ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದರೂ ಕನ್ನಡವನ್ನೇ ಉಸಿರಾಡುವ, ಕನ್ನಡವನ್ನೇ ಬದುಕಾಗಿಸಿಕೊಂಡಿರುವ, ಕನ್ನಡವನ್ನೇ ಬರವಣಿಗೆಯ ಮಾಧ್ಯಮವಾಗಿಸಿಕೊಂಡ ಬಾನುರವರ ಕನ್ನಡ ಭಾಷಾಭಿಮಾನವನ್ನು ಪ್ರಶ್ನಿಸುವವರು ಮೂರ್ಖರು ಇಲ್ಲವೇ ಅವಿವೇಕಿಗಳು- ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
“ಕನ್ನಡವನ್ನು ಭಾಷೆಯಾಗಿ ಬಳಸಿ ಬೆಳೆಸುವ ಬದಲಾಗಿ ಮೂರ್ತಿ ಮಾಡಿ ಪೂಜಿಸಿ ಭಾವನಾತ್ಮಕವಾಗಲು ಕನ್ನಡಿಗರನ್ನು ಒತ್ತಾಯಿಸಬೇಡಿ” ಎಂದು ಹೇಳುವ ಮೂಲಕ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ರವರು ಕನ್ನಡ ವಿರೋಧಿ ಎನ್ನುವ ಅಪಸ್ವರಗಳಿಗೆ ಸ್ಪಷ್ಟೀಕರಣ ಕೊಟ್ಟಿದ್ದಾರೆ.
ಹೌದು… ಎಲ್ಲವನ್ನೂ ಅಂದರೆ ಜಾತಿ, ಧರ್ಮ, ದೇವರು, ಭಾಷೆ ಎಲ್ಲವನ್ನೂ ಭಾವತೀವ್ರತೆಗೆ ಅಳವಡಿಸುವ ಕಾಯಕ ಅತಿಯಾಗಿದೆ. ಯಾರಾದರೂ ಪ್ರಶ್ನೆ ಮಾಡಿದರೆ ಭಾವನೆಗಳಿಗೆ ಧಕ್ಕೆ ಆಯಿತು ಎಂದು ಹುಯಿಲೆಬ್ಬಿಸಲಾಗುತ್ತದೆ. ಪರವಾಗಿರುವವರ ಭಾವನೆಗೆ ಧಕ್ಕೆಯಾಗಿದ್ದೇ ದಿಟವಾಗಿದ್ದರೆ, ಪ್ರಶ್ನಿಸುವವರಿಗೂ ಭಾವನೆಗಳಿವೆ, ಅವರ ಭಾವನೆಗಳಿಗೂ ನೋವಾಗುತ್ತದೆ ಎನ್ನುವ ಅರಿವು ಮರೆತೇ ಹೋಗಿರುತ್ತದೆ.
ನಮ್ಮ ದೇಶದ ಕಾನೂನು ಹಾಗೂ ಸಂವಿಧಾನ ವ್ಯವಸ್ಥೆ ವಾಸ್ತವದ ತಳಹದಿಯ ಮೇಲೆ ನಿರ್ಮಿಸಲಾಗಿದೆಯೇ ಹೊರತು ಭಾವನೆಗಳ ಆಧಾರದಲ್ಲಿ ಅಲ್ಲ. ಆದರೆ ಎಲ್ಲಾ ಧರ್ಮಗಳಲ್ಲಿರುವ ಪುರೋಹಿತಶಾಹಿಗಳು ಎಲ್ಲವನ್ನೂ ಭಾವನಾತ್ಮಕಗೊಳಿಸಿ ಎಲ್ಲರನ್ನೂ ಭ್ರಮೆಯಲ್ಲಿರಿಸಿ ನಿಯಂತ್ರಿಸಲು ಪ್ರಯತ್ನಿಸುತ್ತಲೇ ಬಂದಿದ್ದಾರೆ. ದೇವರನ್ನು ದೇವರನ್ನಾಗಿ, ಒಳಿತಿಗೆ ಸಂಕೇತವಾಗಿ ನೋಡದೇ ಭಯ ಭಕ್ತಿಯನ್ನು ಹುಟ್ಟಿಸಿ ಜನರ ಭಾವನೆಗಳನ್ನು ಉದ್ದೀಪಿಸುವ ಕೆಲಸ ಮಾಡುತ್ತಲೇ ಬರಲಾಗಿದೆ.
