ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರು ಆಡಿದ ಮಾತೊಂದು ದೊಡ್ಡ ಕೋಲಾಹಲಕ್ಕೆ ಕಾರಣವಾಗಿದೆ. ಬಿಜೆಪಿ ಪಕ್ಷದ ವಕ್ತಾರರು ಅವರ ಮಾತಿನ ಅರ್ಥ ಉದ್ದೇಶ ಯಾವುದರ ಬಗ್ಗೆಯೂ ಯೋಚಿಸದೆಯೇ ಆಕಾಶ ಭೂಮಿ ಒಂದಾಗುವ ರೀತಿಯಲ್ಲಿ ಬೊಬ್ಬೆ ಹೊಡೆಯುತ್ತಿದ್ದಾರೆ. ‘ನೋಡಿ ನೋಡಿ ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ದೇಶವನ್ನೇ ಇಬ್ಬಾಗ ಮಾಡುವ ಮಾತಾಡುತ್ತಿದ್ದಾರೆ, ದೇಶವನ್ನು ಹೋಳಾಗಿಸಲು ಹೊರಟಿದ್ದಾರೆ, ಮತ್ತೊಮ್ಮೆ ದೇಶವನ್ನು ವಿಭಜನೆ ಮಾಡುವ ಹುನ್ನಾರ ಮಾಡಿದ್ದಾರೆ..’ ಹೀಗೆ ಸಾಗಿದೆ ಇವರ ಟೀಕಾಪ್ರಹಾರದ ಸರಣಿ.
ಅಷ್ಟಕ್ಕೂ ಡಿ ಕೆ ಸುರೇಶ್ ಆಡಿದ ಮಾತು ಏನು? “ನಮ್ಮ ತೆರಿಗೆ ಹಣವನ್ನೆಲ್ಲಾ ಉತ್ತರ ಭಾರತದ ಹಿಂದಿ ರಾಜ್ಯಗಳಿಗೆ ಹಂಚಿ ನಮಗೆ ಅನ್ಯಾಯ ಮಾಡುವ ಕೇಂದ್ರ ಸರ್ಕಾರದ ನೀತಿ ಹೀಗೇ ಮುಂದುವರಿದರೆ ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರದ ಕೂಗು ಏಳುತ್ತದೆ. ಕೇಂದ್ರ ತನ್ನ ತಪ್ಪನ್ನು ಸರಿಪಡಿಸಿಕೊಳ್ಳಬೇಕು. ರಾಜ್ಯಪಾಲರು ಸರ್ಕಾರದ ಪ್ರಯತ್ನಗಳಿಗೆ ಅಡ್ಡಗಾಲು ಹಾಕವುದು ಒಳಿತು ಮಾಡುವುದಿಲ್ಲ’ ಎಂದು ಅವರು ಹೇಳಿದ್ದರು. ಈ ಮಾತುಗಳ ಮೂಲಕ ಡಿ.ಕೆ ಸುರೇಶ್ ಅವರು ದೇಶವನ್ನು ಉತ್ತರ ಭಾರತ ಮತ್ತು ದಕ್ಷಿಣ ಭಾರತ ಎಂಬ ಎರಡು ರಾಷ್ಟ್ರಗಳಾಗಿ ಮಾಡಲು ಬೇಡಿಕೆ ಇಟ್ಟಂತೆಯೋ, ಕರೆ ಕೊಟ್ಟಂತೆಯೋ ಆಗುತ್ತದೆಯೇ? ಹೀಗೆ ಮಾತಾಡುವುದೇ ದೇಶದ್ರೋಹವಾಗಿಬಿಡುತ್ತದೆಯೇ? ಈ ಬಿಜೆಪಿ-ಸಂಘಪರಿವಾರದವರು ತಮ್ಮ ಪಾಡಿಗೆ ತಾವು ಗಂಟಲು ಹರಿದುಕೊಳ್ಳಲಿ. ಆದರೆ ಈ ನಾಡಿನ ಪ್ರಜ್ಞಾವಂತರು ಒಬ್ಬ ಸಂಸದರಾಗಿ ಡಿ.ಕೆ.ಸುರೇಶ್ ಅವರು ಆಡಿರುವ ಮಾತುಗಳ ಹಿಂದಿನ ಅರ್ಥವನ್ನು ಮತ್ತು ಉದ್ದೇಶವನ್ನು ವಸ್ತುನಿಷ್ಟವಾಗಿ ಗ್ರಹಿಸುವ ಹಾಗೂ ಈ ವಿಷಯದಲ್ಲಿ ಸರಿಯಾದ ನಿಲುವು ತೆಗೆದುಕೊಳ್ಳುವ ಅಗತ್ಯವಿದೆ.
