ಮುಂಬೈ: ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವರೆಗೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಬಿಡುವುದಿಲ್ಲ ಎಂದು ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ಹೇಳಿದ್ದಾರೆ.ಮರಾಠರಿಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಆದ್ದರಿಂದ ಮೀಸಲಾತಿಯನ್ನು ಮಾತ್ರ ಬಯಸುತ್ತಿದ್ದಾರೆ. ಆದ್ದರಿಂದ ನಮ್ಮ ಸಮುದಾಯದ ತಾಳ್ಮೆಯನ್ನು ಪರೀಕ್ಷಿಸದೆ ಮೀಸಲಾತಿ ಘೋಷಿಸಬೇಕು ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.
ಮನೋಜ್ ಜರಾಂಗೆ ಅವರು ಮುಂಬೈನ ಆಜಾದ್ ಮೈದಾನದಲ್ಲಿ ನಿನ್ನೆಯಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ನಮ್ಮ ಬೇಡಿಕೆ ಈಡೇರುವವರೆಗೆ ಸತ್ಯಾಗ್ರಹ ಕೈಬಿಡುವುದಿಲ್ಲ. ಗುಂಡಿಟ್ಟು ಕೊಂದರೂ ನಾನು ಹಿಂದೆ ಸರಿಯುವುದಿಲ್ಲ ಎಂದು ಜರಾಂಗೆ ಗುಡುಗಿದ್ದಾರೆ.
ಇತರ ಹಿಂದುಳಿದ ವರ್ಗಗಳ (ಒಬಿಸಿ) ಕೋಟಾದಡಿ ಮರಾಠರು ಮೀಸಲಾತಿಯನ್ನು ಬಯಸುತ್ತಿದ್ದಾರೆ ಎಂದು ಸರ್ಕಾರವೇ ತಪ್ಪು ಮಾಹಿತಿ ಹರಡುತ್ತಿದೆ.ಮರಾಠರು ಕುಣಬಿಗಳ ರಕ್ತ ಸಂಬಂಧಿಗಳು ಎಂಬ ಕರಡು ಅಧಿಸೂಚನೆಯನ್ನು ನಮ್ಮ ಸಮುದಾಯದ ಬೇಡಿಕೆಯಂತೆ ಕಾನೂನಾಗಿ ರೂಪಿಸಬೇಕು. ಅರ್ಹತೆಯ ಆಧಾರದ ಮೇಲೆ ಸಿಗಬೇಕಾದ ಮೀಸಲಾತಿ ನಮಗೆ ಲಭ್ಯವಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಬಡ ಮರಾಠರನ್ನು ಅವಮಾನಿಸಬೇಡಿ. ನಾವು ಒಬಿಸಿ ಮೀಸಲಾತಿಯನ್ನು ಕಡಿಮೆ ಮಾಡುವಂತೆ ಕೇಳುತ್ತಿಲ್ಲ. ತಪ್ಪು ಮಾಹಿತಿಯನ್ನು ಹರಡಬೇಡಿ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರಿಗೆ ಜರಾಂಗೆ ತಿರುಗೇಟು ನೀಡಿದ್ದಾರೆ.