ಭಾಷೆಯನ್ನು ಭಾಷೆಯನ್ನಾಗಿ ಪರಿಗಣಿಸದೇ ಅದಕ್ಕೂ ಭಾವಾತಿರೇಕದ ಭ್ರಮೆ ಬಿತ್ತಿ ಬೆಳೆದಾಗ ಭಾಷಾಂಧತೆ ಉದ್ದೀಪನಗೊಳ್ಳುತ್ತದೆ. ಹಾಗಂತ ಭಾಷೆಯ ಮೇಲೆ ಅಭಿಮಾನ ಇರಬಾರದು ಎಂದಲ್ಲ, ಇರಬೇಕು. ಆದರೆ ಅದು ಯಾವತ್ತು ದುರಭಿಮಾನವಾಗಬಾರದು. ಎಲ್ಲರೂ ತಮ್ಮ ತಮ್ಮ ಮಾತೃಭಾಷೆಯನ್ನು ಪ್ರೀತಿಸಬೇಕು ಹಾಗೂ ಬೇರೆ ಎಲ್ಲಾ ಭಾಷೆಗಳನ್ನೂ ಗೌರವಿಸಬೇಕು ಮತ್ತು ಯಾವುದೇ ಭಾಷೆಯಾಗಲಿ ಇಲ್ಲವೇ ಭಾಷಿಕರಾಗಲಿ ಇನ್ನೊಂದು ಭಾಷೆಯ ಮೇಲೆ ದಮನ ದಬ್ಬಾಳಿಕೆ ಮಾಡಲು ಬಿಡಬಾರದು.
ಆದರೆ ಯಾವಾಗ ಬಾನುರವರನ್ನು ಈ ಸಲದ ದಸರಾ ಹಬ್ಬದ ಉದ್ಘಾಟನೆಗೆ ಸರಕಾರ ಆಯ್ಕೆ ಮಾಡಿತೋ ಆಗ ಅವರ ಧರ್ಮ ಹಾಗೂ ಅವರ ಕನ್ನಡ ಭಾಷೆಯ ಕುರಿತು ಪ್ರಶ್ನಿಸಲಾಯ್ತು. ಕನ್ನಡದ ಬಗ್ಗೆ ಭಾವತೀವ್ರತೆಯಿಂದ ಮಾತಾಡುವ ಅನೇಕರು ಕನ್ನಡ ಭಾಷೆಯ ಬಳಕೆಗೆ ಹಾಗೂ ಬೆಳವಣಿಗೆಗೆ ಕೊಡುಗೆ ಕೊಟ್ಟಿದ್ದಾರೆ ಎಂದು ಎದೆ ಮುಟ್ಟಿ ಹೇಳಿಕೊಳ್ಳಬೇಕಿದೆ.
ಆದರೆ.. ಕನ್ನಡದ ಪ್ರಮುಖ ಸಾಹಿತಿಯಾಗಿರುವ ಬಾನುರವರು ಕನ್ನಡ ಭಾಷೆಗೆ ಕೊಟ್ಟ ಕೊಡುಗೆ ಅಪಾರವಾದದ್ದು. ಅವರು ಕನ್ನಡದಲ್ಲಿ ಬರೆದ ಕಥಾ ಸಂಕಲನಕ್ಕೆ ಅಂತಾರಾಷ್ಟ್ರೀಯ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ದೊರಕಿರುವುದು. ಭಾರತದಲ್ಲಿ ಕನ್ನಡ ಭಾಷೆ ಎಂಬುದೊಂದು ಇದೆ ಹಾಗೂ ಅದು ಸಾಹಿತ್ಯಿಕವಾಗಿ ಶ್ರೀಮಂತವಾಗಿದೆ ಎಂಬುದನ್ನು ಬೂಕರ್ ಪ್ರಶಸ್ತಿ ಮೂಲಕ ಜಾಗತಿಕವಾಗಿ ತೋರಿಸಿಕೊಟ್ಟಿದ್ದು ಬಾನುರವರೇ. ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದರೂ ಕನ್ನಡವನ್ನೇ ಉಸಿರಾಡುವ, ಕನ್ನಡವನ್ನೇ ಬದುಕಾಗಿಸಿಕೊಂಡಿರುವ, ಕನ್ನಡವನ್ನೇ ಬರವಣಿಗೆಯ ಮಾಧ್ಯಮವಾಗಿಸಿಕೊಂಡ ಬಾನುರವರ ಕನ್ನಡ ಭಾಷಾಭಿಮಾನವನ್ನು ಪ್ರಶ್ನಿಸುವವರು ಮೂರ್ಖರು ಇಲ್ಲವೇ ಅವಿವೇಕಿಗಳು.
ಬಾನುರವರ ಕನ್ನಡ ಪ್ರೇಮಕ್ಕೆ ಒಂದು ಉದಾಹರಣೆ ಹೀಗಿದೆ. ಗೋಕಾಕ್ ಚಳುವಳಿ ಸಂದರ್ಭದಲ್ಲಿ ಕನ್ನಡದ ಅಸ್ಮಿತೆಯ ಕುರಿತು ಮಾತಾಡುವವರನ್ನು ವೇದಿಕೆಗೆ ಆಹ್ವಾನಿಸಲಾಗಿತ್ತು. ಆದರೆ ಹಾಗೆ ಬಂದು ಮಾತಾಡಲು ಬಯಸುವವರಿಗೆ ಕಾರ್ಯಕ್ರಮದ ಆಯೋಜಕರು ಒಂದೇ ಒಂದು ನಿಬಂಧನೆ ವಿಧಿಸಿದ್ದರು. ‘ಯಾರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿಸುತ್ತಿದ್ದಾರೋ ಅಂತವರು ಮಾತ್ರ ಕನ್ನಡದ ಅಸ್ಮಿತೆಯ ಬಗ್ಗೆ ಮಾತಾಡಬಹುದು’ ಎಂಬ ನಿಬಂಧನೆಯಿಂದಾಗಿ ಯಾರೆಂದರೆ ಯಾರೂ ವೇದಿಕೆ ಹತ್ತಲು ಮುಂದೆ ಬರಲಿಲ್ಲ. ಆಗ ವೇದಿಕೆಗೆ ಬಂದು ಮಾತಾಡಿದವರು ಬಾನು ಅವರೊಬ್ಬರೇ. ಯಾಕೆಂದರೆ ಅವರು ತಮ್ಮ ಮೂವರು ಹೆಣ್ಣು ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿಸುತ್ತಿದ್ದರು. ಬಾನುರವರ ಕನ್ನಡ ಭಾಷಾ ಪ್ರೀತಿಗೆ ಹಾಗೂ ಕನ್ನಡಿಗರೆಂದು ಹೇಳಿಕೊಂಡು ಆಂಗ್ಲ ಭಾಷಾ ಮಾಧ್ಯಮದ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುವ ಕನ್ನಡಿಗರಿಗೆ ಇರುವ ವ್ಯತ್ಯಾಸ ಇಷ್ಟೇ.
ಇಂತಹ ಕನ್ನಡ ಭಾಷಾ ಪ್ರೇಮಿ ಹಾಗೂ ಕನ್ನಡ ಭಾಷಾ ಸಾಹಿತಿಯಾದ ಬಾನುರವರ ಕನ್ನಡ ಪ್ರೇಮ ಹಾಗೂ ಅಭಿಮಾನವನ್ನು ಪ್ರಶ್ನಿಸುವುದೇ ಮೂರ್ಖತನದ ಪರಮಾವಧಿ. ಬಾನುರವರು ತಮ್ಮ ಮಕ್ಕಳನ್ನು ಮದರಸದಲ್ಲಿ ಓದಿಸಬಹುದಾಗಿತ್ತು, ಉರ್ದು ಭಾಷೆಯಲ್ಲಿ ಸಾಹಿತ್ಯ ರಚಿಸಬಹುದಾಗಿತ್ತು. ಆದರೆ ಅವರು ಕನ್ನಡವನ್ನೇ ಬದುಕು ಬರವಣಿಗೆ ಹಾಗೂ ಸಾಧನೆಗೆ ಮಾಧ್ಯಮವಾಗಿಸಿಕೊಂಡರು, ಬಂಡಾಯ ಸಾಹಿತ್ಯ ಪರಂಪರೆಯ ಭಾಗವಾದರು.
ಇಂತಹ ಅಪ್ಪಟ ಕನ್ನಡ ಭಾಷಾ ಪ್ರೇಮಿ ಹಾಗೂ ಸಾಧಕಿಯ ಮೇಲೆ ಇಲ್ಲಸಲ್ಲದ ಆರೋಪವನ್ನು ಹೊರೆಸಿ ದಸರಾ ಉದ್ಘಾಟನೆಯಿಂದ ದೂರವಾಗಿಸುವ ಹುನ್ನಾರವನ್ನು ಸಂಘಿ ಪರಿವಾರ ಮಾಡುತ್ತಿದೆ. ಕನ್ನಡಿಗರನ್ನು ಕನ್ನಡದ ಹೆಮ್ಮೆಯ ಮಹಿಳಾ ಸಾಹಿತಿಯ ವಿರುದ್ಧ ಎತ್ತಿಕಟ್ಟಲಾಗುತ್ತಿದೆ. ಬಾನುರವರು ಅರಿಶಿನ ಕುಂಕುಮ, ಭುವನೇಶ್ವರಿಯ ವಿರೋಧಿ ಎಂದು ಅಪಪ್ರಚಾರ ಮಾಡಲಾಗುತ್ತಿದೆ.