ಇದು ಸಾಧ್ಯವಾಗಬೇಕೆಂದರೆ ನಾವು ಇದೀಗ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಮಧ್ಯಂತರ ಕೇಂದ್ರ ಬಜೆಟ್ ಮೂಲಕ ಕೇಂದ್ರ ಸರ್ಕಾರದಿಂದ ಕರ್ನಾಟಕ ಏನು ಪಡೆದುಕೊಂಡಿದೆ ಎಂಬುದನ್ನು ಸಮಾಧಾನದಿಂದ ಅರ್ಥಮಾಡಿಕೊಳ್ಳಬೇಕು. ಬಹಳ ಮುಖ್ಯವಾಗಿ ತೆರಿಗೆ ಹಂಚಿಕೆಯ ವಿಷಯವನ್ನೇ ಡಿ.ಕೆ.ಸುರೇಶ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತಾಡಿರುವುದರಿಂದ ಈ ತೆರಿಗೆ ಹಂಚಿಕೆ ಹಿಂದಿನ ಕುತಂತ್ರದ ರಾಜಕಾರಣವನ್ನು ಚಿತ್ತಸಂಯಮದಿಂದ ಅವಲೋಕಿಸಬೇಕಿದೆ.
ಕೇಂದ್ರ ಬಜೆಟ್ ಪ್ರಕಾರ ಕರ್ನಾಟಕ ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಸಂಗ್ರಹವಾಗುವ ಹಣ 4,00,000 (ನಾಲ್ಕು ಲಕ್ಷ) ಕೋಟಿ ರೂಪಾಯಿಗಳು. ರಾಜ್ಯಕ್ಕೆ ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆ ಮತ್ತು ಅನುದಾನದ ಮೂಲಕ ಬರುವ ಹಣ 44,485 ಕೋಟಿ ರೂಪಾಯಿಗಳು. ಒಕ್ಕೂಟ ಸರ್ಕಾರವು ಎಲ್ಲಾ ರಾಜ್ಯಗಳಿಗೆ ಸೇರಿ ಹಂಚುವ ತೆರಿಗೆ ಹಣ 12.19 ಲಕ್ಷ ಕೋಟಿ ಆದರೆ ಅದರಲ್ಲಿ ಕರ್ನಾಟಕ ಪಡೆಯುತ್ತಿರುವ ಪಾಲು ಕೇವಲ 3.6%. ಇದು ಇಷ್ಟೇ ಇರಬೇಕು ಎಂದು ನಿರ್ಧರಿಸಿರುವುದು 15ನೇ ಹಣಕಾಸು ಆಯೋಗ. ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶಕ್ಕೆ 18% ಪಾಲು ಸಿಗಲಿದೆ. ಅಂದರೆ ಒಟ್ಟು ಹಂಚಲ್ಪಡುವ ತೆರಿಗೆ (divisible tax pool)ಯಲ್ಲಿ 2.18 ಲಕ್ಷ ಕೋಟಿ ರೂಪಾಯಿಗಳನ್ನು ಈ ಹಿಂದಿ ರಾಜ್ಯ ಪಡೆಯಲಿದೆ. ಅದೇ ರೀತಿ ಬಿಹಾರಕ್ಕೆ 10% ಅಂದರೆ 1.22 ಲಕ್ಷ ಕೋಟಿ ರೂಪಾಯಿಗಳು. 14ನೇ ಹಣಕಾಸು ಆಯೋಗ ಕರ್ನಾಟಕಕ್ಕೆ 4.7% ತೆರಿಗೆ ಹಣ ಹಂಚಿಕೆಯಾಗಬೇಕು ಎಂದು ಹೇಳಿದ್ದರೆ 15ನೇ ಹಣಕಾಸು ಆಯೋಗ 3.6%ಗೆ ಇಳಿಸಿದೆ. “ತೆರಿಗೆ ಸಂಗ್ರಹದಲ್ಲಿ ಮಹಾರಾಷ್ಟ್ರ ಸರ್ಕಾರವನ್ನು ಬಿಟ್ಟರೆ ಕರ್ನಾಟಕವೇ 2ನೇ ಸ್ಥಾನದಲ್ಲಿದೆ. ನಾವು ನಾಲ್ಕು ಲಕ್ಷ ಕೋಟಿ ರೂಪಾಯಿಗಳನ್ನು ತೆರಿಗೆಯಾಗಿ ಕೇಂದ್ರಕ್ಕೆ ಕೊಡುತ್ತಿದ್ದೇವೆ. ಆದರೆ ತೆರಿಗೆ ಹಂಚಿಕೆ ಪಡೆಯುವಲ್ಲಿ ನಾವು 10ನೇ ಸ್ಥಾನದಲ್ಲಿದ್ದೇವೆ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಈ ಮೇಲಿನ ಎಲ್ಲಾ ಅಂಕಿ ಅಂಶಗಳನ್ನು ನೋಡಿದಾಗ ಚಿಕ್ಕಮಕ್ಕಳಿಗೂ ತಿಳಿಯುವ ಸಂಗತಿ ಏನೆಂದರೆ ಮೇಲ್ನೋಟಕ್ಕೇ ಕರ್ನಾಟಕಕ್ಕೆ ಭಾರೀ ಅನ್ಯಾಯವಾಗಿದೆ ಎಂದು. ಹಾಗಾದರೆ ಇದರ ಬಗ್ಗೆ ಮಾತಾಡಬೇಕಾದವರು ಯಾರು? ಕನ್ನಡಿಗರಿಗೆ ಈ ತೆರಿಗೆ ಹಣಹಂಚಿಕೆಯಲ್ಲಿ ಆಗುತ್ತಿರುವ ಮಹಾಮೋಸದ ಬಗ್ಗೆ ಕೇಂದ್ರಕ್ಕೆ ತಿಳಿಯಪಡಿಸಬೇಕಾದವರು ಯಾರು? ಸಂಸತ್ತಿನಲ್ಲಿ ಲೋಕಸಭೆಯಲ್ಲಿ ರಾಜ್ಯಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಸಂಸದರೇ ಅಲ್ಲವೆ? ಕರ್ನಾಟಕದಿಂದ 26 ಸಂಸದರು ಆಯ್ಕೆಯಾಗಿರುವುದು ಬಿಜೆಪಿ ಪಕ್ಷದಿಂದ. ಕೇಂದ್ರದಲ್ಲಿ ಆಡಳಿತ ಪಕ್ಷವಾಗಿರುವ ಈ ಸಂಸದರಿಗೆ ಈ ಬಗ್ಗೆ ತಮ್ಮದೇ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಹೊಣೆಗಾರಿಕೆ ಇರಲಿಲ್ಲವೆ? ಈ ಬಗ್ಗೆ ಇವರು ತುಟಿಪಿಟಿಕ್ಕೆನ್ನದೆ ನಾಲಗೆ ಬಿದ್ದವರಂತೆ ಮೌನವಾಗಿ ಕುಳಿತಿರುವುದು ಏಕೆ? ಡಿ.ಕೆ.ಸುರೇಶ್ ಅವರ ಮಾತಿನಲ್ಲಿ ‘ದೇಶ ವಿಭಜನೆ’ ‘ದೇಶದ್ರೋಹ’ ಕಾಣುತ್ತಿರುವ ಈ ಹೊಣೆಗೇಡಿ ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ ಇತ್ಯಾದಿಗಳ ಬುದ್ಧಿಮಟ್ಟ ಇಷ್ಟು ತಳಮಟ್ಟದಲ್ಲಿಇರುವುದನ್ನು ನೋಡಿ ಕನ್ನಡಿಗರು ನಿಜಕ್ಕೂ ಆಕ್ರೋಶಗೊಂಡಿದ್ದಾರೆ.
ಡಿ.ಕೆ.ಸುರೇಶ್ ಅವರ ಮಾತಿನ ಉದ್ದೇಶ ರಾಜ್ಯಕ್ಕೆ ಆಗುತ್ತಿರುವ ಹಣಕಾಸು ಅನ್ಯಾಯದ ಕುರಿತು ಜಡ್ಡುಗಟ್ಟಿದ ಸರ್ಕಾರವನ್ನು ಎಚ್ಚರಿಸುವುದೇ ವಿನಃ ದೇಶದ ಸಾರ್ವಭೌಮತೆ ವಿರುದ್ಧ ಯಾರನ್ನೋ ಪ್ರೇರೇಪಿಸುವುದಾಗಲೀ, ಚಿತಾವಣೆ ನಡೆಸುವುದಾಗಲೀ ಅಲ್ಲ ಎಂದು ಎಂತವರಿಗೂ ಅರ್ಥವಾಗುತ್ತದೆ. ಈ ಬಿಜೆಪಿಗರಿಗೂ ಇದು ಅರ್ಥವಾಗದ ವಿಷಯ ಅಲ್ಲ. ಆದರೂ ತಮ್ಮ ಕೈಲಾಗದತನವನ್ನು, ತಮ್ಮ ಕೆಲಸಗೇಡಿತನವನ್ನು, ತಮ್ಮದೇ ಸರ್ಕಾರದ ಜನವಿರೋಧಿತನವನ್ನು ಮುಚ್ಚಿಟ್ಟುಕೊಳ್ಳಲು ಈಗ ಜನರನ್ನು ಭಾವನಾತ್ಮಕವಾಗಿ ರೊಚ್ಚಿಗೆಬ್ಬಿಸುವ ವಿಫಲ ಪ್ರಯತ್ನವನ್ನು ಇವರು ನಡೆಸುತ್ತಿದ್ದಾರೆ.
ಈ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಮೂಲ ಎಲ್ಲಿದೆ?
