನಮ್ಮ ನಗರಗಳು ನಡೆದುಬಂದ ದಾರಿಯನ್ನು ದಾಖಲಿಸಿಡುವ ದಾಖಲೆಯೂ ಹೌದೆನ್ನಬಹುದು – ಪ್ರಸಾದ್ ನಾಯ್ಕ್, ದೆಹಲಿ.
ನಾನೊಬ್ಬ ಸೆಮಿ-ಅರ್ಬನ್ ವ್ಯಕ್ತಿಯೆಂದು ಸಾಮಾನ್ಯವಾಗಿ ಹೇಳುತ್ತಿರುತ್ತೇನೆ.
ಒಮ್ಮೆ ನಾನು ಬರೆದಿರುವ ಕತೆಗಳ ಬಗ್ಗೆ ಚರ್ಚೆಯೊಂದು ನಡೆಯುತ್ತಿದ್ದಾಗ “ನಿಮ್ಮ ಬಹುತೇಕ ಕತೆಗಳೇಕೆ ಸದಾ ನಗರಗಳ ಸುತ್ತ ಗಿರಕಿ ಹೊಡೆಯುತ್ತಿರುತ್ತವೆ?” ಎಂದು ಸ್ನೇಹಿತರೊಬ್ಬರು ಕೇಳಿದ್ದರು. ನಾನಾಗ ಇದೇ ಮಾತನ್ನು ಅವರಿಗೆ ಹೇಳಿದ್ದೆ. ಇತ್ತೀಚೆಗೆ ಡಾ. ಯು. ಆರ್. ಅನಂತಮೂರ್ತಿಯವರ ಭಾಷೆ-ಸಾಹಿತ್ಯ-ವ್ಯಕ್ತಿ-ಚಳುವಳಿ ಇತ್ಯಾದಿಗಳ ಬಗ್ಗೆ ದಾಖಲಿಸಿರುವ “ಸಾಹಿತ್ಯ ಸಹವಾಸ” ಎಂಬ ಕೃತಿಯೊಂದರಲ್ಲಿ ತೇಜಸ್ವಿಯವರ ಬಗ್ಗೆ ಅನಂತಮೂರ್ತಿಯವರು ಗುರುತಿಸಿದ ಸಂಗತಿಯೊಂದು ನನ್ನ ಗಮನವನ್ನು ಸೆಳೆದಿತ್ತು. ಚಿತ್ತಾಲರು, ಕಾಯ್ಕಿಣಿಯವರು ಹೇಗೆ ಮುಂಬೈ ನಗರದ ಬಗ್ಗೆ ಹೆಚ್ಚು ಬರೆದರೋ, ಹಾಗೆಯೇ ಪೂರ್ಣಚಂದ್ರ ತೇಜಸ್ವಿಯವರು ಅತ್ತ ಹಳ್ಳಿಯೂ ಅಲ್ಲದ, ಇತ್ತ ನಗರವೂ ಅಲ್ಲದ ಊರುಗಳ ಕಥನಗಳನ್ನು ತಮ್ಮ ಸಾಹಿತ್ಯದಲ್ಲಿ ಬಹಳ ಸ್ವಾರಸ್ಯಕರವಾಗಿ ತಂದಿದ್ದಾರೆ ಎನ್ನುತ್ತಾರೆ ಅನಂತಮೂರ್ತಿ. ತೇಜಸ್ವಿಯವರ ಬರವಣಿಗೆಯಲ್ಲಿ ಬರುವ ಶಿವಮೊಗ್ಗ, ಮೂಡಿಗೆರೆ, ಅರಸೀಕೆರೆ ಇತ್ಯಾದಿ ಊರುಗಳ ಬಗ್ಗೆಯೇ ಅನಂತಮೂರ್ತಿಯವರು ಇಲ್ಲಿ ಪ್ರಸ್ತಾಪಿಸುತ್ತಿರುವುದು. ಒಂದರ್ಥದಲ್ಲಿ ಮೇಲೆ ಹೇಳಿದಂತೆ ಸೆಮಿ-ಅರ್ಬನ್ ಕಥನಗಳು.