ಕನ್ನಡ ಭಾಷೆ ಎಂಬುದು ಯಾವುದೋ ಒಂದು ಜಾತಿ ಮತ ಪಂಗಡ ಧರ್ಮಕ್ಕೆ ಸೀಮಿತವಾದದ್ದಲ್ಲ. ಒಂದು ಪ್ರದೇಶದಲ್ಲಿ ವಾಸಿಸುವ ಎಲ್ಲರೂ ತಮ್ಮ ಸಂವಹನಕ್ಕಾಗಿ ಭಾಷೆಯೊಂದನ್ನು ಬಳಸುತ್ತಾರೆ. ಭಾಷೆಯನ್ನು ಬಳಸುವುದರಲ್ಲಿ ಜಾತಿ ಧರ್ಮ ನೋಡುವುದೇ ಭಾಷಾಂಧತೆ. ಕರ್ನಾಟಕದಲ್ಲಿ ತುಳು, ಉರ್ದು ಮುಂತಾದ ಭಾಷೆಗಳಿದ್ದರೂ ಕನ್ನಡ ಭಾಷೆಯನ್ನು ಅಧಿಕೃತ ಆಡಳಿತ ಭಾಷೆಯನ್ನಾಗಿ ಮಾನ್ಯ ಮಾಡಲಾಗಿದೆ. ಲಿಪಿಗಳೇ ಇಲ್ಲದ ಕೆಲವಾರು ಭಾಷಿಕರೂ ಕನ್ನಡದ ಲಿಪಿಯನ್ನೇ ಬಳಸುತ್ತಾರೆ. ಆದರೆ ಜಾತಿ ಧರ್ಮ ಮತ ಪಂಥಗಳ ಆಧಾರದಲ್ಲಿ ಯಾರೂ ಕನ್ನಡ ಭಾಷೆಯನ್ನು ಬಳಸುವುದಿಲ್ಲ. ಹೀಗಾಗಿ ಕರ್ನಾಟಕ ರಾಜ್ಯದ ಅಧಿಕೃತ ಭಾಷೆಯಾದ ಕನ್ನಡವು ಎಲ್ಲಾ ಜಾತಿ ಧರ್ಮ ವರ್ಗಗಳ ಸಮೂಹ ಸಂವಹನ ಭಾಷೆಯೂ ಆಗಿದೆ. ಇಂತಹ ಭಾಷೆಯನ್ನು ಒಂದು ಧರ್ಮದ ಸಂಕೇತ ಹಾಗೂ ಆಚರಣೆಗೆ ಸೀಮಿತಗೊಳಿಸಬಾರದು ಹಾಗೂ ಅನ್ಯ ಧರ್ಮೀಯರು ಎನ್ನುವ ಕಾರಣಕ್ಕೆ ಭಾಷೆಯ ವ್ಯಾಪ್ತಿಯಿಂದ ಯಾರನ್ನೂ ಹೊರಗಿಡಬಾರದು ಎಂಬುದು ಬಾನು ಮುಷ್ತಾಕ್ ರವರು ವ್ಯಕ್ತಪಡಿಸಿದ ಅಭಿಪ್ರಾಯವಾಗಿದೆ.