ಸಂದೇಹವೇ ಬೇಡ ಹೀಗೆ ಆಗಿರುವುದು ನಾವು ಒಕ್ಕೂಟ ಸರ್ಕಾರ ಎಂದು ನಂಬಿಕೊಂಡು ಬಂದಿರುವ ಭಾರತ ಸರ್ಕಾರದ ಒಕ್ಕೂಟ ತತ್ವವಿರೋಧಿ ನಡೆಯಿಂದಲೇ. ಆದರೆ ಬಹಳ ಚಾಣಾಕ್ಷತನದಿಂದ ಅಥವಾ ಕುತಂತ್ರದಿಂದ ಸಾಮಾನ್ಯ ಜನರ ಅರಿವಿಗೇ ಬರದಂತೆ ಇದನ್ನು ಮಾಡಿಕೊಂಡು ಬಂದಿದ್ದಾರೆ. ಇಲ್ಲಿ ಅನ್ಯಾಯ ಆಗಿರುವುದು ಕೇವಲ ಕರ್ನಾಟಕಕ್ಕೆ ಅಲ್ಲ, ದಕ್ಷಿಣ ಭಾರತದ ಬಹುತೇಕ ರಾಜ್ಯಗಳಿಗೆ ಅನ್ಯಾಯವಾಗಿದೆ. ತೆರಿಗೆ ಸಂಗ್ರಹದಲ್ಲಿರಬಹುದು, ತೆರಿಗೆ ಹಂಚಿಕೆಯಲ್ಲಿರಬಹುದು, ಹಣಕಾಸು ಆಯೋಗದ ಟರ್ಮ್ಸ್ ಆಫ್ ರೆಫರೆನ್ಸ್ (ToR) ಗಳಲ್ಲಿ ಇರಬಹುದು, ಹಣಕಾಸು ಆಯೋಗದ ವರದಿಯ ಶಿಫಾರಸುಗಳಲ್ಲಿರಬಹುದು ಪ್ರತಿಯೊಂದರಲ್ಲಿ ಬಳಸಿರುವ ಮಾನದಂಡಗಳು ಮತ್ತು ಲೆಕ್ಕಾಚಾರ ಹಾಕಿರುವ ರೀತಿನೀತಿ ಎಲ್ಲದರಲ್ಲೂ ಪರಮ ವಂಚನೆಯನ್ನೇ ನಾವು ಕಾಣುತ್ತೇವೆ. ಈ ಹಿನ್ನೆಲೆಯಲ್ಲಿ ಅನ್ಯಾಯಕ್ಕೆ ಒಳಗಾಗಿರುವ ಎಲ್ಲಾ ದಕ್ಷಿಣದ ರಾಜ್ಯಗಳು ಧ್ವನಿ ಎತ್ತಿದರೆ ಅದು ದಕ್ಷಿಣ ಭಾರತದ ಒಮ್ಮತದ ಧ್ವನಿಯಾಗೇ ಕೇಳಿಸುತ್ತದೆ ಎಂಬ ನಿಟ್ಟಿನಲ್ಲಿ ಡಿ ಕೆ ಸುರೇಶ್ ಅವರು ಆಡಿರುವ ಮಾತುಗಳಲ್ಲಿ ಅರ್ಥವಿದೆ. ಇದರ ಅರ್ಥ ಪ್ರತ್ಯೇಕ ರಾಷ್ಟ್ರವಾಗಬೇಕು ಎಂದಲ್ಲ ಆದರೆ ಒಕ್ಕೂಟ ಸರ್ಕಾರವೊಂದು ತನ್ನ ರಾಜ್ಯಗಳಿಗೆ ಉದ್ದೇಶಪೂರ್ವಕವಾಗಿ ಮೋಸ, ವಂಚನೆ ಎಸಗುತ್ತಾ ಬಂದರೆ, ದಕ್ಷಿಣ ರಾಜ್ಯಗಳನ್ನು ಪದೇ ಪದೇ ಸಂಕಷ್ಟಕ್ಕೆ ಸಿಲುಕಿಸುತ್ತಾ ಬಂದರೆ, ದಕ್ಷಿಣದ ರಾಜ್ಯಗಳ ಜನರ ತೆರಿಗೆ ಹಣದಲ್ಲಿ ಉತ್ತರ ಪ್ರದೇಶದಂತ ಅವ್ಯವಸ್ಥಿತ ಮತ್ತು ಅರಾಜಕತೆ ತುಂಬಿ ತುಳುಕಾಡುವ ರಾಜ್ಯದ ಉದ್ದಾರ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರ ಚಿತಾವಣೆ ನಡೆಸುತ್ತಲೇ ಹೋದರೆ ದಕ್ಷಿಣ ಭಾರತೀಯರಲ್ಲಿ ‘ನಾವು ಮೋಸ ಹೋಗಿದ್ದೇವೆ’, ‘ಸಂವಿಧಾನದ ಮೂಲತತ್ವಗಳಲ್ಲಿ ಒಂದಾದ ಒಕ್ಕೂಟ ತತ್ವಕ್ಕೆ ಇಲ್ಲಿ ಬೆಲೆ ಇಲ್ಲವಾಗಿದೆ’ ಎಂಬ ಚಿಂತನೆ ಬಾರದೇ ಇರುತ್ತದೆಯೇ?
