ಬೆಂಗಳೂರು: ಬೆಂಗಳೂರಿನ ಚಿನ್ನಸ್ಡಾಮಿ ಕ್ರೀಡಂಗಣದಲ್ಲಿ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟ ಪ್ರಕರಣ ಕುರಿತು ವಿಪಕ್ಷಗಳು ನಡೆಸಿದ ಟೀಕೆ ಟಿಪ್ಪಣಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀಖ್ಷಣ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಅಧಿಕಾರವಿರುವ ರಾಜ್ಯಗಳಲ್ಲೇ ಅತಿ ಹೆಚ್ಚು ಕಾಲ್ತುಳಿತ ಪ್ರಕರಣಗಳು ಸಂಭವಿಸಿವೆ ಎಂದೂ ತಿರುಗೇಟು ನೀಡಿದ್ದಾರೆ.
ವಿಧಾನಸಭೆಯಲ್ಲಿ ಈ ಪ್ರಕರಣ ಕುರಿತು ಪ್ರತಪಕ್ಷಗಳ ಆರೋಪಗಳಿಗೆ ಉತ್ತರಿಸಿದ ಅವರು ಈ ಪ್ರಕರಣದಲ್ಲಿ ತಮ್ಮ ಸರ್ಕಾರ ಕೈಗೊಂಡ ಕ್ರಮಗಳನ್ನು ಸಮರ್ಥಿಸಿಕೊಂಡರು. ವಿವಿಧ ರಾಜ್ಯಗಳು ಹಾಗೂ ವಿದೇಶಗಳಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕಣಗಳ ಪಟ್ಟಿ ನೀಡಿದರು.
ಸರ್ಕಾರದ ಕ್ರಮಗಳನ್ನು ವಿವರಿಸಿದ ಸಿಎಂ, ದುರಂತ ಕುರಿತು ಸ್ಪಷ್ಟ ಹಾಗೂ ನಿಖರ ತನಿಖೆ ನಡೆಯಲಿ ಎಂದೇ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ನೇತೃತ್ವದ ತನಿಖಾ ಸಮಿತಿ ರಚಿಸಲಾಗಿತ್ತು. ಅವರು ಜುಲೈ 10ರಂದು ವರದಿ ನೀಡಿದ್ದಾರೆ. ಜಿಲ್ಲಾಧಿಕಾರಿಗಳೂ ವರದಿ ಸಲ್ಲಿಸಿದ್ದಾರೆ. ಹೀಗಿರುವಾಗ ಸರ್ಕಾರ ಕುಮ್ಮಕ್ಕು ನೀಡಿದೆ ಎಂದು ಆರೋಪಿಸುವುದು ಸರಿಯಲ್ಲ ಎಂದರು.
ಧಾರ್ಮಿಕ ಸ್ಥಳಗಳು, ಕ್ರೀಡಾಕೂಟ ಅಥವಾ ಶೋಕಾಚರಣೆ ಸಂದರ್ಭಗಳಲ್ಲಿ ಸಾರ್ವಜನಿಕರಲ್ಲಿ ಆತಂಕ ಉಂಟಾದಾಗ ಕಾಲ್ತುಳಿತಗಳು ಸಂಭವಿಸುವುದು ಸಾಮಾನ್ಯ. ಅದರಲ್ಲೂ ಭಕ್ತಿ ಮತ್ತು ವ್ಯಕ್ತಿ ಆರಾಧನೆ ಇರುವ ಕಾರ್ಯಕ್ರಮಗಳಲ್ಲಿ ಇಂತಹ ಘಟನೆಗಳು ಸುಲಭವಾಗಿ ಸಂಭವಿಸುತ್ತವೆ ಎಂದು ಡಾ.ಬಿ.ಆರ್. ಅಂಬೇಡ್ಕರ್ ಅವರೇ ಹೇಳಿದ್ದರು ಎಂದು ಸಿಎಂ ಸಿದ್ದರಾಮಯ್ಯ ಸದನದ ಗಮನಕ್ಕೆ ತಂದರು.
2008ರಲ್ಲಿ ಹಿಮಾಚಲ ಪ್ರದೇಶದ ನೈನಾ ದೇವಿ ದೇಗುಲದಲ್ಲಿ 162 ಮಂದಿ ಮೃತಪಟ್ಟಾಗ ಬಿಜೆಪಿಯ ಪ್ರೇಮ್ ಕುಮಾರ್ ಧುಮಾಲ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿತ್ತು. ಅದೇ ವರ್ಷ ರಾಜಸ್ಥಾನದ ಜೋಧಪುರದ ಚಾಮುಂಡಾ ದೇವಿ ದೇಗುಲದಲ್ಲಿ ವಸುಂಧರಾ ರಾಜಿ ಸಿಂಧಿಯಾ ಮುಖ್ಯಮಂತ್ರಿಯಾಗಿದ್ದಾಗ 250 ಮಂದಿ ಪ್ರಾಣ ಕಳೆದುಕೊಂಡಿದ್ದರು. 2012ರಲ್ಲಿ ಉತ್ತರಾಖಂಡದ ಹರಿದ್ವಾರದಲ್ಲಿ 20 ಮಂದಿ ಸಾವಿಗೀಡಾದಾಗ ಖಂಡೂರಿ ನೇತೃತ್ವದ ಬಿಜೆಪಿ ಸರ್ಕಾರ, ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಮುಖ್ಯಮಂತ್ರಿಯಾಗಿದ್ದಾಗ ರತ್ನಗಢ ದೇವಸ್ಥಾನದಲ್ಲಿ 135 ಮಂದಿ ಹಾಗೂ ಬಲೇಶ್ವರದಲ್ಲಿ 36 ಸಾವುಗಳು ಸಂಭವಿಸಿದ್ದವು. ಉತ್ತರ ಪ್ರದೇಶದಲ್ಲಿ ಹತ್ರಾಸ್ ನಲ್ಲಿ 121 ಮತ್ತು ಪ್ರಯಾಗ್ರಾಜ್ ಕುಂಭಮೇಳದಲ್ಲಿ 39 ಮಂದಿ ಮೃತಪಟ್ಟಿದ್ದರು. ಆಗ ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಅಧಿಕಾರದಲ್ಲಿದ್ದರು ಎಂದು ದುರಂತಗಳ ಪಟ್ಟಿ ನೀಡಿದರು.
ದುರಂತಗಳು ಕೇವಲ ಭಾರತಕ್ಕೆ ಸೀಮಿತವಲ್ಲ. 1989ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ದುರಂತದಲ್ಲಿ 99 ಮಂದಿ, 2022ರಲ್ಲಿ ಇಂಡೋನೇಷ್ಯಾದಲ್ಲಿ 174 ಮಂದಿ ಅಸು ನೀಗಿದ್ದರು ಎಂದರು.