ಅರಿಶಿನ ಕುಂಕುಮಗಳು ಹಿಂದೂ ಸಂಪ್ರದಾಯದ ಸಂಕೇತಗಳು. ಕನ್ನಡ ಎನ್ನುವುದು ಕರ್ನಾಟಕದಲ್ಲಿ ವಾಸಿಸುವ ಎಲ್ಲ ಜಾತಿ ಮತ ಧರ್ಮೀಯರು ಪ್ರಮುಖವಾಗಿ ಸಂವಹನಕ್ಕೆ ಬಳಸುವುದರಿಂದ ಯಾಕೆ ಕನ್ನಡ ಬಾವುಟಕ್ಕೆ ಹಿಂದೂ ಧರ್ಮೀಯರ ಅಸ್ಮಿತೆಯಾದ ಅರಿಶಿನ ಕುಂಕುಮ ಬಣ್ಣವನ್ನು ಆಯ್ಕೆ ಮಾಡಲಾಗಿದೆ ಎಂಬುದು ಬಾನುರವರ ಪ್ರಶ್ನೆ. ಕನ್ನಡ ಭಾಷೆ ಸಮಸ್ತ ಕನ್ನಡಿಗರದ್ದು ಎನ್ನುವುದೇ ನಿಜವಾಗಿದ್ದಲ್ಲಿ ಒಂದು ಧರ್ಮದ ಸಂಕೇತಗಳನ್ನು ಪ್ರದರ್ಶಿಸುವ ಬಣ್ಣಗಳು ಕನ್ನಡದ ಬಾವುಟದಲ್ಲಿ ಯಾಕಿವೆ? ಎಂಬುದು ಬಾನುರವರ ಸಂದೇಹ. ‘ಕನ್ನಡ ಭಾಷೆ ಹಾಗೂ ಅಸ್ಮಿತೆ ಸಮಸ್ತ ಕನ್ನಡಿಗರದ್ದಾಗಿರುವಾಗ ಅನ್ಯ ಧರ್ಮೀಯರನ್ನು ಯಾಕೆ ಹೊರಗೆ ಇಡಲಾಗುತ್ತಿದೆ’ ಎಂಬುದು ಬಾನುರವರ ಆತಂಕ. ಕರ್ನಾಟಕದಲ್ಲಿ ಬದುಕಿ ಬಾಳುವ ಎಲ್ಲರೂ ಕನ್ನಡಿಗರು ಎನ್ನುವುದೇ ನಿಜವಾಗಿದ್ದಲ್ಲಿ, ಕನ್ನಡವನ್ನು, ಕನ್ನಡದ ಅಸ್ಮಿತೆಯನ್ನು, ಕನ್ನಡದ ಬಾವುಟವನ್ನು, ಕನ್ನಡದ ದೇವತೆಯನ್ನು ಯಾಕೆ ಒಂದು ಹಿಂದೂ ಧರ್ಮದ ಸಂಕೇತಗಳಿಗೆ ಸೀಮಿತಗೊಳಿಸಲಾಗಿದೆ ಎಂಬುದು ಬಾನುರವರ ಆತಂಕ.
ಬಾನುರವರು ವ್ಯಕ್ತಪಡಿಸಿದ ಆತಂಕಗಳು ಹಾಗೂ ಎತ್ತಿದ ಪ್ರಶ್ನೆಗಳಿಗೆ ಉತ್ತರಿಸುವ ಬದಲಾಗಿ ಅವರನ್ನೇ ಕನ್ನಡ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಕನ್ನಡ ಭಾಷೆ ಕೇವಲ ಹಿಂದೂ ಧರ್ಮಕ್ಕೆ ಮಾತ್ರ ಸಂಬಂಧಿಸಿದ್ದೋ ಇಲ್ಲಾ ಕರ್ನಾಟಕದಲ್ಲಿರುವ ಎಲ್ಲರಿಗೂ ಸಂಬಂಧಿಸಿದ್ದೊ ಎಂಬುದಕ್ಕೆ ಮೊದಲು ಉತ್ತರ ಕಂಡುಕೊಳ್ಳಬೇಕಿದೆ. ಅಧಿಕೃತವಾಗಿ ಕರ್ನಾಟಕದ ಆಡಳಿತದ ಭಾಷೆ ಕನ್ನಡ ಆಗಿರುವಾಗ, ಕರ್ನಾಟಕದಲ್ಲಿ ಹುಟ್ಟಿ ಬೆಳೆದವರೆಲ್ಲಾ ಕನ್ನಡಿಗರಾಗಿರುವಾಗ, ಕನ್ನಡಿಗರಲ್ಲಿ ಜಾತಿ ಧರ್ಮ ಬೇಧ ಮಾಡುವುದು ಎಷ್ಟು ಸರಿ ಹಾಗೂ ಒಂದು ಧರ್ಮದ ಸಂಕೇತಗಳನ್ನು ಸಮಸ್ತ ಕನ್ನಡಿಗರ ಮೇಲೆ ಹೇರುವುದು ಎಷ್ಟು ಸಮಂಜಸ ಎನ್ನುವುದಕ್ಕೆ ಉತ್ತರ ಕಂಡುಕೊಳ್ಳಬೇಕಿದೆ.