ಒಕ್ಕೂಟ ಸರ್ಕಾರ ತೆರಿಗೆ ಹಣ ಸಂಗ್ರಹ ಮತ್ತು ಹಂಚಿಕೆ ಯಾವ ರೀತಿಯಲ್ಲಿ ಚಿತಾವಣೆ ನಡೆಸಿದೆ ಎನ್ನಲು ಒಂದು ಉದಾಹರಣೆ ಎಂದರೆ, 14ನೇ ಹಣಕಾಸು ಆಯೋಗವು ಮೇಲುನೋಟಕ್ಕೆ ರಾಜ್ಯಗಳ ಪರವಾಗಿ ಕಾಣಿಸುವ ಒಂದು ಶಿಫಾರಸ್ಸನ್ನು ನೀಡಿತ್ತು. ಅದೇನೆಂದರೆ 2015ರಿಂದ 2020ರ ಅವಧಿಗೆ ಅನ್ವಯವಾಗುವಂತೆ ಕೇಂದ್ರದಿಂದ ಹಂಚಲಾಗುವ ತೆರಿಗೆ ಹಣದ ಪ್ರಮಾಣವನ್ನು ಮೊದಲಿದ್ದ 32%ನಿಂದ 42%ಗೆ ಅದು ಹೆಚ್ಚಿಸಿತ್ತು. ಇದರಿಂದ ನಾವೆಲ್ಲಾ ಸಂತೋಷಗೊಂಡಿದ್ದೆವು. ರಾಜ್ಯಗಳಿಗೆ 10% ತೆರಿಗೆ ಹಣ ಹೆಚ್ಚಾಗಿದೆ ಎಂದುಕೊಂಡಿದ್ದೆವು. ಹೌದು ಹಂಚಿಕೆಯಲ್ಲಿ ಹೆಚ್ಚಾಗಿದ್ದು ನಿಜ. ಆದರೆ ಹಣಕಾಸು ಆಯೋಗದ ಈ ಶಿಫಾರಸು ಅಪ್ರಯೋಜಕವಾಗುವ ರೀತಿಯಲ್ಲಿ ಒಕ್ಕೂಟ ಸರ್ಕಾರ ಮಸಲತ್ತು ನಡೆಸಿತ್ತು. ಹೇಗೆಂದರೆ ಅದರು ಉಪಾಯವಾಗಿ ನಿರಂತರವಾಗಿ ಸೆಸ್ ಮತ್ತು ಸರ್ಚಾರ್ಜ್ ಗಳನ್ನು ಹೆಚ್ಚಿಸಿಕೊಂಡಿದ್ದು! 2012ರಲ್ಲಿ ಕೇವಲ 10.4% ಇದ್ದ ಸೆಸ್ (Cess) ಮತ್ತು ಸರ್ಚಾರ್ಜ್ (Surcharge) ಗಳ ಪ್ರಮಾಣ 2021ರಲ್ಲಿ 19.9%ಕ್ಕೆ ಏರಿದೆ. ಇವೂ ಕೂಡ ತೆರಿಗೆಯ ಮತ್ತೊಂದು ರೂಪವೇ ಎಂದು ಬಿಡಿಸಿ ಹೇಳಬೇಕಿಲ್ಲ. ಈ ತೆರಿಗೆಗಳನ್ನು ಏರಿಸುವುದರಿಂದ ಕೇಂದ್ರಕ್ಕೆ ಲಾಭ, ರಾಜ್ಯಗಳಿಗೆ ಮೋಸ ಹೇಗೆ ಅಂತೀರಾ? ಹೇಗೆಂದರೆ ಈ ಸೆಸ್ ಮತ್ತು ಸರ್ಚಾರ್ಜ್ ರೂಪದಲ್ಲಿ ಸಂಗ್ರಹಿಸುವ ತೆರಿಗೆಗಳಿಂದ ಒಕ್ಕೂಟ ಸರ್ಕಾರಕ್ಕೆ ಹೋಗುವ ಹಣವನ್ನು ಅದು ಹಂಚಿಕೆಯಾಗುವ ತೆರಿಗೆಯ (divisible tax pool) ಪರಿಧಿಗೆ ಸೇರಿಸುವಂತಿಲ್ಲ. ಅಂದರೆ ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ, ಅಬಕಾರಿ ತೆರಿಗೆಗಳ ಹಣವನ್ನಾದರೆ ರಾಜ್ಯಗಳಿಗೂ ನಿರ್ದಿಷ್ಟ ಅನುಪಾತದಲ್ಲಿ ಹಂಚಬೇಕು. ಅದೇ ನೀವು ಸೆಸ್ ಮತ್ತು