ಹಾಗೆ ನೋಡಿದರೆ ಆಯಾ ಮಹಾನಗರಗಳಲ್ಲಿರುವ ಪತ್ರಕರ್ತರು ತಾವಿರುವ ಶಹರಗಳ ಬಗ್ಗೆ ಕನ್ನಡದಲ್ಲಿ ಸಾಕಷ್ಟು ಲೇಖನಗಳನ್ನು ಬರೆದಿದ್ದಾರೆ. ಬರಹಗಾರರು ಅಂಕಣಗಳನ್ನು, ಪ್ರವಾಸ ಕಥನಗಳನ್ನು, ಅನುಭವ ಕಥನಗಳನ್ನು ಬರೆದು ಪ್ರಕಟಿಸಿದ್ದಾರೆ. ಆದರೆ ಕನ್ನಡದ ಸಾಹಿತ್ಯಲೋಕದಲ್ಲಿ ಶಹರಗಳ ಕತೆಗಳು ಅಷ್ಟಾಗಿ ಬಂದಿದ್ದು, ಬಂದಿದ್ದರೂ ಓದುಗರ ವಲಯದಲ್ಲಿ ಹೇಳಿಕೊಳ್ಳುವ ಮಟ್ಟಿಗೆ ಜನಪ್ರಿಯವಾಗಿದ್ದು ಸಾಕಷ್ಟು ಕಡಿಮೆಯೇ. ಚಿತ್ತಾಲರು, ಕಾಯ್ಕಿಣಿ, ಜೋಗಿಯವರಂತಹ ಲೇಖಕರನ್ನು ಮತ್ತು ಇತ್ತೀಚೆಗಿನ ಕೆಲ ಸಮಕಾಲೀನ, ಯುವಬರಹಗಾರರನ್ನು ಬಿಟ್ಟರೆ ಇಂದಿಗೂ ನಮ್ಮ ಪತ್ರಿಕೆಗಳಲ್ಲಿ ಪ್ರಕಟವಾಗುವ ಬಹುತೇಕ ಕತೆಗಳು ಗ್ರಾಮೀಣ ಭಾಗದಲ್ಲೇ ನಡೆಯುವಂಥವುಗಳು. ಇದು ಹಳ್ಳಿಗಳ ಕತೆಗಳು ಮೇಲೋ ಅಥವಾ ನಗರ-ಮಹಾನಗರಗಳ ಕತೆಗಳು ಮೇಲೋ ಎಂಬ ಚರ್ಚೆಯಲ್ಲ. ಬದಲಾಗಿ ಶಹರಗಳು ನಮ್ಮ ಕತೆಗಾರರನ್ನೇಕೆ ಅಷ್ಟು ಕಾಡಿಲ್ಲ ಎಂಬ ನಿರುಪದ್ರವಿ ಕುತೂಹಲವಷ್ಟೇ!
“ಅಷ್ಟಕ್ಕೂ ಶಹರಗಳಲ್ಲಿ ಕತೆಗಳಾಗಿ ಬರುವಂಥದ್ದು ಅಂಥದ್ದೇನು ನಡೆಯುತ್ತವೆ?”, ಎಂದು ಹಲವರು ಕೇಳುತ್ತಿರುತ್ತಾರೆ. ಸಾಹಿತ್ಯವಲಯದ ಕೆಲ ಗೋಷ್ಠಿಗಳಲ್ಲೂ ಇಂತಹ ಪ್ರಶ್ನೆಗಳನ್ನು ನಾನು ಆಗಾಗ ಕೇಳಿದ್ದಿದೆ. ಮಹಾನಗರಗಳಲ್ಲಿ ವೇಗ-ಅದ್ದೂರಿತನಗಳಿರುತ್ತವೆಯೇ ಹೊರತು ಬದುಕಲ್ಲ ಎಂಬ ಕಲ್ಪನೆಯೂ ಇದಕ್ಕೆ ಕಾರಣವಿರಬಹುದು. ಅಸಲಿಗೆ ಕೆಲವು ಸಂಗತಿಗಳ ಬಗ್ಗೆ ನಾವು ನಮ್ಮದೇ ಆದ ಕಲ್ಪನೆಗಳನ್ನು, ಪೂರ್ವಾಗ್ರಹಗಳನ್ನು ಸಾಕಿಕೊಂಡಿರುತ್ತೇವೆ. ನಾವು ಎದುರಾಗುವ ಸಂಗತಿಗಳನ್ನು ಕೂಡ ಆ ಚೌಕಟ್ಟಿಗೆ “ಫಿಟ್” ಮಾಡಲು ಹೇಗ್ಹೇಗೋ ಪ್ರಯತ್ನಿಸುತ್ತೇವೆ. ಒಂದು ಹಂತದಲ್ಲಿ ಅದು ಕಷ್ಟವಾದಾಗ ಸತ್ಯವನ್ನು ಒಪ್ಪಿಕೊಳ್ಳುವುದೂ ಕೂಡ ಕೊಂಚ ಕಷ್ಟವಾಗುತ್ತದೆ. ಮುಂದೇನಾಗುತ್ತದೆ ಎಂಬುದು ಅವರವರ ಭಾವಕ್ಕೆ ಮತ್ತು ಅವರವರ ಭಕುತಿಗೆ ಬಿಟ್ಟಿದ್ದು!
ಉದಾಹರಣೆಗೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಮದರ್ ತೆರೇಸಾ ಬಗೆಗಿನ ಪುಸ್ತಕವೊಂದರಲ್ಲಿ ಲೇಖಕ ಅರೂಪ್ ಚಟರ್ಜಿಯವರು ಇಂಥದೊಂದು ಘಟನೆಯನ್ನು ಉಲ್ಲೇಖಿಸುತ್ತಾರೆ. ಮದರ್ ತೆರೇಸಾ ಆಲ್ಬೇನಿಯಾ ಮೂಲದವರಾದರೂ “ಮದರ್ ತೆರೇಸಾ ಆಫ್ ಕಲ್ಕತ್ತಾ” ಅಂತಲೇ ಜಾಗತಿಕ ಮಟ್ಟದಲ್ಲಿ ಖ್ಯಾತರಾದವರು. ತೆರೇಸಾರ ಬಗ್ಗೆ ಎಲ್ಲೋ ಒಂದಿಷ್ಟು ಓದಿಕೊಂಡು, ಅಲ್ಲಲ್ಲಿ ಕೇಳಿಕೊಂಡು ಕಲ್ಕತ್ತೆಗೆ ಬರುತ್ತಿದ್ದ ಹಲವು ವಿದೇಶೀಯರು ನಿಜವಾದ ಕಲ್ಕತ್ತಾವನ್ನು ನೋಡಿ ದಂಗಾಗುತ್ತಿದ್ದರಂತೆ. ಯಾಕೆಂದರೆ ಅವರಿಗಿದ್ದ ಅರ್ಧಂಬರ್ಧ ಮಾಹಿತಿಗಳ ಪ್ರಕಾರ ಕಲ್ಕತ್ತೆಯಲ್ಲಿರುವ ಅಷ್ಟೂ ರೋಗಿಗಳ ಮತ್ತು ಅನಾಥರ ಸೇವೆಯನ್ನು ತೆರೇಸಾ ಮತ್ತವರ ಸಂಸ್ಥೆಯೇ ದಿನರಾತ್ರಿಗಳ ಪರಿವೆಯಿಲ್ಲದೆ ನೋಡಿಕೊಳ್ಳುತ್ತಿತ್ತು. ರೋಗರುಜಿನ, ಬಡತನಗಳಿಂದ ಕಂಗೆಟ್ಟಿದ್ದ ಕಲ್ಕತ್ತೆಗೆ ಮದರ್ ತೆರೇಸಾ ಭರವಸೆಯ ಏಕೈಕ ಕಿರಣವಾಗಿದ್ದರು. ಆದರೆ ಇದು ಕಾಲಿಘಾಟ್ ಮತ್ತು ಸುತ್ತಮುತ್ತಲಿರುವ ಕೆಲ ಪ್ರದೇಶಗಳಲ್ಲಷ್ಟೇ ತಕ್ಕಮಟ್ಟಿಗೆ ಸತ್ಯ ಎಂಬುದು ಅರಿವಾಗಲು ಈ ಮಂದಿ ಖುದ್ದು ಕಲ್ಕತ್ತೆಗೆ ಬಂದಿಳಿದು ನೋಡಬೇಕಾಗಿ ಬಂದಿತ್ತು.