ಹೌದು.. ಅರಿಶಿನ ಕುಂಕುಮ ದೇವಿ ಭುವನೇಶ್ವರಿ ಈ ಎಲ್ಲಾ ಸಂಕೇತಗಳು ಹಿಂದೂ ಧರ್ಮದ ಅದರಲ್ಲೂ ವೈದಿಕ ಧರ್ಮದ ಸಂಕೇತಗಳು. ಒಂದು ಧರ್ಮದ ಸಂಕೇತಗಳನ್ನು ಬಾವುಟದ ಬಣ್ಣದ ಮೂಲಕ, ದೇವತೆಯ ಆರಾಧನೆ ಮೂಲಕ ಯಾಕೆ ಅನ್ಯ ಧರ್ಮೀಯರ ಮೇಲೆ ಹೇರಲಾಗಿದೆ ಎಂಬುದೇ ಪ್ರಮುಖ ಪ್ರಶ್ನೆಯಾಗಿದೆ. ಕನ್ನಡ ಭಾಷೆಯ ಅಸ್ಮಿತೆ ಹಾಗೂ ಅಸ್ತಿತ್ವ ಯಾವುದೋ ಒಂದು ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ. ಕರ್ನಾಟಕದಲ್ಲಿ ವಾಸಿಸುವ, ಕನ್ನಡ ಮಾತಾಡುವ ಎಲ್ಲಾ ಜಾತಿ ಮತ ಧರ್ಮ ಪಂಗಡಗಳನ್ನೂ ಒಳಗೊಂಡಿದೆ. ಹೀಗಿರುವಾಗ ಒಂದು ಧರ್ಮದ ನಂಬಿಕೆ ಆಚರಣೆಗಳನ್ನು ಅನ್ಯ ಧರ್ಮೀಯ ಕನ್ನಡಿಗರ ಮೇಲೆ ಹೇರುವುದು ಪ್ರಶ್ನಾರ್ಹವಾಗಿದೆ.
ಇಷ್ಟಕ್ಕೂ ಕನ್ನಡದ ಭಾಷೆಗೆ ಸಿಕ್ಕ ಮಾನ್ಯತೆ ಕನ್ನಡದ ಬಾವುಟಕ್ಕೆ ಇಲ್ಲಿಯವರೆಗೂ ಸಿಕ್ಕಿಲ್ಲ. ಯಾಕೆಂದರೆ ಅರಿಶಿನ ಕುಂಕುಮ ಸಂಕೇತಿಸುವ ಹಳದಿ ಕೆಂಪು ಬಣ್ಣಗಳ ಬಾವುಟ ಎಲ್ಲಾ ಕನ್ನಡಿಗರನ್ನು ಪ್ರತಿನಿಧಿಸುವುದಿಲ್ಲ. ರಾಷ್ಟ್ರಧ್ವಜದ ಹಾಗೆ ಕನ್ನಡ ಬಾವುಟಕ್ಕೆ ಸಮಗ್ರತೆ ಹಾಗೂ ವ್ಯಾಪಕತೆ ಎನ್ನುವುದಿಲ್ಲ. ಹೀಗಾಗಿ ಹಿಂದೂಯೇತರರು ಕನ್ನಡ ಬಾವುಟ ಹಾಗೂ ತಾಯಿ ಭುವನೇಶ್ವರಿಯನ್ನು ಒಪ್ಪಿಕೊಳ್ಳಲೇ ಬೇಕೆಂಬುದರಲ್ಲಿ ಅರ್ಥವಿಲ್ಲ.
ಕರ್ನಾಟಕದಲ್ಲಿ ಭಿನ್ನ ನಂಬಿಕೆ ಆಚರಣೆಗಳಿರುವ ಜಾತಿ ಧರ್ಮಗಳಿವೆ. ಎಲ್ಲರಿಗೂ ತಮ್ಮ ಧರ್ಮಾಚರಣೆಯನ್ನು ಮಾಡುವ ಧಾರ್ಮಿಕ ಸ್ವಾತಂತ್ರ್ಯವನ್ನು ಸಂವಿಧಾನ ಕೊಟ್ಟಿದೆ. ಹೀಗಿರುವಾಗ ಪ್ರಾದೇಶಿಕತೆಯನ್ನು ಹಾಗೂ ನಾಡು ನುಡಿ ಸಂಪ್ರದಾಯಗಳನ್ನು ಯಾವುದೇ ಒಂದು ಧರ್ಮಕ್ಕೆ ಸೀಮಿತಗೊಳಿಸಿ ಅನ್ಯ ಧರ್ಮಿಯರ ಮೇಲೆ ಹೇರಿಕೆ ಮಾಡುವುದು ತರವಲ್ಲ.