ಸರ್ಚಾರ್ಜ್ ರೂಪದಲ್ಲಿ ತೆರಿಗೆ ಸಂಗ್ರಹಿಸಿಬಿಟ್ಟರೆ ಅದನ್ನು ರಾಜ್ಯಗಳಿಗೆ ಹಂಚಬೇಕಿಲ್ಲ. ಸ್ವಚ್ಚ ಭಾರತ್ ಸೆಸ್ ಎಂದು ಸಂಗ್ರಹಿಸಿದ ಹಣದಲ್ಲಿ ರಾಜ್ಯಕ್ಕೆ ಪಾಲಿಲ್ಲ! ಈ ಅವಕಾಶವನ್ನು ಬಿಜೆಪಿ ಸರ್ಕಾರ ಯಾವ ರೀತಿ ಬಳಸಿಕೊಂಡು ರಾಜ್ಯಗಳನ್ನು ವಂಚಿಸಿದೆ ಎನ್ನಲು ಉದಾಹರಣೆ ನೀಡುವುದಾದರೆ 2021-22ರ ಕೇಂದ್ರ ಬಜೆಟ್ಟಿನಲ್ಲಿ ಜಾರಿಗೊಳಿಸಿದ ಕೃಷಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸೆಸ್ (AIDC) ತೆಗೆದುಕೊಳ್ಳಿ. ಈ ಸೆಸ್ ಒಳಕ್ಕೆ ಬಿಜೆಪಿ ಸರ್ಕಾರ ಅದುವರೆಗೆ ಅಬಕಾರಿ ಸುಂಕದ ಅಡಿ ಬರುತ್ತಿದ್ದ ತೆರಿಗೆಗಳನ್ನು ತಂದುಕೊಂಡಿತು. ಇದರಿಂದ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನೂ AIDC ಸೆಸ್ ಎಂದು ಮಾಡಿ ರಾಜ್ಯಗಳ ಬೊಕ್ಕಸಕ್ಕೆ ಮರ್ಮಾಘಾತ ನೀಡಿತು. ಅಂದರೆ ಈ ಮೊದಲು ಪೆಟ್ರೋಲಿಯಂ ಮೇಲೆ ರಾಜ್ಯಗಳಿಂದ ಸಂಗ್ರಹವಾಗುತ್ತಿದ್ದ ತೆರಿಗೆ ಹಣದಲ್ಲಿ ರಾಜ್ಯಕ್ಕೂ ಪಾಲು ಸಿಗುತ್ತಿತ್ತು. ಈಗ ಅದನ್ನು ಸೆಸ್ ಭಾಗವಾಗಿ ಮಾಡಿದ್ದರಿಂದ ಅದು ತಪ್ಪಿದಂತಾಯಿತು. ಈ ನಷ್ಟವನ್ನು ಸರಿದೂಗಿಸಲು ಕೆಲವು ರಾಜ್ಯಗಳು ಪೆಟ್ರೋಲ್ ಮೇಲೆ ಹೆಚ್ಚುವರಿ ತೆರಿಗೆ ಹಾಕಿದವು. ಇದರ ಅಂತಿಮ ಹೊರೆ ಬಿದ್ದಿದ್ದು ಗ್ರಾಹಕರಿಗೆ.
ಹೀಗೆ ತೆರಿಗೆ ಸಂಗ್ರಹದಲ್ಲಿ ಒಕ್ಕೂಟ ಸರ್ಕಾರ ಕುತಂತ್ರದ ಯೋಜನಗೆಳನ್ನು ಜಾರಿಗೊಳಿಸಿದ್ದು ಒಂದು ಕಡೆಯಾದರೆ ಈಗ ಹಣಕಾಸು ಆಯೋಗದ ಶಿಪಾರಸುಗಳ ಮೂಲಕವೂ ಅದೇ ರೀತಿಯ ಕುತಂತ್ರಗಳನ್ನು ಮಾಡಿ ನಮ್ಮನ್ನು ವಂಚಿಸಿದೆ. ಇದಕ್ಕೆ ಉದಾಹರಣೆ ಏನೆಂದರೆ ಹಂಚಿಕೆ 2020ರಿಂದ 2026ರ ಅವಧಿಗೆ ಅನ್ವಯವಾಗುವ 15ನೇ ಹಣಕಾಸು ಆಯೋಗದಲ್ಲಿ ತೆರಿಗೆ ಹಣ ಹಂಚಲು ಕೆಲವು ಮಾನದಂಡಗಳನ್ನು ರೂಪಿಸಿದೆ. ಅವು ಹೀಗಿವೆ.