ನಗರಗಳಲ್ಲಿರಬಹುದಾದ ಕತೆಗಳ ಬಗೆಗಿನ ಉಡಾಫೆಯು ಒಂದು ಕಾಲದಲ್ಲಿ ನನ್ನಲ್ಲೂ ಇದ್ದಿದ್ದನ್ನು ನಾನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ. ಆದರೆ ಪ್ರತೀವಾರ ದಿಲ್ಲಿಯ ಬಗ್ಗೆ ಬರೆಯಬೇಕಾಗಿ ಬಂದಾಗ ಮತ್ತು ಈ ಕಾರಣಕ್ಕಾಗಿ ದಿಲ್ಲಿಯ ಗಲ್ಲಿಗಳಲ್ಲಿ ಕತೆಗಳನ್ನು ಹುಡುಕುತ್ತಾ ಹೋದಾಗ ಶಹರದ ಬೇರೆಯೇ ಅವತಾರಗಳು ನನಗೆ ಕಾಣಲಾರಂಭಿಸಿದ್ದವು. ಸಚಿನ್ ತೀರ್ಥಹಳ್ಳಿಯವರ ‘ಮಿಸ್ಟರ್ X’ ಎಂಬ ಚಂದದ ಸಣ್ಣಕತೆಯೊಂದಿದೆ. ನಮ್ಮ ಸುತ್ತಮುತ್ತಲಿರುವ, ನೋಡಲು ಸಾಮಾನ್ಯರಲ್ಲಿ ಸಾಮಾನ್ಯರಂತೆ ಕಾಣುವ ಕೆಲ ಅನಾಮಿಕ ಮುಖಗಳ ಹಿನ್ನೆಲೆ-ತಾಕತ್ತುಗಳು ತಮ್ಮ ಊಹೆಗೂ ಮೀರಿ ಅದೆಷ್ಟು ದೊಡ್ಡದಾಗಿರುತ್ತವೆ ಎಂಬುದನ್ನು ಹೇಳುವ ಚಂದದ ಕತೆಯಿದು.
ಇಂಥದೊಂದು ಸನ್ನಿವೇಶವನ್ನು ನಾನು ದಿಲ್ಲಿಯಲ್ಲೂ ಸ್ವತಃ ನೋಡಿದ್ದೆ. ಅಂದು ನಾನು ಹೋಗುತ್ತಿದ್ದಿದ್ದು ಆಟೋರಿಕ್ಷಾ ಒಂದರಲ್ಲಿ. ಹೀಗೆ ನಾನಿದ್ದ ಆಟೋ ಸುಮ್ಮನೆ ತನ್ನ ಪಾಡಿಗೆ ಹೋಗುತ್ತಿದ್ದಾಗ, ಎಲ್ಲಿಂದಲೋ ಮತ್ತೊಂದು ಆಟೋ ಬಂದು ನಾನಿರುವ ಆಟೋರಿಕ್ಷಾವನ್ನು ಒಂದಿಷ್ಟು ಸವರಿಕೊಂಡು ಹೋಗುತ್ತದೆ. ನಿಜಾರ್ಥದಲ್ಲಿ ಅಲ್ಲೇನು ಅಪಘಾತವಾಗದಿದ್ದರೂ, ದಿಲ್ಲಿ-ಹರಿಯಾಣದಲ್ಲಿ ಆಟೋಗಳು ಕುಡುಕರಂತೆ ಎಲ್ಲೆಲ್ಲೋ ಒಂದಿಷ್ಟು ಗುದ್ದಿಕೊಂಡು, ಸವರಿಕೊಂಡು ಮುಂದೆ ಸಾಗುವುದು ನಿತ್ಯದ ಮಾತಾದರೂ ಇದೊಂದು ಅನಗತ್ಯ ವಿವಾದವಾಗಿ ಬದಲಾಗುತ್ತದೆ. ಇದು ಸಾಲದೆಂಬಂತೆ ಒಂದರ್ಧ ನಿಮಿಷದೊಳಗೆ ಎರಡೂ ಆಟೋಗಳ ಚಾಲಕರು ತಮ್ಮ ಆಟೋಗಳಿಂದಿಳಿದು ಕೈ-ಕೈ ಮಿಲಾಯಿಸುವವರೆಗೂ ಪರಿಸ್ಥಿತಿಯು ಸಂಕೀರ್ಣವಾಗುತ್ತದೆ.
ಆದರೆ ಅಚ್ಚರಿಯ ಸಂಗತಿಯೆಂದರೆ ಜಗಳವು ಆರಂಭವಾದ ವೇಗದಲ್ಲೇ ಬಹುಬೇಗನೆ ಮುಗಿದುಹೋಗುವ ಒಂದು ನಾಟಕೀಯ ತಿರುವು. ಇಲ್ಲಿ ಗುದ್ದಿಸಿಕೊಂಡವನು ಮಹಾತ್ಯಾಗಿಯಂತೆ ಗುದ್ದಿದವನನ್ನು ಬಿಟ್ಟುಬಿಡುತ್ತಾನೆ. ಆದರೆ ಮರಳಿ ಬಂದವನೇ ನನ್ನ ಗೆಳೆಯರ ಬಳಗದಲ್ಲಿರುವ ಪುಡಿರೌಡಿಗಳಿಗೆ, ತನಗೆ ಪರಿಚಯವಿರುವ ಕೆಲ ಪುಢಾರಿಗಳ ಹಿಂಬಾಲಕರಿಗೆಲ್ಲ ಕರೆ ಮಾಡಿ ವಿಷಯ ತಿಳಿಸುತ್ತಾನೆ. ಬಂದು ವಿನಾಕಾರಣ ಗುದ್ದಿದವನ ಆಟೋ ನಂಬರ್ ಹೀಗಿದೆ, ಇವನನ್ನು ಸುಮ್ಮನೆ ಬಿಡಬೇಡಿ ಅಂತೆಲ್ಲ ಆಟೋ ಚಲಾಯಿಸುತ್ತಲೇ ಅಪ್ಪಣೆ ಕೊಡುತ್ತಾನೆ. ಈ ಕತೆಯು ಮುಂದೇನಾಯಿತು ಎಂಬುದು ನನಗಂತೂ ಗೊತ್ತಿಲ್ಲ. ಆದರೆ ಅಂದು ನಾನು ಕೂತಿದ್ದ ಆಟೋದ ಸಾರಥಿಯು ಬಹಳ ಪ್ರಭಾವಿ ವ್ಯಕ್ತಿ ಎಂಬ ಜ್ಞಾನೋದಯವಂತೂ ನನಗಾಗಿತ್ತು. ಸಚಿನ್ ತೀರ್ಥಹಳ್ಳಿಯವರ ‘ಮಿಸ್ಟರ್ X’ ಕತೆಯನ್ನು ಓದಿದಾಗ ನನಗೆ ನೆನಪಾಗಿದ್ದು ಈ ಘಟನೆಯೇ.
ಪೋಷಕರ ಬಳಿ ಸ್ವಂತದ ಟ್ಯಾಕ್ಸಿ ಏಜೆನ್ಸಿಯೊಂದಿದ್ದರೂ ಕಾಲಹರಣಕ್ಕೆಂದು ಕ್ಷೌರಿಕನಾಗಿದ್ದ ಓರ್ವ ಇಪ್ಪತ್ತೊಂದರ ಯುವಕ, ಕೇವಲ ಪುಸ್ತಕಗಳ ಮೇಲಿನ ತನ್ನ ಪ್ರೀತಿಯಿಂದಾಗಿ ಪುಸ್ತಕದ ಅಂಗಡಿಯೊಂದನ್ನು ಸೇರಿಕೊಂಡು ಬರೋಬ್ಬರಿ ಇಪ್ಪತ್ತೈದು ವರ್ಷಗಳಿಂದ ಈ ಉದ್ಯಮದಲ್ಲೇ ತೊಡಗಿಸಿಕೊಂಡಿರುವ ಓರ್ವ ಮಧ್ಯವಯಸ್ಕ, ಮಾಡೆಲಿಂಗ್ ಏಜೆನ್ಸಿಯಿಂದ ಹಿಡಿದು ಸ್ಥಳೀಯ ಎಫ್ ಎಮ್ ರೇಡಿಯೋಗಳಲ್ಲೂ ಕೆಲಸ ಮಾಡಿ ನಂತರ ಕಾರು ಚಾಲಕನಾಗಿ ಮುಂದುವರಿದ ಓರ್ವ ಉತ್ಸಾಹಿ ತರುಣ, ಸಂಜೆ-ವಾರಾಂತ್ಯಗಳಲ್ಲಿ ಒ.