ಬಾನುರವರು ಇದನ್ನೇ ಪ್ರಶ್ನಿಸಿದ್ದಾರೆ. ಕರ್ನಾಟಕದ ಮುಸ್ಲಿಮರು ಕನ್ನಡಿಗರಾಗಿದ್ದರೂ, ಬಹುತೇಕರು ಕನ್ನಡ ಭಾಷೆಯನ್ನು ಸಂವಹನಕ್ಕೆ ಬಳಸುತ್ತಿದ್ದರೂ ಯಾಕೆ ಮುಸಲ್ಮಾನರನ್ನು ಕನ್ನಡದ ಅಸ್ಮಿತೆಯಿಂದ ಹೊರಗೆ ಇಡಲಾಗಿದೆ ಎಂಬುದೇ ಬಾನುರವರ ಪ್ರಶ್ನೆಯಾಗಿದೆ. ಹೀಗೆ ಪ್ರಶ್ನಿಸಿದ್ದಕ್ಕೆ ಅವರನ್ನು ಕನ್ನಡ ವಿರೋಧಿ ಎಂದು ಆರೋಪಿಸಿ ನಾಡ ಹಬ್ಬದ ಉದ್ಘಾಟನೆ ಮಾಡಬಾರದು ಎಂದು ಒತ್ತಾಯಿಸಲಾಗುತ್ತಿದೆ. ಕರ್ನಾಟಕ ರಾಜ್ಯ ಹಾಗೂ ಕನ್ನಡ ಭಾಷೆ ಯಾವುದೇ ಒಂದು ಜಾತಿ ಜನಾಂಗ ಧರ್ಮಗಳ ಸ್ವತ್ತಲ್ಲ. ಕರ್ನಾಟಕದಲ್ಲಿದ್ದು ಕನ್ನಡ ಬಳಸುವ ಎಲ್ಲರಿಗೂ ಸೇರಿದ್ದಾಗಿದೆ. ಹೀಗಾಗಿ ಕನ್ನಡದ ಅಸ್ಮಿತೆಯನ್ನು ಜಾಗತಿಕವಾಗಿ ಎತ್ತಿ ಹಿಡಿದ ಬಾನುರವರು ದಸರಾ ಹಬ್ಬದ ಉದ್ಘಾಟನೆಗೆ ಅತ್ಯಂತ ಸೂಕ್ತ ವ್ಯಕ್ತಿಯಾಗಿದ್ದಾರೆ. ವಿರೋಧಿಸುವವರು ಸಂಕುಚಿತ ಮನೋಭಾವ ಹೊಂದಿದವರಾಗಿದ್ದಾರೆ.
ಇದನ್ನೂ ಓದಿ- ಬಾನುವೂ – ಭುವನೇಶ್ವರಿಯೂ
ಇನ್ನು ನಂಬಿಕೆಯ ಪ್ರಶ್ನೆ. ಭಾನುರವರು ತಮ್ಮ ಸಾಹಿತ್ಯದ ಮೂಲಕ ಕನ್ನಡ ನಾಡು ಹಾಗೂ ಭಾಷೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದು ಸಾಧನೆ ಮಾಡಿದ್ದಾರೆ ಎನ್ನುವ ಕಾರಣಕ್ಕೆ ದಸರಾ ಹಬ್ಬದ ಉದ್ಘಾಟನೆ ಮಾಡಲು ರಾಜ್ಯ ಸರಕಾರ ಆಹ್ವಾನ ನೀಡಿದೆ. ಅವರನ್ನು ನಾಡ ಹಬ್ಬಕ್ಕೆ ಸಾಂಕೇತಿಕ ಚಾಲನೆ ನೀಡಲು ಆಹ್ವಾನಿಸಲಾಗಿದೆಯೇ ಹೊರತು ದೇವಿ ಚಾಮುಂಡೇಶ್ವರಿಯನ್ನು ಪೂಜೆ ಮಾಡಲು ಅಲ್ಲ. ಅರ್ಚಕರು ಪೂಜೆ ಮಾಡುತ್ತಾರೆ, ಆಸ್ತಿಕರು ಭಕ್ತಿಯಿಂದ ಕೈಮುಗಿಯುತ್ತಾರೆ. ಬಾನುರವರು ಸಾಂಕೇತಿಕವಾಗಿ ಉದ್ಘಾಟಿಸುತ್ತಾರೆ. ಇಷ್ಟೇ ಆಗಿದ್ದರೆ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಯಾವಾಗ ಬಾನುರವರು ಮುಸ್ಲಿಂ ಸಮುದಾಯದವರು ಎನ್ನುವ ಕಾರಣಕ್ಕೆ ಸಂಘಿಗಳು ಆಕ್ಷೇಪ ಎತ್ತಿದರೋ ಆಗ ದಸರಾ ಉದ್ಘಾಟನೆ ವಿವಾದದ ಸ್ವರೂಪ ಪಡೆದುಕೊಂಡಿತು. ಸಾಂಸ್ಕೃತಿಕ ಹಬ್ಬವನ್ನು ಕೇವಲ ಧಾರ್ಮಿಕ ಆಚರಣೆಗೆ ಸೀಮಿತಗೊಳಿಸಿದ ಹಿಂದುತ್ವವಾದಿಗಳು ರಾಜಕೀಯದಲ್ಲಿ ಧರ್ಮವನ್ನು ಬೆರೆಸಿ ಹಿಂದೂಗಳ ಭಾವನೆಗಳನ್ನು ಪ್ರಚೋದಿಸುವ ರಾಜಕಾರಣಕ್ಕಿಳಿದರು. ಆದರೆ ಯಾರು ಎಷ್ಟೇ ವಿರೋಧ ಮಾಡಲಿ ಕನ್ನಡಿಗರು ಮಾತ್ರ ವಿಚಲಿತರಾಗಲಿಲ್ಲ. ಅಪಪ್ರಚಾರಕ್ಕೆ ಮಾನ್ಯತೆ ಕೊಡಲಿಲ್ಲ. “ತಾಯಿ ಚಾಮುಂಡೇಶ್ವರಿಯೇ ನನ್ನನ್ನು ತನ್ನ ಸನ್ನಿಧಾನಕ್ಕೆ ಕರೆಸಿಕೊಳ್ಳುತ್ತಿದ್ದಾಳೆ” ಎಂದು ಹೇಳುವ ಮೂಲಕ ಬಾನುರವರು ತಮ್ಮನ್ನು ಪ್ರಶ್ನಿಸುವವರಿಗೆ ಉತ್ತರಿಸಿದರು.
ಏನೇ ಆಗಲಿ ದಸರಾ ಎಂಬುದು ಕನ್ನಡ ನಾಡಿನ ಹಬ್ಬ ಎಂಬುದು ಜನಜನಿತ. ಈಗ ಜನರ ತೆರಿಗೆ ಹಣ ಹಾಗೂ ಸರಕಾರದ ಸಾರಥ್ಯದಲ್ಲಿ ದಸರಾ ಆಚರಿಸಲಾಗುತ್ತದೆ. ಕನ್ನಡ ನಾಡು ನುಡಿಗೆ ಗೌರವ ತಂದುಕೊಟ್ಟವರನ್ನು ಸರಕಾರ ನಾಡ ಹಬ್ಬದ ಉದ್ಘಾಟನೆಗೆ ಆಹ್ವಾನಿಸುತ್ತದೆ. ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ ಎನ್ನುವುದನ್ನು ಸಮಸ್ತ ಕನ್ನಡಿಗರೂ ಒಪ್ಪಿಕೊಳ್ಳಬೇಕಿದೆ. ನಾಡ ಹಬ್ಬ ದಸರಾ ಸಾಂಕೇತಿಕವಾಗಿ ಧಾರ್ಮಿಕವಾಗಿದ್ದರೂ ಸಾರ್ವತ್ರಿಕವಾಗಿ ಸಮಸ್ತ ಕನ್ನಡಿಗರ ಸಾಂಸ್ಕೃತಿಕ ಹಬ್ಬ ಎಂದು ಅರಿತು ಧಾರ್ಮಿಕ ಸೌಹಾರ್ದತೆಯನ್ನು ಮುಂದುವರಿಸಬೇಕಿದೆ ಹಾಗೂ ಧರ್ಮದ ಆಧಾರದಲ್ಲಿ ಕನ್ನಡಿಗರಲ್ಲಿ ಒಡಕು ಮೂಡಿಸುವ ಶಕ್ತಿಗಳ ಪಿತೂರಿಗಳನ್ನು ಸೋಲಿಸಲೇಬೇಕಿದೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ದಸರಾ ಉದ್ಘಾಟನೆ ವಿವಾದ; ಭಾನು ಮುಷ್ತಾಕ್ ಯಾಕೆ ಬೇಡ?