- ಜನಸಂಖ್ಯೆ- 15%,
- ಭೂಪ್ರದೇಶ- 15%
- ಅರಣ್ಯ ಮತ್ತು ಪರಿಸರ – 10%
- ಆದಾಯ ಅಂತರ (income distance)- 45%
- ತೆರಿಗೆ ಮತ್ತು ಹಣಕಾಸು ಪ್ರಯತ್ನ – 02.5%
- ಡೆಮಗ್ರಫಿಕ್ ಪರ್ಫಾರ್ಮೆನ್ಸ್ – 12.5%
ಈ ಆರು ಮಾನದಂಡಗಳು ಮೇಲು ನೋಟಕ್ಕೆ ‘ಅಡ್ಡಿ ಇಲ್ಲ, ಇದರಿಂದ ಎಲ್ಲಾ ರಾಜ್ಯಗಳಿಗೂ ಸಮಪಾಲು ಸಿಗಬಹುದು ಎಂಬ ಭಾವನೆ ಮೂಡಿತ್ತು. ಆದರೆ ಹಣಕಾಸು ಆಯೋಗದ ಅಂತಿಮ ವರದಿ ಬಂದಾಗ ಇವುಗಳನ್ನು ಹೇಗೆ ಲೆಕ್ಕಾಚಾರ ಹಾಕಿದ್ದಾರೆ ಎಂಬುದನ್ನು ನೋಡಿದಾಗಲೇ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಆಗಿರುವ ಅನ್ಯಾಯ ವಂಚನೆ ಗೊತ್ತಾಗಿದ್ದು. ಈ ಹಿಂದಿನ ಎಲ್ಲಾ ಹಣಕಾಸು ಆಯೋಗಗಳಿಗೆ ತೆರಿಗೆ ಹಣ ಹಂಚಿಕೆಯಲ್ಲಿ 1972ನೇ ಇಸವಿಯನ್ನು ಬೇಸ್ ಇಯರ್ ಅಥವಾ ಮೂಲ ವರ್ಷವಾಗಿ ಪರಿಗಣಿಸಲಾಗಿದ್ದರೆ 15ನೇ ಹಣಕಾಸು ಆಯೋಗ 2011ರ ಜನಗಣತಿಯನ್ನು ಮೂಲ ವರ್ಷವಾಗಿ ಪರಿಗಣಿಸಿದೆ. ‘ಇದರಿಂದ ಆದ ಸಮಸ್ಯೆ ಏನು?’ ಅಂತಿರಾ? ಸಿಂಪಲ್. ಕಳೆದ 40-50 ವರ್ಷಗಳಲ್ಲಿ ಯಾವ ರಾಜ್ಯಗಳೆಲ್ಲಾ ಕುಟುಂಬ ಕಲ್ಯಾಣ ಯೋಜನೆಯನ್ನು ಶಿಸ್ತುಬದ್ಧವಾಗಿ ಅನುಷ್ಠಾನಗೊಳಿಸಿಕೊಂಡು ತಮ್ಮ ಒಟ್ಟಾರೆ ಜನಸಂಖ್ಯೆಯನ್ನು ನಿಯಂತ್ರಿಸಿಕೊಂಡಿದ್ದವೋ ಆ ರಾಜ್ಯಗಳಿಗೆ ಕಡಿಮೆ ತೆರಿಗೆ ಹಂಚಿಕೆಯೂ, ಯಾವ ರಾಜ್ಯಗಳಲ್ಲಿ ಜನಸಂಖ್ಯೆನಿಯಂತ್ರಣವೇ ಇಲ್ಲದೇ ಹೆಚ್ಚು ಜನಸಂಖ್ಯೆ ಸಾಧಿಸಿದ್ದವೋ ಆ ರಾಜ್ಯಗಳಿಗೆ ಹೆಚ್ಚು ತೆರಿಗೆ ಪಾಲೂ ಹೋಗುವಂತಾಯಿತು. ಹೀಗಾಗಿಯೇ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳು ಹೆಚ್ಚು ಪಾಲು ಪಡೆದಿದ್ದು! ಇದರೊಳಗೇ ಇನ್ನೂ ಒಂದು ಮೋಸವೆಂದರೆ ಮೇಲೆ ಪಟ್ಟಿ ಮಾಡಿದ ಆರು ಮಾನಂದಡಗಳ ಪೈಕಿ ಜನಸಂಖ್ಯೆ, ಆದಾಯ ಅಂತರ ಮತ್ತು ಡೆಮಗ್ರಫಿಕ್ ಪರ್ಫಾರ್ಮೆನ್ಸ್ ಈ ಮೂರನ್ನೂ 2011ರ ಜನಗಣತಿ ಆಧಾರದ ಮೇಲೆ ಅಳೆದಿರುವ ಕಾರಣ ತೆರಿಗೆ ಹಂಚಿಕೆಯಲ್ಲಿ ಶೇಕಡಾ 72.5ರಷ್ಟು ಹಂಚಿಕೆ ಆಧರಿಸಿದ್ದು ಬರೀ ಜನಸಂಖ್ಯೆಯನ್ನು! ಇದೂ ಹೀಗೇ ಆಗಬೇಕು, ಹೆಚ್ಚು ಜನಸಂಖ್ಯೆ ಇಟ್ಟುಕೊಂಡಿರುವ ಉತ್ತರ ಭಾರತದ ಹಿಂದಿಯನ್ ರಾಜ್ಯಗಳಿಗೇ ಹೆಚ್ಚು ತೆರಿಗೆ ಹಣ ಹೋಗಬೇಕು ಮತ್ತು ತೆರಿಗೆ ಸಂಗ್ರಹದಲ್ಲೂ ಹೆಚ್ಚು ಸಾಧನೆ ಮಾಡಿ, ಜನಸಂಖ್ಯೆ ನಿಯಂತ್ರಣದಲ್ಲೂ ಉತ್ತಮ ಸಾಧನೆ ಮಾಡಿರುವ ದಕ್ಷಿಣ ಭಾರತದ ರಾಜ್ಯಗಳಿಗೆ ನಷ್ಟವಾಗಬೇಕು ಎಂಬ ಉದ್ದೇಶ ಬಿಟ್ಟರೆ ಬೇರೆ ಯಾವು ಘನ ಉದ್ದೇಶವೂ ಇದರಲ್ಲಿ ಕಾಣುವುದಿಲ್ಲ.
