ಬಿಹಾರದಲ್ಲಿ ಜನರ ವಿಶ್ವಾಸ ಕಳೆದುಕೊಂಡಿರುವ ಬಿಜೆಪಿ ಮತ ಕಳವು ಮೂಲಕ ಅಧಿಕಾರಕ್ಕೆ ಬರಲು ಹುನ್ನಾರ ನಡೆಸಿದೆ: ಪ್ರಿಯಾಂಕಾ ಗಾಂಧಿ ಆರೋಪ

Most read

ಪಟನಾ: ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ವಿರೋಧಿಸಿ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಹಮ್ಮಿಕೊಂಡಿರುವ ಪ್ರತಿಭಟನಾ ಯಾತ್ರೆಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಬಿಹಾರದ ಸುಪೌಲ್‌ನಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ರಾಹುಲ್ ಅವರೊಂದಿಗೆ ಸಹೋದರಿ ಪ್ರಿಯಾಂಕಾ ಪಾಲ್ಗೊಂಡರು. ಅವರು ಮತನಾಡಿ ಪ್ರಧಾನಿ ಮೋದಿ ಸರ್ಕಾರ ನಡೆಸುತ್ತಿರುವ ಕುತಂತ್ರಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ದೇಶಾದ್ಯಂತ ಜನರ ವಿಶ್ವಾಸವನ್ನು ಕಳೆದುಕೊಂಡಿರುವ ಬಿಜೆಪಿ ನೇತೃತ್ವದ ಎನ್‌ ಡಿಎ ಸರ್ಕಾರ ಹಲಬು ರಾಜ್ಯಗಳಲ್ಲಿ ಮತ ಕಳ್ಳತನಕ್ಕೆ ಸಂಚು ರೂಪಿಸಿದೆ. ಬಿಹಾರದಲ್ಲಿ ಚುನಾವಣಾ ಆಯೋಗದ ಮೂಲಕ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ ಐ ಆರ್‌) ಹೆಸರಿನಲ್ಲಿ ಲಕ್ಷಾಂತರ ಮತದಾರರ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆಪಾದಿಸಿದರು.

ಬಿಹಾರದಲ್ಲಿ ಬಿಜೆಪಿ-ಜೆಡಿ(ಯು) ನೇತೃತ್ವದ ಸರ್ಕಾರ ಜನಪರ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ.  ಹಣದುಬ್ಬರ, ನಿರುದ್ಯೋಗ, ವಲಸೆ ಮತ್ತು ಆರ್ಥಿಕ ಬಿಕ್ಕಟ್ಟು ಕಾಡುತ್ತಿದೆ. ಈ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮಯದಾರರ ಮತಗಳ ಕಳವು ಮಾಡುವ ಮೂಲಕ ಅಧಿಕಾರ ಉಳಿಸಿಕೊಳ್ಳಲು ಹುನ್ನಾರ ನಡೆಸಿದೆ ಎಂದು ವಾಗ್ದಾಳಿ ನಡೆಸಿದರು.

ರಾಹುಲ್‌ ಗಾಂಧಿ ಮಾತನಾಡಿ ದೇಶದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಹಕ್ಕನ್ನು ನೀಡಿದೆ. ಆದರೆ ಬಿಜೆಪಿ ಬಡ ಹಾಗೂ ವಂಚಿತ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಸಂಚು ರೂಪಿಸಿದೆ. ಮತದಾರರ ಹಕ್ಕನ್ನು ಕಸಿದುಕೊಳ್ಳಲು ಯಾರಿಗೂ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಗುಡುಗಿದರು.

ಮತದಾರರ ಅಧಿಕಾರ ಯಾತ್ರೆಯು ಆಗಸ್ಟ್ 17ರಂದು ಆರಂಭವಾಗಿದ್ದು ಸೆಪ್ಟೆಂಬರ್ 1ರಂದು ಪಟನಾದಲ್ಲಿ ಕೊನೆಗೊಳ್ಳಲಿದೆ.

More articles

Latest article