ಟಿ.ಟಿ-ಪಬ್ಬುಗಳೆಂದು ಕಾಲಹರಣ ಮಾಡದೆ ಕೈಗಾಡಿಯಲ್ಲಿ ಚಹಾ-ಆಮ್ಲೆಟ್ಟುಗಳನ್ನು ಮಾರುತ್ತಾ ಸ್ವಂತ ಉದ್ಯಮಗಳಿಗೆ ಕೈಹಾಕಿರುವ ಬಹುರಾಷ್ಟ್ರೀಯ ಸಂಸ್ಥೆಗಳ ಯುವ ಉದ್ಯೋಗಿಗಳು, ಸರಕಾರಿ ಯೋಜನೆಯೊಂದರ ಪರಿಶೀಲನೆಗೆಂದು ಹೋಗಿದ್ದಾಗ ಮಾರುವೇಷದಲ್ಲಿ ಒಳನುಗ್ಗಿ ಸ್ಕೂಪ್ ಗಾಗಿ ತನ್ನ ವಿಸಿಟಿಂಗ್ ಕಾರ್ಡನ್ನು ಮೆಲ್ಲಗೆ ನನ್ನ ಕೈಯಲ್ಲಿಟ್ಟ ಟ್ಯಾಬ್ಲಾಯ್ಡ್ ಪತ್ರಿಕೆಯೊಂದರ ವರದಿಗಾರ… ಹೀಗೆ ಶಹರಗಳಲ್ಲಿ ನನಗೆ ಸಿಕ್ಕಿರುವ ಕತೆಗಳು ಲೆಕ್ಕವೇ ಇಲ್ಲ. ಜೊತೆಗೇ ಸೆಮಿ-ಅರ್ಬನ್ ಆಗಿದ್ದ ನಾನು ಕ್ರಮೇಣ ಮೆಟ್ರೋಪಾಲಿಟನ್ ಆಗಿರುವ ಪಯಣದಲ್ಲೂ ಈ ಕತೆಗಳ ಪರಿಣಾಮವು ಸಾಕಷ್ಟಿದೆ.
ನನಗನಿಸುವಂತೆ ಶಹರಗಳ ಕತೆಗಳು ಒಟ್ಟಾರೆ ಸಂಖ್ಯೆಯಲ್ಲಿ ಕಮ್ಮಿಯಿದ್ದರೂ ಅವುಗಳ ಬಗೆಗಿನ ಕುತೂಹಲವಂತೂ ಬಹುತೇಕರಿಗೆ ಖಂಡಿತ ಇದೆ. ಏಕೆಂದರೆ ಬದುಕು ಅತ್ಯಂತ ವೇಗವಾಗಿ ರೂಪಾಂತರವಾಗುವುದು ನಗರಗಳಲ್ಲೇ. ಕೆಲವು ಕತೆಗಳು ಮತ್ತು ವರದಿಗಳನ್ನು ನಾವು ಕಾಲಾಂತರದಲ್ಲಿ ಗಮನಿಸಿದಾಗ ನಮ್ಮ ಸಮಾಜವು ನಡೆದುಬಂದ ದಾರಿಯಂತೆಯೂ ಇವುಗಳು ಕಾಣುವುದುಂಟು. ಕೆಲ ವರ್ಷಗಳ ಹಿಂದೆ ಇಂಗ್ಲಿಷಿನ ಖ್ಯಾತ ಪತ್ರಿಕೆಯೊಂದು “Urban Poor” ಎಂಬ ಸಂಗತಿಯನ್ನಿಟ್ಟುಕೊಂಡು ದೀರ್ಘ ವರದಿಯೊಂದನ್ನು ಪ್ರಕಟಿಸಿತ್ತು. ಮಹಾನಗರಗಳಲ್ಲಿ ವಾಸಿಸುವ ಯುವಜನತೆಯು ಶೋಕಿಯ ಗೀಳಿಗೆ ಬಿದ್ದು ತಮ್ಮ ಜೇಬನ್ನು ಹೇಗೆ ಬರಿದಾಗಿಸುತ್ತಾರೆ ಎಂಬ ಬಗೆಗಿತ್ತು ಆ ಲೇಖನ.