ಪರಿಣಾಮವಾಗಿಯೇ ತೆರಿಗೆ ಹಣ ಹಂಚಿಕೆಯಲ್ಲಿ ಕರ್ನಾಟಕಕ್ಕೆ 3.6%, ಕೇರಳಕ್ಕೆ 1.93%, ಮಹಾರಾಷ್ಟ್ರಕ್ಕೆ 6.3%, ತಮಿಳು ನಾಡಿಗೆ 4% ಸಿಕ್ಕಿದ್ದರೆ ಹಿಂದಿಯನ್ ರಾಜ್ಯಗಳಾದ ಉತ್ತರ ಪ್ರದೇಶಕ್ಕೆ 18%, ಬಿಹಾರಕ್ಕೆ 10% ತೆರಿಗೆ ಹಣದ ಪಾಲು ದೊರೆತಿರುವುದು.
ಇನ್ನೂ ಒಂದು ಅಂಕಿಅಂಶ ಕೊಡುವುದಾದರೆ, 12ನೇ ಹಣಕಾಸು ಆಯೋಗದಿಂದ 15ನೇ ಹಣಕಾಸು ಆಯೋಗದವರೆಗೆ ತೆರಿಗೆ ಹಣ ಹಂಚಿಕೆಯಲ್ಲಿ ಆಗಿರುವ ವ್ಯತ್ಯಾಸ ನೋಡಿದಾಗ ಅತಿ ಹೆಚ್ಚು ನಷ್ಟಕ್ಕೆ ಒಳಗಾಗಿರುವ ರಾಜ್ಯಗಳೆಂದರೆ ಕೇರಳ, ತಮಿಳುನಾಡು ಮತ್ತು ಕರ್ನಾಟಕ. ಇವುಗಳ ಪ್ರಮಾಣ ಕ್ರಮವಾಗಿ -27.8%, -23.1% ಮತ್ತು -18.2%. ಉತ್ತರ ಪ್ರದೇಶ ಕಂಡಿರುವ ವ್ಯತ್ಯಾಸ ಕೇವಲ -6.9%. ಇದು ಏನನ್ನು ಸೂಚಿಸುತ್ತದೆ ಎಂದರೆ ನಮ್ಮ ತೆರಿಗೆಯ ಪಾಲನ್ನು ನಮಗೆ ಹಂಚಿಕೆ ಮಾಡಲೆಂದು ಅಥವಾ ಕೇಂದ್ರ-ರಾಜ್ಯಗಳ ನಡುವೆ ತೆರಿಗೆ ಸಂಗ್ರಹ ಮತ್ತು ತೆರಿಗೆ ಹಂಚಿಕೆಯಲ್ಲಿ ಉಂಟಾಗುವ ಅಸಮತೋಲನವನ್ನು (ವರ್ಟಿಕಲ್ ಮತ್ತು ಹಾರಿಜಾಂಟಲ್ ಇಂಬ್ಯಾಲೆನ್ಸ್) ಸರಿದೂಗಿಸುವ ಇರಾದೆಯೊಂದಿಗೆ ಸಂವಿಧಾನಬದ್ಧವಾಗಿಯೇ ರಚಿತವಾಗಿರುವ ಹಣಕಾಸು ಆಯೋಗದಂತಹ ಸಂಸ್ಥೆಯ ಶಿಫಾರಸುಗಳು ದಕ್ಷಿಣ ಭಾರತದ ರಾಜ್ಯಗಳಿಗೆ ನಿರಂತರವಾಗಿ ಅನ್ಯಾಯವೆಸಗುತ್ತಲೇ ಬಂದಿವೆ. ಒಂದೊಮ್ಮೆ ಅದರ ಶಿಫಾರಸು ಉತ್ತಮವಾಗಿದೆ ಎನಿಸಿದಾಗಲೂ ಕೇಂದ್ರ ಸರ್ಕಾರದ ಷಡ್ಯಂತ್ರಗಳು ನಮಗೆ ವಂಚಿಸಿವೆ. ಇದನ್ನು ಯಾರಲ್ಲಿ ಕೇಳಬೇಕು? ಯಾರು ಕೇಳಬೇಕು?
ಈಗ ಹೇಳಿ ರಾಜ್ಯದ ಸಂಸದ ಡಿ ಕೆ ಸುರೇಶ್ ಹೇಳಿದ್ದರಲ್ಲಿ ತಪ್ಪೇನಿದೆ? ಇಲ್ಲಾ ಡಿ ಕೆ ಸುರೇಶ್ ಹೇಳಿದ್ದು ದೇಶದ್ರೋಹದ ಮಾತು ಎನ್ನುವುದೇ ಆದರೆ ಈ ನಾಡದ್ರೋಹಿ ಪರಮ ವಂಚಕರಿಂದ ನಾನೂ ಸಹ ‘ದೇಶದ್ರೋಹಿ’ ಎಂದು ಕರೆಸಿಕೊಳ್ಳುಲು ಇಚ್ಚಿಸುತ್ತೇನೆ. ನೀವು?