ಮಹಾನಗರಗಳಲ್ಲಿ ಕಾಣಸಿಗುತ್ತಿರುವ ಹೊಸಬಗೆಯ ಬಡತನವನ್ನು ವಿವರಿಸುತ್ತಾ ಕಾಲೇಜಿನಿಂದ ಪದವಿಯನ್ನು ಪಡೆದು ಬರುವ ಯುವತಿಯೊಬ್ಬಳು ತಾನು ಉದ್ಯೋಗಕ್ಕೆ ಸೇರಿಕೊಂಡು ಸ್ವಲ್ಪ ದಿನಗಳಲ್ಲೇ ವಿಲಾಸಿ ಕಾರೊಂದನ್ನು ಖರೀದಿಸುವುದು, ನಂತರ ಕಾರು-ಮನೆ-ನಿತ್ಯದ ಖರ್ಚುಗಳನ್ನು ಸರಿದೂಗಿಸಲಾರದೆ ಕಾರನ್ನೇ ಮೊಬೈಲ್-ಹೋಮ್ ನಂತೆ ಪರಿವರ್ತಿಸುವುದು… ಇತ್ಯಾದಿಗಳನ್ನೆಲ್ಲ ಲೇಖಕರು ತಮ್ಮ ವರದಿಯಲ್ಲಿ ದಾಖಲಿಸಿದ್ದರು. ಮೆಟ್ರೋಪಾಲಿಟನ್ ನಗರಗಳಲ್ಲಿರುವ ಉದ್ಯೋಗಿಗಳು ಸಾಲದ ಕೂಪದಲ್ಲಿ ಸಿಕ್ಕಿಕೊಂಡು ನಗರವನ್ನು ಬಿಡಲಾಗದೆ, ಮರಳಿ ತಮ್ಮೂರಿಗೆ ಹೋಗಲಾಗದೆ, ಒಟ್ಟಿನಲ್ಲಿ ಎಲ್ಲೂ ಸಲ್ಲದವರಂತೆ ಬದಲಾಗಿರುವುದು ಇಂದಿನ ಬಹುದೊಡ್ಡ ಸತ್ಯಗಳಲ್ಲೊಂದು. ಈ ನಿಟ್ಟಿನಲ್ಲಿ ಮೆಟ್ರೋಕಥನಗಳು ನಮ್ಮ ನಗರಗಳು ನಡೆದುಬಂದ ದಾರಿಯನ್ನು ದಾಖಲಿಸಿಡುವ ದಾಖಲೆಯೂ ಹೌದೆನ್ನಬಹುದು.
ಶಹರಗಳಲ್ಲೂ ಕತೆಗಳಿರುತ್ತವೆ. ಆದರೆ ಅವುಗಳನ್ನು ಕೇಳಿಸಿಕೊಳ್ಳುವ ಮತ್ತು ಅವುಗಳತ್ತ ತೆರೆದುಕೊಳ್ಳುವ ಮುಕ್ತ ಮನಸ್ಸಿರಬೇಕಷ್ಟೇ. ಈ ಅಂಕಣವನ್ನು ಬರೆದು ನಿಮ್ಮ ಮುಂದಿಡುತ್ತಿರುವ ನಾನು ಮತ್ತು ಓದುತ್ತಿರುವ ನೀವೆಲ್ಲರೂ ಈ ಪಯಣದಲ್ಲಿ ಸಹಪಯಣಿಗರೇ!
ಪ್ರಸಾದ್ ನಾಯ್ಕ್, ದೆಹಲಿ.
ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು”, “ಮರ ಏರಲಾರದ ಗುಮ್ಮ” “ಜಿಪ್ಸಿ ಜೀತು” ಮತ್ತು “ಮುಸ್ಸಂಜೆ ಮಾತು” ಇವರ ಪ್ರಕಟಿತ ಕೃತಿಗಳು. ಇವರ ಚೊಚ್ಚಲ ಕೃತಿಯಾದ “ಹಾಯ್ ಅಂಗೋಲಾ!”2018ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವಕ್ಕೆ ಪಾತ್ರವಾಗಿದೆ. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.
ಇದನ್ನೂ ಓದಿ- http://“ಸ್ಮಾರ್ಟ್ ಆಗದ ಸಿಟಿಗಳು” https://kannadaplanet.com/cities-that-are-not-smart/